LatestLife style

ಕೂದಲಿನ ಅಂದ, ಆರೋಗ್ಯ ಕಾಪಾಡಿಕೊಳ್ಳಲು ಏನೆಲ್ಲ ಮನೆ ಮದ್ದುಗಳನ್ನು ಮಾಡಬಹುದು?

ಪ್ರತಿಯೊಬ್ಬರೂ ಕೂದಲಿನ ಬಗ್ಗೆ ಹೆಚ್ಚಿನ ಆಸ್ಥೆ ವಹಿಸಿ ಅವುಗಳನ್ನು ಕಾಪಾಡಿಕೊಳ್ಳುವತ್ತ ಮುತುವರ್ಜಿ ವಹಿಸುತ್ತಾರೆ.. ತಲೆಯಿಂದ ಕೂದಲು ಉದುರಿ ಹೋಗದಿದ್ದರೆ ಸಾಕಪ್ಪಾ ಎಂದುಕೊಳ್ಳುವವರೇ ಜಾಸ್ತಿ.. ಹೀಗಾಗಿ ಕೂದಲಿನ ರಕ್ಷಣೆಗಾಗಿ ಹಲವು ರೀತಿಯ ಸರ್ಕಸ್ ಮಾಡುತ್ತಾ ಮಾರುಕಟ್ಟೆಯಲ್ಲಿ ಬರುವ ಹೇರ್ ಪ್ರಾಡಕ್ಟ್ ಗಳನ್ನೆಲ್ಲ ತಂದು ಪ್ರಯೋಗಿಸುತ್ತಾರೆ.. ಹೀಗಿದ್ದರೂ ಬಹಳಷ್ಟು ಮಂದಿಯ ತಲೆಯಲ್ಲಿ ಕೂದಲು ನಿಲ್ಲುವುದೇ ಕಷ್ಟ.. ಆದರೂ ಇದ್ದ ಕೂದಲನ್ನು ಅಂದವಾಗಿ ಮತ್ತು ಆರೋಗ್ಯಕರವಾಗಿ ನೋಡಿಕೊಳ್ಳುವುದು ಬಹುಮುಖ್ಯವಾಗಿದೆ.

ಇವತ್ತಿನ ನಾಗಾಲೋಟದಲ್ಲಿ ಕೂದಲು ಉದುರಲು ಹಲವು ಕಾರಣಗಳಿವೆ.. ಆದರೂ ಮಾರುಕಟ್ಟೆಯ ಪ್ರಾಡಕ್ಟ್ ಗಳಾಚೆಯೂ ತಮ್ಮ ಮನೆಯಲ್ಲಿಯೂ ಕೆಲವೊಂದು ಚಿಕಿತ್ಸೆಗಳನ್ನು ನಾವೇ ಮಾಡಿಕೊಳ್ಳುವುದು ಅನಿವಾರ್ಯವಾಗಿದೆ. ಇದರಿಂದ ಯಾವುದೇ ಅಡ್ಡಪರಿಣಾಮಗಳು ಇಲ್ಲದೆ, ಹೆಚ್ಚು ಹಣ ವ್ಯಯಿಸದೆ ಕೂದಲಿನ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಾಧ್ಯವಾಗುತ್ತದೆ. ಹಾಗಾದರೆ ಏನೆಲ್ಲ ಮಾಡಬಹುದು ಎಂಬುದನ್ನು ನೋಡಿದ್ದೇ ಆದರೆ ಕೆಲವೊಂದು ಮಾಹಿತಿಗಳು ಲಭ್ಯವಾಗುತ್ತವೆ. ಅದು  ಏನೆಂದರೆ?

ಇದನ್ನೂ ಓದಿ:  ಕಾಡುವ ಬೆನ್ನುನೋವಿಗೆ ನಾವೇನು ಮಾಡಬಹುದು? ವೈದ್ಯರು ಹೇಳುವ ವ್ಯಾಯಾಮಗಳೇನು?

ಮೆಂತ್ಯವನ್ನು ಮೊಸರಿನಲ್ಲಿ ನೆನೆಸಿ, ಬೆಳಗ್ಗೆ ನುಣ್ಣಗೆ ರುಬ್ಬಿ ಪೇಸ್ಟ್ ತಯಾರಿಸಿ ಇದಕ್ಕೆ ನಿಂಬೆರಸ ಬೆರೆಸಿ  ತಲೆಗೆ ಹಚ್ಚಿಕೊಂಡು ಅರ್ಧ ಗಂಟೆಯ ನಂತರ ಸ್ನಾನ ಮಾಡಿದರೆ ಕೂದಲು ಉದುರುವುದು ನಿಲ್ಲುತ್ತದೆ. ವಾರಕ್ಕೊಮ್ಮೆ ಆಲಿವ್ ಆಯಿಲ್, ಎಳ್ಳೆಣ್ಣೆ, ಹರೆಳೆಣ್ಣೆ, ಕೊಬ್ಬರಿ ಎಣ್ಣೆ ಎಲ್ಲವನ್ನೂ ಬೆರೆಸಿ ಬಿಸಿ ಮಾಡಿಕೊಂಡು ಕೂದಲ ಬುಡದಿಂದ ತುದಿಯವರೆಗೂ ಮಾಲಿಷ್ ಮಾಡುತ್ತಾ ಬಂದರೆ ಕೂದಲಿಗೆ ಹೊಳಪು ಬರುವುದಲ್ಲದೇ  ಕಪ್ಪಾಗುತ್ತದೆ. ತೆಂಗಿನ  ತುರಿಯನ್ನು ಮಿಕ್ಷಿಯಲ್ಲಿ  ರುಬ್ಬಿ ನಿಂಬೆರಸ  ಬೆರೆಸಿ ಮಸಾಜ್  ಮಾಡಿಕೊಳ್ಳಿ ವಾರಕ್ಕೊಮ್ಮೆ ಹೀಗೆ ಮಾಡುವುದರಿಂದ  ಕೂದಲು ಉದುರುವಿಕೆ ಕಡಿಮೆಯಾಗುತ್ತದೆ.

ದಾಸವಾಳ ಎಲೆ, ಭೃಂಗರಾಜ ಸೊಪ್ಪು ಒಂದೆಲಗ ಸೊಪ್ಪನ್ನು ರುಬ್ಬಿ ತಲೆಗೆ  ಹಚ್ಚಿ ಸ್ನಾನ ಮಾಡಿದರೆ ಕೂದಲು ಸೊಂಪಾಗಿ  ಬೆಳೆಯುತ್ತದೆ. ಕರಿಬೇವಿನ ಸೊಪ್ಪನ್ನು ರುಬ್ಬಿ ತೆಂಗಿನ ಎಣ್ಣೆಯೊಂದಿಗೆ ಬೆರೆಸಿ, ಇದನ್ನು ಬೆಚ್ಚಗೆ ಮಾಡಿಕೊಂಡು ಕೂದಲ ಬುಡಕ್ಕೆ ಹಚ್ಚಿಕೊಳ್ಳಿ ಹೀಗೆ ನಿಯಮಿತವಾಗಿ ಮಾಡುವುದರಿಂದ ಆಕಾಲಿಕ ನೆರೆ ತಪ್ಪುತ್ತದೆ. ಕೊಬ್ಬರಿ ಎಣ್ಣೆಗೆ ಸಮ ಪ್ರಮಾಣದಲ್ಲಿ ನಿಂಬೆರಸ ಬೆರೆಸಿ ತಲೆಗೂದಲಿಗೆ ಕೈಬೆರಳ ತುದಿಯಿಂದ ಉಜ್ಜಿ, ಅರ್ಧ ಗಂಟೆ ಬಿಟ್ಟು ಸ್ನಾನ ಮಾಡಿದರೆ ತಲೆಹೊಟ್ಟು ನಿವಾರಣೆಯಾಗುತ್ತದೆ. ಸ್ನಾನ ಮಾಡುವ ನೀರಿಗೆ ಬೇವಿನ ಎಲೆಗಳನ್ನು ಹಾಕಿ ಕುದಿಸಿ ಅದರಿಂದ ತಲೆ ಸ್ನಾನ ಮಾಡಿದಲ್ಲಿ ಕೂದಲುದುರುವಿಕೆ ಕಡಿಮೆಯಾಗುತ್ತದೆ.

ಇದನ್ನೂ ಓದಿ:  ನೀವು ತಡವಾಗಿ ವಿವಾಹವಾಗಿದ್ದೀರಾ…? ಆದಷ್ಟು ಬೇಗ ಮಗು ಪಡೆಯುವ ಬಗ್ಗೆ ಆಲೋಚಿಸಿ…

ಬೆಟ್ಟದ ನೆಲ್ಲಿಕಾಯಿ ಮತ್ತು ಭೃಂಗರಾಜ, ದಾಸವಾಳ ಎಲೆಗಳನ್ನು ರುಬ್ಬಿ, ಹೇರ್ ಪ್ಯಾಕ್ ಹಾಕಿಕೊಳ್ಳಿ. ಬಾಳೆದಿಂಡನ್ನು ಸಣ್ಣಗೆ ಹಚ್ಚಿ ಕೊಬ್ಬರಿ ಎಣ್ಣೆಯಲ್ಲಿ ನೆನೆಸಿ, ಎರಡರಿಂದ ಮೂರು ದಿನ ಬಿಟ್ಟು ಸೋಸಿಕೊಂಡು ಎಣ್ಣೆಯಿಂದ ಕೂದಲನ್ನು ಮಸಾಜ್ ಮಾಡಿದರೆ ಕೂದಲು ಕಪ್ಪಾಗುತ್ತದೆ. ಇದಲ್ಲದೆ ನಿಮ್ಮ ಬಾಚಣಿಕೆ, ಹೇರ್‌ಬ್ರಷ್, ಟವಲ್‌ಗಳನ್ನು ಸ್ವಚ್ಚವಾಗಿಟ್ಟುಕೊಳ್ಳಿ. ಜೊತೆಗೆ ತಲೆಗೂದಲ ಬೆಳವಣಿಗೆಗೆ ವ್ಯಾಯಾಮ, ಯೋಗ ಕೂಡ ಸಹಕಾರಿ,  ನಮ್ಮ ಹಿರಿಯರು ಕೈಗೆಟುಕುವ ಪದಾರ್ಥಗಳಿಂದಲೇ ಕೆಲವೊಂದು ಮನೆ ಮದ್ದುಗಳನ್ನು ಮಾಡಿ ಉಪಯೋಗಿಸುತ್ತಾ ತಮ್ಮ ಆರೋಗ್ಯವನ್ನು ಕಂಡು ಕೊಂಡಿದ್ದರು. ಆದರೆ ಪ್ರತಿಯೊಬ್ಬರೂ ಒತ್ತಡದ ಬದುಕಿನಲ್ಲಿ ತೊಡಗಿಸಿಕೊಂಡಿರುವುದರಿಂದ ತಮ್ಮ  ಆರೋಗ್ಯದ ಬಗ್ಗೆ ಕಾಳಜಿ ವಹಿಸದೆ ತೊಂದರೆ ಪಡುತ್ತಿದ್ದಾರೆ. ಇದನ್ನು ತಪ್ಪಿಸಬೇಕಾದರೆ ಮನೆ ಮದ್ದಿನ ಬಗ್ಗೆಯೂ ಗಮನಹರಿಸುವುದು ಒಳಿತು.

 

admin
the authoradmin

Leave a Reply