District

ಒಕ್ಕಲುತನ ಶ್ರೇಷ್ಠ ಉದ್ಯೋಗವೆಂದು ಸಾರಿದವರು ಒಕ್ಕಲಿಗ ಮುದ್ದಣ್ಣ:ವಚನ ಕುಮಾರಸ್ವಾಮಿ

ಮೈಸೂರು: ಒಕ್ಕಲುತನ ಶ್ರೇಷ್ಠ ಉದ್ಯೋಗ ಎಂದು ಸಾರಿದವರು ಒಕ್ಕಲಿಗ ಮುದ್ದಣ್ಣ ಎಂದು ಶರಣು ವಿಶ್ವವಚನ ಫೌಂಡೇಷನ್ ಸಂಸ್ಥಾಪಕ ವಚನ ಕುಮಾರಸ್ವಾಮಿ ಹೇಳಿದರು.

ಶರಣು ವಿಶ್ವವಚನ ಫೌಂಡೇಷನ್ ವತಿಯಿಂದ ಮೈಸೂರು ತಾ. ದೇವಲಾಪುರ ಮಠದ ಶ್ರೀ ಗುರುಮಲ್ಲೇಶ್ವರ ದಾಸೋಹ ಮಠದಲ್ಲಿ ಆಯೋಜಿಸಿದ್ದ ಶರಣ ಒಕ್ಕಲಿಗ ಮುದ್ದಣ್ಣನವರ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿ ಒಕ್ಕಲಿಗ ಜನಾಂಗದ ಮುದ್ದಣ್ಣನವರು ಬಸವಣ್ಣನವರ ತತ್ವಕ್ಕೆ ಮಾರು ಹೋಗಿ ಜೋಳದಹಾಳ ಎಂಬ ಗ್ರಾಮದಿಂದ ಕಲ್ಯಾಣಕ್ಕೆ ಬಂದು ವಚನಕಾರರಾಗಿ ರೂಪುಗೊಂಡು  ಕಾಮಭೀಮ ಜೀವಧನದೊಡೆಯ ಎಂಬ ಅಂಕಿತದಲ್ಲಿ ವಚನಗಳನ್ನು ರಚಿಸಿದದ್ದು, ಇವರ 12 ವಚನಗಳು ದೊರೆತಿವೆ.   ರಾಜ ಕೇಳಿದ ಹೆಚ್ಚಿನ ತೆರಿಗೆಯನ್ನು ಕೊಡದೆ ಆ ಹಣವನ್ನು ದಾಸೋಹಕ್ಕಾಗಿ ವಿನಿಯೋಗಿಸಿ, ಮಾನವನ ಹಸಿವು ತಣಿಸಲು ಆಹಾರ ಮುಖ್ಯ. ಅದೇ ರೀತಿ ನಾವು ನಮ್ಮ ನಿಜವಾದ ಭವಬಂದನದಿಂದ ಪಾರಾಗಲು ಅಂತರಂಗದ ಒಕ್ಕಲುತನ ಮುಖ್ಯ ಎಂಬುದನ್ನು ವಚನಗಳ ಮೂಲಕ ತಿಳಿಸಿದರು ಎಂದರು.

ಶರಣು ವಿಶ್ವವಚನ ಫೌಂಡೇಷನ್ ಸಂಸ್ಥಾಪಕಿ ರೂಪ ಕುಮಾರಸ್ವಾಮಿ ಮಾತನಾಡಿ ರೈತ ಮತ್ತು ಸೈನಿಕ ಯಾವುದೇ ದೇಶದ ಬೆನ್ನೆಲುಬು.   ರೈತನ ಮಹತ್ವವನ್ನು 12ನೇ ಶತಮಾನದಲ್ಲಿಯೇ ಮನದಟ್ಟು ಮಾಡಿಸಿದ ಒಕ್ಕಲಿಗ ಮುದ್ದಣ್ಣನವರು ರೈತರು ವ್ಯವಸಾಯಕ್ಕೆ ಬಳಸುತ್ತಿದ್ದ ವಸ್ತುಗಳನ್ನೇ ಬಳಸಿಕೊಂಡು ವಚನ ರಚಿಸುವ ಮೂಲಕ ಗಮನ ಸೆಳೆದರು.

ದೇವಲಾಪುರ ಗುರುಮಲ್ಲೇಶ್ವರ ದಾಸೋಹ ಮಠದ ಶ್ರೀ ಜಡೇಸ್ವಾಮಿಗಳು ಸಾನ್ನಿಧ್ಯವಹಿಸಿ ಮಾತನಾಡಿ ಕಾಯಕ ಮತ್ತು ದಾಸೋಹದ ಮಹತ್ವವನ್ನು ಸಾರಿದ ಒಕ್ಕಲಿಗ ಮುದ್ದಣ್ಣನವರು ಬದುಕಿನ ಮೌಲ್ಯಗಳನ್ನು ಹಸನಾದ ನೇಗಿಲಿನಿಂದ ಬರೆದು ಬದುಕಿದರು ಎಂದರು.

ಕಾರ್ಯಕ್ರಮದಲ್ಲಿ ಶ್ರೀ ಹೇಮಂತಸ್ವಾಮಿಗಳು, ಶರಣು ವಿಶ್ವವಚನ ಫೌಂಡೇಷನ್ ಕೇಂದ್ರೀಯ ಸಂಚಾಲಕ ವಿ. ಲಿಂಗಣ್ಣ, ಕೆ. ಅಂಕಪ್ಪ, ಪ್ರಕಾಶ್  ಮತ್ತು  ಸ್ವಾಮಿಯವರು, ವಚನ ಪಾಠಶಾಲೆಯ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

admin
the authoradmin

Leave a Reply