LatestMysore

ಇಸ್ಕಾನ್ ಮೈಸೂರು ದೇವಾಲಯದಲ್ಲಿ ಶ್ರೀ ವೈಕುಂಠ ಏಕಾದಶಿ ಆಚರಣೆ.. ವೈಕುಂಠ ದ್ವಾರ ನಿರ್ಮಾಣ

ಮೈಸೂರು:  ಮೈಸೂರಿನ ಜಯನಗರದಲ್ಲಿರುವ ಇಸ್ಕಾನ್ ಮೈಸೂರು ದೇವಾಲಯದಲ್ಲಿ ಶ್ರೀ ವೈಕುಂಠ ಏಕಾದಶಿ ಎಂಬ ಅತ್ಯಂತ ಪವಿತ್ರ ಹಬ್ಬವನ್ನು ಮಂಗಳವಾರ, 30 ಡಿಸೆಂಬರ್ 2025ರಂದು ಅತ್ಯಂತ ಭಕ್ತಿ ಮತ್ತು ಆಧ್ಯಾತ್ಮಿಕ ಉತ್ಸಾಹದಿಂದ ಆಚರಿಸಲಾಗುತ್ತಿದೆ. ಈ ಶುಭ ಸಂದರ್ಭದಲ್ಲಿ ದೇವಾಲಯದ ಮುಖ್ಯ ಪ್ರವೇಶ ದ್ವಾರದಲ್ಲಿ ವಿಶೇಷವಾಗಿ ವೈಕುಂಠ ದ್ವಾರವನ್ನು ನಿರ್ಮಿಸಲಾಗುತ್ತದೆ.

ಭಕ್ತರು ಬೆಳಿಗ್ಗೆ 7:30 ಗಂಟೆಯಿಂದ ರಾತ್ರಿ 10:00 ಗಂಟೆಯವರೆಗೆ ಯಾವುದೇ ವಿರಾಮವಿಲ್ಲದೆ ವೈಕುಂಠ ದ್ವಾರ ಪ್ರವೇಶ ಮಾಡುವ ಮೂಲಕ ಶ್ರೀ ಶ್ರೀ ಕೃಷ್ಣ ಬಲರಾಮರ ದಿವ್ಯ ದರ್ಶನದ ಅನುಗ್ರಹವನ್ನು ಪಡೆಯಬಹುದು. ಈ ಪವಿತ್ರ ಉತ್ಸವದಲ್ಲಿ ಸಾವಿರಾರು ಭಕ್ತರು ಭಾಗವಹಿಸುವ ನಿರೀಕ್ಷೆಯಿದೆ. ಉತ್ಸವದ ಅಂಗವಾಗಿ ದಿನಪೂರ್ತಿ ಸಂಗೀತ ಸೇವೆ ಆಯೋಜಿಸಲಾಗಿದ್ದು, ಅನೇಕ ಭಕ್ತ ಗಾಯಕರ ಹಾಗೂ ವಾದ್ಯ ವಿದ್ವಾಂಸರು ಭಕ್ತಿಗೀತೆಗಳು ಮತ್ತು ಕೀರ್ತನೆಗಳನ್ನು ಅರ್ಪಿಸಲಿದ್ದಾರೆ.

ಹರೇ ಕೃಷ್ಣ ಹರೇ ಕೃಷ್ಣ, ಕೃಷ್ಣ ಕೃಷ್ಣ ಹರೇ ಹರೇ, ಹರೇ ರಾಮ ಹರೇ ರಾಮ, ರಾಮ ರಾಮ ಹರೇ ಹರೇ ಎಂಬ ಪವಿತ್ರ ನಾಮಸ್ಮರಣೆಗಳು ಭಗವಂತನ ಸಂತೋಷಕ್ಕಾಗಿ ಹಾಗೂ ಭಾಗವಹಿಸುವ ಎಲ್ಲರ ಆತ್ಮೋನ್ನತಿಗಾಗಿ ನಿರಂತರವಾಗಿ ನಡೆಯಲಿವೆ. ವೇದ ಶಾಸ್ತ್ರಗಳು ಮತ್ತು ಮಹಾನ್ ಆಚಾರ್ಯರ ಉಪದೇಶಗಳ ಪ್ರಕಾರ, ಈ ಭೌತಿಕ ಲೋಕವು ‘ಕುಂಠ’, ಅಂದರೆ ದುಃಖಗಳಿಂದ ಕೂಡಿದೆ. ಜನನ, ರೋಗ, ವೃದ್ಧಾಪ್ಯ ಮತ್ತು ಮರಣ ಎಂಬ ನಾಲ್ಕು ದುಃಖಗಳಿಂದ ಯಾರೂ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಆದರೆ ಮಾನವ ಜೀವನವು ಈ ದುಃಖಗಳಿಂದ ಮುಕ್ತಿಯನ್ನು ಪಡೆಯಲು ಹಾಗೂ ಸಂಪೂರ್ಣ ದುಃಖರಹಿತವಾದ ಶಾಶ್ವತ ಲೋಕವಾದ ವೈಕುಂಠವನ್ನು ಪಡೆಯಲು ಅತ್ಯಂತ ಅಪರೂಪದ ಅವಕಾಶವಾಗಿದೆ.

ಜೀವಾತ್ಮರನ್ನು ಪುನಃ ಆ ಶಾಶ್ವತ ಲೋಕಕ್ಕೆ ಆಹ್ವಾನಿಸುವುದೇ ಪರಮಾತ್ಮನ ಅವತಾರದ ಉದ್ದೇಶವಾಗಿದೆ. ಪದ್ಮ ಪುರಾಣದಲ್ಲಿ ಹೇಳಿರುವಂತೆ, ವೈಕುಂಠ ಏಕಾದಶಿಯ ದಿನ ಭಕ್ತಿಯಿಂದ ಹಾಗೂ ಶ್ರದ್ಧೆಯಿಂದ ವೈಕುಂಠ ದ್ವಾರದಿಂದ ಪ್ರವೇಶಿಸುವವರು ವೈಕುಂಠ ಲೋಕವನ್ನು ಪಡೆಯುತ್ತಾರೆ ಎಂದು ವರ್ಣಿಸಲಾಗಿದೆ. ಈ ದಿವ್ಯ ಉತ್ಸವದಲ್ಲಿ ಭಾಗವಹಿಸಿ ಭಗವಂತನ ಅಪಾರ ಕೃಪೆಯನ್ನು ಪಡೆಯಲು ಇಸ್ಕಾನ್ ಮೈಸೂರು ಎಲ್ಲಾ ಭಕ್ತರು ಹಾಗೂ ಸಾರ್ವಜನಿಕರಿಗೆ ದರ್ಶನಕ್ಕೆ ಅವಕಾಶ ನೀಡುತ್ತಿದ್ದು, ವೈಕುಂಠನ ದರ್ಶನ ಪಡೆಯಬಹುದಾಗಿದೆ.

admin
the authoradmin

ನಿಮ್ಮದೊಂದು ಉತ್ತರ

Translate to any language you want