News

ಕುವೆಂಪು ಅವರ ಮೈಸೂರಿನ ಉದಯರವಿ ಮನೆ ಸಂಗ್ರಾಹಾಲಯವಾಗಿ ರೂಪುಗೊಳ್ಳಲಿದೆ…

ಕುಶಾಲನಗರ(ರಘುಹೆಬ್ಬಾಲೆ): ಕುವೆಂಪುರವರ ಉದಯರವಿ ಎಂಬ ಮನೆಯನ್ನು ಸಂಗ್ರಹಾಲಯ ಮಾಡುವ ಬಗ್ಗೆ ಚಿಂತನೆ ನಡೆಸಿದ್ದು, ಕುಪ್ಪಳ್ಳಿಯಲ್ಲಿರುವ ಮನೆಯಂತೆ ಮೈಸೂರಿನಲ್ಲಿಯೂ ಕೂಡ ಉದಯರವಿ ಎಂಬ ಕುವೆಂಪುರವರ ಮನೆಯನ್ನು ಸಂಗ್ರಹಾಲಯವನ್ನು ಮಾಡಿ ಅಲ್ಲಿ ಅವರು ಬಳಸುತ್ತಿದ್ದ ಪುಸ್ತಕ ಕೃತಿಗಳ ಪ್ರತಿ ಹಲವಾರು ವಸ್ತುಗಳನ್ನು ಪ್ರದರ್ಶನಕ್ಕೆ ಇಡಲಾಗುತ್ತದೆ. ಇದು 2026 ಡಿಸೆಂಬರ್ 29 ರಂದು ಪ್ರಾರಂಭವಾಗುತ್ತದೆ ಎಂದು ಕುವೆಂಪು ವಿಶ್ವವಿದ್ಯಾನಿಲಯದ ವಿಶ್ರಾಂತ ಕುಲಪತಿಗಳು ಮತ್ತು ಕುವೆಂಪು ಅವರ ಅಳಿಮಯ್ಯ ಡಾ. ಚಿದಾನಂದಗೌಡ ತಿಳಿಸಿದರು.

ಕೊಡಗು ವಿಶ್ವವಿದ್ಯಾಲಯದ ಜ್ಞಾನಕಾವೇರಿ ಆವರಣದ ಹಾರಂಗಿ ಸಭಾಂಗಣದಲ್ಲಿ ಕನ್ನಡಸಿರಿ ಸ್ನೇಹ ಬಳಗ, ಹಾಗೂ ನಾಡಪ್ರಭು ಪತ್ತಿನ ಸಹಕಾರ ಸಂಘ, ಕುಶಾಲನಗರ ಇವರ ಸಂಯುಕ್ತಾಶ್ರಯದಲ್ಲಿ ಜರುಗಿದ ವಿಶ್ವಮಾನವ ಕುವೆಂಪುರವರ ಜನ್ಮೋತ್ಸವ ಮತ್ತು -ಸಮಗ್ರ ಸಾಹಿತ್ಯದ ಕುರಿತು ಒಂದು ದಿನದ ರಾಷ್ಟ್ರೀಯ ಸಮ್ಮೇಳನ ಹಾಗೂ ರಸಪ್ರಶ್ನೆ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ಕುವೆಂಪು ಅವರ ವಿಶ್ವ ಮಾನವ ಸಂದೇಶವನ್ನು ಪಂಪ ಹೇಳಿದಂತೆ ಮಾನವ ಕುಲಂ ತಾನೊಂದೆ ವಲಂ ಎಂಬ ತತ್ವದ ಅಡಿಯಲ್ಲಿ ಜಾತಿ ಧರ್ಮ ಭಾಷೆಗಳ ಬೇಲಿಯನ್ನು ಕಳಚಿ ಪ್ರತಿಯೊಬ್ಬರು ಮನುಷ್ಯನ ಸಂಕುಚಿತ ಮನೋಭಾವದಿಂದ ಹೊರಬರಬೇಕು. ಮಂತ್ರ ಮಾಂಗಲ್ಯ ಪರಿಕಲ್ಪನೆಯು ಕುವೆಂಪುರವರು ಹಿಂದೂ ವಿವಾಹಕ್ಕೆ ನೀಡಿದ ಸರಳ ವಿವಾಹ ಪದ್ಧತಿಯಾಗಿದೆ.

ಇಂದಿನ ಸಮಾಜದಲ್ಲಿ ಪೋಷಕರು ಆಡಂಬರದ ವಿವಾಹಕ್ಕೆ ಸಿಲುಕಿ ತಮ್ಮ ಜೀವನವನ್ನು ಕೇವಲ ವಿವಾಹಕ್ಕೆ ಮಾಡಿದ ಸಾಲವನ್ನು ತೀರಿಸುವುದಕ್ಕೆ ಕಷ್ಟಪಡುತ್ತಿದ್ದಾರೆ. ಅಂತವರಿಗೆ ಈ ಪರಿಕಲ್ಪನೆಯು ಒಂದು ಉತ್ತಮ ವಿಧಾನವಾಗಿದೆ.  ಶ್ರೀ ರಾಮಾಯಣ ದರ್ಶನಂ ಆಧುನಿಕ ಕಾಲದಲ್ಲಿನ ಮಹಾಕಾವ್ಯದ ವೈಶಿಷ್ಟತೆಯು ಮೂಲ ರಾಮಾಯಣಕ್ಕಿಂತ ವಿಭಿನ್ನ ಮತ್ತು ವಿಶೇಷವಾಗಿದೆ. ರಾಮನ ಆದರ್ಶಗಳು ಎದ್ದು ಕಾಣುತ್ತದೆ.  ಹಲವಾರು ವಿಶೇಷತೆಯನ್ನು ಎತ್ತಿ ಹಿಡಿದಿದೆ. ಕುವೆಂಪು ಒಬ್ಬರು ಕಾಡು ಕವಿ. ತಮ್ಮ ಸಾಹಿತ್ಯದಲ್ಲಿ ಕಾಡಿನ ಮೇಲೆ ಇದ್ದಂತಹ ಪ್ರೀತಿಯನ್ನು ಮತ್ತು ಆಸಕ್ತಿಯನ್ನು ತೋರ್ಪಡಿಸಿದ್ದಾರೆ ಎಂದರು.

ಇದೇ ಸಂದರ್ಭದಲ್ಲಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕೊಡಗು ವಿಶ್ವವಿದ್ಯಾಲಯದ ಕುಲಪತಿಗಳಾಗಿರುವ ಪ್ರೊ. ಅಶೋಕ ಸಂಗಪ್ಪ ಆಲೂರ ಅವರು, ಕುವೆಂಪು ಅವರ ಕಾವ್ಯದಲ್ಲಿ ವಿಶ್ವಮಾನವತಾವಾದ, ಆತ್ಮಶೋಧ, ಮನಸ್ಸಿನ ಅಂತರಂಗ, ಪ್ರಕೃತಿ-ಮಾನವ – ದೇವತೆಗಳ ಆಂತರಿಕ ಸಂಬಂಧದ ಸೂಕ್ಷ್ಮತೆ, ಭಾರತೀಯ ದಾರ್ಶನಿಕ ಪರಂಪರೆಯ ಸಂಧಾನಕ್ಕೆ ಅನುವು ಮಾಡಿಕೊಟ್ಟಿರುವುದನ್ನು ಕಾಣಬಹುದಾಗಿದೆ. ಮಾನವತ್ವವೇ ಪರಮ ಧರ್ಮ. ಜಾತಿ-ಧರ್ಮ-ಭಾಷೆಗಳ ಮೀರಿದ ಮಾನವ ಬಾಂಧವ್ಯವೇ ನಿಜವಾದ ಮೌಲ್ಯ ಎಂಬುದನ್ನು ಸಾರಿದರು. ಕುವೆಂಪು ಅವರ ಸಾಹಿತ್ಯವನ್ನು ಕೇವಲ ಮನರಂಜನೆಗಾಗಿ, ಭಾವನಾತ್ಮಕ ಉದ್ಧಾತ್ತತೆಗೆ ಮಾತ್ರ ಸೀಮಿತಗೊಳಿಸದೆ ಮನುಷ್ಯತ್ವದ ವಿಕಾಸ ಸಾಧನವಾಗಿ ಅರ್ಥೈಸುತ್ತದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಕೊಡಗು ವಿಶ್ವವಿದ್ಯಾಲಯದ ಕುಲಸಚಿವರು (ಮೌಲ್ಯಮಾಪನ) ಆದ ಡಾ. ಸುರೇಶ್ ಎಂ., ಕನ್ನಡ ಸಿರಿ ಸ್ನೇಹ ಬಳಗದ ಅಧ್ಯಕ್ಷರಾದ ಲೋಕೇಶ್ ಸಾಗರ್ ಮಾತನಾಡಿದರು. ಕನ್ನಡ ಸಿರಿ ಸ್ನೇಹ ಬಳಗದ ಪದಾಧಿಕಾರಿಗಳು ಮತ್ತು ಸದಸ್ಯರು, ಕೊಡಗು ವಿವಿ ಹಿತರಕ್ಷಣಾ ಬಳಗದ ಪದಾಧಿಕಾರಿಗಳು ಮತ್ತು ಸದಸ್ಯರು, ವಿವಿಧ ವಿಭಾಗಗಳ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ವರ್ಗದವರು, ಸ್ನಾತಕ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಉ.ರಾ. ನಾಗೇಶ್ ನಿರೂಪಿಸಿದರು.

ರಸಪ್ರಶ್ನೆ ಕಾರ್ಯಕ್ರಮ: ಬಹುಮಾನ ವಿತರಣೆ ನಡೆದು, ಮೊದಲ ಸ್ಥಾನದಲ್ಲಿ ಅನಿಕೇತನ ತಂಡವು 9000 ನಗದು ಬಹುಮಾನ ಪಡೆದುಕೊಂಡಿತು. ದ್ವಿತೀಯ ಸ್ಥಾನದಲ್ಲಿ ಕೊಳಲು ತಂಡ 6000 ನಗದು ಬಹುಮಾನ ಪಡೆದರೆ, ತೃತೀಯ ಸ್ಥಾನವನ್ನು ಅಗ್ನಿ ಹಂಸ ತಂಡ 3000 ನಗದು ಬಹುಮಾನ ಪಡೆದುಕೊಂಡಿತು.

admin
the authoradmin

ನಿಮ್ಮದೊಂದು ಉತ್ತರ

Translate to any language you want