ಹುಣಸೂರು(ಹಿರೀಕ್ಯಾತನಹಳ್ಳಿ ಸ್ವಾಮಿಗೌಡ): ತಂಬಾಕು ಬೆಳೆಗಾರರ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಜ.5ರಂದು ಮಂಡ್ಯ, ಮೈಸೂರು, ಹಾಸನ ಮತ್ತು ಚಾಮರಾಜನಗರ ಲೋಕಸಭಾ ಕ್ಷೇತ್ರಗಳ ಲೋಕಸಭಾ ಸದಸ್ಯರ ಕಚೇರಿ ಮುಂಭಾಗ ಧರಣಿ ನಡೆಸಲಾಗುವುದು ಎಂದು ರೈತ ಸಂಘದ ಜಿಲ್ಲಾಧ್ಯಕ್ಷ ಹೊಸೂರು ಕುಮಾರ್ ತಿಳಿಸಿದರು.
ನಗರದ ಎಪಿಎಂಸಿ ಆವರಣದಲ್ಲಿ ಆಯೋಜಿಸಿದ್ದ ರಾಜ್ಯದ 10 ತಂಬಾಕು ಹರಾಜು ಮಾರುಕಟ್ಟೆಯ ರೈತ ಮುಖಂಡರ ಸಭೆಯಲ್ಲಿ ಮಾತನಾಡಿ, ತಂಬಾಕಿನ ಬೆಲೆ ಕುಸಿತ ರೈತರನ್ನು ಆತಂಕಕ್ಕೀಡು ಮಾಡಿದೆ. ಈ ಕುರಿತು ಡಿ.12ರಂದು ತಾಲೂಕಿನ ಕಟ್ಟೆಮಳಲವಾಡಿ ತಂಬಾಕು ಹರಾಜು ಕೇಂದ್ರದಲ್ಲಿ ಆಯೋಜಿಸಿದ್ದ ರೈತ ಮುಖಂಡರ ಸಭೆಯಲ್ಲಿ ಡಿ.25ರಂದು ಮಾರುಕಟ್ಟೆ ಬಂದ್ ಮಾಡಲು ನಿರ್ಧರಿಸಲಾಗಿತ್ತು. ನಂತರದ ದಿನಗಳಲ್ಲಿ ಸರ್ಕಾರ ಮತ್ತು ಮಂಡಳಿಯ ಸ್ಪಂದನೆ ಆದರಿಸಿ ಹೋರಾಟ ನಡೆಸಲು ತೀರ್ಮಾನಿಸ ಲಾಗಿತ್ತು.
ಈ ನಡುವೆ ಮೈಸೂರು ಕೊಡಗು ಸಂಸದ ಯದುವೀರ್ ಕೃಷ್ಣ ದತ್ತ ಚಾಮರಾಜ ಅವರನ್ನು ಒಡೆಯರ್ ಭೇಟಿಯಾಗಿದ್ದ ವೇಳೆ ಕೇಂದ್ರ ವಾಣಿಜ್ಯ ಸಚಿವರಲ್ಲಿಗೆ ರೈತ ಮುಖಂಡರ ನಿಯೋಗ ಕೊಂಡೊಯ್ಯುವುದಾಗಿ ಭರವಸೆ ನೀಡಿದ್ದರು. ಆದರೆ ಇದ್ಯಾವುದೂ ಆಗಿಲ್ಲ ಎಂದುಬೇಸರ ವ್ಯಕ್ತಪಡಿಸಿದರು. ರೈತಮುಖಂಡರ ಸಭೆಯಲ್ಲಿ ಅಭಿಪ್ರಾಯದಂತೆ ಜ.5ಕ್ಕೆ ತಂಬಾಕು ಬೆಳೆವ ಪ್ರದೇಶಗಳ ವ್ಯಾಪ್ತಿಯ ನಾಲ್ವರು ಸಂಸದರ ಕಚೇರಿ ಮುಂಭಾಗ ತಂಬಾಕು ಬೆಳೆಗಾರರ ಬೇಡಿಕೆಯ ಈಡೇರಿಕೆಗೆ ಆಗ್ರಹಿಸಿ ಧರಣಿ ನಡೆಸಲಾಗುವುದು.
ಕರ್ನಾಟಕ ರಾಜ್ಯದಲ್ಲಿ ವರ್ಜಿನಿಯ ಉತ್ತಮ ಗುಣಮಟ್ಟದ ತಂಬಾಕು ಬೆಳೆದು ಈ ಬೆಳೆಗೆ ಉತ್ತಮವಾದ ಬೆಲೆ ದೊರಕುವಂತೆ ಮಾಡಬೇಕು. ಈ ಕುರಿತು ಖರೀದಿ ಕಂಪನಿಗಳಿಗೆ ಸ್ಪಷ್ಟ ನಿರ್ದೇಶನ ವನ್ನು ಮಂಡಳಿ ನೀಡಬೇಕು. ಆಂಧ್ರದಲ್ಲಿ ಕಳೆದ ನಾಲೈಲೆದು ವರ್ಷದಿಂದ ನಿಗದಿಪಡಿಸಿದ ಮಂಡಳಿ ಪ್ರಮಾಣ ಕ್ಕಿಂತಲೂ ಅಧಿಕವಾಗಿ 60-90 ಮಿಲಿಯನ್ ಕೆಜಿ ತಂಬಾಕು ಹೆಚ್ಚುವರಿಯಾಗಿ ಬೆಳೆಯು ತ್ತಿದ್ದರೂ ಅವರಿಗೆ ಉತ್ತಮ ದರ ಕೆ.ಜಿ.ಗೆ 450 ರೂ. ಗಳವರೆಗೆ ನೀಡುತ್ತಿದ್ದು, ಮಂಡಳಿ ನಿರ್ಧರಿಸಿರುವ ಪ್ರಮಾಣಕ್ಕಿಂತಲೂ ಕಡಿಮೆ ಬೆಳೆದ ಕರ್ನಾಟಕದ ರೈತರಿಗೆ ಕೇವಲ 320 ರೂ. ಗಳನ್ನು ನೀಡುತ್ತಿದ್ದು, ಈ ತಾರತಮ್ಯ ನೀತಿ ನಿಲ್ಲಿಸಬೇಕು. ತಂಬಾಕಿನಿಂದ ಬಂದಂತಹ ಹುಡಿಯನ್ನು ತಂಬಾಕು ಮಂಡಳಿಯಲ್ಲಿ ಮಾರಾಟ ಮಾಡಿಸಬೇಕು.

ತಂಬಾಕು ಮಾರಾಟ ಮಾಡಿದ ರೈತರ ಖಾತೆಗೆ ಮಾರಾಟ ಮಾಡಿದ 3-5ದಿನಗಳೊಳಗೆ ಹಣ ಪಾವತಿಯಾಗಬೇಕು ಎಂಬಿತ್ಯಾದಿ ಬೇಡಿಕೆಗಳನ್ನು ಮುಂದಿಡಲಾಗುವುದು. ಇಷ್ಟೇ ಅಲ್ಲದೆ ಭಾರತದಲ್ಲಿ ವಿದೇಶಿಯರಿಗೆ ಹಾಲು ಮತ್ತು ಮೀನುಗಾರಿಕೆ ವ್ಯವಹಾರ ನಡೆಸಲು ಅವಕಾಶ ನೀಡಬಾರದು ಎಂದು ಆಗ್ರಹಿಸಲಾಗುವುದು ಎಂದರು.
ಸಭೆಯಲ್ಲಿ ಕಾಫ್ ಕಮಿಟಿ ಸದಸ್ಯ ನಿಲುವಾಗಿಲು ಪ್ರಭಾಕರ್, ತಂಬಾಕು ಬೆಳೆಗಾರರ ಗೌರವಾಧ್ಯಕ್ಷ ಚಂದ್ರೇಗೌಡ, ಅಧ್ಯಕ್ಷ ಮೊದೂರು ಶಿವಣ್ಣ, ಜಿಲ್ಲಾ ಉಪಾಧ್ಯಕ್ಷ ಪ್ರಕಾಶ್ ರಾಜ್ ಅರಸು, ದಶರಥ ಪಿರಿಯಾಪಟ್ಟಣ, ಮಹದೇವ ಕೆ.ಎಂ.ವಾಡಿ, ಬಸವರಾಜೇಗೌಡ ರಾಜು ಚಿಕ್ಕಹುಣಸೂರು, ಹರೀಶ ಮರೂರು ಕಾವಲ್, ಕೆ.ಬಿ.ಚಂದ್ರಶೇಖರ್, ರವಿ, ವಿಷಕಂಠಪ್ಪ ಅರಸು ಕಲ್ಲಹಳ್ಳಿ, ಚಾಮೇಗೌಡ, ಬೀರೇಗೌಡ, ಶಿವರಾಜು ಮೋದೂರು, ಕುಮಾರ, ದಶರಥ ಕುಪ್ಪೆ, ಮಹದೇವೇಗೌಡ, ಶಿವಶಂಕರ ಕಿರಿಜಾಜಿ, ರವಿ ಅಗ್ರಹಾರ ರಾಮೇಗೌಡ, ಕಿರಿಜಾಜಿ ಧನಂಜಯ, ಹರೀಶ ಮುಂತಾದವರು ಇದ್ದರು.
ಇನ್ನೊಂದೆಡೆ ಮಾತನಾಡಿರುವ ತಂಬಾಕು ಬೆಳೆಗಾರರ ಸಂಘದ ಪದಾಧಿಕಾರಿಗಳು ಇದೀಗ ಡಿ .20ರ ನಂತರ ಮಾರು ಕಟ್ಟೆಯಲ್ಲಿ ತಂಬಾಕಿಗೆ ದರ ನೀಡುವಲ್ಲಿ ಅಲ್ಪ ಪ್ರಮಾಣದ ಸುಧಾರಣೆ ಕಂಡು ಬಂದಿದೆ. ಹೀಗಾಗಿ ಮಾರುಕಟ್ಟೆ ಬಂದ್ ಮಾಡುವುದನ್ನು ತಾತ್ಕಾಲಿಕವಾಗಿ ಮುಂದೂಡಿ ಹೋರಾಟ ಮಾಡಲಾಗುತ್ತಿದೆ ಎಂದು ಸ್ಪಷ್ಟಪಡಿಸಿದ್ದಾರೆ.








