ಕೊಡಗಿನಲ್ಲಿ ಕಾಫಿ ಕೊಯ್ಲು ಮಾಡಿ ಸಂಭ್ರಮಿಸಿದ ಪತ್ರಕರ್ತರು.. ಬಹುಮಾನ ಗೆದ್ದಿದ್ದು ಯಾರು?
ಪಳೆಯಂಡ ಪಾರ್ಥಚಿಣ್ಣಪ್ಪ ಹಾಗೂ ಮಂಡೇಡ ಅಶೋಕ್ ಜೋಡಿಗೆ ಪ್ರಥಮ ಸ್ಥಾನ

ಮಡಿಕೇರಿ: ಸದಾ ಸುದ್ದಿ ಹಿಂದೆ ಬೀಳುತ್ತಿದ್ದ ಪತ್ರಕರ್ತರಿಂದುಕಾಫಿಕೊಯ್ಲಿನಲ್ಲಿ ತೊಡಗಿಸಿಕೊಂಡು ಸಂಭ್ರಮಿಸಿದರು. ತಾ ಮುಂದು ನಾ ಮುಂದುಎನ್ನುತ್ತ ಕೆಜಿಗಟ್ಟಲೇ ಕಾಫಿ ಕುಯ್ದು ಬಹುಮಾನಕ್ಕಾಗಿ ತೀವ್ರ ಪೈಪೋಟಿಯೊಡ್ಡಿದರು.
ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಕುಟ್ಟಂದಿ ಬಳಿಯ ಚೇರಂಡ ಜಗನ್ ಅವರ ತೋಟದಲ್ಲಿ ಪತ್ರಕರ್ತರಿಗಾಗಿ ಕಾಫಿ ಕೊಯ್ಲು ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಬೆಳಗ್ಗಿನ ವೇಳೆಯಲ್ಲಿ ಕಾರ್ಮಿಕರ ರೀತಿಯಲ್ಲಿಯೇ ತೋಟಕ್ಕೆ ಆಗಮಿಸಿದ ಪತ್ರಕರ್ತರು ಶಿಸ್ತುಬದ್ಧವಾಗಿ ಕೆಲಸ ಆರಂಭಿಸಿದರು. ಅರ್ಧ ಗಂಟೆಗಳ ಸಮಯವನ್ನು ಕಾಫಿ ಕೊಯ್ಲಿಗಾಗಿ ನೀಡಲಾಯಿತು. ತಲಾ 2ಪತ್ರಕರ್ತರಿರುವ 8 ತಂಡಗಳು ಸ್ಪರ್ಧೆಯಲ್ಲಿ ಪಾಲ್ಗೊಂಡವು.

ಕೃಷಿ ಸಂಬಂಧಿತ ವರದಿಗಳ ಮೂಲಕ ರೈತರ ಸಮಸ್ಯೆಗಳನ್ನು ಜನರಿಗೆ ಮುಟ್ಟಿಸುತ್ತಿದ್ದ ಪತ್ರಕರ್ತರು ಸ್ವತಃ ಕಾರ್ಮಿಕರು, ಬೆಳೆಗಾರರ ಅನುಭವಿಸುವ ಸಂಕಷ್ಟಗಳನ್ನು ಕಾಫಿ ಕೊಯ್ಲು ಮೂಲಕ ತಿಳಿದುಕೊಳ್ಳುವ ಪ್ರಯತ್ನ ಮಾಡಿದರು.
ಮುಖ್ಯಮಂತ್ರಿ ಕಾನೂನು ಸಲಹೆಗಾರ, ವೀರಾಜಪೇಟೆ ಶಾಸಕ ಎ.ಎಸ್. ಪೊನ್ನಣ್ಣ ಸ್ಪರ್ಧೆಯನ್ನು ಕಾಫಿಕೊಯ್ಲು ಮಾಡುವ ಮೂಲಕ ಉದ್ಘಾಟಿಸಿ ಮಾತನಾಡಿ, ಇದು ಕಾಫಿ ಕೊಯ್ಲು ಸಮಯ. ಬೆಳೆಗಾರು ಇದರಲ್ಲಿ ತೊಡಗಿಸಿ ಕೊಂಡಿದ್ದಾರೆ. ಜಿಲ್ಲೆಯ ರೈತರಿಗೆ ಉತ್ತಮ ಫಸಲು ಹಾಗೂ ಬೆಲೆ ದೊರೆಯಲಿ. ಕಾಫಿದರ ಹೆಚ್ಚಾಗಿದೆ. ಇದು ಹೀಗೆ ಮುಂದುವರೆಯಲಿ. ಬ್ರೆಜಿಲ್ ಭಾಗದಲ್ಲಿ ಕಾಫಿ ಕೃಷಿ ಚೇತರಿಕೆ ಕಾಣಲು ಇನ್ನೂ ಕೆಲವು ವರ್ಷಗಳು ಬೇಕಾಗಿದೆ. ಭಾರತೀಯ ಮಾರುಕಟ್ಟೆಗೆ ಮತ್ತಷ್ಟು ಉತ್ತೇಜನ ಸಿಗುವ ನಿರೀಕ್ಷೆಯಿದೆ ಎಂದರು.
ಆ ನಂತರ ಕುಟ್ಟಂದಿ ಬಳಿಯ ಇನಿಕಾ ರೆಸಾರ್ಟ್‌ನಲ್ಲಿ ಬಹುಮಾನ ವಿತರಣಾ ಸಮಾರಂಭ ನಡೆಯಿತು. ಸ್ಪರ್ಧೆಯಲ್ಲಿ 40.850 ಕೆಜಿ ಕಾಫಿ ಕೊಯ್ಲು ಮಾಡಿದ ಪಳೆಯಂಡ ಪಾರ್ಥಚಿಣ್ಣಪ್ಪ ಹಾಗೂ ಮಂಡೇಡ ಅಶೋಕ್ ಜೋಡಿ ಪ್ರಥಮ ಸ್ಥಾನ ಪಡೆದು ಒಟ್ಟು ರೂ.10ಸಾವಿರ ಬಹುಮಾನ ಗಳಿಸಿಕೊಂಡಿತು.

ಅಜ್ಜಮಾಡ ರಮೇಶ್ ಕುಟ್ಟಪ್ಪ ಹಾಗೂ ಸುನಿಲ್ ಪೊನ್ನೇಟಿ, ಬಾಚರಣಿಯಂಡ ಅನು ಕಾರ್ಯಪ್ಪ ಹಾಗೂ ರಿಜ್ವಾನ್ ಹುಸೇನ್‌ತಂಡ 35.800 ಕೆಜಿ ಕಾಫಿ ಕೊಯ್ಲು ಮಾಡಿ ಸಮಬಲ ಸಾಧಿಸಿದ ಹಿನ್ನೆಲೆ ದ್ವಿತೀಯ ಬಹುಮಾನವಾಗಿ ಉಭಯ ತಂಡಗಳಿಗೆ ಒಟ್ಟು ರೂ. 7,500 ನಗದು ಬಹುಮಾನ ನೀಡಲಾಯಿತು. ಸಮಾಧಾನಕರ ಬಹುಮಾನಗಳನ್ನು ಶಿವಕುಮಾರ್-ದಿವಾಕರ್‌ಜಾಕಿ (33 ಕೆಜಿ), ವಿಶ್ವ-ಚಂದ್ರಮೋಹನ್ (28 ಕೆಜಿ), ಪ್ರಭುದೇವ್-ವಾಸು (26 ಕೆಜಿ), ತೇಜಸ್-ಪುತ್ತಂ ಪ್ರದೀಪ್ (25 ಕೆಜಿ), ಚಿತನ್-ವಿನೋದ್ (21 ಕೆಜಿ) ಪಡೆದುಕೊಂಡರು.
ಬಹುಮಾನ ವಿತರಣಾ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಬಿ.ಶೆಟ್ಟಿಗೇರಿ ಗ್ರಾ.ಪಂ. ಅಧ್ಯಕ್ಷ ಕೊಲ್ಲೀರ ಬೋಪಣ್ಣ ಅವರು, ಕಾರ್ಯನಿರತ ಪತ್ರಕರ್ತರ ಸಂಘದಿಂದ ಕಾಫಿಕೊಯ್ಲು ಕಾರ್ಯಕ್ರಮ ಆಯೋಜಿಸಿರುವುದು ಶ್ಲಾಘನೀಯ, ಈ ಮೂಲಕ ರೈತರ ನೋವು-ನಲಿವು ಪತ್ರಕರ್ತರು ತಿಳಿದುಕೊಂಡಂತಾಗಿದೆ. ಕೊಡಗಿನ ಪತ್ರಕರ್ತರು ಅತ್ಯಂತ ಬದ್ಧತೆಯಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ಜಿಲ್ಲೆಯ ಜ್ವಲಂತ ಸಮಸ್ಯೆ ಪರಿಹರಿಸುವಲ್ಲಿಯೂ ಪತ್ರಕರ್ತರ ಪಾತ್ರ ದೊಡ್ಡದಿದೆ ಎಂದರು.
ತಾ.ಪಂ. ಮಾಜಿ ಅಧ್ಯಕ್ಷ ನಾಳಿಯಮಂಡ ಉಮೇಶ್‌ಕೇಚಮಯ್ಯ ಮಾತನಾಡಿ, ನ್ಯಾಯಾಂಗ, ಶಾಸಕಾಂಗ ಹಾಗೂ ಕಾರ್ಯಾಂಗದೊಂದಿಗೆ ಪತ್ರಿಕಾಂಗ ಅತ್ಯಂತ ಮಹತ್ತರ ಜವಾಬ್ದಾರಿಯನ್ನು ಹೊಂದಿದೆ. ಪತ್ರಿಕೆಗಳಲ್ಲಿ ಕೃಷಿ ಸಂಬಂಧಿತ ವಿಶೇಷ ಪುಟಗಳ ಮೂಲಕ ರೈತರಿಗೆ ಸಹಾಯವಾಗುತ್ತಿದೆ. ಮಾಧ್ಯಮಗಳು ರೈತರಿಗೆ ನೆರವಾಗುತ್ತಿದೆ ಎಂದು ಅಭಿಪ್ರಾಯಿಸಿದ ಅವರು, ಸದಾ ಜಂಜಾಟದಲ್ಲಿರುವ ಪತ್ರಕರ್ತರಿಗೆ ಈ ರೀತಿ ಕಾರ್ಯಕ್ರಮ ಮನೋಲ್ಲಾಸ ನೀಡುತ್ತದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬಾಚರಣಿಯಂಡ ಅನು ಕಾರ್ಯಪ್ಪ, ಈ ಮೊದಲು ಸಂಘದ ವತಿಯಿಂದ ಕಾಫಿ ಕೊಯ್ಲು ಕಾರ್ಯಕ್ರಮ ನಡೆಯುತ್ತಿತ್ತು. ಕಾರಣಾಂತರಗಳಿಂದ ಸ್ಥಗಿತಗೊಂಡಿತ್ತು. ಇದೀಗ ಮರು ಆರಂಭವಾಗಿದೆ. ಇದರಿಂದ ರೈತರು ಅನುಭವಿಸುವ ಸಂಕಷ್ಟ ಪತ್ರಕರ್ತರಿಗೆ ಅರಿವಾಗುತ್ತದೆ ಎಂದರು.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಉಪಾಧ್ಯಕ್ಷ ಅಜ್ಜಮಾಡ ರಮೇಶ್ ಕುಟ್ಟಪ್ಪ, ರಾಜ್ಯ ನಿರ್ದೇಶಕಿ ಬಿ.ಆರ್.ಸವಿತಾರೈ ಮಾತನಾಡಿದರು. ವೇದಿಕೆಯಲ್ಲಿ ಕೊಡಗು ಪ್ರೆಸ್‌ಕ್ಲಬ್‌ಅಧ್ಯಕ್ಷ ಬೊಳ್ಳಜಿರ ಅಯ್ಯಪ್ಪ, ವೀರಾಜಪೇಟೆ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ರೆಜಿತ್ ಕುಮಾರ್ ಗುಹ್ಯ ಉಪಸ್ಥಿತರಿದ್ದರು. ಪ್ರಧಾನ ಕಾರ್ಯದರ್ಶಿ ಸ್ವಾಗತಿಸಿ, ನಿರೂಪಿಸಿದರು. ಖಜಾಂಚಿ ಸುನಿಲ್ ಪೊನ್ನೇಟಿ ವಂದಿಸಿದರು.







