LatestMysore

ಕುಶಾಲನಗರದಲ್ಲಿ ತ್ರಿದಾಸೋಹಿ ಡಾ.ಶಿವಕುಮಾರ ಸ್ವಾಮೀಜಿ ಪ್ರತಿಮೆ ಉದ್ಘಾಟನೆ

ಸಿದ್ಧಗಂಗಾಶ್ರೀಗಳು ಅನ್ನ, ಅಕ್ಷರ, ಆಶ್ರಯ ನೀಡುವ ಮೂಲಕ ಲಕ್ಷಾಂತರ ವಿದ್ಯಾರ್ಥಿಗಳ ಬದುಕನ್ನು ಹಸನಗೊಳಿಸಿದ್ದಾರೆ

ಕುಶಾಲನಗರ(ರಘುಹೆಬ್ಬಾಲೆ):  ಪಟ್ಟಣದ ಬಲಮುರಿ ಗಣಪತಿ ದೇವಾಲಯ ಬಳಿ ಶಿವರಾಮಕಾರಂತ ಬಡಾವಣೆಯ ಉದ್ಯಾನವನದಲ್ಲಿ ವೀರಶೈವ ಸಮಾಜ ಹಾಗೂ ಪುರಸಭೆ ವತಿಯಿಂದ ರೂ.3 ಲಕ್ಷ ವೆಚ್ಚದಲ್ಲಿ ನಿರ್ಮಿಸಿರುವ  ಡಾ.ಶಿವಕುಮಾರ ಸ್ವಾಮೀಜಿ ಪ್ರತಿಮೆಯನ್ನು ಶಾಸಕ ಡಾ.ಮಂತರ್ ಗೌಡ ಹಾಗೂ ವಿವಿಧ ಮಠಾಧೀಶರುಗಳು  ಉದ್ಘಾಟಿಸಿದರು.

ಈ ವೇಳೆ ನಡೆದ ಸಭಾ ಕಾರ್ಯಕ್ರಮದಲ್ಲಿ ಶಾಸಕ ಡಾ.ಮಂತರ್ ಗೌಡ ಮಾತನಾಡಿ, ಸಿದ್ದಗಂಗಾ ಶ್ರೀಗಳು ಲಕ್ಷಾಂತರ  ಬಡ ಮಕ್ಕಳ ಪಾಲಿನ ಆರಾಧ್ಯ ದೇವರಾಗಿ ಅನ್ನ, ಅಕ್ಷರ, ಆಶ್ರಯ ನೀಡುವ ಮೂಲಕ ಅವರ ಬದುಕು ಹಸನಗೊಳಿಸಿದ್ದಾರೆ ಎಂದರು.ಜಾತಿ ಬೇಧವಿಲ್ಲದೆ ಎಲ್ಲಾ ಜಾತಿ ಧರ್ಮಗಳ ಆರಾಧ್ಯ ದೇವರಾಗಿರುವ ಶ್ರೀಗಳ ಮಂಟಪ ಇಲ್ಲಿ ದೇವಾಲಯ ಸ್ವರೂಪವಾಗಿದೆ ಎಂದರು.

ಮಾಜಿ ಶಾಸಕ ಅಪ್ಪಚ್ಚುರಂಜನ್ , ವೃತ್ತದ ನಾಮಫಲಕ ಉದ್ಘಾಟಿಸಿದ  ಮಾತನಾಡಿ,  ಸಿದ್ದಗಂಗಾ ಸ್ವಾಮೀಜಿಗಳ ಅನುಗ್ರಹದಿಂದ ಇಡೀ ನಾಡು ಸಮೃದ್ಧವಾಗಿದೆ. ತ್ರಿವಿಧ ದಾಸೋಹದ ಮೂಲಕ ರಾಜ್ಯ ಮತ್ತು ರಾಷ್ಟ್ರಮಟ್ಟದ ಖ್ಯಾತಿ ಗಳಿಸಿದ್ದ ಶ್ರೀಗಳ ಸೇವೆ ಅಜರಾಮರ ಎಂದರು.

ಕೊಡ್ಲಿಪೇಟೆ ಕಿರಿಕೊಡ್ಲಿ ಮಠಾಧೀಶ ಸದಾಶಿವ ಸ್ವಾಮೀಜಿ ಮಾತನಾಡಿ, ಸಿದ್ದಗಂಗಾ ಸ್ವಾಮೀಜಿ ತಪೋಕ್ಷೇತ್ರ ಸರ್ವ ಜನರ ಶಾಂತಿಯ ತೋಟವಾಗಿದ್ದು 52 ಕೋಮಿನ ವಿದ್ಯಾರ್ಥಿಗಳಿಗೆ ತ್ರಿವಿಧ ದಾಸೋಹ ಸೇವೆ ನಿರಂತರವಾಗಿ ನಡೆದುಕೊಂಡು ಬರುತ್ತಿದೆ. ಶತಮಾನಗಳ ಕಾಲ ಲೋಕ ಕಲ್ಯಾಣಕ್ಕಾಗಿ ಅವಿರತ ದುಡಿದ ಮಹಾ ಚೇತನ ಡಾ.ಶಿವಕುಮಾರ ಸ್ವಾಮೀಜಿ ಸ್ಮರಣೆ ಇಡೀ ದೇಶಾದ್ಯಂತ ನಡೆಯುತ್ತಿದೆ ಎಂದರು.

ತಾಲ್ಲೂಕು ಗ್ಯಾರಂಟಿ ಅನುಷ್ಠಾನ  ಸಮಿತಿ ಅಧ್ಯಕ್ಷ ವಿ.ಪಿ.ಶಶಿಧರ್ ಮಾತನಾಡಿ, ಸಹಸ್ರಾರು ಕುಟುಂಬಗಳಲ್ಲಿ ಆರದ ಹಣತೆಯಾಗಿರುವ ಯುಗಪುರುಷ ಡಾ.ಸಿದ್ದಗಂಗಾ ಶ್ರೀಗಳ ಸೇವೆ ಪ್ರಪಂಚಕ್ಕೆ ಮಾದರಿಯಾದುದು ಎಂದರು. ಅಖಿಲ‌ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಕೊಡಗು ಜಿಲ್ಲಾಧ್ಯಕ್ಷ ಹೆಚ್.ವಿ.ಶಿವಪ್ಪ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಪಟ್ಟಣದ ಬಸವೇಶ್ವರ ಸೌಹಾರ್ದ ಸಹಕಾರ ಸಂಘದ ವತಿಯಿಂದ ಕ್ಯಾಲೆಂಡರ್ ಬಿಡುಗಡೆಗೊಳಿಸಲಾಯಿತು. ಇದೇ ಸಂದರ್ಭ  ಪುರಸಭೆ ಮಾಜಿ ಅಧ್ಯಕ್ಷ ಬಿ ಜೈವರ್ಧನ್, ಉಪಾಧ್ಯಕ್ಷೆ ಸುರಯ್ಯಭಾನು ಹಾಗೂ ಪುರಸಭೆಯ ಪೌರ ಕಾರ್ಮಿಕರನ್ನು ಸನ್ಮಾನಿಸಿ ಗೌರವಿಸಲಾಯಿತು.

ಈ ವೇಳೆ ವಿರಾಜಪೇಟೆ ತಾಲ್ಲೂಕಿನ ಅಮ್ಮತ್ತಿಯ ಕನ್ನಡ ಮಠದ ಶ್ರೀ ಚನ್ನಬಸವ ದೇಶೀಕೇಂದ್ರ ಸ್ವಾಮೀಜಿ, ಕೊಡ್ಲಿಪೇಟೆ ಕಿರಿಕೊಡ್ಲಿ ಮಠದ ಶ್ರೀ ಸದಾಶಿವ ಸ್ವಾಮೀಜಿ, ಕಲ್ಲುಮಠದ ಶ್ರೀ ಮಹಾಂತ ಸ್ವಾಮೀಜಿ, ಶನಿವಾರಸಂತೆ  ಮುದ್ದಿನ ಕಟ್ಟೆ ಮಠದ ಶ್ರೀ ಅಭಿನವ ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ, ಕೊಡ್ಲಿಪೇಟೆ ಕಲ್ಲಳ್ಳಿ ಮಠದ ಶ್ರೀ  ರುದ್ರಮುನಿ ಸ್ವಾಮೀಜಿ, ಸೋಮವಾರಪೇಟೆ ವಿರಕ್ತ ಮಠದ ಶ್ರೀ ನಿಶ್ಚಲ ನಿರಂಜನ ದೇಶೀಕೇಂದ್ರ ಸ್ವಾಮೀಜಿ.

ಕೊಡಗು ಜಿಲ್ಲಾ ಹೋಟೆಲ್ ಅಸೋಸಿಯೇಷನ್ ಅಧ್ಯಕ್ಷ ಬಿ.ಆರ್.ನಾಗೇಂದ್ರ ಪ್ರಸಾದ್, ಕುಶಾಲನಗರದ ಹಿರಿಯ ಸಹಕಾರಿ ಟಿ.ಅರ್.ಶರವಣಕುಮಾರ್, ಜಿಲ್ಲಾ ಸರ್ಕಾರಿ ನೌಕರರ ವೀರಶೈವ ಸಮುದಾಯದ ಅಧ್ಯಕ್ಷ  ಎಸ್.ನಂದೀಶ್, ಅಕ್ಕನ ಬಳಗದ ಅಧ್ಯಕ್ಷೆ ಕಮಲಾ ಉದಯಕುಮಾರ್, ಲೇಖನಾ ಧರ್ಮೇಂದ್ರ,  ಗುಡ್ಡೆಹೊಸೂರು ವೀರಶೈವ ಸಮಾಜದ ಅಧ್ಯಕ್ಷ ಮಲ್ಲಿಕಾರ್ಜುನ, ಕುಶಾಲನಗರ ತಾಲ್ಲೂಕು ವೀರಶೈವ ಸಮಾಜದ ಅಧ್ಯಕ್ಷ ಹೆಚ್.ಎಂ.ಮಧುಸೂದನ್, ಲಿಂಗಾಯಿತ ಜಿಲ್ಲಾ ಯುವ ವೇದಿಕೆ ಅಧ್ಯಕ್ಷ ಕಿರಣ್, ಬಸವೇಶ್ವರ ದೇವಾಲಯ ಟ್ರಸ್ಟ್ ಅಧ್ಯಕ್ಷ  ಎಂ.ಕೆ.ಧನರಾಜು, ಕಾರ್ಯದರ್ಶಿ ಎಂ.ಬಿ.ಸುರೇಶ್,  ಕೊಡಗು ಜಿಲ್ಲಾ ವೀರಶೈವ ಸಮಾಜದ ಪ್ರಧಾನ ಕಾರ್ಯದರ್ಶಿ ಸಾಂಭಶಿವಮೂರ್ತಿ, ಸುಮಾಸುದೀಪ್,  ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ಅಧ್ಯಕ್ಷ ಕೆ.ಎಸ್.ಮೂರ್ತಿ, ಕಾರ್ಯದರ್ಶಿ ಬಿ.ನಟರಾಜು ಪಾಲ್ಗೊಂಡಿದ್ದರು.

ಕಾರ್ಯಕ್ರಮಕ್ಕೂ ಮುನ್ನಾ ಬಲಮುರಿ ದೇವಾಲಯದಿಂದ ಶಿರಂಗಾಲದ ನಂದೀಶ್ ತಂಡದಿಂದ ಆಕರ್ಷಕವಾದ ವೀರಗಾಸೆ ಪ್ರದರ್ಶನ ನಡೆಯಿತು.ಹಾಗೆಯೇ ಮಠಾಧಿಪತಿಗಳೊಂದಿಗೆ ವಿವಿಧ ಶರಣ ಶರಣೆಯರ ವೇಷ ತೊಟ್ಟ ಮಕ್ಕಳು ಮೆರವಣಿಗೆಯಲ್ಲಿ ಗಮನ ಸೆಳೆದರು.ಶಿಕ್ಷಕ  ಎಸ್.ಪಿ.ಪರಮೇಶ್ ನಿರೂಪಿಸಿದರು.ಸಾಂಬಶಿವಯ್ಯ ಸ್ವಾಗತಿಸಿದರು. ಶಿಕ್ಷಕಿ ಟಿ.ವಿ.ಶೈಲಾ ವಂದಿಸಿದರು

admin
the authoradmin

ನಿಮ್ಮದೊಂದು ಉತ್ತರ

Translate to any language you want