LatestMysore

ವಚನ ವಾಚನದಲ್ಲಿ ಲೀನವಾದ ವಿಜಯನಗರ ಕನ್ನಡ ಸಾಹಿತ್ಯ ಭವನ…  ಇದು ವಿದ್ಯಾರ್ಥಿಗಳ ಹೃದಯಸ್ಪರ್ಶಿ ವಚನಾರಾಧನೆ!

ವಚನ ವಾಚನದಲ್ಲಿ ವಿದ್ಯಾರ್ಥಿಗಳು ಆಯ್ದ 16 ಅರ್ಥಪೂರ್ಣ ವಚನಗಳನ್ನು ಅತ್ಯಂತ ನಿರರ್ಗಳವಾಗಿ, ಶುದ್ಧ ಉಚ್ಚಾರಣೆಯೊಂದಿಗೆ, ಭಕ್ತಿಭಾವದಿಂದ ವಾಚನ ಮಾಡಿದ್ದು ವಿಶಿಷ್ಟವಾದ ಆಧ್ಯಾತ್ಮಿಕ ವಾತಾವರಣವನ್ನು ಸೃಷ್ಟಿಸಿತು.

ಮೈಸೂರು: ನಗರದ ವಿಜಯನಗರ ಕನ್ನಡಸಾಹಿತ್ಯ ಭವನದಲ್ಲಿ ನಡೆದ ಶರಣು ವಿಶ್ವವಚನ ಫೌಂಡೇಷನ್ ಸಂಸ್ಥೆಯ 11ನೇ ವಾರ್ಷಿಕೋತ್ಸವವು ವಚನಧರ್ಮದ ಜೀವಂತ ಸಾಕ್ಷಿಯಾಗಿ ರೂಪುಗೊಂಡಿತು. ಈ ಸಂದರ್ಭದಲ್ಲಿ ದೇವಲಾಪುರ ಶ್ರೀ ಗುರುಮಲ್ಲೇಶ್ವರ ವಚನಪಾಠಶಾಲೆಯ ವಿದ್ಯಾರ್ಥಿಗಳು ಸಾಮೂಹಿಕವಾಗಿ ವಚನಗಳನ್ನು ವಾಚನ ಮಾಡುವ ಮೂಲಕ ಸಮಸ್ತ ಸಭಿಕರ ಮನ ಮತ್ತು ಹೃದಯಗಳನ್ನು ತಟ್ಟುವಲ್ಲಿ ಯಶಸ್ವಿಯಾದರು.

ವಿದ್ಯಾರ್ಥಿಗಳು ಆಯ್ದ 16 ಅರ್ಥಪೂರ್ಣ ವಚನಗಳನ್ನು ಅತ್ಯಂತ ನಿರರ್ಗಳವಾಗಿ, ಶುದ್ಧ ಉಚ್ಚಾರಣೆಯೊಂದಿಗೆ, ಭಕ್ತಿಭಾವದಿಂದ ವಾಚನ ಮಾಡಿದ್ದು ಸಭಾಂಗಣದಲ್ಲಿ ವಿಶಿಷ್ಟವಾದ ಆಧ್ಯಾತ್ಮಿಕ ವಾತಾವರಣವನ್ನು ಸೃಷ್ಟಿಸಿತು. ಮೌನದಲ್ಲಿಯೇ ಮಾತನಾಡುವ ವಚನಗಳ ಶಕ್ತಿ, ಮಕ್ಕಳ ಧ್ವನಿಯಲ್ಲಿ ಮತ್ತಷ್ಟು ಪ್ರಭಾವಶಾಲಿಯಾಗಿ ಮೂಡಿಬಂದಿತು.

ಈ ಸಂದರ್ಭದಲ್ಲಿ ಮಾಜಿ ರಾಷ್ಟ್ರಪತಿ ದಿವಂಗತ ಬಿ.ಡಿ. ಜತ್ತಿಯವರ ಪುತ್ರರೂ, ಬೆಂಗಳೂರು ಬಸವ ಸಮಿತಿಯ ಅಧ್ಯಕ್ಷರೂ ಆಗಿರುವ ಅರವಿಂದ ಜತ್ತಿ ಅವರು ಮಕ್ಕಳೊಂದಿಗೆ ನೆಲದ ಹಾಸಿನ ಮೇಲೆ ಕುಳಿತು ಸಾಮೂಹಿಕ ವಚನ ವಾಚನದಲ್ಲಿ ಭಾಗವಹಿಸಿದ್ದು ವಿಶೇಷ ಆಕರ್ಷಣೆಯಾಗಿತ್ತು. ಅವರ ಈ ಸರಳತೆ ಮತ್ತು ಸಮಾನತೆಯ ನಡೆ ವಚನ ತತ್ತ್ವದ ಜೀವಂತ ಅಭಿವ್ಯಕ್ತಿಯಾಗಿ ಸಭಿಕರನ್ನು ಆಳವಾಗಿ ಸ್ಪರ್ಶಿಸಿತು.

ಅರವಿಂದ ಜತ್ತಿಯವರೊಂದಿಗೆ ಶರಣು ವಿಶ್ವವಚನ ಫೌಂಡೇಷನ್ ಸಂಸ್ಥಾಪಕ ವಚನ ಕುಮಾರಸ್ವಾಮಿ ಹಾಗೂ ದೆಹಲಿ ಪಾರ್ಲಿಮೆಂಟ್ ಜಂಟಿ ನಿರ್ದೇಶಕ ಚಂದ್ರಶೇಖರ್ ಅವರುಗಳೂ ಕೂಡಾ ನೆಲದ ಮೇಲೆ ಕುಳಿತು ವಚನ ವಾಚನದಲ್ಲಿ ಭಾಗಿಯಾದರು. ಈ ಅಪರೂಪದ ಕ್ಷಣವು ಅಧಿಕಾರ–ಪದವಿಗಳ ಗಡಿಯನ್ನೂ ಮೀರಿ, ವಚನಧರ್ಮದ ಸಮತೆಯ ತತ್ತ್ವವನ್ನು ಪ್ರತ್ಯಕ್ಷವಾಗಿ ಪ್ರತಿಬಿಂಬಿಸಿತು.

ಕಾರ್ಯಕ್ರಮದಲ್ಲಿ ವಚನಗಳು ಕೇವಲ ಪಠಣವಾಗದೆ, ಬದುಕಿನ ಮೌಲ್ಯಗಳಾಗಿ ಮೂಡಿಬಂದುದು ಎಲ್ಲರ ಮನದಲ್ಲಿ ಆಳವಾದ ಅನುಭವವನ್ನು ಮೂಡಿಸಿತು. ಮಕ್ಕಳ ಧ್ವನಿಯಲ್ಲಿ ಹರಿದ ವಚನಧಾರೆ, ಹಿರಿಯರ ಸರಳ ಸಾನ್ನಿಧ್ಯ ಮತ್ತು ಸಭಿಕರ ಮೌನ ಭಕ್ತಿ—ಇವೆಲ್ಲವೂ ಸೇರಿ ವಿಜಯನಗರ ಕನ್ನಡಸಾಹಿತ್ಯ ಭವನವನ್ನು ವಚನ ಮಂದಿರವನ್ನಾಗಿ ಪರಿವರ್ತಿಸಿತು.

ಶರಣು ವಿಶ್ವವಚನ ಫೌಂಡೇಷನ್ ಸಂಸ್ಥೆಯ 11ನೇ ವಾರ್ಷಿಕೋತ್ಸವವು ಈ ಸಾಮೂಹಿಕ ವಚನ ವಾಚನದ ಮೂಲಕ ವಚನ ಸಾಹಿತ್ಯದ ನಿರಂತರತೆ, ಮಕ್ಕಳಲ್ಲಿ ವಚನ ಸಂಸ್ಕಾರದ ಬಿತ್ತನೆ ಮತ್ತು ಸಮಾನತೆಯ ಮೌಲ್ಯಗಳ ಸಾರವನ್ನು ಮತ್ತೊಮ್ಮೆ ಸಮಾಜಕ್ಕೆ ಸಾರಿತು. ನಂತರ ವಚನ ವಾಚನ ಮಾಡಿದ ಎಲ್ಲಾ ವಿದ್ಯಾರ್ಥಿಗಳಿಗೆ ವಚನ ದೀವಿಗೆ ಪ್ರಮಾಣಪತ್ರ ಮತ್ತು ಶ್ರೀ ಶಿವಕುಮಾರಸ್ವಾಮಿಗಳವರ ಭಾವಚಿತ್ರ ನೀಡಲಾಯಿತು.

ಕಾರ್ಯಕ್ರಮದ ನಿರೂಪಣೆಯನ್ನು ದೀಪ ಶಾಲೆ ಮುಖ್ಯಶಿಕ್ಷಕ ಬಾಬು ಮಾಡಿದರೆ, ವಚನ ಕೋಗಿಲೆ ಸರಸ್ವತಿ ರಾಮಣ್ಣ ವಚನ ಗಾಯನ ಮಾಡಿದರು. ಶಿಕ್ಷಕಿ ನಮ್ರತಾ ವಂದಿಸಿದರು. ಕಾರ್ಯಕ್ರಮದಲ್ಲಿ ಚಿಕ್ಕಮಗಳೂರು ವಿಶ್ವಧರ್ಮ ಪೀಠದ ಶ್ರೀ ಜಯಬಸವಾನಂದಸ್ವಾಮೀಜಿ, ದೇವಲಾಪುರದ ಶ್ರೀ ಗುರುಮಲ್ಲೇಶ್ವರ ದಾಸೋಹ ಮಠದ ಶ್ರೀ ಜಡೇಸ್ವಾಮಿಗಳು ದಿವ್ಯ ಸಾನ್ನಿಧ್ಯ ವಹಿಸಿದ್ದರು.

ಮಾಜಿ ವಿಧಾನ ಪರಿಷತ್ ಸದಸ್ಯ ಪ್ರೊ. ಮಲ್ಲಿಕಾರ್ಜುನಪ್ಪ, ಕಾರ್ಯಕ್ರಮದಲ್ಲಿ ಶರಣು ವಿಶ್ವವಚನ ಫೌಂಡೇಷನ್ ಸಂಸ್ಥಾಪಕ ವಚನ ಕುಮಾರಸ್ವಾಮಿ, ರೂಪ ಕುಮಾರಸ್ವಾಮಿ, ಕನ್ನಡ ಕಲಾಕೂಟದ ಸಂಸ್ಥಾಪಕ ಎಂ‌. ಚಂದ್ರಶೇಖರ್, ಶಿವಮೊಗ್ಗ ಯೋಗ ಗುರು ಸಿ.ವಿ ರುದ್ರಾರಾಧ್ಯ, ಬೆಂಗಳೂರಿನ ಗಾಯಕ ಅನುರಾಗ್ ಗದ್ದಿ, ಪಂಚಾಕ್ಷರಯ್ಯ, ವೀಣಾ ನಂದೀಶ್, ಎ.ಆರ್. ನಾಗೇಂದ್ರಸ್ವಾಮಿ, ಅನಿಲ್ ಕುಮಾರ್ ವಾಜಂತ್ರಿ, ವಿ. ಲಿಂಗಣ್ಣ, ಶಿವಪುರ ಉಮಾಪತಿ, ಅನಿತಾ ನಾಗರಾಜ್, ನಮ್ರತಾ, ಉಷಾ ನಾಗೇಶ್, ಪುಷ್ಪಲತಾ, ವಚನ ಚೂಡಾಮಣಿ,  ಪಿ.ವಿ ರುದ್ರೇಶ್, ಸಂದೀಪ್, ವಿಜಯ್, ಬಸವರಾಜು,  ವಚನಾಂಬಿಕೆ, ರತ್ನ ಬಸವರಾಜು, ವಚನ, ಶ್ರದ್ಧ ಕುತ್ನಿಕರ್, ಗಿರೀಶ್, ನಂದೀಶ್ ಉಪಸ್ಥಿತರಿದ್ದರು.

admin
the authoradmin

ನಿಮ್ಮದೊಂದು ಉತ್ತರ

Translate to any language you want