ಸಂಪತ್ ಭರಿತವಾದ ಕನ್ನಡ ನಾಡುನುಡಿಯನ್ನು ಉಳಿಸಿ ಬೆಳೆಸಲು ತಹಶೀಲ್ದಾರ್ ಜಿ.ಸುರೇಂದ್ರಮೂರ್ತಿಕರೆ

ಕೆ.ಆರ್.ನಗರ(ಜಿಟೆಕ್ ಶಂಕರ್): ಕನ್ನಡ ನಾಡು ನುಡಿ ಸಂಪತ್ ಭರಿತವಾಗಿದ್ದು ಅದನ್ನು ಉಳಿಸಿ ಬೆಳೆಸುವುದು ಕನ್ನಡ ನಾಡಿನ ಪ್ರತಿಯೊಬ್ಬ ಕನ್ನಡಿನ ಆದ್ಯ ಕರ್ತವ್ಯ ಎಂದು ತಹಶೀಲ್ದಾರ್ ಜಿ.ಸುರೇಂದ್ರಮೂರ್ತಿ ಹೇಳಿದರು.
ಪಟ್ಟಣದ ರೋಟರಿ ಭವನದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಮತ್ತು ರೋಟರಿ ಸಂಸ್ಥೆ ವತಿಯಿಂದ ನಡೆದ 70ನೇ ಕನ್ನಡ ರಾಜ್ಯೋತ್ಸವ ಸಮಾರಂಭ ಮತ್ತು ಸಾಧಕರಿಗೆ ಸನ್ಮಾನ ಸಮಾರಂಭ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಭಾಷೆಯ ಉಳಿವಿಗೆ ಸರ್ಕಾರವು ಸಹ ಅನೇಕ ಯೋಜನೆಗಳನ್ನು ರೂಪಿಸುತ್ತಿದೆ ಎಂದರು.
ಕನ್ನಡಿಗರಾದ ನಾವುಗಳು ನವೆಂಬರ್ ತಿಂಗಳಿನಲ್ಲಿ ಮಾತ್ರ ರಾಜ್ಯೊತ್ಸವನ್ನು ಆಚರಿಸದೆ ವರ್ಷ ಪೂರ್ತಿ ಆಚರಿಸುವಂತಾಗಬೇಕು ಎಂದರಲ್ಲದೆ, ಹಿಂದಿನಿಂದಲ್ಲು ಕನ್ನಡದ ಅಳಿವು ಉಳಿವಿಗೆ ಸಾಹಿತಿಗಳು ಮತ್ತು ಕವಿಗಳು ಸೇರಿದಂತೆ ಅನೇಕರು ದುಡಿದಿದ್ದಾರೆ ಎಂದ ಅವರು ಅದೇ ರೀತಿ ಇತ್ತೀಚಿನ ದಿನಮಾನದ ಸಾಹಿತಿಗಳು ಕನ್ನಡದ ಉಳಿವಿಗೆ ತನ್ನದೇ ಆದ ರೀತಿಯಲ್ಲಿ ಶ್ರಮಿಸುತ್ತಿದ್ದಾರೆ ಎಂದು ತಿಳಿಸಿದರು.
ಸರ್ಕಾರ ಭಾಷೆಯ ಉಳಿವಿಗಾಗಿ ಕನ್ನಡ ಭಾಷೆಯ ಲಿಪಿಗಳನ್ನು ಗಣಕಯಂತ್ರದಲ್ಲಿ ಅಳವಡಿಸಿ ಸರ್ಕಾರಿ ಕಛೇರಿಗಳಲ್ಲಿ ಕನ್ನಡದಲ್ಲೇ ವ್ಯವಹಿಸುವಂತೆ ನಿರ್ದೇಶನ ನೀಡಿರುವುದಲ್ಲದೆ ಬ್ಯಾಂಕಿಂಗ್ ಸಂಸ್ಥೆಗಳಲ್ಲು ಕನ್ನಡ ಬಳಸುವುದನ್ನು ಕಡ್ಡಾಯಗೊಳ್ಳಿಸಿದೆ ಎಂದು ಮಾಹಿತಿ ನೀಡಿದರು.

ಇತ್ತೀಚಿನ ದಿನಗಳಲ್ಲಿ ಗ್ರಾಮೀಣ ಕಲೆ ಮತ್ತು ಸಂಸ್ಕೃತಿಗಳು ನಶಿಸಿ ಹೋಗುತ್ತಿದ್ದು ಅದನ್ನು ಪ್ರೋತ್ಸಾಹಿಸಿ ಉಳಿಸಿಕೊಳ್ಳುವುದರ ಕಡೆಗೆ ನಾವುಗಳು ಹೆಚ್ಚು ಆಶಕ್ತರಾಗಬೇಕೆಂದರಲ್ಲದೆ ಗ್ರಾಮೀಣ ಪ್ರದೇಶದ ಕಲೆಗಾರರಿಗೆ ಸರ್ಕಾರ ನೀಡುವ ಗೌರವ ಧನ ಮತ್ತು ಕನ್ನಡ ಸಂಸ್ಕೃತಿ ಇಲಾಖೆಯ ವತಿಯಿಂದ ನೀಡುವ ಸವಲತ್ತುಗಳನ್ನು ಪಡೆದು ಕಲೆಯನ್ನು ಉಳಿಸಿಕೊಂಡು ಮುಂದಿನ ಯುವ ಪೀಳಿಗೆಗೆ ಅವುಗಳನ್ನು ಪರಿಚಯಿಸಬೇಕು ಎಂದು ಸಲಹೆ ನೀಡಿದರು.
ಇದೇ ಸಂದರ್ಭದಲ್ಲಿ ಸಾಹಿತಿಗಳಾದ ಎ.ಹರೀಶ್ ಕುಮಾರ್, ತಿಪ್ಪೂರುಕೃಷ್ಣ, ಜಾನಪದ ಕಲಾವಿದರಾದ ಕಾಮಾಕ್ಷಿ, ನಾಗೇಂದ್ರ ಅವರುಗಳನ್ನು ಸನ್ಮಾನಿಸಿ ಗೌರವಿಸಲಾಯಿತ್ತು. ನಂತರ ಕಾಮಾಕ್ಷಿನಾಗೇಂದ್ರ ಅವರುಗಳು ನಡೆಸಿಕೊಟ್ಟ ತೋಗಲು ಗೊಬ್ಬೆ ಆಟ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.
ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷ ಡಿಂಡಿಮಶಂಕರ್, ಪದಾಧಿಕಾರಿಗಳಾದ ಬಿಎಸ್ ಎನ್ ಎಲ್ ಕೃಷ್ಣ, ಕೆ.ಎಲ್.ಭಾಸ್ಕರ್, ಉದಯಶಂಕರ್, ಹೆಗ್ಗಂದೂರುಪ್ರಭಾಕರ್, ರಾಮಕೃಷ್ಣ, ವಿ.ಸುರೇಶ್, ಸೋಮಶೆಟ್ಟಿ, ಕೃಷ್ಣ ರೋಟರಿ ಕ್ಲಬ್ ಅಧ್ಯಕ್ಷ ದಯಾನಂದ್, ಮಾಜಿ ಅಧ್ಯಕ್ಷ ಸಿ.ವಿ.ಮೋಹನ್, ಕಾರ್ಯದರ್ಶಿ ಪುರುಷೋತ್ತಮ್, ಮುಖಂಡರಾದ ಗೋಪಾಲ್ ರಾವ್ ಕದಂ, ರಾಮಕೃಷ್ಣ, ಚಂದ್ರು ಸೇರಿದಂತೆ ಇನ್ನಿತರರು ಹಾಜರಿದ್ದರು.







