ಕನ್ನಡ ಸಾಹಿತ್ಯದ ಬಹುಮುಖಿ ಪ್ರಕಾರಗಳಲ್ಲಿ ಶ್ರದ್ಧೆಯಿಂದ ಸಾಹಿತ್ಯ ಕೃಷಿ ಮಾಡಿರುವವರು ಕುವೆಂಪು
ಶಾಲಾ ವಿದ್ಯಾರ್ಥಿಗಳು ಕುವೆಂಪು ಅವರ ಮಕ್ಕಳ ಸಾಹಿತ್ಯ ಕೃತಿಗಳನ್ನು ಓದುವ ಮೂಲಕ, ಅದರ ಸ್ವಾದವನ್ನು ಸವಿಯಬೇಕು

ಮೈಸೂರು : ಕನ್ನಡ ಸಾಹಿತ್ಯದ ಬಹುಮುಖಿ ಪ್ರಕಾರಗಳಲ್ಲಿ ಅತ್ಯಂತ ಶ್ರದ್ಧೆಯಿಂದ ಸಾಹಿತ್ಯ ಕೃಷಿ ಮಾಡಿರುವ ಕುವೆಂಪು, ಹಿರಿಯರಿಗಾಗಿ ಬರೆದಷ್ಟೇ ಕಾಳಜಿಯಿಂದ, ಕಿರಿಯರಿಗಾಗಿಯೂ ಸಾಹಿತ್ಯ ರಚಿಸಿದ್ದಾರೆ. ಶಾಲಾ ವಿದ್ಯಾರ್ಥಿಗಳು ಕುವೆಂಪು ಅವರ ಮಕ್ಕಳ ಸಾಹಿತ್ಯ ಕೃತಿಗಳನ್ನು ಓದುವ ಮೂಲಕ, ಅದರ ಸ್ವಾದವನ್ನು ಸವಿಯಬೇಕು’ ಎಂದು ಸಾಹಿತಿ ಹಾಗೂ ಶಿಕ್ಷಕ ಟಿ. ಸತೀಶ್ ಜವರೇಗೌಡ ಕರೆ ನೀಡಿದರು.
ತಾಲ್ಲೂಕಿನ ಮೆಲ್ಲಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ‘ವಿಶ್ವಮಾನವ ದಿನಾಚರಣೆ’ಯಲ್ಲಿ ಕುವೆಂಪು ಅವರ ಜೀವನ ಮತ್ತು ಸಾಧನೆ ಕುರಿತು ಮಾತನಾಡಿದ ಅವರು ‘ಮಕ್ಕಳಿಗಗಾಗಿ ಉತ್ಕೃಷ್ಟ ಸಾಹಿತ್ಯವನ್ನು ರಚಿಸಿ ಉಣಬಡಿಸಿರುವ ಕುವೆಂಪು ಅವರ ‘ಬೊಮ್ಮನಹಳ್ಳಿ ಕಿಂದರಜೋಗಿ’ ಅತ್ಯಂತ ಸೊಗಸಾದ ಮಕ್ಕಳ ಪಾಲಿನ ಅಮೂಲ್ಯ ಕೃತಿ ಕಾಣಿಕೆಯಾಗಿದೆ ಎಂದು ಶ್ಲಾಘಿಸಿದರು.

‘ಕುವೆಂಪು ಅವರಿಗೆ ಕನ್ನಡ ಭಾಷೆಯ ಬಗ್ಗೆ ಅಪಾರವಾದ ಪ್ರೀತಿ, ಅಭಿಮಾನ, ಗೌರವ ಭಾವವಿತ್ತು. ಇಂಗ್ಲಿಷ್ ಭಾಷೆಯಲ್ಲಿ ಪ್ರೌಢಿಮೆಯಿದ್ದರೂ ತಮ್ಮ ಮಾತೃಭಾಷೆ ಕನ್ನಡದಲ್ಲಿಯೇ ಸಾಹಿತ್ಯ ಕೃಷಿ ಮಾಡಿದರು. ಆ ಮೂಲಕ ಕನ್ನಡ ಭಾಷೆ, ಸಾಹಿತ್ಯ, ಸಂಸ್ಕೃತಿಯ ಕಟ್ಟಿದರು. ಅವರ ಕನ್ನಡದೆಡಗಿನ ಪ್ರೀತ್ಯಾಭಿಮಾನ ವಿದ್ಯಾರ್ಥಿಗಳಿಗೆ ಮಾದರಿ’ ಎಂದರು.
ಕುವೆಂಪು ಸಾಹಿತ್ಯದ ಓದಿನಿಂದ ವಿದ್ಯಾರ್ಥಿಗಳಲ್ಲಿ ಅರಿವು ಮೂಡುತ್ತದೆ. ಜಾತಿ, ಮತ, ಮೂಢನಂಬಿಕೆಗಳ ನಿರಾಕರಿಸುವ ವೈಚಾರಿಕತೆ ಬೆಳೆಯುತ್ತದೆ. ಜೊತೆಗೆ ವಿಶ್ವಮಾನವ ಪ್ರಜ್ಞೆ ಮತ್ತು ಕನ್ನಡ ಪ್ರಜ್ಞೆ ಜಾಗೃತವಾಗುತ್ತದೆ. ಆದ್ದರಿಂದ, ಶಿಕ್ಷಕರು ಮತ್ತು ಪೋಷಕರು ಮಕ್ಕಳಿಗೆ ಕುವೆಂಪು ಸಾಹಿತ್ಯದ ಬಗ್ಗೆ ಆಸಕ್ತಿ ಬೆಳೆಸಬೇಕು ಎಂದು ಸಲಹೆ ನೀಡಿದರು.

ಕುವೆಂಪು ವಿರಚಿತ ಕತುಗಳನ್ನು ವಿದ್ಯಾರ್ಥಿಗಳಾದ ಎಂ.ಎಸ್. ಬಿಂದು ಮತ್ತು ಎನ್. ರಾಜಗೋಪಾಲ್ ವಾಚಿಸಿದರು. ಸಂಗೀತ ಶಿಕ್ಷಕಿ ಆರ್.ಹೆಚ್. ಶ್ರೀದೇವಿ ಮತ್ತು ವಿದ್ಯಾರ್ಥಿನಿ ಯುಕ್ತಾ ಕುವೆಂಪು ಗೀತೆಗಳ ಸುಶ್ರಾವ್ಯವಾಗಿ ಹಾಡಿದರು. ಸಿಂಧು ಮತ್ತು ಹೇಮಾವತಿ ಕುವೆಂಪು ಸೂಕ್ತಿಗಳನ್ನು ಓದಿದರು. ಜೊತೆಗೆ ಕುವೆಂಪು ಅವರ ಹಲವು ಗೀತೆಗಳನ್ನು ಸಮೂಹ ಗಾಯನದಲ್ಲಿ ಪ್ರಸ್ತುತ ಮಾಡಲಾಯಿತು.
ಸಮಾರಂಭದ ಅಧ್ಯಕ್ಷತೆಯನ್ನು ಪ್ರಭಾರ ಮುಖ್ಯ ಶಿಕ್ಷಕ ಎ.ಎನ್. ಶಶಿಧರ್ ವಹಿಸಿದ್ದರು. ವೇದಿಕೆಯಲ್ಲಿ ಶಿಕ್ಷಕರಾದ ಹೆಚ್.ಎಸ್. ಸುನೀಲ್ ಕುಮಾರ್, ಬಿ.ಎ. ನಸೀರ್ ಸುಹೇಲ್, ಕೀರ್ತಿಕುಮಾರ್, ಕಲ್ಪನಾ, ಸೌಜನ್ಯ ಉಪಸ್ಥಿತರಿದ್ದರು.







