LatestMysore

ರಂಗ ಭೂಮಿ ಕಲಾವಿದ ಹುಲ್ಲಹಳ್ಳಿ ಪಾರ್ವತಪ್ಪ ಮುಳ್ಳೂರುಗೆ ಅಭಿನಂದನಾ ಸಮಾರಂಭ… ಕಲ್ಮಳ್ಳಿ ನಟರಾಜು ಹೇಳಿದ್ದೇನು?

ಮೈಸೂರು: ಹಿರಿಯ ರಂಗ ಭೂಮಿ ಕಲಾವಿದರಾದ ಹುಲ್ಲಹಳ್ಳಿ ಪಾರ್ವತಪ್ಪ ಮುಳ್ಳೂರು ಅವರು ತಮ್ಮ ಮನೋಜ್ಞ ಅಭಿನಯದಿಂದ ಹಳೇ ಮೈಸೂರು ಭಾಗ ಸೇರಿದಂತೆ ರಾಜ್ಯದಲ್ಲಿ ಹೆಸರುವಾಸಿಯಾಗಿದ್ದಾರೆ ಇಂತಹ ಹಿರಿಯ ಕಲಾವಿದರನ್ನು ರಾಜ್ಯ ಸರ್ಕಾರ ಗುರುತಿಸಿ ಗೌರವಿಸದಿರುವುದು ಬೇಸರದ ಸಂಗತಿಯಾಗಿದೆ ಎಂದು ಶ್ರೀ ಶಿವರಾತ್ರಿ ರಾಜೇಂದ್ರ ಕಲಾ ಬಳಗದ ಸಂಸ್ಥಾಪಕ ಅಧ್ಯಕ್ಷರಾದ ಕಲ್ಮಳ್ಳಿ ನಟರಾಜು ಹೇಳಿದ್ದಾರೆ.
ಮೈಸೂರಿನ ಮಡಿವಾಳಸ್ವಾಮಿ ಮಠದಲ್ಲಿ ಗದ್ದಿಗೆ ಆವರಣದಲ್ಲಿ ಜಗದ್ಗುರು ಶ್ರೀ ಶಿವರಾತ್ರಿ ರಾಜೇಂದ್ರ ಕಲಾ ಬಳಗ ಮೈಸೂರು ವತಿಯಿಂದ ಮೈಸೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ನ ಮೈಸೂರು ರತ್ನ ಪ್ರಶಸ್ತಿ ಪುರಸ್ಕೃತ ಹುಲ್ಲಹಳ್ಳಿ ಪಾರ್ವತಪ್ಪ ಮುಳ್ಳೂರು ಅವರಿಗೆ ಏರ್ಪಡಿಸಲಾಗಿದ್ದ ಅಭಿನಂದನಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ನಾನು ಕಂಡಂತೆ ಕಳೆದ ಮೂರು ದಶಕಗಳಿಂದಲೂ ನಿರಂತರವಾಗಿ ರಂಗ ಭೂಮಿ ಕಲಾವಿದರಾಗಿ ಮೈಸೂರು, ಚಾಮರಾಜನಗರ, ಮಂಡ್ಯ, ರಾಮನಗರ, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ಪ್ರದರ್ಶನಗೊಂಡಿರುವ ಪೌರಾಣಿಕ ನಾಟಕಗಳಲ್ಲಿ ಅಭಿನಯಿಸಿದ್ದು, ಇವರ ನಟನೆಗೆ ಸಾವಿರಾರು ರಂಗ ಭೂಮಿ ಪ್ರೇಕ್ಷಕರು ಪ್ರಭಾವಿತಗೊಂಡಿದ್ದಾರೆ. ಅನೇಕ ರಂಗ ಭೂಮಿ ಪುರಸ್ಕಾರಗಳು ಇವರಿಗೆ ಒಲಿದು ಬಂದಿವೆ. ಯಾವುದಾದರೂ ಪೌರಾಣಿಕ ನಾಟಕ ಪ್ರದರ್ಶನ ಇದೆ ಎಂದರೆ ಹುಲ್ಲಹಳ್ಳಿ ಪಾರ್ವತಪ್ಪ ಇದ್ದಾರೆಯೇ ಎಂದು ಕೇಳಿ ತಿಳಿದು ಕೊಂಡು ಬಿಡುವು ಮಾಡಿಕೊಂಡು ನಾಟಕ ನೋಡುವ ಗ್ರಾಮೀಣ ಜನರನ್ನು ನಾವು ನೋಡಬಹುದಾಗಿದೆ.


ದಕ್ಷಯಜ್ಞ ಪೌರಾಣಿಕ ನಾಟಕದ ಭೃಗು ಮುನಿ ಪಾತ್ರ ಅವರಿಗೆ ವಿಶೇಷ ಹೆಸರು ತಂದು ಕೊಟ್ಟಿರುವ ಪಾತ್ರವಾಗಿದ್ದು 100 ಕ್ಕಿಂತಲೂ ಹೆಚ್ಚು ನಾಟಕಗಳಲ್ಲಿ ಒಂದೇ ಪಾತ್ರದಲ್ಲಿ ಅಭಿನಯಿಸುವುದು ಅಷ್ಟು ಸುಲಭ ಮಾತಲ್ಲ. ಇಂತಹ ಹಿರಿಯ ಕಲಾವಿದರನ್ನು ಇನ್ನೂ ರಾಜ್ಯ ಸರ್ಕಾರ ಗುರುತಿಸಿ ಗೌರವಿಸದಿರುವುದು ನೋವಿನ ಸಂಗತಿಯಾಗಿದೆ ಮುಂದಿನ ವರ್ಷವಾದರೂ ರಾಜ್ಯೋತ್ಸವ ಪ್ರಶಸ್ತಿ ಅವರಿಗೆ ಬರುವಂತಾಗಲಿ ಎಂದು ಆಶಿಸಿದರು.
ಇತ್ತೀಚೆಗೆ ಮೈಸೂರಿನಲ್ಲಿ ಸ್ಥಾಪನೆಯಾದ ನಮ್ಮ ರಾಜೇಂದ್ರ ಕಲಾ ಬಳಗ ಬಹು ಬೇಗ ಪ್ರಭು ಲಿಂಗ ಲೀಲೆ ನಾಟಕದ ಮೂಲಕ ಜನ ಮನ್ನಣೆ ಗಳಿಸಿರುವುದು ಹೆಮ್ಮೆಯ ಸಂಗತಿ. ನಮ್ಮೊಂದಿಗೆ ಶ್ರೀ ಪಾರ್ವತಪ್ಪ ಕಲಿ ಪಾತ್ರದಲ್ಲಿ ನಟಿಸಿರುವುದು ಸಂತೋಷದ ವಿಚಾರವಾಗಿದೆ. ಇತ್ತೀಚೆಗೆ ಗುಂಡ್ಲುಪೇಟೆ ತಾಲೂಕಿನ ಹಾಲಹಳ್ಳಿ ಗ್ರಾಮದಲ್ಲಿ ನಡೆದ ನಾಟಕ ಪ್ರದರ್ಶನದ ನಂತರ ಇದೇ ತಿಂಗಳು ಸುತ್ತೂರು ಜಾತ್ರಾ ಮಹೋತ್ಸವದಲ್ಲಿಯೂ ಜ.18ನೇ ತಾರೀಕು ಪ್ರದರ್ಶನಗೊಳ್ಳಲಿದೆ.
ಮುಂದಿನ ತಿಂಗಳು ಚಾಮರಾಜನಗರ ತಾಲೂಕು ಕೊತ್ತಲವಾಡಿ ಯಲ್ಲಿಯೂ ಮಾರಮ್ಮನ ಜಾತ್ರೆ ನಿಮಿತ್ತ ಪ್ರದರ್ಶನ ನೀಡುವಂತೆ ಅಲ್ಲಿನ ಮುಖಂಡರು ಸುತ್ತೂರು ಶ್ರೀಗಳನ್ನು ಭೇಟಿ ಮಾಡಿ ಮನವಿ ಮಾಡಿದ್ದಾರೆ. ಮಂಡ್ಯದ ಸುತ್ತಮುತ್ತಲ ಹಳ್ಳಿಗಳಿಂದ ಕರೆ ಮಾಡಿ ಬಂದು ಪ್ರದರ್ಶಿಸುವಂತೆ ಕೇಳಿ ಕೊಂಡಿರುವುದನ್ನು ನೋಡಿದರೆ ಕಲಾವಿದರಲ್ಲಿ ಪಾತ್ರ ಗಳಿಗೆ ಜೀವ ತುಂಬುವ ಪ್ರತಿಭೆ ಇದ್ದರೆ ಅವಕಾಶಗಳಿಗೆ ಕೊರತೆ ಇಲ್ಲ. ಯಾವ ಆಧುನಿಕ ಸಿನಿಮಾ ಧಾರಾವಾಹಿಗಳನ್ನು ಸರಿ ಗಟ್ಟುವ ಸಾಮರ್ಥ್ಯ ರಂಗ ಭೂಮಿ ಕಲೆಗಿದೆ ಎನ್ನುವುದನ್ನು ನಮ್ಮ ಕಲಾ ಬಳಗ ನಿರೂಪಿಸಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಪದಾಧಿಕಾರಿ ಸಮಿತಿಯ ಪರಮೇಶ್ ಮಾಸ್ಟರ್, ಕಲಾವಿದರಾದ ಮಂಜಣ್ಣ, ಬಾನಲ್ಲಿ ಸಂತೋಷ, ಬಾಗಲಿ ಮಹೇಶ್, ಬೆಳಚಳವಾಡಿ ಶಿವಕುಮಾರ್, ಬೆಳೆಸಲವಾಡಿ ಶಿವಕುಮಾರ್, ಹಡಜನ ಮಹದೇವಸ್ವಾಮಿ, ಮಹೇಶ್ ಗೌಡಗೆರೆ, ಕೊತ್ತಲವಾಡಿ ಸಿದ್ಧರಾಮೇಶ್ ಉಪಸ್ಥಿತರಿದ್ದರು.

admin
the authoradmin

ನಿಮ್ಮದೊಂದು ಉತ್ತರ

Translate to any language you want