ಹಿಟ್ ಅಂಡ್ ರನ್ ಕೇಸ್ ನಲ್ಲಿ ಮೃತಪಟ್ಟವನ ಕುಟುಂಬಕ್ಕೆ 2ವರ್ಷದ ಬಳಿಕ ಪರಿಹಾರ… ಸಿಕ್ಕಿದ್ದೇಗೆ?

ಹುಣಸೂರು(ಹಿರೀಕ್ಯಾತನಹಳ್ಳಿ ಸ್ವಾಮಿಗೌಡ): ವರ್ಷದ ಹಿಂದೆ ಹಿಟ್ ಆ್ಯಂಡ್ ರನ್ ಪ್ರಕರಣವೊಂದರಲ್ಲಿ ಮರಣ ಹೊಂದಿದ್ದ ವ್ಯಕ್ತಿಗೆ ಶಾಸಕ ಜಿ.ಡಿ.ಹರೀಶ್‌ಗೌಡರ ಮಾನವೀಯ ಕಾಳಜಿಯೊಂದಿಗಿನ ಪ್ರಯತ್ನ ಮತ್ತು ಗ್ರಾಮಾಂತರ ಠಾಣೆ ಪೊಲೀಸ್ ಇನ್ಸ್ ಪೆಕ್ಟರ್ ನಿರಂತರ ಶ್ರಮದಿಂದಾಗಿ ಮೃತವ್ಯಕ್ತಿಯ ಕುಟುಂಬಕ್ಕೆ ಸರ್ಕಾರದಿಂದ 2 ಲಕ್ಷ ರೂ.ಗಳ ಪರಿಹಾರ ದೊರಕಿದೆ ಎಂದು ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕ ನಿಂಗರಾಜ ಮಲ್ಲಾಡಿ ತಿಳಿಸಿದ್ದಾರೆ.
ತಾಲೂಕಿನ ಕಟ್ಟೆಮಳಲವಾಡಿ ಗ್ರಾಮದ ನಿವಾಸಿ ರಾಜನಾಯಕ 1 ವರ್ಷದ ಹಿಂದೆ ಗ್ರಾಮದ ತಂಬಾಕು ಹರಾಜು ಮಂಡಳಿ ಮುಂಭಾಗದ ಮುಖ್ಯರಸ್ತೆಯಲ್ಲಿ ಹೊಡೆದು ಮೃತಪಟ್ಟಿ ದ್ದರು. ಕಾರಿನ ಪತ್ತೆಗಾಗಿ ಪೊಲೀಸ್ ಇಲಾಖೆ ಸಾಕಷ್ಟು ಪ್ರಯತ್ನ ಪಟ್ಟಿದ್ದರೂ ಕಾರು ಪತ್ತೆಯಾಗಿರಲಿಲ್ಲ. ಇಲಾಖೆ ನ್ಯಾಯಾಲಯದಲ್ಲಿ ಸಿ ರಿಪೋರ್ಟ್ ಸಲ್ಲಿಸಿತ್ತು. ಕುಟುಂಬಕ್ಕೆ ಆಧಾರವಾಗಿದ್ದ ಪತಿ ದುರಂತ ಸಾವಿನಿಂದ ಪತ್ನಿ ಮಂಜುಳಾ ಮತ್ತು ಕುಟುಂಬ ಕಂಗಾಲಾಗಿತ್ತು. ಈ ನಡುವೆ ಹಿಟ್ ಆ್ಯಂಡ್ ರನ್ ಪ್ರಕರಣದಲ್ಲಿ ಮೃತವ್ಯಕ್ತಿಯ ಕುಟುಂಬಕ್ಕೆ ಸರ್ಕಾರದಿಂದ ಪರಿಹಾರ ಸಿಗಲಿದೆ ಎಂಬ ಮಾಹಿತಿ ಯನ್ನಾಧರಿಸಿ ಎಸ್‌ಸಿ, ಎಸ್ಟಿ ಕುಂದುಕೊರತೆ ಸಭೆಯಲ್ಲಿ ಈ ವಿಷಯ ಪ್ರಸ್ತಾಪಿಸಲಾಯಿತು.

ನೊಂದ ಕುಟುಂಬಕ್ಕೆ ಸರ್ಕಾರ ಪರಿಹಾರ ನೀಡಲು ಕೋರಿದರು. ಈ ಕುರಿತು ಮಾಹಿತಿ ಪಡೆದ ಶಾಸಕ ಜಿ.ಡಿ.ಹರೀಶ್‌ಗೌಡ ಜಿಲ್ಲಾಧಿಕಾರಿಗಳೊಂದಿಗೆ ಮಾತನಾಡಿದರು. ಶಾಸಕ ಹರೀಶ್ ಗೌಡ ಮತ್ತು ಇನ್‌ಸ್ಪೆಕ್ಟರ್ ಮುನಿಯಪ್ಪರ ಸತತ ಪ್ರಯತ್ನದ ಫಲವಾಗಿ ಗುರುವಾರ ಸಂತ್ರಸ್ತ ಕುಟುಂಬಕ್ಕೆ ಸರ್ಕಾರದ 2 ಲಕ್ಷ ರೂ.ಗಳ ಪರಿಹಾರದ ಚೆಕ್ಕನ್ನು ಇನ್ಸ್ ಪೆಕ್ಟರ್ ಮುನಿಯಪ್ಪ ವಿತರಿಸಿದ್ದಾರೆ ಎಂದು ತಿಳಿಸಿದ್ದಾರೆ.







