Life style

ಮಹಿಳೆಯರಿಗೆ ಹೃದಯ ರೋಗದ ಅಪಾಯಗಳ ಅರಿವು ಅಗತ್ಯ… ಡಾ. ರೋಹಿತಾ ಶೆಟ್ಟಿ ಹೇಳುವುದೇನು?

ಬದಲಾದ ಕಾಲಘಟ್ಟದಲ್ಲಿ ಮನುಷ್ಯನ ಮೇಲೆ ಯಾವಾಗ? ಯಾವ ಕಾಯಿಲೆ? ಅಡರಿಕೊಳ್ಳುತ್ತದೆ  ಎಂಬುದನ್ನು ಹೇಳುವುದೇ ಕಷ್ಟವಾಗುತ್ತದೆ. ಹೀಗಾಗಿ ನಮ್ಮ ದೇಹದಲ್ಲಿ ಆರೋಗ್ಯಕ್ಕೆ ಸಂಬಂಧಿಸಿದ ಏನಾದರೂ ತೊಂದರೆಗಳು ಕಾಣಿಸಿಕೊಂಡರೆ ಅದನ್ನು ಹಗುರವಾಗಿ ಪರಿಗಣಿಸದೆ ವೈದ್ಯರ ತಪಾಸಣೆಗೆ ಒಳಗಾಗಿ ರೋಗ ಯಾವುದೆಂಬುದನ್ನು ಪತ್ತೆ ಹಚ್ಚಿ ಚಿಕಿತ್ಸೆಯನ್ನು ಪಡೆಯುವುದು ಜಾಣತನವಾಗಿದೆ.

ಈ ಮಾತನ್ನು ಏಕೆ ಹೇಳಬೇಕಾಗಿದೆ ಎಂದರೆ  ಇತ್ತೀಚೆಗಿನ ದಿನಗಳಲ್ಲಿ ಬಹುತೇಕ ಜನರಿಗೆ ತನ್ನನ್ನು ಕಾಡುತ್ತಿರುವ  ಸಮಸ್ಯೆಗಳು ಯಾವ ರೋಗಕ್ಕೆ ಸಂಬಂಧಿಸಿದ್ದು ಎಂಬುದೇ ಗೊತ್ತಾಗದೆ, ಅದಕ್ಕಿಂತ ಹೆಚ್ಚಾಗಿ ನುರಿತ ತಜ್ಞ ವೈದ್ಯರನ್ನು ಭೇಟಿಯಾಗಿ ಅಗತ್ಯ ಪರೀಕ್ಷೆ, ತಪಾಸಣೆಗಳನ್ನ ಮಾಡಿಸಿಕೊಳ್ಳದೆ ನೋವು ಶಮನಕಾರಿ ಮಾತ್ರೆಗಳನ್ನು ಸೇವಿಸಿ ಸುವರ್ಣ ಸಮಯವನ್ನು ವ್ಯಯ ಮಾಡಿ ಆ ನಂತರ ನಮಗೆ ಬಂದಿರುವ ಕಾಯಿಲೆ  ಯಾವುದೆಂದು ಗೊತ್ತಾಗುವ ಹೊತ್ತಿಗೆ ಅದು ಉಲ್ಭಣಗೊಂಡು ಅಂತಿಮ ಘಟ್ಟಕ್ಕೆ ತಲುಪಿರುತ್ತದೆ. ಆ ನಂತರ  ಯಾವುದೇ ಚಿಕಿತ್ಸೆ ಪಡೆದರೂ  ಪ್ರಯೋಜನವಾಗುವುದಿಲ್ಲ.

ಬಹುತೇಕ ಜನರು ಇವತ್ತು ಹೃದಯದ ಆರೋಗ್ಯಕ್ಕೆ ಸಂಬಂಧಿಸಿದ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಹೀಗಿರುವಾಗ ಎದೆಯಲ್ಲಿ  ನೋವು, ಒತ್ತಡ, ಭಾರವಾದ ಭಾವನೆ ಅಥವಾ ಒತ್ತುವಂತಹ ಅನುಭವ, ಅದರಲ್ಲೂ ಮಹಿಳೆಯರಲ್ಲಿ ದವಡೆ ಅಥವಾ ಕುತ್ತಿಗೆ ನೋವು, ಆಯಾಸ ಅಥವಾ ಎದೆಯ ಹೊರಗೆ ಅಸ್ವಸ್ಥತೆ ಯ ಅನುಭವವೂ ಆಗಬಹುದು. ಇದೆಲ್ಲವೂ ಹೃದಯಕ್ಕೆ ಸಂಬಂಧಿಸಿದ ಕೊರೊನರಿ ಆರ್ಟರಿ ಡಿಸೀಸ್ (ಸಿಎಡಿ) ರೋಗದ ಪ್ರಮುಖ ಲಕ್ಷಣವಾಗಿದೆ.

ಮಹಿಳೆಯರಲ್ಲಿ  ಇದರ ಲಕ್ಷಣಗಳು ಸಾಮಾನ್ಯವಾಗಿ ಕೊಂಚ ಭಿನ್ನವಾಗಿರುತ್ತವೆ. ಉದಾಹರಣೆಗೆ ದವಡೆ ಅಥವಾ ಕುತ್ತಿಗೆ ನೋವು, ಆಯಾಸ ಅಥವಾ ಎದೆಯ ಹೊರಗೆ ಅಸ್ವಸ್ಥತೆ ಇತ್ಯಾದಿ ಲಕ್ಷಣಗಳಿರುತ್ತವೆ. ಈ ಕಾರಣದಿಂದ ಸೂಕ್ತ ಸಮಯದಲ್ಲಿ ಮತ್ತು ನಿಖರವಾಗಿ ರೋಗನಿರ್ಣಯ ಮಾಡುವುದು ಕಷ್ಟಕರವಾಗಿರುತ್ತದೆ. ಹೀಗಾಗಿ ವೈದ್ಯರು ತಾತ್ಕಾಲಿಕ ಚಿಕಿತ್ಸೆ ನೀಡುವ ಸಾಧ್ಯತೆಯಿರುತ್ತದೆ. ಇದು ಮುಂದೆ ರೋಗ  ಉಲ್ಭಣಕ್ಕೆ ಕಾರಣವಾಗುತ್ತದೆ.

ಸಿಎಡಿ ಕುರಿತಂತೆ ಆಬಾಟ್ ಇಂಡಿಯಾದ ವೈದ್ಯಕೀಯ ವ್ಯವಹಾರಗಳ ಮುಖ್ಯಸ್ಥರಾದ ಡಾ. ರೋಹಿತಾ ಶೆಟ್ಟಿ ಅವರು, ಮಾಹಿತಿ ನೀಡಿದ್ದು ಅವರ ಪ್ರಕಾರ ಇತ್ತೀಚಿನ ವರ್ಷಗಳಲ್ಲಿ ಬಹಳ ಆಳವಾದ ಸಂಶೋಧನಾ ಅಧ್ಯಯನಗಳಿಂದಾಗಿ ಸಿಎಡಿ ಬೇರೆಬೇರೆ ಲಿಂಗದ ಮೇಲೆ ಬೀರುವ ಪರಿಣಾಮದ ಬಗ್ಗೆ ತಿಳಿದು ಬಂದಿದ್ದು,   ಸಂಸ್ಥೆಯು ಅಸೋಸಿಯೇಶನ್ ಆಫ್ ಫಿಸಿಶಿಯನ್ಸ್ ಆಫ್ ಇಂಡಿಯಾ (ಎಪಿಐ) ಜೊತೆಗೆ ಓಪಿಟಿಎ (ಆಪ್ಟಿಮಲ್ ಟ್ರೀಟ್‌ಮೆಂಟ್ ಆಫ್ ಅಂಜಿನಾ) ಎಂಬ ಉಪಕರಣಗಳ ಬಳಕೆಯನ್ನು ಆರಂಭಿಸಿದೆ. ಇದರಿಂದ ಉತ್ತಮ ಚಿಕಿತ್ಸೆ ಮತ್ತು ಅತ್ಯುತ್ತಮ ಫಲಿತಾಂಶಗಳನ್ನು ಒದಗಿಸಲು ಸಾಧ್ಯವಾಗಿರುವುದಾಗಿ ಹೇಳಿದ್ದಾರೆ.

ಓಪಿಟಿಎ ಕ್ಲಿನಿಕಲ್ ಚೆಕ್‌ ಲಿಸ್ಟ್, ಓಪಿಟಿಎ ಕ್ವೆಶ್ಚನೇರ್ ಮತ್ತು ಓಪಿಟಿಎ ಅಪ್ರೋಚ್ ಎಂಬ ಮೂರು ವಿಶಿಷ್ಟ ಉಪಕರಣಗಳು ರೋಗ ಪತ್ತೆ, ರೋಗಲಕ್ಷಣ ಮತ್ತು ವೈದ್ಯಕೀಯ ನಿರ್ವಹಣೆಗೆ ನೆರವಾಗಲಿವೆ. ಎಪಿಐ ಶಿಫಾರಸು ಮಾಡಿರುವ ಈ ಓಪಿಟಿಎ ಉಪಕರಣಗಳು ವೈದ್ಯಕೀಯ ವೃತ್ತಿಪರರಿಗೆ ಸೂಕ್ತ ಸಮಯದಲ್ಲಿ ರೋಗನಿರ್ಧಾರ ಮಾಡಲು ಸಹಾಯ ಮಾಡುತ್ತವೆ ಎಂದು ಹೇಳಿದ್ದಾರೆ.

ಇಂದೋರ್ ನ ಅಪೋಲೋ ಹಾಸ್ಪಿಟಲ್ಸ್ ನ ಸೀನಿಯರ್ ಇಂಟರ್‌ವೆನ್ಷನಲ್ ಕಾರ್ಡಿಯಾಲಜಿಸ್ಟ್ ಮತ್ತು ಕ್ಯಾತ್ ಲ್ಯಾಬ್‌ ನ ನಿರ್ದೇಶಕರಾದ ಡಾ. ಸರಿತಾ ರಾವ್ ಅವರು  ಮಹಿಳೆಯರಲ್ಲಿ ಹೃದಯ ರೋಗವನ್ನು ಗುರುತಿಸುವ ವಿಚಾರದಲ್ಲಿನ ಒಂದು ದೊಡ್ಡ ಸವಾಲಿದೆ ಅದು ಏನೆಂದರೆ ಮಹಿಳೆಯರು  ಸ್ವಾಭಾವಿಕವಾಗಿ ತಾವು ಹೃದಯ ರೋಗ ಹೊಂದುವ ಸಾಧ್ಯತೆ ಬಹಳ ಕಡಿಮೆ ಎಂಬ ತಪ್ಪು ಕಲ್ಪನೆ ಹೊಂದಿರುತ್ತಾರೆ. ಸಿಎಡಿ ರೋಗವು ಸಾಮಾನ್ಯವಾಗಿ ಪುರುಷರಿಗಿಂತ ಮಹಿಳೆಯರಲ್ಲಿ ಸುಮಾರು ಒಂದು ದಶಕ ತಡವಾಗಿ ಕಾಣಿಸಿಕೊಳ್ಳುತ್ತದೆ.

ಹೀಗಾಗಿ ಮಹಿಳೆಯರಿಗೆ ಹೃದಯ ರೋಗದ ಅಪಾಯಗಳ ಬಗ್ಗೆ  ಅರಿವು ಮೂಡಿಸುವುದು ಮತ್ತು ಆರಂಭಿಕ ಲಕ್ಷಣಗಳನ್ನು ಗುರುತಿಸಲು ಸಹಾಯ ಮಾಡುವುದು ಅಗತ್ಯವಾಗಿದೆ. ಮುಖ್ಯವಾಗಿ ಜೀವನಶೈಲಿ ಬದಲಾವಣೆಗಳು ಮತ್ತು ಸಕಾಲಿಕ ವೈದ್ಯಕೀಯ ಚಿಕಿತ್ಸೆಯ ಮಹತ್ವದ ಬಗ್ಗೆ ತಿಳಿಸುವ ಕೆಲಸವಾಗಬೇಕಾಗಿದೆ. 75ನೇ ವಯಸ್ಸಿನ ನಂತರದ ಕಾರ್ಡಿಯೋವಾಸ್ಕ್ಯುಲರ್ ಡಿಸೀಸ್ ಹೊಂದಿರುವ ರೋಗಿಗಳಲ್ಲಿ ಹೆಚ್ಚಿನ ಪಾಲು ಮಹಿಳೆಯರಿರುತ್ತಾರೆ. ಮತ್ತು ಇದು ಪುರುಷರಿಗಿಂತ ಮಹಿಳೆಯರಿಗೆ ಹೆಚ್ಚು ತೊಂದರೆ ಕೊಡುತ್ತದೆ. ಪುರುಷರಿಗಿಂತ  ಶೇ.50ಕ್ಕಿಂತ ಹೆಚ್ಚು ಮಹಿಳೆಯರು ರೋಗನಿರ್ಧಾರವಾಗದ ಕಾರಣದಿಂದ ಸಕಾಲಿಕ ಚಿಕಿತ್ಸೆ ಪಡೆಯಲು ಸಾಧ್ಯವಾಗದೆ ತೊಂದರೆ ಅನುಭವಿಸುತ್ತಾರೆ ಎಂದು ಹೇಳಲಾಗಿದೆ.

ಸಕಾಲಿಕ ಮತ್ತು ಉತ್ತಮ ಚಿಕಿತ್ಸೆ ಪಡೆಯುವುದರಿಂದ ರೋಗ ಉಲ್ಬಣಗೊಳ್ಳುವುದನ್ನು ತಡೆಯಬಹುದು. ಲಕ್ಷಣಗಳನ್ನು ಕಡಿಮೆ ಮಾಡಬಹುದು ಮತ್ತು ಜೀವನದ ಗುಣಮಟ್ಟವನ್ನು ಸುಧಾರಿಸಬಹುದು. ಭಾರತವು ಹೃದಯ ಸಂಬಂಧಿ ರೋಗಗಳ ಹೊರೆಯನ್ನು ಹೊರುತ್ತಿದ್ದು, ಈ ಕುರಿತು ಸೂಕ್ತ ಕ್ರಮ ಕೈಗೊಳ್ಳುವ ಅಗತ್ಯವಿದೆ. ಹಾಗಾಗಿ ಮಹಿಳೆಯರು ರೋಗನಿರ್ಣಯ, ಚಿಕಿತ್ಸೆ ಮತ್ತು ರೋಗ ನಿರ್ವಹಣೆಯಲ್ಲಿ ಎದುರಿಸುವ ಸವಾಲುಗಳನ್ನು ಪರಿಹರಿಸುವುದು ಈ ಕ್ಷಣದ ತುರ್ತಾಗಿದೆ. ಆರಂಭಿಕ ಹಂತದಲ್ಲಿ ಸಮಸ್ಯೆ ಗುರುತಿಸುವುದು ಮತ್ತು ಮಹಿಳೆಯರಿಗೆ ಸರಿಯಾದ ಮಾಹಿತಿಯನ್ನು ಒದಗಿಸುವುದರಿಂದ ಪ್ರಸ್ತುತ ಪರಿಸ್ಥಿಯನ್ನು ಬದಲಾಯಿಸಬಹುದು ಮತ್ತು ಉತ್ತಮ ಫಲಿತಾಂಶಗಳನ್ನು ಪಡೆಯಬಹುದು ಎಂಬುದು ತಜ್ಞರ ಅಭಿಪ್ರಾಯವಾಗಿದೆ.

ಸಿಎಡಿ(ಕೊರೊನರಿ ಆರ್ಟರಿ ಡಿಸೀಸ್)   ರೋಗದಿಂದ  ಮರಣ ಹೊಂದುವ ಪ್ರಮಾಣ ಭಾರತದಲ್ಲಿ  ಹೆಚ್ಚುತ್ತಿದೆ. ವಿಶ್ವದಾದ್ಯಂತ ಇದರ ಪ್ರಮಾಣವನ್ನು ನೋಡಿದ್ದೇ ಆದರೆ  ಶೇ. 20 ರಿಂದ 50ರಷ್ಟು ಹೆಚ್ಚಾಗಿದೆ. ವಿಶ್ವ ಆರೋಗ್ಯ ಸಂಸ್ಥೆ ಪ್ರಕಾರ 2022ರಲ್ಲಿ ಭಾರತದಲ್ಲಿ 47.7 ಲಕ್ಷಕ್ಕಿಂತ ಹೆಚ್ಚು ಮಂದಿ ಸಿಎಡಿ ಕಾರಣದಿಂದ ಮರಣ ಹೊಂದಿದ್ದಾರಂತೆ. ಈ ಅಂಕಿ ಅಂಶವನ್ನು ಗಮನಿಸಿದ್ದೇ ಆದರೆ  ಸಿಎಡಿ ಬಗ್ಗೆ  ವಿಶೇಷವಾಗಿ ಮಹಿಳೆಯರು ಹೆಚ್ಚಿನ ಗಮನ ನೀಡಬೇಕಾಗಿದೆ. ಜತೆಗೆ  ಈ ಬಗ್ಗೆ ಜಾಗ್ರತೆಯಿಂದ ಇರುವುದು ಅಗತ್ಯವಾಗಿದೆ.

ಇದು ಹೃದಯದ ವಿಷಯ… ಹೃದಯದ ಆರೋಗ್ಯ ಕಾಪಾಡಿಕೊಳ್ಳಲು ನಾವೇನು ಮಾಡಬೇಕು? ಯಾವ ಆಹಾರ ಸೇವಿಸಬೇಕು?

B M Lavakumar

 

 

admin
the authoradmin

Leave a Reply