Mysore

ಮನೆಮನೆಯ ಬಾಗಿಲು ತಟ್ಟಿದ ವಚನ ಬೆಳಕು… ಇದು ಕೊಳ್ಳೇಗಾಲದಲ್ಲಿ ನಡೆದ ವಚನ ಜಾಗೃತಿ ಯಾತ್ರೆ..!

ವಚನಗಳು ಶಿಲಾಶಾಸನಗಳಲ್ಲ.. ಅವು ಚಲಿಸುವ ಜೀವಂತ ಚಿಂತನೆಗಳು...

ಕೊಳ್ಳೇಗಾಲ: ವಚನವೆಂದರೆ ಕೇವಲ ಪಾಠವಲ್ಲ; ಅದು ಬದುಕಿನ ನುಡಿ, ಮನಸ್ಸಿನ ಮಂತ್ರ. ಈ ತತ್ವವನ್ನು ಜನಮನದೊಳಗೆ ನೆಲೆಯಾಗಿಸುವ ಉದ್ದೇಶದಿಂದ ಶರಣು ವಿಶ್ವವಚನ ಫೌಂಡೇಷನ್ ವತಿಯಿಂದ ಕೊಳ್ಳೇಗಾಲದಲ್ಲಿ “ಮನೆ ಮನೆಗೆ – ಮನ ಮನಗಳಿಗೆ ವಚನ ಸಂದೇಶ’’ ಎಂಬ ಅರ್ಥಪೂರ್ಣ ಅಭಿಯಾನವನ್ನು ಹಮ್ಮಿಕೊಳ್ಳಲಾಯಿತು. ಬಾಗಿಲು ಬಾಗಿಲಿಗೆ ತಲುಪಿದ ಈ ವಚನ ಯಾತ್ರೆ, ಜನರ ಮನದ ಬಾಗಿಲನ್ನೂ ಮೌನವಾಗಿ ತೆರೆದಿತು.

ಕಾರ್ಯಕ್ರಮದ ಕೇಂದ್ರ ಬಿಂದು ಆಗಿದ್ದ ಶರಣು ವಿಶ್ವವಚನ ಫೌಂಡೇಷನ್ ಸಂಸ್ಥಾಪಕರಾದ ವಚನ ಕುಮಾರಸ್ವಾಮಿ ಅವರು, ವಚನಗಳು ಶಿಲಾಶಾಸನಗಳಲ್ಲ; ಅವು ಚಲಿಸುವ ಜೀವಂತ ಚಿಂತನೆಗಳೆಂದು ಅಭಿಪ್ರಾಯಪಟ್ಟರು. ಬಸವಣ್ಣನವರ ವಚನಗಳಲ್ಲಿ ಅಡಗಿರುವ ಕಾಯಕದ ಗೌರವ, ದಾಸೋಹದ ಮಾನವೀಯತೆ ಹಾಗೂ ಸಮಾನತೆಯ ತತ್ವಗಳು ಇಂದಿನ ಕಾಲಘಟ್ಟದಲ್ಲಿಯೂ ಸಮಾಜವನ್ನು ಸರಿದಾರಿಗೆ ನಡೆಸುವ ದೀಪಸ್ತಂಭಗಳಾಗಿವೆ ಎಂದು ಹೇಳಿದರು. ವಚನ ಸಾಹಿತ್ಯವನ್ನು ಮನೆಮನೆಯೊಳಗೆ ತಲುಪಿಸುವುದು ಕೇವಲ ಪ್ರಚಾರವಲ್ಲ, ಅದು ಸಾಮಾಜಿಕ ಹೊಣೆಗಾರಿಕೆಯೆಂದು ತಿಳಿಸಿದರು.

ಅಭಿಯಾನದ ಭಾಗವಾಗಿ ಮನೆಮನೆಗೆ ವಚನ ಪುಸ್ತಕಗಳನ್ನು ವಿತರಿಸಲಾಗಿದ್ದು, ಪ್ರತಿಯೊಂದು ಮನೆಯಲ್ಲೂ ವಚನಗಳ ಅರ್ಥ, ಅವುಗಳನ್ನು ಬದುಕಿನಲ್ಲಿ ಅಳವಡಿಸಿಕೊಳ್ಳುವ ಬಗೆಯನ್ನು ಸರಳವಾಗಿ ವಿವರಿಸಲಾಯಿತು. ವಚನಗಳು ಓದುವ ವಸ್ತುವಲ್ಲ; ಬದುಕುವ ಸಂಸ್ಕೃತಿಯೆಂಬ ಸಂದೇಶ ಎಂಬುದನ್ನು ತಿಳಿಸಿದರು.

ಇದೇ ಸಂದರ್ಭದಲ್ಲಿ ಅಕ್ಕನಬಳಗದ ಸದಸ್ಯರು ವಚನ ಗಾಯನದ ಮೂಲಕ ಶರಣ ಪರಂಪರೆಯ ಶ್ರವ್ಯಸೌಂದರ್ಯವನ್ನು ಉಣಬಡಿಸಿದರು. ನಾದದಲ್ಲಿ ಹರಿದ ವಚನಗಳು ಜನಮನವನ್ನು ಸ್ಪರ್ಶಿಸಿ, ಚಿಂತನೆಯ ಬೆಳಕನ್ನು ಹರಡಿದವು. ಈ ಸೇವೆಗೆ ಕೃತಜ್ಞತೆಯ ಸೂಚಕವಾಗಿ ಅಕ್ಕನಬಳಗದ ಸದಸ್ಯರಿಗೆ ವಚನ ಪುಸ್ತಕಗಳು ಹಾಗೂ ಶರಣು ದಿನದರ್ಶಿಕೆಯನ್ನು ವಿತರಿಸಲಾಯಿತು.

ಕಾರ್ಯಕ್ರಮಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಸ್ಥಳೀಯರು ವಚನ ಸಾಹಿತ್ಯವನ್ನು ಜನಸಾಮಾನ್ಯರ ಬದುಕಿಗೆ ಹತ್ತಿರ ಮಾಡುತ್ತಿರುವ ಶರಣು ವಿಶ್ವವಚನ ಫೌಂಡೇಷನ್‌ನ ಕಾರ್ಯವನ್ನು ಶ್ಲಾಘಿಸಿದರು. ಮೌಲ್ಯಾಧಾರಿತ ಸಮಾಜ ನಿರ್ಮಾಣಕ್ಕೆ ಇಂತಹ ಚಿಂತನಾ ಕಾರ್ಯಕ್ರಮಗಳು ನಿರಂತರವಾಗಬೇಕೆಂಬ ಅಭಿಪ್ರಾಯಗಳು ವ್ಯಕ್ತವಾದವು. ವಚನದ ಬೀಜವನ್ನು ಮನದಲ್ಲಿ ಬಿತ್ತುವ ಈ ಪ್ರಯತ್ನ, ಕೊಳ್ಳೇಗಾಲದ ಮನೆಮನೆಗಳಲ್ಲಿ ಚಿಂತನೆಯ ಚಿಗುರು ಮೂಡಿಸುವ ಮೂಲಕ ಶರಣು ವಿಶ್ವವಚನ ಫೌಂಡೇಷನ್‌ನ ಸಾಮಾಜಿಕ ಬದ್ಧತೆಯನ್ನು ಮತ್ತೊಮ್ಮೆ ಸಾಬೀತುಪಡಿಸಿತು.

ಕಾರ್ಯಕ್ರಮದಲ್ಲಿ ಚಾಮರಾಜನಗರ ಜಿಲ್ಲಾ ಶರಣು ವಿಶ್ವವಚನ ಫೌಂಡೇಷನ್ ಅಧ್ಯಕ್ಷ ವೀರಭದ್ರಸ್ವಾಮಿ, ಮೈಸೂರು ಜಿಲ್ಲಾ ಶರಣು ವಿಶ್ವವಚನ ಫೌಂಡೇಷನ್ ಉಪಾಧ್ಯಕ್ಷ ಶಿವಪುರ ಉಮಾಪತಿ, ಅಕ್ಕನಬಳಗದ ಅಧ್ಯಕ್ಷೆ ಸವಿತಾ ಲೋಕೇಶ್, ಕೊಳ್ಳೇಗಾಲ ತಾ. ಶರಣು ವಿಶ್ವವಚನ ಫೌಂಡೇಷನ್ ಅಧ್ಯಕ್ಷೆ ಜಗದಾಂಬ ಸದಾಶಿವಮೂರ್ತಿ, ಸದಸ್ಯರುಗಳಾದ ಪ್ರಮೀಳಾ ನಂಜಪ್ಪ, ಅರುಣಾ ಕಾರ್ತಿಕ್, ರಾಜೇಶ್ವರಿ ಸರ್ಪಭೂಷಣ್, ಅರ್ಚನಾ ಪ್ರಭು, ಸ್ಮಿತಾ ಸುರೇಶ್, ರುದ್ರಾಂಬ, ಅನುಪಮ ಗುರಪ್ಪ, ಎಸ್ ರಾಜೇಶ್ವರಿ, ಸುಮಾ ವೀರಭದ್ರಸ್ವಾಮಿ ಉಪಸ್ಥಿತರಿದ್ದರು.

admin
the authoradmin

1 ಟಿಪ್ಪಣಿ

  • ವಿಶ್ವದರ್ಶನ ವಿಶ್ವಪಥ ವಿಶ್ವ ವಚನ ವಿಶ್ವವಿದ್ಯಾಲಯ ವಿಶ್ವಕಲ್ಯಾಣಚೇತನ ಶ್ರೀಜಗದ್ಗುರುಮುರುಘರಾಜೇಂದ್ರಕೋರಣೇಶ್ವರವಿರಕ್ತಮಠ ಅರಹಟ್ಟಿತಡಹಾಳನವಲಗುಂದಧಾರವಾಡ

ನಿಮ್ಮದೊಂದು ಉತ್ತರ

Translate to any language you want