District

ಮೈಸೂರು ನಗರದಲ್ಲಿ ಗಮನಸೆಳೆದ ಹೆರಿಟೇಜ್ ಫ್ಲ್ಯಾಶ್ ಮೊಬ್ ಪ್ರದರ್ಶನ..  ಹೆರಿಟೇಜ್ ಟ್ರೆಷರ್ ಹಂಟ್

ಮೈಸೂರು: ಮುಂಜಾನೆಯ  ಚುಮುಚುಮು ಚಳಿಗೆ,  ಸೂರ್ಯ ಇನ್ನೂ ಮಂಜಿನ ನಡುವೆ ಕಣ್ಣು ಬಿಡುವ ಮುನ್ನವೇ  ಅರಮನೆಯ ಕೋಟೆ ಆಂಜನೇಯ ದೇಗುಲದ ಮುಂಭಾಗದಲ್ಲಿ ಇದೇ  ಮೊದಲ ಬಾರಿಗೆ  ನಗರದ ಪಾರಂಪರಿಕ ಶ್ರೀಮಂತಿಕೆ ಸಾರುವ ಫ್ಲ್ಯಾಶ್ ಮೊಬ್ ಅನಾವರಣಗೊಂಡಿತು. ಸುಮಾರು ಅರ್ಧಗಂಟೆಗಳ ಕಾಲ  ನಗರದ ಪೂರ್ಣ ಚೇತನ ಶಾಲೆಯ 170 ಮಕ್ಕಳು 14 ಚಾರಿತ್ರಿಕ, ಜಾನಪದ, ದೇಶ ಪ್ರೇಮದ ಗೀತೆಗಳ ಮೂಲಕ ಹೊಸ ಲೋಕಕ್ಕೆ ನೋಡುಗರನ್ನು ಕೊಂಡೊಯ್ದರು.

ಫ್ಲಾಶ್  ಮೊಬ್ ಬಳಿಕ, ನಗರದ ಇತಿಹಾಸ, ಪರಂಪರೆ ಆಧಾರಿತ  ಹೆರಿಟೇಜ್ ಟ್ರೆಷರ್ ಹಂಟ್ ಆರಂಭಗೊಂಡಿತು. ಈ ಹೆರಿಟೇಜ್ ಟ್ರೆಷರ್ ಹಂಟ್ ಉದ್ಘಾಟಿಸಿದ ಖ್ಯಾತ ಮೂಳೆ ತಜ್ಞ, ಬಿ ಕೆ ಜಿ  ಆವಾಂತ ಆಸ್ಪತ್ರೆಯ ಸ್ಥಾಪಕ ಡಾ. ಟಿ ಎನ್ ಬಾಲಕೃಷ್ಣೇ ಗೌಡ, ಮೈಸೂರಿನ  ಪರಂಪರೆಯ ರಕ್ಷಣೆ ನಮ್ಮೆಲ್ಲರ ಜವಾಬ್ದಾರಿ ಎಂದರು.

“ಮೈಸೂರಿನ ಅನನ್ಯತೆ ಇಲ್ಲಿನ ಇತಿಹಾಸ ಹಾಗು ಪರಂಪರೆ. ನೂರಾರು ವರ್ಷಗಳಿಂದ ಬೆಳಗುತ್ತಾ ಬಂದಿರುವ ಈ ಪರಂಪರೆಯನ್ನು ನಾವು ಮುಂದಿನ ಜನಾಂಗಕ್ಕೆ  ಜೋಪಾನವಾಗಿ ಹಸ್ತಾಂತರಿಸಬೇಕಿದೆ ಎಂದರು. ಈ ಹೆರಿಟೇಜ್ ಟ್ರೆಷರ್ ಹಂಟ್ ನ ವಿಜೇತರಿಗೆ  ಬಿ ಕೆ ಜಿ  ಆವಾಂತ ಆಸ್ಪತ್ರೆಯಲ್ಲಿ ಐದು ಸಾವಿರ ರೂಪಾಯಿಗಳ ಉಚಿತ ವೈದ್ಯಕೀಯ ಪರೀಕ್ಷೆಗಳನ್ನು ಅವರು  ಈ ಸಂದರ್ಭದಲ್ಲಿ ಘೋಷಿಸಿದರು.

ಸಮಾರಂಭದ ಮುಖ್ಯ ಅತಿಥಿಯಾಗಿದ್ದ ಖ್ಯಾತ ಶ್ವಾಸಕೋಶ ತಜ್ಞ ಡಾ. ಲಕ್ಷ್ಮಿ ನರಸಿಂಹನ್ ಆರ್ ಮಾತನಾಡಿ,   ಮೈಸೂರು ಹೆರಿಟೇಜ್ ಟ್ರೆಷರ್ ಹಂಟ್ ಮೈಸೂರಿನ ಇತಿಹಾಸ, ಪರಂಪರೆ, ಬೆರಗು ಹಾಗು ಸೊಬಗನ್ನು ಮಕ್ಕಳಿಗೆ ಮತ್ತು ಅವರ ಹೆತ್ತವರಿಗೆ ಪರಿಚಯಮಾಡಿಕೊಟ್ಟಿದೆ ಎಂದು ಅಭಿಪ್ರಾಯಪಟ್ಟರು.

ಅತ್ಯಂತ ವಿಶಿಷ್ಟವಾಗಿ, ಬೌದ್ಧಿಕ ಶಕ್ತಿಗೆ ಕಸರತ್ತು ನೀಡುವ ರೀತಿಯಲ್ಲಿ ಈ ಸ್ಪರ್ಧೆ  ನಡೆಯಿತು. ಇಂತಹ ಸ್ಪರ್ಧೆಗಳ ಮೂಲಕ, ನಮ್ಮ ಮುಂದಿನ ಜನಾಂಗಕ್ಕೆ  ನಮ್ಮ ಪಾರಂಪರಿಕ ಶ್ರೇಷ್ಠತೆಯನ್ನು ತಿಳಿಸುವ ಕೆಲಸವಾಗಬೇಕು, ಎಂದು ಅವರು ತಿಳಿಸಿದರು.

ಭಾಗವಹಿಸಿದ  ಪ್ರತೀ ತಂಡಕ್ಕೂ ಕಾರ್ಯಕ್ರಮದ ಆರಂಭದಲ್ಲೇ  10 ಸುಳಿವುಗಳನ್ನು ಒಳಗೊಂಡ ವಿಶೇಷ ಟ್ರೆಷರ್ ಕಿಟ್ ನೀಡಲಾಗಿತ್ತು. ಚೆಲುವಾಂಬ ಮ್ಯಾನ್ಷನ್, ರೈಲ್ವೆ ನಿಲ್ದಾಣ, ಓ ಆರ್ ಐ, ಕ್ರಾಫರ್ಡ್ ಹಾಲ್,   ಜಿಲ್ಲಾಧಿಕಾರಿಗಳ ಹಳೆ ಕಚೇರಿ, ಪುರಭವನ  ಹೀಗೆ  ಹೀಗೆ  ನಗರದ ಪ್ರಮುಖ ಪಾರಂಪರಿಕ ಸ್ಥಳಗಳನ್ನು ಪತ್ತೆ ಹೆಚ್ಚುವ ಸವಾಲು ಒಡ್ಡಲಾಗಿತ್ತು.

1 ಗಂಟೆ 18 ನಿಮಿಷದಲ್ಲಿ ಈ ಸವಾಲು ಪೂರ್ತಿ ಮಾಡಿದ  ಪೂರ್ಣ ಚೇತನ ಶಾಲೆಯ ಏಳನೇ ತರಗತಿ ವಿದ್ಯಾರ್ಥಿನಿ ಹೃದ್ಯ ಹಾಗು ಅವಳ ತಂದೆ ಭುವನೇಶ್ವರ್ ಪ್ರಥಮ ಸ್ಥಾನ ಪಡೆದರು. ಆಟೋ ಮೂಲಕ ಅವರು ಈ ಸವಾಲು ಪೂರ್ತಿಗೊಳಿಸಿದರು. ಅದೇ ಶಾಲೆಯ ಏಳನೇ ತರಗತಿಯ ಇನ್ನೋರ್ವ ವಿದ್ಯಾರ್ಥಿನಿ ಆರೋಹಿ ಸಿಂಗ್ ಹಾಗು ಆಕೆಯ ತಂದೆ ಸಂತೋಷ್ ಕುಮಾರ್ ಸಿಂಗ್ ದ್ವಿತೀಯ ಪ್ರಶಸ್ತಿ ಪಡೆದರು.

ಕೆ ಆರ್ ನಗರದ ವಾಸವಿ ಸಾಂಸ್ಕೃತಿಕ ಶಾಲೆಯ ಐದನೇ ತರಗತಿ ವಿದ್ಯಾರ್ಥಿನಿ ಋತ್ವಿ ಹಾಗು ತೇಜೇಶ್ ಗೌಡ ತೃತೀಯ ಸ್ಥಾನ ಪಡೆದು, ಇವರು  ಕ್ರಮವಾಗಿ   ₹10,000, ₹7,500 ಮತ್ತು ₹5,000 ನಗದು ಬಹುಮಾನ ಹಾಗೂ ಟ್ರೋಫಿ ಪಡೆದರು.

ಶಾಲೆಯ ಸಿಇಒ ದರ್ಶನ್ ರಾಜ್, ಮುಖ್ಯ ಆಡಳಿತಾಧಿಕಾರಿ ಮಾಧುರ್ಯ ರಾಮಸ್ವಾಮಿ,  ಕಾರ್ಯದರ್ಶಿ ಡಾ ರಜಿನಿ, ಟ್ರಸ್ಟೀ ಪ್ರವೀಣ್ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

admin
the authoradmin

Leave a Reply