ಕೆ.ಆರ್.ನಗರ(ಜಿಟೆಕ್ ಶಂಕರ್): ಕಳೆದ 30 ತಿಂಗಳಿನಿಂದ ಕ್ಷೇತ್ರದ ಅಭಿವೃದ್ಧಿಗೆ ನಿರಂತರವಾಗಿ ಕೆಲಸ ಮಾಡಿ ಜನಾನುರಾಗಿಯಾಗಿರುವ ಶಾಸಕ ಡಿ.ರವಿಶಂಕರ್ ಅವರ ಕೆಲಸಗಳು ಮತ್ತು ಜನಪ್ರಿಯತೆಯನ್ನು ಸಹಿಸದ ಮಾಜಿ ಸಚಿವ ಸಾ.ರಾ.ಮಹೇಶ್ ಸುಳ್ಳು ಆರೋಪಗಳನ್ನು ಮಾಡುತ್ತಿದ್ದು, ಇದು ಸತ್ಯಕ್ಕೆ ದೂರವಾದ ವಿಚಾರ ಎಂದು ಪುರಸಭೆ ಮಾಜಿ ಸದಸ್ಯ ನಟರಾಜು ಹೇಳಿದರು.
ಪಟ್ಟಣದ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಅವರು ಮಾತೆತ್ತಿದರೆ ಶಾಸಕರ ತಂದೆ ದೊಡ್ಡಸ್ವಾಮೇಗೌಡರು ತೋಟದ ಮನೆಯಲ್ಲಿ ರಾಜಕೀಯ ವ್ಯವಹಾರ ಮಾಡುತ್ತಾರೆ ಎಂದು ನಿರಂತರವಾಗಿ ಸುಳ್ಳು ಹೇಳುತ್ತಿರುವ ಸಾ.ರಾ.ಮಹೇಶ್ ಅವರಿಗೆ ಅದು ಶಾಸಕರ ಗೃಹ ಕಚೇರಿ ಎಂಬುದು ತಿಳಿದಿಲ್ಲವೇ ಎಂದು ವ್ಯಂಗ್ಯವಾಡಿದರು.
ಕ್ಷೇತ್ರದ ಅಭಿವೃದ್ಧಿ ವಿಚಾರದಲ್ಲಿ ಎಂಸಿಡಿಸಿಸಿ ಬ್ಯಾಂಕಿನ ನಿರ್ದೇಶಕರಾಗಿರುವ ದೊಡ್ಡಸ್ವಾಮೇಗೌಡರು ಶಾಸಕರಾಗಿರುವ ತಮ್ಮ ಮಗನೊಂದಿಗೆ ಕೈಜೋಡಿಸಿ ಜನ ಹಿತಕ್ಕಾಗಿ ಕೆಲಸ ಮಾಡುತ್ತಿದ್ದು, ಇದನ್ನು ಸಹಿಸದ ಸಾ.ರಾ.ಮಹೇಶ್ ಮನ ಬಂದಂತೆ ಮಾತನಾಡುತ್ತಿದ್ದು, ಇದಕ್ಕೆ ಕ್ಷೇತ್ರದ ಮತದಾರ ಪ್ರಭುಗಳು ಕಳೆದ ವಿಧಾನಸಭಾ ಚುನಾವಣೆಯಲ್ಲಿಯೇ ತಕ್ಕ ಉತ್ತರ ನೀಡಿದ್ದಾರೆ ಎಂದು ತಿಳಿಸಿದರು.
ಅಭಿವೃದ್ಧಿ ವಿರೋಧಿಯಾಗಿರುವ ಸಾ.ರಾ.ಮಹೇಶ್ ಅವರು ಶಾಸಕರ ಅಧಿಕಾರದಲ್ಲಿ ಹಸ್ತಕ್ಷೇಪ ಮಾಡುತ್ತಿದ್ದು, ಕಳೆದ ನಾಲ್ಕು ದಿನಗಳ ಹಿಂದೆ ತಾಲೂಕಿನ ಹಂಪಾಪುರ, ಸನ್ಯಾಸಿಪುರ, ಕಗ್ಗೆರೆ ಸಂಪರ್ಕ ರಸ್ತೆಯ ಕಾಮಗಾರಿಯನ್ನು ಪರಿಶೀಲಿಸಿ ಅಧಿಕಾರಿಗಳಿಗೆ ಧಮಕಿ ಹಾಕುವ ಮೂಲಕ ತಮ್ಮ ವ್ಯಾಪ್ತಿ ಮೀರಿ ನಡೆದುಕೊಂಡಿದ್ದು, ಇದು ಎಷ್ಟು ಸರಿಯಾಗಿದೆ ಎಂದು ಕೇಳಿದರು.
ಈ ಹಿಂದೆ ನೀವು ಶಾಸಕರು ಮತ್ತು ಸಚಿವರಾಗಿದ್ದಾಗ ಮಾಡಿದ ಕಾಮಗಾರಿಗಳು ನಿಯಮಾನುಸಾರ ನಡೆದಿವೆಯೆಂದು ಸಾಭೀತುಪಡಿಸಲು ಸಿದ್ಧರಾಗಬೇಕೆಂದು ಪಂಥಾಹ್ವಾನ ನೀಡಿದ ನಟರಾಜು ಸೋಲಿನ ಹತಾಸೆಯಿಂದ ಮಾತನಾಡುವವರಿಗೆ ಕ್ಷೇತ್ರದಲ್ಲಿ ಕವಡೆ ಕಾಸಿನ ಕಿಮ್ಮತ್ತಿಲ್ಲ ಎಂದು ಕಿಡಿಕಾರಿದರು.

ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಕೆ.ಎಸ್.ಮಹೇಶ್, ನಿರ್ದೇಶಕರಾದ ಸೈಯದ್‌ಜಾಬೀರ್, ಕೆ.ಎನ್.ಪ್ರಸನ್ನಕುಮಾರ್, ಪುರಸಭೆ ಮಾಜಿ ಅಧ್ಯಕ್ಷರಾದ ಕೆ.ಜಿ.ಸುಬ್ರಹ್ಮಣ್ಯ, ಸೈಯದ್‌ಸಿದ್ದಿಕ್, ಮಾಜಿ ಸದಸ್ಯರಾದ ಕೆ.ಎಲ್.ಕುಮಾರ್, ಶಂಕರ್, ಕೆ.ವಿನಯ್, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಎಂ.ಎಸ್.ಮಹದೇವ್, ಮುಖಂಡರಾದ ನವೀದ್‌ಅಹಮದ್, ಪುಟ್ಟು, ಆದರ್ಶ, ಬಿ.ಹೆಚ್.ಕುಮಾರ್ ಸುದ್ಧಿಗೋಷ್ಠಿಯಲ್ಲಿ ಹಾಜರಿದ್ದರು.
ಮಾಜಿ ಸಚಿವ ಸಾ.ರಾ.ಮಹೇಶ್ ಅಭಿವೃದ್ಧಿ ವಿರೋಧಿ
ಮಾಜಿ ಸಚಿವ ಸಾ.ರಾ.ಮಹೇಶ್ ಅಭಿವೃದ್ಧಿ ವಿರೋಧಿಯಾಗಿದ್ದು, ಅವರಿಗೆ ಕ್ಷೇತ್ರದ ಜನರ ಅನುಕೂಲಕ್ಕಿಂತ ಸ್ವಂತ ರಾಜಕಾರಣವೇ ಮುಖ್ಯವಾಗಿದೆ ಎಂದು ಪುರಸಭೆ ಮಾಜಿ ಅಧ್ಯಕ್ಷ ಡಿ.ಶಿವುನಾಯಕ್ ಆರೋಪಿಸಿದರು.
ಪಟ್ಟಣದ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಅವರು ರಸ್ತೆ ಬದಿಯಲ್ಲಿ ತರಕಾರಿ ಮಾರಾಟ ಮಾಡುವವರ ಹಿತಕ್ಕಾಗಿ ನಾವು ಶಾಸಕರ ನಿಧಿಯಿಂದ ಅನುದಾನ ಕೊಡಿಸಿ ಕೃಷ್ಣರಾಜೇಂದ್ರ ಮಾರುಕಟ್ಟೆ ಸಂಕೀರ್ಣ ಮಾಡಿದ್ದಕ್ಕೆ ಮಾಹಿತಿ ಹಕ್ಕು ಅರ್ಜಿ ಕೊಡಿಸುವ ಮೂಲಕ ದಕ್ಕೆ ತಡೆಯೊಡ್ಡಿದ್ದು, ಇದು ಯಾವ ನ್ಯಾಯ ಎಂದು ಪ್ರಶ್ನಿಸಿದರು.
ಮಾತೆತ್ತಿದರೆ ನಮ್ಮ ಜನಪ್ರಿಯ ಶಾಸಕರನ್ನು ಟೀಕಿಸಿ ಮೂದಲಿಸುವುದನ್ನೇ ಕಾಯಕ ಮಾಡಿಕೊಂಡಿರುವ ಅವರು ಜನವಿರೋಧಿಯಾಗಿದ್ದು, ಕಳೆದ ಹದಿನೈದು ವರ್ಷಗಳ ಅವಧಿಯಲ್ಲಿ ಅವರು ಕ್ಷೇತ್ರಕ್ಕೆ ಮಾಡಿದ ಅಭಿವೃದ್ಧಿ ಕೆಲಸಗಳು ಮತ್ತು ನೀಡಿದ ಕೊಡುಗೆ ಏನು ಎಂದು ಕೇಳಿದ ಪುರಸಭೆ ಮಾಜಿ ಅಧ್ಯಕ್ಷರು ಸುಳ್ಳನ್ನೇ ಸತ್ಯವನ್ನಾಗಿಸುವ ಅವರ ಕೆಟ್ಟ ರಾಜಕಾರಣ ಹೆಚ್ಚು ದಿನ ನಡೆಯುವುದಿಲ್ಲ ಎಂದರು.
ಶಾಸಕರ ನಿಧಿಯಿಂದ ಅನುದಾನ ಬಿಡೆಗಡೆ ಮಾಡಿಸಿ ತರಕಾರಿ ಮಾರುಕಟ್ಟೆ ಸಂಕುಲವನ್ನು ಸುಸಜ್ಜಿತವಾಗಿ ನಿರ್ಮಾಣ ಮಾಡಿರುವುದನ್ನು ಸಹಿಸದ ಮಾಜಿ ಸಚಿವರು ಅದರ ಉದ್ಘಾಟನೆಗೆ ತಡೆಯೊಡ್ಡು ಹೀನ ಕೃತ್ಯ ಮಾಡುತ್ತಿದ್ದು, ಇದನ್ನು ನಗರದ ಜನತೆ ಮತ್ತು ರಸ್ತೆ ಬದಿಯಲ್ಲಿ ಮಳೆ, ಗಾಳಿ, ಚಳಿ, ಬಿಸಿಲೆನ್ನದೆ ವ್ಯಾಪಾರ ಮಾಡುತ್ತಿರುವ ಬಡವರು ಕ್ಷಮಿಸುವುದಿಲ್ಲ ಎಂದು ನುಡಿದರು.
ಜನರ ಹಿತಕ್ಕಾಗಿ ಕೆಲವು ಸಾರಿ ಸರ್ಕಾರದ ನಿಯಮಗಳನ್ನು ಗಾಳಿಗೆ ತೂರಬೇಕಾಗುತ್ತದೆ ಎಂದು ಮಾರ್ಮಿಕವಾಗಿ ನುಡಿದ ಡಿ.ಶಿವುನಾಯಕ್ ಸಾ.ರಾ.ಮಹೇಶ್ ಅವರು ತಮ್ಮ ಅಧಿಕಾರದ ಅವಧಿಯಲ್ಲಿ ಯಾವುದೇ ತಪ್ಪು ಮಾಡಿಲ್ಲ ಮತ್ತು ನಾಗರೀಕರಿಗೆ ತೊಂದರೆ ನೀಡಿಲ್ಲವೆಂದು ಸಾಭೀತುಪಡಿಸಬೇಕು ಎಂದು ಸವಾಲೆಸೆದರು.

ಕ್ರಿಸ್ ಮಸ್ ಶುಭಾಷಯ ಕೋರಿದ ಶಾಸಕ ರವಿಶಂಕರ್
ಕೆ.ಆರ್.ನಗರ: ಶಾಂತಿ ಮತ್ತು ಕ್ಷಮೆಯ ಸಂದೇಶವನ್ನು ಸಾರುವ ಯೇಸುಕ್ರಿಸ್ತನ ಜನ್ಮ ದಿನ ಮನುಕುಲಕ್ಕೆ ಪಾಠವಾಗಿದ್ದು ಅದನ್ನು ನಾವು ನಿರಂತರವಾಗಿ ಅನುಸರಿಸಬೇಕು ಎಂದು ಶಾಸಕ ಡಿ.ರವಿಶಂಕರ್ ಹೇಳಿದರು.
ಪಟ್ಟಣದ ಸುಭಾಷ್‌ನಗರದ ದಿವ್ಯ ಕರುಣೆಯ ದೇವಾಲಯದಲ್ಲಿ ಫಾದರ್ ಸಿ.ರಾಯಪ್ಪ ಮತ್ತು ಕ್ರೈಸ್ತ ಬಾಂಧವರಿಗೆ ಕ್ರಿಸ್ ಮಸ್ ಶುಭಾಷಯ ಕೋರಿ ಮಾತನಾಡಿದ ಅವರು ತನ್ನ ಜೀವಿತಾವಧಿಯಲ್ಲಿ ಸರ್ವರಿಗೂ ಒಳಿತನ್ನೇ ಬಯಸಿದ್ದ ಆ ಮಹಾದೇವ ಜಗತ್ತಿಗೆ ಮಾದರಿ ಎಂದರು.
ಕ್ರೈಸ್ತ ಧರ್ಮದ ನಂಬಿಕೆಯ ಪ್ರಕಾರ ಯೇಸು ಮಹಾಪ್ರಭು ಮೇರಿ ಮತ್ತು ಜೋಸೇಫ್ ದಂಪತಿಗಳ ಮಗನಾಗಿ ಬೆತ್ಲೆಹೇಮ್ ನಲ್ಲಿ ಜನಿಸಿ ಜಗತ್ತಿನ ಸರ್ವರ ಉದ್ದಾರಕ್ಕೆ ಅವತಾರ ತಾಳಿದ ಸೂರ್ಯ ಎಂದರು. ಕತ್ತಲೆಯನ್ನು ಮೀರಿ ಬೆಳಕಿನ ಸಂಕೇತವಾಗಿದ್ದ ಯೇಸು ಕ್ರಿಸ್ತರು ಮನುಕುಲಕ್ಕೆ ಮಾದರಿಯಾಗಿದ್ದು ಅವರ ಜೀವನ ಮತ್ತು ಸಾಧನೆ ಹಾಗೂ ಕ್ಷಮಾಗುಣ ನಮಗೆ ದಾರಿ ದೀಪವಾಗಿದ್ದು ಅಂತಹ ಯುಗ ಪುರುಷನ ತತ್ವ ಮತ್ತು ಆದರ್ಶಗಳನ್ನು ನಾವು ಜೀವನದಲ್ಲಿ ಅಳವಡಿಸಿಕೊಂಡು ಪಾಲಿಸಬೇಕು ಎಂದು ಸಲಹೆ ನೀಡಿದರು. ಈ ಸಂಧರ್ಭದಲ್ಲಿ ದಿವ್ಯಕರುಣೆಯ ದೇವಾಲಯದಲ್ಲಿ ಪ್ರಾರ್ಥನೆ ಸಲ್ಲಿಸಿದ ಶಾಸಕರು ನೆರೆದಿದ್ದವರಿಗೆ ಕೇಕ್ ವಿತರಿಸಿ ಕ್ರಿಸ್‌ಮಸ್ ಶುಭಾಷಯ ಕೋರಿದರು.
ಪುರಸಭೆ ಮಾಜಿ ಅಧ್ಯಕ್ಷ ಶಿವುನಾಯಕ್, ಮಾಜಿ ಸದಸ್ಯ ನಟರಾಜು, ಎಪಿಎಂಸಿ ಮಾಜಿ ಅಧ್ಯಕ್ಷ ಬಿ.ಎಂ.ನಾಗರಾಜು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಎಸ್.ಮಹದೇವ್, ನಗರಾಧ್ಯಕ್ಷ ಎಂ.ಜೆ.ರಮೇಶ್, ಕಾರ್ಯದರ್ಶಿ ರಾಜೇಗೌಡ, ವಕ್ತಾರ ಸೈಯದ್‌ಜಾಬೀರ್, ಮುಖಂಡರಾದ ಆದರ್ಶ, ಫಿಲೀಪ್, ಕಿರಣ್, ಪ್ರಸನ್ನಕುಮಾರ್ ಸೇರಿದಂತೆ ಇನ್ನಿತರರು ಹಾಜರಿದ್ದರು.








