ಲಕ್ಷ್ಮೀಪತಿ ಬಾಲಾಜಿ ನಟನೆಯ “ಮಾವುತ” ಚಲನಚಿತ್ರವು ಸಂಪೂರ್ಣ ಸಿದ್ಧವಾಗಿದ್ದು, ಹೊಸವರ್ಷದಲ್ಲಿ ಅಂದರೆ ಜ. 30ರಂದು ರಾಜ್ಯಾದ್ಯಂತ ಚಿತ್ರಮಂದಿರಗಳಲ್ಲಿ ತೆರೆಕಾಣಲಿದೆ.

ಎಂಟು ಬಾರಿ ತಾಯಿ ಚಾಮುಂಡೇಶ್ವರಿಯನ್ನು ಅಂಬಾರಿಯ ಮೇಲೆ ಹೊತ್ತು ಮೆರೆಸಿದ ಅರ್ಜುನನ ಸವಿ ನೆನಪಿನಲ್ಲಿ ಚಿತ್ರೀಕರಣಗೊಂಡ ಎಸ್ ಡಿ ಆರ್ ಪ್ರೊಡಕ್ಷನ್ ಅವರ ದ್ವಿತೀಯ ಚಿತ್ರ “ಮಾವುತ” ಚಿತ್ರದ ಅರ್ಜುನನ ಹುಟ್ಟುಹಬ್ಬದ ಹಾಡಿನಲ್ಲಿ ಆತನನ್ನು ಜೀವಂತವಾಗಿರಿಸುವ ಪುಟ್ಟ ಪ್ರಯತ್ನವನ್ನು ಚಿತ್ರ ತಂಡ ಮಾಡಿದೆ. ಅರ್ಜುನನ ಸಮಾಧಿಯ ಮುಂದೆ ಆತನ ಪ್ರಿಯ ಮಾವುತನಾದ “ವಿನು” ಹಾಗೂ ಮೈಸೂರಿನ ಅರಸು ಹಾಗೂ ಸಂಸದರು ಆಗಿರುವ ಯದುವೀರ ಒಡೆಯರ್ ಅವರ ಅಮೃತ ಹಸ್ತದಿಂದ ಹೊಸವರ್ಷದ ಆರಂಭದಲ್ಲಿ “ಗಂಧದ ಗುಡಿಯಲ್ಲಿ ಜನ್ಮೋತ್ಸವ” ಅರ್ಜುನನ ಹಾಡಿಗೆ ಚಾಲನೆ ನೀಡಲಾಗಿದೆ.

ಈ ವೇಳೆ ನಟ ಹಾಗೂ ನಿರ್ಮಾಪಕರಾದ ಲಕ್ಷ್ಮೀಪತಿ ಬಾಲಾಜಿ, ಸಹ ನಿರ್ಮಾಪಕರಾದ ಚಲುವರಾಜ್ ಎನ್. ಹಾಗೂ ಮುರುಳಿಧರ್ ತಿಪ್ಪುರ್, ನಿರ್ದೇಶಕ ರವಿಶಂಕರನಾಗ್, ಆನಂದ ಸಿಂಗ್, ಕವಿತಸಿಂಗ್, ಭಜರಂಗಿ ಉಮೇಶ್ ಮುಂತಾದವರು ಉಪಸ್ಥಿತರಿದ್ದರು. ಇನ್ನು ಹೆಸರೇ ಸೂಚಿಸುವಂತೆ ಮಾವುತ ಹಾಗೂ ಆನೆಯ ಭಾಂದವ್ಯದ ಕಾಡಿನ ಕಥಾ ಹಂದರವುಳ್ಳ ಚಿತ್ರ. ಚಿತ್ರಕ್ಕೆ ಲಕ್ಷ್ಮೀಪತಿ ಬಾಲಾಜಿ ಬಂಡವಾಳ ಹಾಕುವುದರೊಂಧಿಗೆ ನಾಯಕ ನಟರಾಗಿ ಅಭಿನಯಿಸಿದ್ದಾರೆ. ಸಹ ನಿರ್ಮಾಪಕರಾಗಿ ಮರುಳಿಧರ ತಿಪ್ಪುರ್, ಚಲುವರಾಜ್ ಎನ್ ಸಾಥ್ ಕೊಟ್ಟಿದ್ದಾರೆ.

ರವಿಶಂಕರನಾಗ್ ಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಭಾಷಣೇ, ಸಾಹಿತ್ಯ ಬರೆದು ನಿರ್ದೇಶನ ಹೊಣೆ ಹೊತ್ತಿದ್ದಾರೆ. ಛಾಯಾಗ್ರಹಣ ವಿನಸ್ ಮೂರ್ತಿ, ವಿನುಮನಸು ಸಂಗೀತ, ರವಿವರ್ಮ ಹಿನ್ನೆಲೆ ಸಂಗೀತ, ವೆಂಕಿ ಯುಡಿವಿ ಸಂಕಲನ, ಕಮಲ್ ಗೋಯಲ್ ಡಿಐ, ಅಕ್ಷಯ್ ಅವರ ಸಿಜಿಕಾರ್ಯ, ಥ್ರಿಲ್ಲರ್ ಮಂಜು ಸಾಹಸ, ಪಿಆರ್ ಓ ಸುಧೀಂದ್ರ ವೆಂಕಟೇಶ, ಡಾ.ಪ್ರಭು ಗಂಜಿಹಾಳ, ಡಾ.ವೀರೇಶ ಹಂಡಿಗಿ ಅವರಾಗಿದ್ದಾರೆ. ಚಿತ್ರದ ತಾರಾಬಳಗದಲ್ಲಿ ಲಕ್ಷ್ಮೀಪತಿ ಬಾಲಾಜಿ, ಮಹಾಲಕ್ಷ್ಮಿ , ದಿವ್ಯಶ್ರೀ, ಥ್ರಿಲ್ಲರ್ ಮಂಜು, ಪದ್ಮಾವಾಸಂತಿ, ಬಲರಾಜವಾಡಿ, ಲಯ ಕೋಕಿಲ, ನಂಜು ಸಿದ್ದಪ್ಪ, ಕೈಲಾಶ್ ಕುಟ್ಟಪ್ಪ, ಮೈಸೂರ್ ಮಂಜುಳ ಮೊದಲಾದವರು ಅಭಿನಯಿಸಿದ್ದಾರೆ.









