ಕೆ.ಆರ್.ನಗರ(ಜಿಟೆಕ್ ಶಂಕರ್): ಎಂಸಿಡಿಸಿಸಿ ಬ್ಯಾಂಕ್ ಅಧ್ಯಕ್ಷರಾಗಿರುವ ದೊಡ್ಡಸ್ವಾಮೇಗೌಡರ ಜನಪ್ರಿಯತೆಯನ್ನು ಸಹಿಸದ ಮಾಜಿ ಸಚಿವ ಸಾ.ರಾ.ಮಹೇಶ್ ಸಾರ್ವಜನಿಕ ವೇದಿಕೆಗಳಲ್ಲಿ ಸಲ್ಲದ ಹೇಳಿಕೆಗಳನ್ನು ನೀಡುತ್ತಿದ್ದು ಇದು ಖಂಡನೀಯ ಎಂದು ಸಾಲಿಗ್ರಾಮ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಉದಯಶಂಕರ್ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ಹಿನಾಯವಾಗಿ ಸೋತ ನಂತರ ಒಂದು ವರ್ಷಗಳ ಕಾಲ ಕ್ಷೇತ್ರಕ್ಕೆ ಕಾಲಿಡದೆ ಮೂರು ಬಾರಿ ಸತತವಾಗಿ ಚುನಾಯಿಸಿದ ಮತದಾರರನ್ನು ಮರೆತು ಅವರನ್ನು ಅಪಮಾನಿಸಿದ ನಿಮಗೆ ಜನಾನುರಾಯಿ ನಾಯಕರಾಗಿರುವ ದೊಡ್ಡಸ್ವಾಮೇಗೌಡರವರ ಬಗ್ಗೆ ಮಾತನಾಡಲು ಯಾವ ನೈತಿಕತೆ ಇದೆ ಎಂದು ಪಟ್ಟಣದ ಕೇಳಿದರು.
ಚುನಾವಣೆಯಲ್ಲಿ ಸೋತು ಅದನ್ನು ಸಕಾರಾತ್ಮಕ ವಾಗಿ ಸ್ವೀಕರಿಸದ ಸಾ.ರಾ.ಮಹೇಶ್ ಮುಂದೆ ಯಾವುದೇ ಕಾರಣಕ್ಕೂ ಮತ್ತೆ ಸ್ಪರ್ಧೆ ಮಾಡುವುದಿಲ್ಲ ಎಂದು ಹೇಳಿಕೊಂಡು ತಿರುಗುತ್ತಿದ್ದರು ಆದರೆ ಈಗ ಮುಂಬರುವ ಚುನಾವಣೆಯಲ್ಲಿ ಸ್ಪರ್ಧೆ ಮಾಡುತ್ತೇನೆ ಎಂದು ಹೇಳುತ್ತಿದ್ದು ಇದು ಅಧಿಕಾರದ ಆಸೆಯೋ ಅಥವಾ ಜನರನ್ನು ದಿಕ್ಕು ತಪ್ಪಿಸುವ ತಂತ್ರವೋ ಎಂದು ಪ್ರಶ್ನಿಸಿದರು.

ಎರಡು ದಿನಗಳ ಹಿಂದೆ ಕೆ.ಆರ್.ನಗರ ಪಟ್ಟಣದಲ್ಲಿ ನಡೆದ ಕುವೆಂಪು ಜಯಂತಿ ಕಾರ್ಯಕ್ರಮದಲ್ಲಿ ತಮ್ಮ ಮಾತಿನ್ನುದ್ದಕ್ಕು ಬರೀ ರಾಜಕೀಯ ವಿಚಾರಗಳನ್ನೆ ಮಾತನಾಡಿರುವ ಮಾಜಿ ಸಚಿವರು ನಾನು ಒಕ್ಕಲಿಗನಾಗಿದ್ದರೂ ಹೆಚ್.ಡಿ.ದೇವೇಗೌಡ, ಕೆಂಪೇಗೌಡ, ಪ್ರತಿಮೆಯನ್ನು ಸ್ಥಾಪಿಸಲಿಲ್ಲ ಎಂದು ಹೇಳಿದ್ದಾರೆ ಮಹಾನುಭಾವರ ಪ್ರತಿಮೆಗಳನ್ನು ಮಾಡುವುದು ಮತ್ತು ಅವರಿಗೆ ಗೌರವ ನೀಡುವುದು ಅವರವರಿಗೆ ಬಿಟ್ಟ ವಿಚಾರ ಆದರೆ ಅದನ್ನೆ ವೈಭವೀಕರಿಸಿ ಒಂದು ಸಮಾಜವನ್ನು ಹೀಯಾಳಿಸುವುದು ಎಷ್ಟು ಸರಿ ಎಂದು ಉದಯಶಂಕರ್ ನುಡಿದರು.
ರಾಷ್ಟ್ರಕವಿ ಕುವೆಂಪು ಅವರ ಭಾವಚಿತ್ರಗಳಿರುವ ಫ್ಲೆಕ್ಸ್ ಗಳ ಮೇಲೆ ಎಂಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ರಾದ ದೊಡ್ಡಸ್ವಾಮೇಗೌಡರ ಪ್ಲೇಕ್ಸ್ ಅಳವಡಿಸಿದ್ದರು ಎಂದು ಅಪಪ್ರಚಾರ ಮಾಡುತ್ತಿರುವ ಅವರ ಹೇಳಿಕೆಯಲ್ಲಿ ಯಾವುದೇ ಹುರುಳಿಲ್ಲ ಎಂದು ಸ್ಪಷ್ಟಪಡಿಸಿದ ಗ್ಯಾರಂಟಿ ಸಮಿತಿ ಅಧ್ಯಕ್ಷರು ಅಧಿಕಾರ ಇದ್ದಾಗ ಯಾರು ದರ್ಪ ತೋರಿಸಿದ್ದಾರೆ ಎಂದು ಕ್ಷೇತ್ರದ ಜನತೆಗೆ ಗೊತ್ತಾಗಿಯೇ ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ಉತ್ತರ ಕೊಟ್ಟಿದ್ದಾರೆ ಎಂದು ವ್ಯಂಗ್ಯವಾಡಿದ ಅವರು ಅಧಿಕಾರ ಕೈಯಲ್ಲಿದ್ದಾಗ ದರ್ಪ ಮತ್ತು ದಬ್ಬಾಳಿಕೆ ಮಾಡುವುದು ನಿಮ್ಮ ಸಂಸ್ಕೃತಿಗೆ ಸರಿ ಹೊಂದುತ್ತದೆಯೇ ಹೋರತು ದೊಡ್ಡಸ್ವಾಮೇಗೌಡರಿಗೆ ಅಲ್ಲ ಎಂದರು.

ನಾನು ಅಧಿಕಾರಕ್ಕಾಗಿ ಆಸೆ ಪಟ್ಟಿದ್ದರೆ ಸಂಸದ ಅಥವಾ ವಿಧಾನ ಪರಿಷತ್ ಸದಸ್ಯನಾಗಿ ಆಯ್ಕೆಯಾಗಿರುತ್ತಿದೆ ಎಂದು ಸಾ.ರಾ.ಮಹೇಶ್ ಹೇಳಿದ್ದಾರೆ ಆದರೆ ಮತ್ತೆ ಈಗ ಸ್ಪರ್ಧೀಸುತ್ತೇನೆ ಎಂದು ಹೇಳಿರುವುದು ದುರಾಸೆಯಿಂದಲ್ಲವೇ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಸರ್ಕಾರದಲ್ಲಿ ನೀವು ಸಚಿವರಾಗಿದ್ದು ಹೇಗೆ ಮತ್ತು ಅದಕ್ಕಿಂತ ಮುಂಚೆ ಪಟ್ಟಿಯಲ್ಲಿ ಯಾರ ಹೆಸರಿತ್ತು ಎಂಬುದನ್ನು ಜನತೆಗೆ ತಿಳಿಸಬೇಕೆಂದು ಸವಾಲು ಹಾಕಿದರು.
ಬೆಮೆಲ್ ನೌಕರರ ಸಹಕಾರ ಸಂಘದಲ್ಲಿ ಅವ್ಯವಹಾರ ಮಾಡಿ ದಬ್ಬಾಳಿಕೆಯಿಂದ ಅಧಿಕಾರ ದುರುಪಯೋಗ ಪಡಿಸಿಕೊಂಡು ದೊಡ್ಡಸ್ವಾಮೇಗೌಡರು ಎಂಸಿಡಿಸಿಸಿ ಬ್ಯಾಂಕ್ ಅಧ್ಯಕ್ಷರಾಗಿದ್ದಾರೆ ಎಂದು ಸುಳ್ಳು ಹೇಳುವುದನ್ನು ಬಿಡಬೇಕೆಂದು ಉದಯಶಂಕರ್ ನಮ್ಮ ನಾಯಕರು ತಪ್ಪು ಮಾಡಿದ್ದರೆ ದೇಶದ ಕಾನೂನು ನ್ಯಾಯಾಲಯ ಗಮನಹರಿಸುತ್ತದೆ ಇದನ್ನು ಅರಿಯದೆ ನೀವು ಮಾಡುತ್ತಿರುವ ಆರೋಪಗಳಿಗೆ ಸ್ಥಳಿಯ ಸಂಸ್ಥೆಗಳ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಲಿದ್ದಾರೆ ಎಂದರು.
ಸುದ್ದಿಗೋಷ್ಠಿಯಲ್ಲಿ ತಾ.ಪಂ.ಮಾಜಿ ಉಪಾಧ್ಯಕ್ಷ ನಟರಾಜು, ಸಾಲಿಗ್ರಾಮ ನಗರ ಕಾಂಗ್ರೆಸ್ ಅಧ್ಯಕ್ಷ ಪ್ರಭಾಕರ್, ಎಪಿಎಂಸಿ ಮಾಜಿ ಉಪಾಧ್ಯಕ್ಷ ಹೆಚ್.ಹೆಚ್.ನಾಗೇಂದ್ರ, ಭೂ ನ್ಯಾಯ ಮಂಡಳಿ ಸಮಿತಿ ಸದಸ್ಯ ಸಣ್ಣರಾಮೇಗೌಡ, ಯುವ ಕಾಂಗ್ರೆಸ್ ಮುಖಂಡ ವೈಎಸ್.ಜಯಂತ್ ಇದ್ದರು.








