ವಾಲ್ಮೀಕಿ ಜಾತ್ರಾ ಮಹೋತ್ಸವದ ಕರಪತ್ರ ಬಿಡುಗಡೆ… ರೈತರ ದಿನಾಚರಣೆ… ಐಶ್ವರ್ಯ ಪಬ್ಲಿಕ್ ಕಾಲೇಜು ವಾರ್ಷಿಕೋತ್ಸವ

ಕುಶಾಲನಗರ(ರಘುಹೆಬ್ಬಾಲೆ): ಫೆ. 8 ಮತ್ತು 9 ರಂದು ಎರಡು ದಿನಗಳು ದಾವಣಗೆರೆ ಜಿಲ್ಲೆಯ ಹರಿಹರ ತಾಲ್ಲೂಕು ರಾಜನಹಳ್ಳಿ ಗ್ರಾಮದಲ್ಲಿ ನಡೆಯುವ ಮಹರ್ಷಿ ವಾಲ್ಮೀಕಿ ಜಾತ್ರಾ ಮಹೋತ್ಸವದ ಕರಪತ್ರವನ್ನು ಶ್ರೀ ಮಹರ್ಷಿ ವಾಲ್ಮೀಕಿ ಗುರುಪೀಠದ ಪರಮಪೂಜ್ಯ ಜಗದ್ಗುರು ಡಾ. ಶ್ರೀ ವಾಲ್ಮೀಕಿ ಪ್ರಸನ್ನಾನಂದ ಮಹಾಸ್ವಾಮೀಜಿಗಳ ಬಿಡುಗಡೆ ಮಾಡಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಮಹರ್ಷಿ ವಾಲ್ಮೀಕಿ ಜಾತ್ರೆ ಅಂಗವಾಗಿ ಕೊಡಗು ಜಿಲ್ಲಾ ವಾಲ್ಮೀಕಿ ನಾಯಕ ಕ್ಷೇಮಾಭಿವೃದ್ಧಿ ಸಂಘದ ಜಿಲ್ಲಾಧ್ಯಕ್ಷ ಕೆ.ಎನ್.ಅಶೋಕ್ ಅಧ್ಯಕ್ಷತೆಯಲ್ಲಿ ಪೂರ್ವಭಾವಿ ಸಭೆ ನಡೆಯಲ್ಲಿ ಕರಪತ್ರವನ್ನು ಬಿಡುಗಡೆ ಮಾಡಿ ಮಾತನಾಡಿದ ಡಾ. ಶ್ರೀ ವಾಲ್ಮೀಕಿ ಪ್ರಸನ್ನಾನಂದ ಮಹಾಸ್ವಾಮೀಜಿ ರಾಜನಹಳ್ಳಿಯಲ್ಲಿ 8ನೇ ವರ್ಷದ ಮಹರ್ಷಿ ವಾಲ್ಮೀಕಿ ಜಾತ್ರೆ ನಡೆಯಲಿದ್ದು, ಕೊಡಗು ಜಿಲ್ಲೆಯಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಭಾಗವಹಿಸಬೇಕು. ಜಾತ್ರೆ ಯಶಸ್ವಿಗೆ ಆರ್ಥಿಕ ನೆರವು ನೀಡಬೇಕು ಎಂದು ಹೇಳಿದರು. ಜಾತ್ರೆಗೆ ಬರುವ ಭಕ್ತರಿಗೆ ಎಲ್ಲಾ ರೀತಿಯ ಸೌಲಭ್ಯಗಳನ್ನು ಕಲ್ಪಿಸಿಕೊಡಲಾಗುತ್ತದೆ ಎಂದು ತಿಳಿಸಿದರು.

ಸಭೆಯಲ್ಲಿ ಅಖಿಲ ಕರ್ನಾಟಕ ವಾಲ್ಮೀಕಿ ಮಹಾಸಭಾದ ಯುವ ಘಟಕದ ಜಿಲ್ಲಾಧ್ಯಕ್ಷ ಚಂದನ್ ಕುಮಾರ್,ಕೊಡಗು ಜಿಲ್ಲಾ ವಾಲ್ಮೀಕಿ ನಾಯಕ ಕ್ಷೇಮಾಭಿವೃದ್ಧಿ ಸಂಘದ ಪ್ರಧಾನ ಕಾರ್ಯದರ್ಶಿ ವೈ.ಟಿ.ಪರಮೇಶ್,ಖಜಾಂಚಿ ಕೃಷ್ಣ, ಸಹ ಕಾರ್ಯದರ್ಶಿ ಶ್ರೀನಿವಾಸ್, ನಿರ್ದೇಶಕರಾದ ಮಂಜುನಾಥ್, ಅಣ್ಣಯ್ಯನಾಯಕ, ಸೌಂದರ್ಯ, ಸಿದ್ದಲಿಂಗಯ್ಯ, ಕರಿಯಪ್ಪ ಮತ್ತಿತರರು ಪಾಲ್ಗೊಂಡಿದ್ದರು. ಇದೇ ಸಂದರ್ಭ ಕೊಡಗು ಜಿಲ್ಲಾ ವಾಲ್ಮೀಕಿ ನಾಯಕ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಸ್ವಾಮೀಜಿ ಅವರನ್ನು ಸನ್ಮಾನಿಸಿ ಗೌರವಿಸಿದರು.
ದೇಶದ ಅಭಿವೃದ್ಧಿಗೆ ರೈತರ ಕೊಡುಗೆ ಅಪಾರ: ತಾಕೇರಿ ಪೊನ್ನಪ್ಪ
ಕುಶಾಲನಗರ : ರೈತರು ದೇಶದ ಬೆನ್ನೆಲುಬು. ರಾಷ್ಟ್ರದ ಅಭಿವೃದ್ಧಿಗೆ ರೈತರ ಕೊಡುಗೆ ಅಪಾರವಾಗಿದೆ ಎಂದು ಕೊಡಗು ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷ ತಾಕೇರಿ ಪೊನ್ನಪ್ಪ ಹೇಳಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿ ಹಾಗೂ ಕೊಡಗು ಜಿಲ್ಲಾ ಕೃಷಿ ಇಲಾಖೆ, ಕೃಷಿಕ ಸಮಾಜದ ಸಂಯುಕ್ತಾಶ್ರಯದಲ್ಲಿ ಕೂಡಿಗೆ ಕೃಷಿ ತರಬೇತಿ ಕೇಂದ್ರದಲ್ಲಿ ಏರ್ಪಡಿಸಿದ್ದ ರಾಷ್ಟ್ರೀಯ ರೈತರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿ, ಭಾರತದ ಐದನೇ ಪ್ರಧಾನ ಮಂತ್ರಿ ಚೌದರಿ ಚರಣ್ ಸಿಂಗ್ ಅವರ ಸ್ಮರಣಾರ್ಥ ಅವರ ಜನ್ಮದಿನವಾದ ಡಿ. 23 ರಂದು ರಾಷ್ಟ್ರೀಯ ರೈತ ದಿನವನ್ನು ಆಚರಿಸಲಾಗುತ್ತದೆ. ಈ ದಿನದಂದು ದೇಶದ ಬೆನ್ನೆಲುಬಾಗಿರುವ ಎಲ್ಲಾ ರೈತರಿಗೆ ಗೌರವ ಸಲ್ಲಿಸಲಾಗುತ್ತದೆ ಎಂದರು.
ಕೊಡಗು ಜಿಲ್ಲಾ ಕೃಷಿ ಇಲಾಖೆ ಜಂಟಿ ನಿರ್ದೇಶಕ ಚಂದ್ರಶೇಖರ್ ಮಾತನಾಡಿ,ಚರಣ್ ಸಿಂಗ್ ಅವರು ಅಲ್ಪಾಧಿಗೆ ದೇಶದ ಪ್ರಧಾನ ಮಂತ್ರಿಯಾಗಿದ್ದರು. ಈ ಅವಧಿಯಲ್ಲಿ ಅವರು ರೈತರ ಶ್ರೇಯೋಭಿವೃದ್ಧಿಗಾಗಿ ಹಲವು ಕಾರ್ಯಕ್ರಮ ಹಾಗೂ ಯೋಜನೆಗಳನ್ನು ರೂಪಿಸಿದ್ದರು ಎಂದರು. ಇತ್ತೀಚಿನ ದಿನಗಳಲ್ಲಿ ರೈತರು ಬೆಳೆಯುವ ಯಾವುದೇ ಬೆಳೆಗಳಿಗೆ ಕೀಟ ಬಾಧೆ ಕಾಡುತ್ತಿದ್ದು,ಅದರ ಹತೋಟಿಗೆ ಕೃಷಿ ವಿಜ್ಞಾನಿಗಳು ನೀಡುವ ಸಲಹೆಗಳನ್ನು ರೈತರು ಪಾಲಿಸಬೇಕು.
ಪ್ರಧಾನ ಮಂತ್ರಿ ಸಣ್ಣ ಆಹಾರ ಸಂಸ್ಕರಣೆ ಹಾಗೂ ಉದ್ಯಮಗಳ ನಿಯಮ ಬದ್ಧಗೊಳಿಸುವಿಕೆ ಯೋಜನೆಯಡಿ ಸಿಗುವ ಸವಲತ್ತುಗಳನ್ನು ರೈತರಿಗೆ ಒದಗಿಸಲಾಗುತ್ತಿದೆ. ಈಗಾಗಲೇ ರೂ.7.50 ಕೋಟಿ ಸಹಾಯ ಧನದಲ್ಲಿ ಜಿಲ್ಲೆಯ 107 ಕೃಷಿಕರು ಪ್ರಯೋಜನ ಪಡೆದುಕೊಂಡಿದ್ದಾರೆ. ಅಲ್ಲದೇ ಬ್ಯಾಂಕುಗಳಲ್ಲಿ ಸಾಲ ಸೌಲಭ್ಯಪಡೆದು ಕಾಫಿ, ಜೇನು, ಮೀನು, ಚಪಾತಿ ಸಂಸ್ಕರಣೆ, ಎಣ್ಣೆಯ ಗಾಣಗಳು ಸೇರಿದಂತೆ ವಿವಿಧ ಆಹಾರಗಳ ಸಂಸ್ಕರಣೆಯತ್ತ ರೈತರು ತೊಡಗಿಸಿಕೊಂಡಿದ್ದಾರೆ ಎಂದು ಹೇಳಿದರು.

ಕೃಷಿ ಇಲಾಖೆಯ ಉಪ ನಿರ್ದೇಶಕ ಸೋಮಶೇಖರ್, ಕೃಷಿ ಇಲಾಖೆಯಿಂದ ಸಿಗುವ ವಿವಿಧ ಸೌಲಭ್ಯ ಹಾಗೂ ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು. ಚೆಟ್ಟಳ್ಳಿ ಕೃಷಿ ಸಂಶೋಧನಾ ಕೇಂದ್ರದ ಕೃಷಿ ವಿಜ್ಞಾನಿಗಳಾದ ಡಾ.ರಾಣಿ, ಡಾ.ರಾಜೇಂದ್ರನ್ ಅವರು ರೈತರಿಗೆ ಉಪಯುಕ್ತ ಮಾಹಿತಿ ನೀಡಿದರು. ಕೂಡುಮಂಗಳೂರು ಗ್ರಾಮ ಪಂಚಾಯತಿ ಅಧ್ಯಕ್ಷ ಭಾಸ್ಕರ್ ನಾಯಕ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಈ ಸಂದರ್ಭ ಕೊಡಗು ಜಿಲ್ಲಾ ಕೃಷಿಕ ಸಮಾಜದ ಖಜಾಂಚಿ ರಮೇಶ್, ಕುಶಾಲನಗರ ತಾಲ್ಲೂಕು ಅಧ್ಯಕ್ಷ ಎಂ.ಆರ್.ಗೋವಿಂದರಾಜು, ಉಪಾಧ್ಯಕ್ಷ ಉಮೇಶ್ ರಾಜೇಅರಸ್,ನಿರ್ದೇಶಕ ಬಿ.ಬಿ.ಭಾರತೀಶ್,ಹಾಸನ ಹಾಲು ಒಕ್ಕೂಟದ ನಿರ್ದೇಶಕ ಕೆ.ಕೆ.ಹೇಮಂತಕುಮಾರ್, ಕೃಷಿ ಇಲಾಖೆಯ ಯೋಜನಾ ನಿರ್ದೇಶಕಿ ಮೈತ್ರಿ,ಸಹಾಯಕ ಕೃಷಿ ನಿರ್ದೇಶಕ ಪರಮೇಶ್, ನಾಗೇಂದ್ರ, ಶಿವಮೂರ್ತಿ, ವೀರಣ್ಣ ಪಾಲ್ಗೊಂಡಿದ್ದರು.
ಇದೇ ಕೃಷಿ ಪಂಡಿತ ಪ್ರಶಸ್ತಿ ವಿಜೇತ ರೈತ ಮರಗೋಡಿನ ಕೆ.ಜಿ.ಪ್ರೇಮ, ಉದಯೋನ್ಮುಖ ಕೃಷಿ ಪ್ರಶಸ್ತಿ ಪಡೆದ ಹಾಲಗುಂದ ಪಿ.ಬಿ. ಬೋಪಣ್ಣ, ಕಿರಗೂರು ರೇವತಿ, ರಾಜ್ಯ ಮಟ್ಟದ ಕೃಷಿ ಪ್ರಶಸ್ತಿ ವಿಜೇತ ರೈತ ಕಾಂತೂರಿನ ವಿ.ಎಂ.ಧನಂಜಯ, ಕಿಗ್ಗಾಲು ಪಿ.ಎಂ. ವೇಣುಕುಮಾರ್, ಕೆ.ಬಾಡಗದ ಬೋಪಣ್ಣ, ನಾಲ್ಲೇರಿಯ ಅಲ್ಲೂಮಾಡ ಲೀಲಾ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಐಶ್ವರ್ಯ ಕಾಲೇಜಿನಲ್ಲಿ ನೃತ್ಯ ಕಲಾಂಜಲಿ, ವಾರ್ಷಿಕೋತ್ಸವ

ಕುಶಾಲನಗರ : ಸಮೀಪದ ಗುಡ್ಡೆಹೊಸೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಬೊಳ್ಳೂರಿನ ಐಶ್ವರ್ಯ ಪಬ್ಲಿಕ್ ಸ್ಕೂಲ್ ಮತ್ತು ಪದವಿ ಪೂರ್ವ ಕಾಲೇಜಿನಲ್ಲಿ ಡಿ.26 ರಂದು ಅದ್ದೂರಿ ನೃತ್ಯ ಕಲಾಂಜಲಿ ಮತ್ತು ಕಾಲೇಜು ವಾರ್ಷಿಕೋತ್ಸವ ಸಮಾರಂಭ ನಡೆಯಲಿದೆ.

ಅಂದು ಸಂಜೆ 4.30 ಗಂಟೆಗೆ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷರಾದ ಪುಲಿಯಂಡ ರಾಮ್ ದೇವಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆಯುವ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಕೊಡಗು ಜಿಲ್ಲಾ ಶಾಲಾ ಶಿಕ್ಷಣ ಇಲಾಖೆ(ಪದವಿ ಪೂರ್ವ)ಯ ಉಪ ನಿರ್ದೇಶಕ ಎಂ.ಎಲ್.ಚಿಂದಾನಂದ ಕುಮಾರ್ ಹಾಗೂ ಗೌರವ ಅತಿಥಿಗಳಾಗಿ ಕೊಡಗು ಜಿಲ್ಲಾ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲರ ಸಂಘದ ಕಾರ್ಯದರ್ಶಿಯು ಆದ ವಿರಾಜಪೇಟೆ ಸರ್ಕಾರಿ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲೆ ಎನ್.ಕೆ.ಜ್ಯೋತಿ ಭಾಗವಹಿಸಲಿದ್ದಾರೆ ಎಂದು ಕಾಲೇಜು ಪ್ರಕಟಣೆ ತಿಳಿಸಿದೆ.








