ಸರಗೂರು: ಅಮರ ಶಿಲ್ಪಿ ಜಕಣಾಚಾರಿ ಅವರು ಕಲ್ಲಿನಲ್ಲಿ ಜೀವ ತುಂಬಿದಂತೆ ರೂಪಿಸಿದ ಅದ್ಭುತ ಶಿಲ್ಪಕಲೆಗಳು ಇಂದಿಗೂ ಲೋಕವನ್ನು ಬೆರಗುಗೊಳಿಸುತ್ತಿವೆ. ಇಂತಹ ಅಪೂರ್ವ ಕಲೆಗಳನ್ನು ಉಳಿಸಿ ಬೆಳೆಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದು ವಿಶ್ವಕರ್ಮ ಸಮಾಜದ ಗೌರವಾಧ್ಯಕ್ಷ ಜಿ. ರವಿ ಹೇಳಿದರು.
ಪಟ್ಟಣದ ತಾಲ್ಲೂಕು ಕಚೇರಿಯಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯಿಂದ ಆಯೋಜಿಸಿದ್ದ ಅಮರ ಶಿಲ್ಪಿ ಜಕಣಾಚಾರಿ ಜಯಂತಿ ಕಾರ್ಯಕ್ರಮದಲ್ಲಿ ಜಕಣಾಚಾರಿಯ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಮಾತನಾಡಿದ ಅವರು, ಬೇಲೂರು, ಹಳೆಬೀಡು ಸೇರಿದಂತೆ ವಿವಿಧ ಸ್ಥಳಗಳಲ್ಲಿ ಕಲ್ಲಿನಲ್ಲಿ ಕೆತ್ತಿದ ಶಿಲ್ಪಕೃತಿಗಳನ್ನು ನೋಡುವುದೇ ಒಂದು ಅಪರೂಪದ ಸೌಭಾಗ್ಯ. ಮಾಡುವ ಕೆಲಸದಲ್ಲಿ ತಿಳಿವಳಿಕೆ, ಶ್ರದ್ಧೆ, ನಿಷ್ಠೆ ಹಾಗೂ ಪ್ರಾಮಾಣಿಕತೆ ಇದ್ದರೆ ಯಶಸ್ಸು ಖಂಡಿತ ಎಂದು ಹೇಳಿದರು.

ಸಾಧಕರನ್ನು ಸ್ಮರಿಸುವುದರಲ್ಲೇ ನಿಲ್ಲದೆ, ಅವರ ಗುಣ, ಶ್ರಮ ಮತ್ತು ಕಲಾತ್ಮಕತೆಯನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ನಮ್ಮೊಳಗಿನ ಪ್ರತಿಭೆಯನ್ನು ನಾವು ಗುರುತಿಸಿದರೆ ಮಾತ್ರ ಸಮಾಜವೂ ನಮ್ಮನ್ನು ಗುರುತಿಸುತ್ತದೆ. ಉತ್ತಮ ಜ್ಞಾನ ಮತ್ತು ಕೌಶಲ್ಯ ರೂಢಿಸಿಕೊಂಡಲ್ಲಿ ಮುಂದಿನ ದಿನಗಳಲ್ಲಿ ಸಮಾಜ ನಮ್ಮನ್ನು ಸ್ಮರಿಸುವಂತಾಗುತ್ತದೆ ಎಂದು ಅವರು ಹೇಳಿದರು.
ಯುವ ಬ್ರೀಗೇಡ್ ತಾಲ್ಲೂಕು ಅಧ್ಯಕ್ಷ ಬಿ.ಡಿ. ದಾಸಚಾರಿ ಮಾತನಾಡಿ, “ಮಕ್ಕಳು ಶಿಕ್ಷಣದ ಜೊತೆಗೆ ನಾನಾ ಕೌಶಲ್ಯಗಳನ್ನು ಕಲಿಯಬೇಕು. ಪಠ್ಯೇತರ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಬೇಕು. ಜೊತೆಗೆ ವೃತ್ತಿಧರ್ಮವನ್ನೂ ಮರೆಯಬಾರದು” ಎಂದು ಸಲಹೆ ನೀಡಿದರು.
ಇದೇ ಸಂದರ್ಭದಲ್ಲಿ ಶಿಲ್ಪಿಗಳಾದ ಅನಿಲ್‌ಕುಮಾರ್, ನಾಗೇಶ್, ಶಿವಮಲ್ಲು, ಹಲಸೂರು ನಿಂಗಾಚಾರ್, ಕರಾಟೆ ಶಿಕ್ಷಕ ಹಾಗೂ ಹೆಸರಾಂತ ಟೈಲರ್ ಗೋವಿಂದರಾಜು ಹಾಗೂ ಜಿ. ರವಿ ಅವರನ್ನು ಅಭಿನಂದಿಸಲಾಯಿತು.

ಕಾರ್ಯಕ್ರಮದಲ್ಲಿ ತಹಶೀಲ್ದಾರ್ ಮೋಹನ್‌ಕುಮಾರಿ ಅಧ್ಯಕ್ಷತೆ ವಹಿಸಿದ್ದರು. ಸರಗೂರು ಪಟ್ಟಣ ಪಂಚಾಯತಿ ಅಧ್ಯಕ್ಷೆ ಚೈತ್ರ ಸ್ವಾಮಿ, ಉಪಾಧ್ಯಕ್ಷ ಶಿವಕುಮಾರ್(ವಿರೇಶ್), ವಿಶ್ವಕರ್ಮ ಸಮಾಜದ ಅಧ್ಯಕ್ಷ ನಟರಾಜು, ಕಾರ್ಯದರ್ಶಿ ಮಂಜುನಾಥ್, ಖಜಾಂಚಿ ಸಂತೋಷ್‌ಕುಮಾರ್ ಸೇರಿದಂತೆ ಲಿಂಗಾಚಾರ್, ರಾಜೇಶ್, ಮಾಸ್ಟ್ರು ಪುಟ್ಟಸ್ವಾಮಾಚಾರ್, ಶ್ರೀನಿವಾಸ್, ಹೊಸ ಬೀರವಾಳ್ ಸೋಮಚಾರ್, ಲೋಕೇಶ್, ಶ್ರೀನಿವಾಸಚಾರ್, ಬಸವರಾಜು, ಕಾಳಸ್ವಾಮಿ, ಚೇತನ್, ಸುರೇಶ್, ನರಸಿಂಹಾಚಾರ್, ಪ್ರಕಾಶ್, ಸತೀಶ್‌ಕದಂಬ, ಮಹೇಶ್, ವೇಣುಗೋಪಾಲ್, ಗ್ರೇಡ್–2 ತಹಶೀಲ್ದಾರ್ ಪರಶಿವಮೂರ್ತಿ, ಶಿರಸ್ತೆದಾರ್ ಮನೋಹರ್, ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ಮತ್ತಿತರರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.









