Crime

ಮೈಸೂರಿನಲ್ಲಿ ಹೀಲಿಯಂ ಗ್ಯಾಸ್ ಸಿಲಿಂಡರ್ ಸ್ಪೋಟ ಪ್ರಕರಣದಲ್ಲಿ ಸಾವಿನ ಸಂಖ್ಯೆ 3ಕ್ಕೆ ಏರಿಕೆ

ಮೈಸೂರು: ಮೈಸೂರು ಅರಮನೆ ಜಯಮಾರ್ತಾಂಡ ದ್ವಾರದ ಮುಂಭಾಗ ನಡೆದ ಹೀಲಿಯಂ ಗ್ಯಾಸ್ ಸಿಲಿಂಡರ್ ಸ್ಪೋಟದಲ್ಲಿ ಗಾಯಗೊಂಡು ಆಸ್ಪತ್ರೆಗೆ ದಾಖಲಿಸಲಾಗಿದ್ದ ಗಾಯಾಳುಗಳ ಪೈಕಿ ಇಬ್ಬರು ಮಹಿಳೆಯರು ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದು  ಇದರೊಂದಿಗೆ ಪ್ರಕರಣದಲ್ಲಿ ಮೂವರು  ಮೃತಪಟ್ಟಂತಾಗಿದೆ.

ಸಿಲಿಂಡರ್ ಸ್ಪೋಟದ ವೇಳೆ ಬೆಲೂನು ಮಾರುತ್ತಿದ್ದ ಸಲೀಂ ಸ್ಥಳದಲ್ಲಿಯೇ ಮೃತಪಟ್ಟಿದ್ದರೆ ಗಂಭೀರ ಗಾಯಗೊಂಡಿದ್ದ ನಂಜನಗೂಡಿನ ಚಾಮಲಾಪುರ ಬೀದಿಯ ನಿವಾಸಿ ಮಂಜುಳಾ (28) ಹಾಗೂ ಬೆಂಗಳೂರಿನ ಲಕ್ಷ್ಮೀ ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಯಿತಾದರೂ ಚಿಕಿತ್ಸೆ ಫಲಿಸದೆ ಇಬ್ಬರು ಶುಕ್ರವಾರ ಸಾವನ್ನಪ್ಪಿದ್ದಾರೆ. ಉಳಿದಂತೆ ಕೊಲ್ಕತ್ತಾದ ಶಾಹೀನ್ ಶಬ್ಬೀರ್ ಹಾಗೂ ರಾಣೆಬೆನ್ನೂರಿನ ಕೊಟ್ರೇಶ್ ಅವರಿಗೆ ಚಿಕಿತ್ಸೆ ಮುಂದುವರೆದಿದೆ.

ಹೀಲಿಯಂ ಗ್ಯಾಸ್ ಸಿಲಿಂಡರ್ ಸ್ಪೋಟದ ವೇಳೆ ಗಂಭೀರವಾಗಿ ಗಾಯಗೊಂಡಿದ್ದ ಮಂಜುಳಾ ಮತ್ತು ಲಕ್ಷ್ಮಿ ಅವರನ್ನು ನಗರದ ಕೆ.ಆರ್.ಆಸ್ಪತ್ರೆಯ ತುರ್ತು ನಿಗಾ ಘಟಕದಲ್ಲಿ ಇರಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಘಟನೆಯಲ್ಲಿ ಗಂಭೀರ ಗಾಯಗೊಂಡಿದ್ದ ಮಂಜುಳಾ ಅವರು ಹೃದಯ ಸ್ತಂಭನದಿಂದಾಗಿ ಮೃತಪಟ್ಟಿದ್ದರೆ, ಲಕ್ಷ್ಮಿ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾರೆ. ಇದರೊಂದಿಗೆ ಪ್ರಕರಣದಲ್ಲಿ ಮೃತಪಟ್ಟವರ ಸಂಖ್ಯೆ ಮೂರಕ್ಕೇರಿದೆ. ಉಳಿದಂತೆ ಘಟನೆಯಲ್ಲಿ ಗಾಯಗೊಂಡಿರುವ ಕೊಲ್ಕತ್ತಾದ ಶಾಹೀನ್ ಶಬ್ಬೀರ್ ಹಾಗೂ ರಾಣೆಬೆನ್ನೂರಿನ ಕೊಟ್ರೇಶ್ ಅವರಿಗೆ ಚಿಕಿತ್ಸೆ ಮುಂದುವರಿದಿದೆ.

ಉತ್ತರ ಪ್ರದೇಶದ ಕನೋಜ್ ಜಿಲ್ಲೆ ತೊಫಿಯ ಗ್ರಾಮದ ಸಲೀಂ (40) ಅರಮನೆ ಬಳಿ ಸೈಕಲ್‌ನಲ್ಲಿ ಹೀಲಿಯಂ ಬಲೂನ್ ಮಾರುತ್ತಿದ್ದರು. ರಾತ್ರಿ ೮8.30ಕ್ಕೆ ಸಿಲಿಂಡರ್ ಸ್ಪೋಟಗೊಂಡು ಸಿಡಿದ ಲೋಹದ ಭಾಗಗಳು ಸ್ಥಳದಲ್ಲಿದ್ದವರ ಮೇಲೆ ರಭಸವಾಗಿ ಹೊಡೆದು ಗಂಭೀರ ಗಾಯಗಳಾಗಿದ್ದವು. ಈ ವೇಳೆ ಸಲೀಂ ಸ್ಥಳದಲ್ಲೇ ಮೃತಪಟ್ಟಿದ್ದರು. ಘಟನೆಗೆ ಸಂಬಂಧಿಸಿ ಮೃತ ಸಲೀಂ ವಿರುದ್ಧ ದೇವರಾಜ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಲಷ್ಕರ್ ಮೊಹಲ್ಲಾದ ಶರೀಫ್ ಲಾಡ್ಜ್‌ನಲ್ಲಿ ಅವರೊಂದಿಗೆ ವಾಸ್ತವ್ಯವಿದ್ದ ಅರ್ಬಾಜ್, ರಿಜ್ವಾನ್, ರಾಜು ಎಂಬುವವರನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದಾರೆ.

ಹೀಲಿಯಂ ಗ್ಯಾಸ್ ಸಿಲಿಂಡರ್ ಸ್ಪೋಟದಲ್ಲಿ ಗಾಯಗೊಂಡಿರುವ ಗಾಯಾಳುಗಳ ಕುಟುಂಬಸ್ಥರಲ್ಲಿ ಆತಂಕ ಮುಂದುವರೆದಿದೆ. ಘಟನೆಯ ವಿಷಯ ತಿಳಿದು ಈಗಾಗಲೇ ಆಸ್ಪತ್ರೆಗೆ ಆಗಮಿಸಿರುವ ಗಾಯಾಳುಗಳ ಕುಟುಂಬಸ್ಥರು ತಮ್ಮವರ ಪರಿಸ್ಥಿತಿ ಕಂಡು ಕಣ್ಣೀರಿಟ್ಟಿದ್ದು, ಆರೋಗ್ಯ ಪರಿಸ್ಥಿತಿ ಏನಾಗಲಿದೆ ಎಂಬ ಆತಂಕದಲ್ಲಿದ್ದಾರೆ. ಹೀಲಿಯಂ ಸಿಲಿಂಡರ್ ಸ್ಪೋಟದಲ್ಲಿ ಗಾಯಗೊಂಡಿದ್ದ ನಂಜನಗೂಡು ಮೂಲದ ಮಂಜುಳಾ ಶುಕ್ರವಾರ ಕೆ.ಆರ್.ಆಸ್ಪತ್ರೆಯಲ್ಲಿ ಮೃತಪಟ್ಟ ಹಿನ್ನೆಲೆ ನಂಜನಗೂಡು ಶಾಸಕ ದರ್ಶನ್ ಧ್ರುವ ನಾರಾಯಣ್ ಆಸ್ಪತ್ರೆಗೆ ಭೇಟಿ. ನೀಡಿ ಕುಟುಂಬಕ್ಕೆ ಪರಿಹಾರ ಕೊಡಿಸುವ ಬಗ್ಗೆ ಸಿಎಂ ಜತೆ ಮಾತನಾಡುತ್ತೇನೆ ಎಂದು ಭರವಸೆ ನೀಡಿದರು.

ಘಟನಾ ಸ್ಥಳಕ್ಕೆ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ)ಯ ಮೂವರು ಪ್ರತಿನಿಧಿಗಳು ಭೇಟಿ ನೀಡಿ ಮಾಹಿತಿ ಪಡೆದು ತೆರಳಿದ್ದಾರೆ. ಜತೆಗೆ ಮೃತ ಸಲೀಂ ಜತೆಗೆ ಲಾಡ್ಜ್‌ನಲ್ಲಿ ಉಳಿದ ಸ್ನೇಹಿತರುಗಳ ಹೆಳಿಕೆಗಳನ್ನು ದಾಖಲಿಸಿಕೊಂಡಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಶುಕ್ರವಾರವೂ ಘಟನಾ ಸ್ಥಳದಲ್ಲಿ ಬೆರಳಚ್ಚು ತಜ್ಞರು, ಪೊಲೀಸ್ ಇಲಾಖೆಯ ವಿವಿಧ ತಂಡಗಳು ಪರಿಶೀಲನೆ ನಡೆಸಿ ಮಾಹಿತಿ ಕಲೆ ಹಾಕಿವೆ. ಸ್ಥಳದಲ್ಲಿ ಬಿಳಿ ಪೌಡರ್ ದೊರೆತಿದ್ದು, ಬಲೂನ್‌ಗೆ ತುಂಬಲು ಸೋಡಿಯಂ ಹೈಡ್ರಾಕ್ಸೈಡ್ ಹಾಗೂ ಕಾಸ್ಟಿಕ್ ಸೋಡ ಬಳಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಇದನ್ನೂ ಓದಿ: ಮೈಸೂರು ಅರಮನೆ ಬಳಿ ನಡೆದ ಸ್ಪೋಟದ ಸುತ್ತಲೂ ಅನುಮಾನಗಳ ಗಿರಕಿ… ಚುರುಕಾಯ್ತು ತನಿಖೆ!

admin
the authoradmin

ನಿಮ್ಮದೊಂದು ಉತ್ತರ

Translate to any language you want