Crime

ಮೈಸೂರಿನಲ್ಲಿ ಡ್ರಗ್ಸ್ ವ್ಯಸನಿಗಳ ಹಾವಳಿ… ಕರ್ತವ್ಯಕ್ಕೆ ತೆರಳುತ್ತಿದ್ದ  ಕಾನ್ಸ್‌ಟೇಬಲ್ ಮೇಲೆ ಹಲ್ಲೆ

ಮೈಸೂರು: ನಗರದಲ್ಲಿ ಡ್ರಗ್ಸ್ ವ್ಯಸನಿಗಳ ಹಾವಳಿ ಹೆಚ್ಚಾಗುತ್ತಿದ್ದು, ಈ ಹಿಂದೆ ಇಲ್ಲಿಯೇ ಡ್ರಗ್ಸ್ ತಯಾರಿಸುತ್ತಿದ್ದ ಪ್ರಕರಣ ಬೆಳಕಿಗೆ ಬಂದಿತ್ತು. ಪೊಲೀಸರು ಎಲ್ಲ ರೀತಿಯ ಕ್ರಮ ಕೈಗೊಂಡಿದ್ದರೂ ಅದು ನಿಂತಂತೆ ಕಾಣುತ್ತಿಲ್ಲ. ಏಕೆಂದರೆ ಡ್ರಗ್ಸ್ ವ್ಯಸನಿಗಳು ಎನ್ನಲಾದ ನಾಲ್ವರು ಯುವಕರು ಪೊಲೀಸ್ ಕಾನ್‌ಸ್ಟೇಬಲ್ ಮೇಲೆ ಹಲ್ಲೆ ನಡೆಸಿ ದರೋಡೆ ಮಾಡಿದ್ದಾರೆ.

ಈ ಘಟನೆ ಮೈಸೂರು ಉತ್ತರ ಪೂರ್ವ ಭಾಗದ ಎನ್.ಆರ್.ಮೊಹಲ್ಲಾ ವ್ಯಾಪ್ತಿಯ ರಾಜೀವನಗರ ಮುಖ್ಯ ರಸ್ತೆಗೆ ಸಂಪರ್ಕಿಸುವ ರಸ್ತೆಯ ಸಮೀಪವೇ ನಡೆದಿದ್ದು, ಜನ ಭಯಭೀತರಾಗುವಂತೆ ಮಾಡಿದೆ. ನಾಲ್ವರು ಯುವಕರು ಕರ್ತವ್ಯಕ್ಕೆ ತೆರಳುತ್ತಿದ್ದ ಪೊಲೀಸ್ ಕಾನ್‌ಸ್ಟೇಬಲ್ ಮೇಲೆ ಹಲ್ಲೆ ನಡೆಸಿ ಹಣ ಹಾಗೂ ಮೊಬೈಲ್ ದೋಚಿ ಪರಾರಿಯಾಗಿದ್ದಾರೆ. ಗಾಯಗೊಂಡ ಪೊಲೀಸ್ ಸಿಬ್ಬಂದಿಯನ್ನು ಸಿ.ಚಂದ್ರಶೇಖರ್ (51) ಎಂದು ಗುರುತಿಸಲಾಗಿದ್ದು, ಅವರು ಉದಯಗಿರಿ ಪೊಲೀಸ್ ಠಾಣೆಯ ವಿಶೇಷ ಶಾಖೆ (ಎಸ್‌ಬಿ)ಗೆ ನಿಯೋಜಿತರಾಗಿದ್ದಾರೆ.

ಕೆಸರೆ ನಿವಾಸಿಯಾಗಿರುವ ಚಂದ್ರಶೇಖರ್ ಬುಧವಾರ  ಬೆಳಿಗ್ಗೆ ಸುಮಾರು 10 ಗಂಟೆಗೆ ತಮ್ಮ ಮೋಟಾರ್ ಸೈಕಲ್‌ನಲ್ಲಿ ಕರ್ತವ್ಯಕ್ಕೆ ತೆರಳುತ್ತಿದ್ದಾಗ, ಅಂಗಡಿಯೊಂದರ ಹಿಂದೆ ನಿಂತಿದ್ದ ಯುವಕರ ಗುಂಪನ್ನು ಗಮನಿಸಿದ್ದಾರೆ. ಯುವಕರು ಅಸ್ಪಷ್ಟವಾಗಿ ಮಾತನಾಡುತ್ತಿದ್ದರಿಂದ ಡ್ರಗ್ಸ್ ಸೇವನೆಯಲ್ಲಿದ್ದಾರೆಂದು ಶಂಕಿಸಿ ಪ್ರಶ್ನಿಸಿದಾಗ, ಮಾತಿನ ಚಕಮಕಿ ಉಂಟಾಗಿ ಸಾರ್ವಜನಿಕರ ಎದುರಲ್ಲೇ ಜಗಳಕ್ಕೆ ತಿರುಗಿದೆ.

ಘರ್ಷಣೆಯ ವೇಳೆ, ಪೊಲೀಸ್ ಎಂದು ತಮ್ಮನ್ನು ಪರಿಚಯಿಸಿಕೊಂಡಿದ್ದರೂ ಸಹ, ಆರೋಪಿಗಳಲ್ಲೊಬ್ಬರು ಕಲ್ಲಿನಿಂದ ಚಂದ್ರಶೇಖರ್ ಮೇಲೆ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ಈ ಸಂದರ್ಭ ಮೂವರು ಆರೋಪಿಗಳು ಅವರ ಬಳಿ ಇದ್ದ 500 ರೂ. ನಗದು ಹಾಗೂ ಮೊಬೈಲ್ ಫೋನ್ ದೋಚಿ ಪರಾರಿಯಾಗಿದ್ದಾರೆ. ಚಂದ್ರಶೇಖರ್ ಅವರು ಧೈರ್ಯ ಪ್ರದರ್ಶಿಸಿ ಒಬ್ಬ ಆರೋಪಿ ಹಿಡಿದುಕೊಂಡಿದ್ದು, ಆತನನ್ನು ಕಾರ್ತಿಕ್ ಎಂದು ಗುರುತಿಸಲಾಗಿದೆ. ಕಾರ್ತಿಕ್‌ನನ್ನು ಎನ್.ಆರ್.ಪೊಲೀಸ್ ಠಾಣೆಗೆ ಕರೆತಂದು ವಿಚಾರಣೆ ನಡೆಸಿದಾಗ, ಆತ ತನ್ನ ಸಹಚರರಾದ ಅಮೋಘ, ವಿಜಿ ಮತ್ತು ಪೀಪಿ ಎಂಬುವರ ಹೆಸರುಗಳನ್ನು ಬಾಯ್ಬಿಟ್ಟಿದ್ದಾನೆ. ಉಳಿದ ಮೂವರು ಆರೋಪಿಗಳು ತಲೆಮರೆಸಿಕೊಂಡಿದ್ದಾರೆ.

ಘಟನಾ ಸ್ಥಳಕ್ಕೆ ನರಸಿಂಹರಾಜ ಉಪವಿಭಾಗದ ಎಸಿಪಿ ಕೆ.ಟಿ.ಮ್ಯಾಥ್ಯೂ ಥಾಮಸ್ ಹಾಗೂ ಎನ್.ಆರ್ ಠಾಣೆಯ ಇನ್ಸ್‌ಪೆಕ್ಟರ್ ಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರಕರಣ ಸಂಬಂಧ ತನಿಖೆ ಮುಂದುವರಿದಿದೆ.

admin
the authoradmin

ನಿಮ್ಮದೊಂದು ಉತ್ತರ

Translate to any language you want