CrimeLatest

ಮೈಸೂರು ಅರಮನೆ ಬಳಿ ಮಹಾಸ್ಪೋಟ… ಓರ್ವ ಸಾವು… ನಾಲ್ವರಿಗೆ ಗಾಯ… ಇಷ್ಟಕ್ಕೂ ಆಗಿದ್ದೇನು?

ಮೈಸೂರು: ಬೆಲೂನಿಗೆ ತುಂಬಿಸುವ ಹೀಲಿಯಂ ಸಿಲಿಂಡರ್ ಸಿಡಿದ ಪರಿಣಾಮ ಸ್ಥಳದಲ್ಲಿಯೇ ಬೆಲೂನ್ ಮಾರಾಟ ಮಾಡುತ್ತಿದ್ದ ವ್ಯಕ್ತಿ ಸಾವನ್ನಪ್ಪಿ, ಮೂವರು ಮಹಿಳೆಯರು ಒಬ್ಬ ಪುರುಷ ಸೇರಿ  ನಾಲ್ಕು ಮಂದಿ ಗಂಭೀರ ಗಾಯಗೊಂಡಿರುವ ಘಟನೆ ಮೈಸೂರಿನ ಅರಮನೆಯ ಜಯಮಾರ್ತಾಂಡ ದ್ವಾರದ ಬಳಿ ನಡೆದಿದೆ. ಈ ಘಟನೆಯಿಂದ ಇಡೀ ನಗರದ ಜನ ಬೆಚ್ಚಿ ಬಿದ್ದಿದ್ದು, ಮಾಗಿ ಉತ್ಸವ ಮತ್ತು ಕ್ರಿಸ್ ಮಸ್ ಹಬ್ಬದ ಸಂಭ್ರಮದಲ್ಲಿದ್ದ ನಗರದಲ್ಲಿ ಶೋಕದ ವಾತಾವರಣ ಸೃಷ್ಟಿಯಾಗಿದೆ.

ಒಂದೆಡೆ ಅರಮನೆ ಆವರಣದಲ್ಲಿ ನಡೆಯುತ್ತಿರುವ ಮಾಗಿ ಉತ್ಸವ ಮತ್ತೊಂದೆಡೆ ದಸರಾ ವಸ್ತು ಪ್ರದರ್ಶನ, ಇದರಾಚೆಗೆ ಕ್ರಿಸ್ ಮಸ್ ಹಬ್ಬದ ಸಂಭ್ರಮ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಮನೆ ಮಾಡಿತ್ತು. ದೂರದ ಪ್ರವಾಸಿಗರು ಮತ್ತು ಮೈಸೂರು ನಗರದ ಜನರು ಸಂಜೆ ವೇಳೆಗೆ ಮಾಗಿ ಉತ್ಸವದ ಪ್ರಯುಕ್ತ ಏರ್ಪಡಿಸಲಾಗಿರುವ ಫಲಪುಷ್ಪ ಪ್ರದರ್ಶನ ನೋಡಿಕೊಂಡು ಬರೋಣವೆಂದು ಅರಮನೆ ಕಡೆಗೆ ಹೆಜ್ಜೆ ಹಾಕಿದ್ದರು. ಜನ ಸೇರುತ್ತಿದ್ದಂತೆಯೇ ವ್ಯಾಪಾರಿಗಳು ವ್ಯಾಪಾರ ಮಾಡುವ ಭರದಲ್ಲಿದ್ದರು.

ಹೀಗಿರುವಾಗಲೇ ಎಂದಿನಂತೆ  ಹೀಲಿಯಂ ತುಂಬಿಸಿ ಬೆಲೂನ್ ಮಾರಾಟ ಮಾಡುತ್ತಿದ್ದ ವ್ಯಾಪಾರಿಯೂ ಸೈಕಲ್ ನಲ್ಲಿ ಸಿಲಿಂಡರ್ ಇಟ್ಟು ಕೊಂಡು ವ್ಯಾಪಾರ ಮಾಡುವ ಬಯಕೆಯಿಂದ ಅತ್ತ ಬಂದಿದ್ದನಲ್ಲದೆ, ತನ್ನ ಪಾಡಿಗೆ ತಾನು ಎಂಬಂತೆ ಬೆಲೂನಿಗೆ ಗ್ಯಾಸ್ ತುಂಬಿಸಿ ಮಾರಾಟ ಮಾಡುತ್ತಿದ್ದನು. ಇದು ಹೊಸದೇನಲ್ಲ.  ಆದರೆ ಇವತ್ತು ಆತನದು ಮಾತ್ರವಲ್ಲದೆ, ಸುತ್ತ ಮುತ್ತಲಿದ್ದವರ ಗೃಹಚಾರ ಕೆಟ್ಟಿತ್ತು. ಯಮರಾಜ ಸಿಲಿಂಡರ್ ರೂಪದಲ್ಲಿ ಬೆನ್ನಿಗೆ ಬಿದ್ದ ಬೇತಾಳನಂತೆ ನಿಂತಿದ್ದನು.

ರಾತ್ರಿ ವೇಳೆ ಅರಮನೆ ಬೆಳಕಿನಲ್ಲಿ ಕೇಕೆ ಹಾಕುತ್ತಾ ಖುಷಿ, ಖುಷಿಯಾಗಿ ಓಡಾಡಿಕೊಂಡಿದ್ದವರ ಕಿವಿ ಸಿಡಿದು ಹೋಗುವಂತಹ ಶಬ್ದವೊಂದು ಜಯಮಾರ್ತಾಂಡ ದ್ವಾರದ ಬಳಿಯಿಂದ ಕೇಳಿ ಬಂದಿತ್ತು ಏನಾಗುತ್ತಿದೆ ಎಂದು ನೋಡುವಷ್ಟರಲ್ಲಿ ಸೈಕಲ್ ನಲ್ಲಿ ಬೆಲೂನು ಮಾರುತ್ತಿದ್ದ ವ್ಯಕ್ತಿಯ ದೇಹ ಛಿದ್ರವಾಗಿದ್ದರೆ, ಸಿಲಿಂಡರ್ ಸಿಡಿದು ಅವಶೇಷಗಳು ಹಾರಿ  ಮುಂದೆ ನಡೆದುಕೊಂಡು ಹೋಗುತ್ತಿದ್ದವರಿಗೆ ಬಡಿದಿತ್ತು. ಕಣ್ಣು ಮಿಟಿಕಿಸುವ ಹೊತ್ತಿಗೆ ಅಲ್ಲೊಂದು ಭೀಕರ ದೃಶ್ಯ ಸೃಷ್ಟಿಯಾಗಿತ್ತು. ಸಿಲಿಂಡರ್ ಸಿಡಿದ ರಭಸಕ್ಕೆ ಮೂವರು ಮಹಿಳೆಯರು ಮತ್ತು ಒಬ್ಬ  ಪುರುಷ ಸೇರಿ ನಾಲ್ವರು ಗಂಭೀರ ಗಾಯಗೊಂಡು ಬಿದ್ದಿದ್ದರು.

ತಕ್ಷಣವೇ ಸ್ಥಳಕ್ಕೆ ಬಂದ ಪೊಲೀಸರು ಗಾಯಾಳುಗಳನ್ನು ಸಮೀಪದ ಕೆ.ಆರ್. ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ನೀಡುವ ವ್ಯವಸ್ಥೆ ಮಾಡಿದ್ದಲ್ಲದೆ, ಸ್ಥಳವನ್ನು ಸುತ್ತುವರೆದು ಸಾರ್ವಜನಿಕರು ಇತ್ತ ಬರದಂತೆ ಬ್ಯಾರಿಕೇಡ್ ಹಾಕಿ ಪರಿಶೀಲನೆ ಆರಂಭಿಸಿದರು. ಅಲ್ಲದೆ, ಆ ಮಾರ್ಗವನ್ನು ಬಂದ್ ಮಾಡಿ  ಸಂಚಾರಕ್ಕೆ ಪರ್ಯಾಯ ವ್ಯವಸ್ಥೆಯನ್ನು ಮಾಡಲಾಯಿತು.   ಮೃತದೇಹದ ಮಹಜರು ನಡೆಸಿ ಶವಾಗಾರಕ್ಕೆ ಸಾಗಿಸಲಾಯಿತು.

ಮೈಸೂರು ಪೊಲೀಸ್ ಕಮೀಷನರ್ ಸೀಮಾ ಲಾಟ್ಕರ್, ಡಿಸಿಪಿ ಸುಂದರ್ ರಾಜ್ ಸೇರಿದಂತೆ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಬಂದು ಪರಿಶೀಲಿಸಿ ಮಾಹಿತಿಯನ್ನು ಕಲೆ ಹಾಕಿದರಲ್ಲದೆ, ಕೆ ಆರ್ ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುಗಳ ಬಗ್ಗೆಯೂ  ಮಾಹಿತಿ ಪಡೆದುಕೊಂಡರು. ಸಾವನ್ನಪ್ಪಿರುವ ಬೆಲೂನ್ ಮಾರಾಟಗಾರ ಯಾರು? ಈತನ ಹೆಸರೇನು? ಎಂಬುದರ ಕುರಿತಂತೆ ಪೊಲೀಸರು ಪತ್ತೆ ಕಾರ್ಯ ಶುರು ಮಾಡಿದ್ದಾರೆ. ಅಲ್ಲದೆ ಹೀಲಿಯಂ ತುಂಬಿದ್ದ ಸಿಲಿಂಡರ್ ಸ್ಪೋಟಗೊಳ್ಳಲು ಕಾರಣವೇನು? ಎಂಬಿತ್ಯಾದಿ ವಿಚಾರಗಳ ಬಗ್ಗೆಯೂ ಪರಿಶೀಲನೆ ನಡೆಸಿದ್ದಾರೆ.

ಸದ್ಯದ ಮಾಹಿತಿ ಪ್ರಕಾರ ಗಾಯಗೊಂಡವರನ್ನು ಗುರುತಿಸಲಾಗಿದ್ದು, ಬೆಂಗಳೂರಿನ ಲಕ್ಷ್ಮಿ, ನಂಜನಗೂಡಿನ ಮಂಜುಳಾ, ಕೊಲ್ಕತ್ತಾದ ಶಾಹಿನಾ ಶಬೇರ್​  ಮತ್ತು  ರಾಣೇಬೆನ್ನೂರು ನಿವಾಸಿ ಕೋಟ್ರೇಶಿ  ಎಂದು ಹೇಳಲಾಗುತ್ತಿದೆ. ಮೃತ ವ್ಯಕ್ತಿಯ ವಯಸ್ಸು 40ವರ್ಷ  ಇರಬಹುದು ಎಂದು  ಅಂದಾಜಿಸಲಾಗಿದೆ. ಪೊಲೀಸರು ಮೃತ ವ್ಯಕ್ತಿಯ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದಾರೆ. ಸದ್ಯ ಈ ಘಟನೆ ಸಂಭ್ರಮದಲ್ಲಿದ್ದ ಮೈಸೂರಿನ ಜನರನ್ನು ಬೆಚ್ಚಿ ಬೀಳುವಂತೆ ಮಾಡಿದೆ.  ಇನ್ನಾದರೂ ಜನ ಸೇರುವ ಪ್ರದೇಶದಲ್ಲಿ ಹೀಲಿಯಂ ಬೆಲೂನ್  ಮಾರಾಟ ಸೇರಿದಂತೆ ಅಪಾಯಕಾರಿ ಆಟಿಕೆಗಳನ್ನು ಮಾರಾಟ ಮಾಡದಂತೆ ಎಚ್ಚರ ವಹಿಸಬೇಕಿದೆ. ಒಟ್ಟಾರೆ ಈ ಘಟನೆ ವರ್ಷಾಂತ್ಯದ ಸಂಭ್ರಮದಲ್ಲಿದ್ದವರ ನಿದ್ದೆಗೆಡಿಸಿದ್ದಂತು ನಿಜ.

admin
the authoradmin

ನಿಮ್ಮದೊಂದು ಉತ್ತರ

Translate to any language you want