ಮೈಸೂರು: ಬಸವಮಾರ್ಗ ಫೌಂಡೇಷನ್(ರಿ) ಉಚಿತ ವಸತಿ ನಿಲಯದ ವಿದ್ಯಾರ್ಥಿಗಳ ವ್ಯಾಸಂಗದ ಅನುಕೂಲಕ್ಕಾಗಿ ಕರ್ಣಾಟಕ ಬ್ಯಾಂಕ್ ವತಿಯಿಂದ 3 ಲಕ್ಷ ರೂ. ವೆಚ್ಚದ ಸ್ಮಾರ್ಟ್ ಟಿವಿಯನ್ನು ಕೊಡುಗೆಯಾಗಿ ನೀಡಲಾಯಿತು.
ನಗರದ ಸರಸ್ವತಿಪುರಂನಲ್ಲಿ ಇರುವ ಉಚಿತ ವಸತಿ ನಿಲಯದಲ್ಲಿ ಆಯೋಜಿಸಿದ್ದ ವೇದಿಕೆ ಕಾರ್ಯಕ್ರಮದಲ್ಲಿ ಬ್ಯಾಂಕಿನ ಸಹಾಯಕ ಪ್ರಧಾನ ವ್ಯವಸ್ಥಾಪಕ ಮತ್ತು ಪ್ರಾದೇಶಿಕ ಮುಖ್ಯಸ್ಥ ಡಾ.ಟಿ.ಆರ್.ಅರುಣ್ ಹಾಗೂ ಸಂಕ್ರಾಂತಿ ವೃತ್ತ ಶಾಖೆಯ ವ್ಯವಸ್ಥಾಪಕ ಎನ್. ಅನಿನಾಶ್ ಅವರು ಬಸವಮಾರ್ಗ ಫೌಂಡೇಷನ್(ರಿ) ಸಂಸ್ಥಾಪಕ ಅಧ್ಯಕ್ಷ ಎಸ್. ಬಸವಣ್ಣ ಹಾಗೂ ವಸತಿ ನಿಲಯದ ವಿದ್ಯಾರ್ಥಿಗಳಿಗೆ ಸ್ಮಾರ್ಟ್ ಟಿವಿ ವಿತರಣೆ ಮಾಡಿ ಶುಭಕೋರಿದರು.

ಈ ವೇಳೆ ಮಾತನಾಡಿದ ಡಾ.ಟಿ.ಆರ್.ಅರುಣ್ , ಬಸವಮಾರ್ಗ ಫೌಂಡೇಷನ್ ಅಧ್ಯಕ್ಷ ಎಸ್. ಬಸವಣ್ಣ ಅವರು ಸಮಾಜಮುಖಿ ಕೆಲಸದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ವ್ಯಸನಮುಕ್ತ ಸಮಾಜ ನಿರ್ಮಾಣ ಮಾಡುವ ನಿಟ್ಟಿನಲ್ಲಿ ಸಮಾಜ ಸೇವೆ ಮಾಡುತ್ತಿದ್ದಾರೆ. ಇದರ ಜೊತೆಯಲ್ಲಿ ಸರ್ಕಾರಿ ಶಾಲೆಯನ್ನು ದತ್ತು ಪಡೆದು ಬಡ ಹಾಗೂ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಉಚಿತವಾಗಿ ವಸತಿ ನಿಲಯವನ್ನು ತೆರೆದಿದ್ದಾರೆ. ಅವರ ಶೈಕ್ಷಣಿಕ ಪ್ರಗತಿಗೆ ಅಡಿಗಲ್ಲಾಗಿ ಕೆಲಸ ಮಾಡುತ್ತಿದ್ದಾರೆ. ನಮ್ಮ ಗ್ರಾಹಕರೂ ಆದ ಬಸವಣ್ಣ ಅವರು, ವಸತಿ ನಿಲಯದ ಮಕ್ಕಳ ವ್ಯಾಸಂಗದ ದೃಷ್ಟಿಯಿಂದ ಸ್ಮಾರ್ಟ್ ಟಿವಿ ಬೇಕೆಂದು ಬ್ಯಾಂಕಿಗೆ ಮನವಿ ಸಲ್ಲಿಸಿದ್ದರು. ಅದರಂತೆ ಬ್ಯಾಂಕಿನ ಸಿಎಸ್‌ಆರ್ ನಿಧಿ ಅಡಿಯಲ್ಲಿ ಮಕ್ಕಳಿಗೆ ಸ್ಮಾರ್ಟ್ ಟಿವಿಯನ್ನು ಕೊಡುಗೆಯಾಗಿ ನೀಡಲಾಗಿದೆ ಎಂದರು.
ಬ್ಯಾಂಕಿನ ಸಂಕ್ರಾಂತಿ ವೃತ್ತ ಶಾಖೆಯ ವ್ಯವಸ್ಥಾಪಕ ಎನ್. ಅನಿನಾಶ್ ಮಾತನಾಡಿ, ನಮ್ಮ ರಾಜ್ಯಕ್ಕೆ 70 ದಶಕದಲ್ಲಿ ಕರ್ನಾಟಕ ಎಂದು ನಾಮಕರಣ ಮಾಡಲಾಗಿಯಿತು. ಆದರೆ 1924ರಲ್ಲೇ ರಾಜ್ಯದ ಹೆಸರಿನಲ್ಲಿ ಕರ್ಣಾಟಕ ಬ್ಯಾಂಕ್ ಸ್ಥಾಪನೆ ಮಾಡಲಾಯಿತು. ಕೇವಲ 10 ಜನರಿಂದ ಪ್ರಾರಂಭವಾದ ಬ್ಯಾಂಕ್ ಇಂದು ನೂರಾರು ಶಾಖೆಯನ್ನು ತೆರೆದು ಹಣಕಾಸು ವಲಯದಲ್ಲಿ ಗ್ರಾಹಕರಿಗೆ ಉತ್ತಮ ಸೇವೆ ನೀಡುತ್ತ ಬರುತ್ತಿದೆ. ಪರಿಣಾಮ ಕೋಟ್ಯಾಂತರ ಗ್ರಾಹಕರು ನಮ್ಮ ಬ್ಯಾಂಕಿನಲ್ಲಿ ಇದ್ದಾರೆ. ಸಾವಿರಾರು ಕೋಟಿಯ ವ್ಯವಹಾರವನ್ನು ಮಾಡಲಾಗುತ್ತಿದೆ. ಬ್ಯಾಂಕಿನ ಲಾಭದ ಹಣವನ್ನು ಸಮಾಜ ಸೇವೆಗೆ ಬಳಸಬೇಕು ಎಂದು ಸಂಸ್ಥಾಪಕರು ಅಂದೇ ಬೈಲದಲ್ಲಿ ಬರೆದಿದ್ದಾರೆ. ಅದರಂತೆ ಈ ಮೂಲಕ ಬಸವಮಾರ್ಗದ ಸಮಾಜಮುಖಿ ಯೋಜನೆಗಳಿಗೆ ಇದರ ಮೂಲಕ ಕೊಡುಗೆ ನೀಡಲಾಗುತ್ತಿದೆ ಎಂದು ತಿಳಿಸಿದರು.

ಬಸವಮಾರ್ಗ ಸಂಸ್ಥೆಯ ಸಂಸ್ಥಾಪಕ ಎಸ್.ಬಸವರಾಜು ಮಾತನಾಡಿ, ವ್ಯಸನಮುಕ್ತ ಸಮಾಜ ನಿರ್ಮಾಣ ಮಾಡುವ ನಿಟ್ಟಿನಲ್ಲಿ ಬಸವಮಾರ್ಗ ಫೌಂಡೇಷನ್(ರಿ) ಸ್ಥಾಪನೆ ಮಾಡಲಾಯಿತು. ಇದರ ಜತೆಗೆ ಶೈಕ್ಷಣಿಕವಾಗಿಯೂ ಏನಾದರೂ ಮಾಡಬೇಕೆಂದು ಸರ್ಕಾರಿ ಶಾಲೆಯನ್ನು ದತ್ತು ಪಡೆಯಲಾಯಿತು. ಮಕ್ಕಳು ದೂರದೂರುಗಳಿಂದ ಶಾಲೆಗೆ ಬರುತ್ತಿರುವುದನ್ನು ಕಂಡು ಆ ಮಕ್ಕಳಿಗೆ ವಸತಿ ನಿಲಯವನ್ನು ಪ್ರಾರಂಭ ಮಾಡಲಾಯಿತು. ಮಕ್ಕಳ ಶೈಕ್ಷಣಿಕ ಪ್ರಗತಿಗೆ ಬಸವಮಾರ್ಗ ಸಂಸ್ಥೆ ಎಲ್ಲ ರೀತಿಯಲ್ಲೂ ಕೊಡುಗೆ ನೀಡುತ್ತಿದೆ.
ವಿದ್ಯಾರ್ಥಿಗಳ ಶೈಕ್ಷಣಿಕ ದೃಷ್ಟಿಯಿಂದ ಸ್ಮಾರ್ಟ್ ಟಿವಿಯ ಬೇಡಿಕೆಯನ್ನು ಕರ್ಣಾಟಕ ಬ್ಯಾಂಕಿಗೆ ಇಟ್ಟಾಗ ಹಿಂದು, ಮುಂದು ನೋಡದೆ ಅದರ ವ್ಯವಸ್ಥೆಯನ್ನು ಮಾಡಿದ್ದಾರೆ. ಬಡ ಸರ್ಕಾರಿ ಮಕ್ಕಳು ಇತರೆ ಮಕ್ಕಳಿಗಿಂತ ಏನು ಕಡಿಮೆ ಇಲ್ಲ. ಅವರಲ್ಲೂ ಕೂಡ ಪ್ರತಿಭೆ ಅಡಗಿದೆ. ಅದನ್ನು ಹೊರಗೆ ತೆರೆಯುವ ಕೆಲಸ ಮಾಡುವಬೇಕು ಅಷ್ಟೆ. ಈ ಮಕ್ಕಳಲ್ಲೂ ಕೂಡ ಒಬ್ಬ ಸಾಧಕ ಇದ್ದಾನೆ. ಆತನಿಗೆ ಸರಿಯಾದ ವೇದಿಕೆ ನೀಡಬೇಕು ಅಷ್ಟೆ. ಈ ನಿಟ್ಟಿನಲ್ಲಿ ಸರ್ಕಾರಿ ಶಾಲೆಯ ಮಕ್ಕಳ ಪ್ರಗತಿಗೆ ಕರ್ಣಾಟಕ ಬ್ಯಾಂಕ್ ಸ್ಮಾರ್ಟ್ ಟಿವಿ ಯನ್ನು ಕೊಡುಗೆಯಾಗಿ ನೀಡಿದೆ. ಮಕ್ಕಳು ಇದನ್ನು ಸದ್ಬಳಕೆ ಮಾಡಿಕೊಳ್ಳಬೇಕು. ಆ ಮೂಲಕ ಪ್ರಗತಿ ಸಾಧಿಸಬೇಕು ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

ಕುಕ್ಕರಹಳ್ಳಿ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಯ ಮುಖ್ಯಶಿಕ್ಷಕ ಆರ್.ಚಂದ್ರು ಮಾತನಾಡಿ, ಬಸವಮಾರ್ಗ ಫೌಂಡೇಷನ್(ರಿ) ನಮ್ಮ ಶಾಲೆಯನ್ನು ದತ್ತ ಪಡೆದ ಮೇಲೆ ಶಾಲೆಯ ಚಿತ್ರಣವೇ ಬದಲಾಗಿದೆ. ಕಳೆದ ಮೂರು ವರ್ಷಗಳಿಂದ ಹಲವಾರು ಕೊಡುಗೆಗಳನ್ನು ಶಾಲೆಗೆ ಎಸ್.ಬಸವಣ್ಣ ಅವರು ನೀಡಿದ್ದಾರೆ. ಅದರ ಫಲವಾಗಿ ಮೈಸೂರು ನಗರದಲ್ಲಿ ನಮ್ಮ ಶಾಲೆಯನ್ನು ತಿರುಗಿನೋಡುವಂತಾಗಿದೆ. ಇದರಿಂದ ಶಾಲೆಗೆ ಮಕ್ಕಳ ದಾಖಲಾತಿಯೂ ಕೂಡ ಹೆಚ್ಚಳವಾಗಿದೆ. ದಾಖಲಾತಿ ಕ್ಷೀಣಿಸುತ್ತಿದ್ದ ಹಂತದಲ್ಲಿ ಶಾಲೆಯನ್ನು ದತ್ತು ಪಡೆದ ಬಸವಣ್ಣ ಅವರು ಶಾಲೆಯ ಸರ್ವತೋಮುಖ ಅಭಿವೃದ್ಧಿಗೆ ಸಹಕಾರ ನೀಡಿದರು. ಶಾಲೆಗೆ ಬಸ್, ವಿದ್ಯಾರ್ಥಿಗಳಿಗೆ ವಸತಿ ನಿಲಯ, ಮಕ್ಕಳಿಗೆ ಟ್ಯೂಷನ್, ಕ್ರೀಡಾ ತರಬೇತಿ, ಪ್ರವಾಸ, ಮಕ್ಕಳಿಗೆ ಪ್ರತಿ ಹಬ್ಬಕ್ಕೂ ಹೊಸ ಬಟ್ಟೆ ಸೇರಿದಂತೆ ಹಲವಾರು ಕೊಡುಗೆಯನ್ನು ನೀಡಿದ್ದಾರೆ. ಈಗ ವಿದ್ಯಾರ್ಥಿಗಳ ವ್ಯಾಸಂಗದ ದೃಷ್ಟಿಯಿಂದ ಸ್ಮಾರ್ಟ್ ಕಲ್ಪಿಸಿಕೊಟ್ಟಿದ್ದಾರೆ ಎಂದು ಅಭಿನಂದನೆ ಸಲ್ಲಿಸಿದರು.

ಕಾರ್ಯಕ್ರಮದಲ್ಲಿ ಶಾಲೆಯ ಶಿಕ್ಷಕರಾದ ಮಹೇಶ್, ಮಹೇಶ್ ಕುಮಾರ್, ವಜ್ರಮುನಿ, ಸಾವಿತ್ರಿ, ಭಾರ್ಗವಿ, ವಸಂತ ಲಕ್ಷ್ಮೀ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.








