ವಿದ್ಯಾರ್ಥಿಗಳು ಜ್ಞಾನವಂತರಾಗಲು ಪುಸ್ತಕಗಳ ಸಹವಾಸ ಮಾಡಿ: ಸಾಹಿತಿ ಟಿ. ಸತೀಶ್ ಜವರೇಗೌಡ ಕಿವಿಮಾತು

ಮೈಸೂರು: ವಿದ್ಯಾರ್ಥಿಗಳು ಜ್ಞಾನವಂತರು, ಬುದ್ಧಿವಂತರು, ವಿಚಾರವಂತರು, ಮಿಗಿಲಾಗಿ ಗುಣವಂತರಾಗಲು ಸಾಹಿತ್ಯಾತ್ಮಕ ಪುಸ್ತಕಗಳ ಜೊತೆಗೆ ಸಹವಾಸ ಮಾಡಬೇಕು ಎಂದು ಸಾಹಿತಿ ಟಿ. ಸತೀಶ್ ಜವರೇಗೌಡ ಕರೆ ನೀಡಿದರು.
ತಾಲ್ಲೂಕಿನ ಮೆಲ್ಲಹಳ್ಳಿಯ ಸರ್ಕಾರಿ ಪ್ರೌಢಶಾಲೆಯಲ್ಲಿ ನಡೆದ ‘ಕನ್ನಡ ನಿತ್ಯೋತ್ಸವ ಮತ್ತು ಶಾಲಾ ವಾರ್ಷಿಕೋತ್ಸವ’ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು ಓದುವ ವಯಸ್ಸಿನ ವಿದ್ಯಾರ್ಥಿಗಳ ಕೈಯಲ್ಲಿ ಇರಬೇಕಾದದ್ದು ಮೊಬೈಲ್ ಅಲ್ಲ; ಪುಸ್ತಕಗಳು ಮತ್ತು ಪತ್ರಿಕೆಗಳು ಎಂದು ಕಿವಿಮಾತು ಹೇಳಿದರು.

ಪುಸ್ತಕಗಳ ಓದುವ ಹವ್ಯಾಸದಿಂದ ವಿದ್ಯಾರ್ಥಿಗಳಿಗೆ ವೈವಿಧ್ಯಮಯ ಜ್ಞಾನ, ಅನುಭವ, ವಿಚಾರಗಳು ಲಭಿಸುತ್ತವೆ. ಪತ್ರಿಕೆಗಳ ಓದಿನಿಂದ ಪ್ರಚಲಿತ ವಿದ್ಯಮಾನಗಳ ಕುರಿತು ಅಪರಿಮಿತ ಮಾಹಿತಿಗಳು ದೊರಕುತ್ತವೆ. ಪಠ್ಯದ ಜೊತೆಗೆ ಸಹಪಠ್ಯದ ಓದು ತುಂಬ ಅಗತ್ಯ ಎಂದರು.
ಕನ್ನಡ ನಮ್ಮ ಮಾತೃಭಾಷೆ. ಜೊತೆಗೆ ಶಿಕ್ಷಣ ಮತ್ತು ಆಡಳಿತದ ಮಾಧ್ಯಮ ಕೂಡ. ಇಂತಹ ಕನ್ನಡ ಭಾಷೆಯನ್ನು ವಿದ್ಯಾರ್ಥಿಗಳು ಹೃದಯದಿಂದ ಆಲಿಸಬೇಕು.ಅಭಿಮಾನದಿಂದ ಮಾತಾಡಬೇಕು. ಶ್ರದ್ಧೆಯಿಂದ ದಿನನಿತ್ಯದ ಬರೆವಣಿಗೆಯಲ್ಲಿ ಬಳಸಬೇಕು. ಆಗ ಕನ್ನಡ ಮತ್ತಷ್ಟು ಬಲಿಷ್ಠವಾಗಿ ಬೆಳೆಯುತ್ತದೆ. ಕನ್ನಡ ಪ್ರೀತಿ ಹೃದಯದಲ್ಲಿ ಸ್ಥಿರವಾಗಿ ಉಳಿಯುತ್ತದೆ ಎಂದು ನುಡಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಎಸ್.ಡಿ.ಎಂ.ಸಿ. ಅಧ್ಯಕ್ಷೆ ಎಸ್. ಶೀಲಾ ಮಾತನಾಡಿ “ವಿದ್ಯಾರ್ಥಿಗಳಲ್ಲಿ ಶಿಕ್ಷಕರಿಗೆ ಗೌರವ ಕೊಡುವ ಮನೋಭಾವ ದೂರವಾಗುತ್ತಿದೆ. ಮತ್ತೊಬ್ಬರ ಮಾತುಗಳನ್ನು ಆಲಿಸುವ ತಾಳ್ಮೆಯಾಗಲಿ, ಶ್ರದ್ಧೆಯಾಗಲಿ ಇಲ್ಲವೇ ಇಲ್ಲ. ಉತ್ತಮ ಪ್ರಜೆಗಳಾಗಲು ವಿದ್ಯಾರ್ಥಿಗಳಲ್ಲಿ ಈ ಗುಣಗಳು ಮೈಗೂಡಬೇಕು ಎಂದರು.

ವೇದಿಕೆಯಲ್ಲಿ ಶಾಲೆಯ ಮುಖ್ಯ ಶಿಕ್ಷಕಿ ಸಿ.ಎಸ್. ಸುಜಾತ, ಎಸ್.ಡಿ.ಎಂ.ಸಿ. ಸದಸ್ಯರಾದ ಬಿ.ಎನ್. ಸಿದ್ದರಾಜು (ಬಾಬು) ಮತ್ತು ದೊಡ್ಡಸ್ವಾಮಿ ಉಪಸ್ಥಿತರಿದ್ದರು. ಕನ್ನಡ ಅಧ್ಯಾಪಕಿ ಬಿ.ಎಲ್. ನಳಿನ ಪ್ರಾಸ್ತಾವಿಕ ನುಡಿಗಳನ್ನಾಡಿದರು. ವಿದ್ಯಾರ್ಥಿಗಳಾದ ಪೂರ್ವಿಕ್, ದಿವ್ಯ, ಧನಲಕ್ಷ್ಮಿ ಕರ್ನಾಟಕ ಏಕೀಕರಣ ಮತ್ತು ಕನ್ನಡ ರಾಜ್ಯೋತ್ಸವ ಕುರಿತು ಭಾಷಣ ಮಾಡಿದರು.
ಇದೇ ಸಂದರ್ಭದಲ್ಲಿ ವರ್ಗಾವಣೆಯಾಗಿರುವ ಶಿಕ್ಷಕಿಯರಾದ ಡಿ.ಬಿ. ರಶ್ಮಿ ಮತ್ತು ಸಿ. ರಶ್ಮಿ ಅವರನ್ನು ಸನ್ಮಾನಿಸಿ ಬೀಳ್ಕೊಡುಗೆ ನೀಡಲಾಯಿತು. ವಿವಿಧ ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಬಳಿಕ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.
.







