ಕಳೆ ಕಟ್ಟುತ್ತಿರುವ ಚುಂಚನಕಟ್ಟೆ ಜಾನುವಾರು ಜಾತ್ರೆ… ಹರಿದು ಬರುತ್ತಿರುವ ಜನಸಾಗರ… ವಹಿವಾಟು ಜೋರು..

ಹೊಸೂರು (ಸಂಘಟನೆ ಮಂಜುನಾಥ್): ದಕ್ಷಿಣ ಭಾರತದಲ್ಲಿಯೇ ತನ್ನದೇ ಆದ ವಿಶೇಷತೆಗಳ ಮೂಲಕ ಗಮನಸೆಳೆಯುತ್ತಾ ಹತ್ತೂರಾಚೆಗೂ ಪಸರಿಸಿ ಜನ ಜಾನುವಾರುಗೆ ಸಂಭ್ರಮನ್ನೀಯುತ್ತಾ ಮುನ್ನಡೆಯುತ್ತಿರುವ ಚುಂಚನಕಟ್ಟೆ ಜಾನುವಾರು ಜಾತ್ರೆ ದಿನದಿಂದ ದಿನಕ್ಕೆ ಕಳೆ ಕಟ್ಟುತ್ತಿದೆ. ಇದೀಗ ಜಾತ್ರೆ ನಡೆಯುತ್ತಿರುವ ಸ್ಥಳಕ್ಕೆ ಹೋಗಿದ್ದೇ ಆದರೆ ಅಲ್ಲಿ ಕಣ್ಣು ಹಾಯಿಸಿದುದ್ದಕ್ಕೂ ಕಾಣುತ್ತಿರುವ ಜಾನುವಾರುಗಳು ಜಾತ್ರೆಯ ಸಡಗರವನ್ನು ಸಾರಿ ಹೇಳುತ್ತಿವೆ.

ಅದರಲ್ಲೂ ರಜಾ ದಿನವಾದ ಭಾನುವಾರ ಜನ ಸಾಗರವೇ ಜಾತ್ರೆಗೆ ಹರಿದು ಬಂದಿತ್ತಲ್ಲದೆ, ಗ್ರಾಮೀಣ ಸಂಸ್ಕೃತಿಯ ಪರಂಪರೆಯ ಜಾನುವಾರು ಜಾತ್ರೆಯ ಸೊಬಗು ಕಣ್ತುಂಬಿಕೊಂಡು ಸೆಲ್ಪಿ ತೆಗೆದುಕೊಂಡು ಸಂಭ್ರಮಿಸುತ್ತಿದ್ದ ದೃಶ್ಯ ಕಂಡು ಬಂದಿತು. ಐತಿಹಾಸಿಕ ಧಾರ್ಮಿಕ ಹಿನ್ನೆಲೆಯ ಚುಂಚನಕಟ್ಟೆ ಜಾನುವಾರು ಜಾತ್ರೆಗೆ ನೂತನ ವರ್ಷದ ಆರಂಭದ ದಿನ ಅರ್ಥಾತ್ ಜನವರಿ 1ರಂದು ಚಾಲನೆ ಸಿಕ್ಕಿದ್ದು, ಅಲ್ಲಿಂದ ಇಲ್ಲಿವರೆಗೂ ಸಡಗರ ಸಂಭ್ರಮದಿಂದಲೇ ನಡೆದುಕೊಂಡು ಬಂದಿದೆ.

ಇದೀಗ ಚುಂಚನಕಟ್ಟೆ ಗ್ರಾಮದಲ್ಲಿ ಜಾತ್ರಾ ಮಹೋತ್ಸವದ ಸಂಭ್ರಮ ಮನೆ ಮಾಡಿದ್ದು, ಹೋರಿ ಮಾಳ, ದಾರಿಯುದ್ದಕ್ಕೂ, ಜೋಡೆತ್ತುಗಳ ಕಲರವ. ಜನಜಂಗುಳಿ ಪಥದ ನಡುವೆ ರಾಜ ಗಾಂಭೀರ್ಯದ ಚಲನವಲನ ನೋಡುಗರನ್ನು ನಿಬ್ಬೆರಗಿಸುವಂತೆ ಮಾಡಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಅದರಲ್ಲೂ ದೇಶಿ ತಳಿಯ ಗೋ ಸಂಪತ್ತುಗಳಿಗೆ ನೂತನ ವಧು ವರರಂತೆ ಸಿಂಗಾರ ಮಾಡಿ, ಬಹು ವರ್ಣದ ಬಟ್ಟೆ ಹೊದಿಕೆಯನ್ನು ಹಾಕಿ. ಮ್ಯೂಸಿಕಲ್ ವಿದ್ಯುತ್ ಬೆಳಗಿನಡಿ ನಗಾರಿ, ಡಿ.ಜೆ, ಮಂಗಳಕರವಾದ್ಯ, ಡ್ಯಾನ್ಸ್, ಸಿಡಿಮದ್ದುಗಳ ಸಿಡಿಸುತ್ತ ಸಾಲು ಸಾಲು ನೂರಾರು ಹಳ್ಳಿಕಾರ್ ಗಳನ್ನು ಸಾವಿರಾರು ಸಂಖ್ಯೆಯ ರೈತರು ಅದ್ದೂರಿ ಮೆರವಣಿಗೆ ಮೂಲಕ ಬರಮಾಡಿಕೊಳ್ಳುತ್ತಿರುವ ದೃಶ್ಯ ಮನಮೋಹಕವಾಗಿದೆ.
ಇನ್ನು ಈ ಜಾನುವಾರುಗಳನ್ನು ರೈತರು ಜತನದಿಂದ ನೋಡಿಕೊಳ್ಳುತ್ತಿದ್ದಾರೆ ಅದು ಹೇಗೆಂದರೆ ಸೊಳ್ಳೆಪರದೆ, ಹುಲ್ಲುಹಾಸು ಹಾಸಿ ಸಿಂಗರಿಸಿದ ವಿಶೇಷ ವೈಭವದ ಚಪ್ಪರದಲ್ಲಿ ಕಟ್ಟಿ ಹಾಕಿ ಹೊಟ್ಟೆ ತುಂಬಾ ಮೇವು ನೀಡಿ ನೋಡಿಕೊಳ್ಳುತ್ತಿದ್ದಾರೆ. ಈ ಸುಂದರ ದೃಶ್ಯವನ್ನು ನೋಡಲು ತಂಡೋಪತಂಡವಾಗಿ ಜನಸಾಗರ ಹರಿದು ಬರುತ್ತಿದ್ದು ಸುಗ್ಗಿಯ ಸಂಭ್ರಮ ಜಾತ್ರೆಯಲ್ಲಿ ಹರಿದಾಡುತ್ತಿದೆ.

ಜಾನುವಾರು ಜಾತ್ರೆಯ ವಿಶೇಷತೆ ಹೇಗಿದೆ ಎಂದರೆ? ಜಾತ್ರೆಯಲ್ಲಿ ಮಂಡ್ಯ, ಹಾಸನ, ಚಾಮರಾಜನಗರ, ಚಿಕ್ಕಮಗಳೂರು, ರಾಮನಗರ, ಮಾಗಡಿ, ತುಮಕೂರು ಸೇರಿದಂತೆ ಹಲವು ಜಿಲ್ಲೆಗಳಿಂದ ಸುಮಾರು 20 ಸಾವಿರಕ್ಕೂ ಅಧಿಕ ಜೋಡೆತ್ತುಗಳು ಬಂದಿದ್ದು, ಸುಮಾರು 50 ಸಾವಿರದಿಂದ 15 ಲಕ್ಷಕ್ಕೂ ಅಧಿಕ ಬೆಲೆ ಬಾಳುವ ರಾಸುಗಳಿದ್ದು ನಿತ್ಯ ಜಾನುವಾರುಗಳನ್ನು ಕೊಳ್ಳುವುದು. ಮಾರಾಟ ಮಾಡುವ ಭರಾಟೆ ಜೋರಾಗಿದ್ದು ನಿತ್ಯ ಕೋಟಿಗೂ ಅಧಿಕ ವ್ಯಾಪಾರ ವಹಿವಾಟು ನಡೆಯುತ್ತಿದೆ.
ಜಾನುವಾರು ಜಾತ್ರೆಗೆ ದೂರದ ಗದಗ, ಹುಬ್ಬಳ್ಳಿ ಧಾರವಾಡ, ಗುಲ್ಬರ್ಗ ವಿಜಯಪುರ, ದಾವಣಗೆರೆ ಜಿಲ್ಲೆಗಳು ಅಲ್ಲದೆ ಆಂಧ್ರ, ಮುಂಬೈ, ಮಹಾರಾಷ್ಟ್ರ, ತಮಿಳುನಾಡು, ಕೇರಳ, ರಾಜ್ಯದಿಂದಲೂ ಚಾನುವಾರುಗಳನ್ನು ಖರೀದಿಸಲು ಬಂದಿರುವ ರೈತರು ಜಾತ್ರೆಯಲ್ಲಿ ಬಿಡಾರ ಹೂಡಿದ್ದಾರೆ. ಜಾತ್ರೆಯಲ್ಲೀಗ ಜಾನುವಾರುಗಳ ಅಲಂಕಾರಿಕ ಹಾಗೂ ಕೃಷಿ ಪರಿಕರಗಳ ವಸ್ತುಗಳು, ಸಿಹಿತಿಂಡಿ, ಸಂಚಾರಿ ಹೋಟೆಲ್, ತಂಪು ಪಾನೀಯ ಸೇರಿದಂತೆ ಮತ್ತಿತರ ಅಂಗಡಿಗಳಲ್ಲಿ ವ್ಯಾಪಾರ ಭರದಿಂದ ಸಾಗಿದೆ.

ಭಾನುವಾರ ರಜಾ ದಿನವಾದ ಹಿನ್ನಲೆಯಲ್ಲಿ ಜಾತ್ರೆಗೆ ಲಕ್ಷಕ್ಕೂ ಅಧಿಕ ಜನರು ದಾಂಗುಡಿಯಿಟ್ಟ ಪರಿಣಾಮ ಕೆ ಆರ್ ನಗರ, ಹೊಸೂರು, ಕಾರ್ಖಾನೆ, ಸಾಲಿಗ್ರಾಮ ಮುಖ್ಯ ರಸ್ತೆ ಸೇರಿದಂತೆ ಬಸವನ ವೃತ್ತದಲ್ಲಿ ಎಲ್ಲೆಂದರಲ್ಲಿ ವಾಹನಗಳ ದಟ್ಟಣೆಯಿಂದ ಸಂಚಾರಕ್ಕೆ ಸಂಚಕಾರವುಂಟಾಗಿ ಸುಮಾರು 2 ಘಂಟೆಗೂ ಹೆಚ್ಚು ಸಮಯ ವಾಹನ ಸವಾರರು ನಿಂತಲ್ಲೇ ನಿಲ್ಲುವಂತಾಯಿತು. ಸಂಚಾರ ಸುಗಮಗೊಳಿಸಲು ಪೊಲೀಸ್ ಸಿಬ್ಬಂದಿಗಳು ಹರಸಾಹಸ ಪಡುವಂತಾಯಿತು.
ಇನ್ನು ಶಾಸಕ ಡಿ. ರವಿಶಂಕರ್ ಅವರ ನಿರ್ದೇಶನದಂತೆ ಜಾತ್ರೆಗೆ ತಾಲೂಕು ಆಡಳಿತ ಸೌಲಭ್ಯ ನೀಡಿದ್ದು ಎರಡು ಕಡೆ 24×7 ತಾತ್ಕಾಲಿಕ ಪಶು ಹಾಗೂ ಸಾರ್ವಜನಿಕ ಆರೋಗ್ಯ ಕೇಂದ್ರ ತೆರೆಯಲಾಗಿದೆ. ಸ್ವಚ್ಛತೆ, ಜಾನುವಾರುಗಳಿಗೆ ಮತ್ತು ಸಾರ್ವಜನಿಕ ಕುಡಿಯುವ ನೀರು, ವಿದ್ಯುತ್ ವ್ಯವಸ್ಥೆ, ಸಿಪಿಐ ಶಶಿಕುಮಾರ್ ನೇತೃತ್ವದಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಹೆಚ್ಚಿನ ಪೊಲೀಸ್ ಸಿಬ್ಬಂದಿಗಳನ್ನು ನಿಯೋಜಿಸಿ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದೆ.

ಜಾತ್ರೆ ಕುರಿತಂತೆ ಅಭಿಪ್ರಾಯ ಹಂಚಿಕೊಂಡಿರುವ ಚಿಕ್ಕಮಗಳೂರಿನ ರೈತ ಜಗದೀಶ್ ಅವರು ಹತ್ತಾರು ವರ್ಷಗಳಿಂದ ಜಾನುವಾರು ಜಾತ್ರೆ ನಾಮಕಾವಸ್ಥೆ ಆಗಿತ್ತು. ಜತೆಗೆ ಜಾತ್ರೆಯಲ್ಲಿ ಜಾನುವಾರು ಕೊರತೆ ಕಂಡು ಕಳವಳ ಕೂಡ ವ್ಯಕ್ತವಾಗಿತ್ತು. ಆದರೆ ಈ ಬಾರಿ ಅತಿ ಹೆಚ್ಚು ಅತ್ಯುತ್ಸಾಹದಿಂದ ರಾಸುಗಳನ್ನು ಕರೆತಂದು ಕಟ್ಟಿರುವುದು ನಿಜಕ್ಕೂ ಜಾತ್ರೆಗೆ ಮೆರುಗು ತಂದಿದೆ ಎಂದು ಹೇಳಿದ್ದಾರೆ.







