Mysore

ವ್ಯಸನದ ಕೂಪಕ್ಕೆ ಯುವ ಸಮೂಹ ಬಲಿಯಾಗುತ್ತಿರುವುದಕ್ಕೆ ಮಾಜಿ‌ ಶಾಸಕ ಎಚ್.ಪಿ.ಮಂಜುನಾಥ್ ಬೇಸರ

ಮೈಸೂರು(ಹೆಚ್ ಪಿ ನವೀನ್ ಕುಮಾರ್): ನಗರದ ಹೆಬ್ಬಾಳದಲ್ಲಿ ಇರುವ ಬಸವಮಾರ್ಗ ವ್ಯಸನಮುಕ್ತ ಮತ್ತು ಪುನರ್ವಸತಿ ಕೇಂದ್ರದ 6ನೇ ವರ್ಷದ ವಾರ್ಷಿಕೋತ್ಸವ ಹಿನ್ನೆಲೆಯಲ್ಲಿ ಹಮ್ಮಿಕೊಂಡಿದ್ದ 10 ದಿನಗಳ 56 ನೇ‌ ಕುಡಿತ ಬಿಡಿಸುವ ಉಚಿತ ಶಿಬಿರ  ಸಮಾರೋಪ ಗೊಂಡಿತು.

ಮಾಜಿ ಶಾಸಕ ಎಚ್.ಪಿ.ಮಂಜುನಾಥ್ ಮಾತನಾಡಿ, ನಮ್ಮ ದೇಶದಲ್ಲಿ ಚುನಾವಣೆಗಳು ಬಂದಾಗ ಮದ್ಯ ಸೇವಿಸುವವರ ಸಂಖ್ಯೆ ಹೆಚ್ಚಾಗುತ್ತಿದೆ. ಪ್ರತಿ ಚುನಾವಣೆಯಲ್ಲೂ ಮದ್ಯದ ಘಾಟು ಹೆಚ್ಚಾಗುತ್ತಲೇ ಇದೆ. ಈ ಕೂಪಕ್ಕೆ ಯುವ ಸಮೂಹ ಸಿಲುಗುತ್ತಿರುವುದು ದುರದೃಷ್ಟಕರ ಸಂಗತಿ.  ಹುಣಸೂರು ಕ್ಷೇತ್ರದಿಂದ ನಾನು ಮೂರು ಬಾರಿ ಶಾಸಕನಾಗಿ ಆಯ್ಕೆಯಾಗಿದ್ದೇನೆ. ಮದ್ಯ ಹಂಚಿ ಚುನಾವಣ ಮಾಡಿದ ಇತಿಹಾದವೇ ನಮ್ಮಲ್ಲಿ ಇಲ್ಲ. 15 ವರ್ಷದ ನನ್ನ ಅಧಿಕಾರದ ಅವಧಿಯಲ್ಲಿ ನನ್ನ ಕ್ಷೇತ್ರದಲ್ಲಿ ಒಂದೇ ಒಂದು ಬಾರ್ ಅನ್ನು ತೆರೆಯಲು ಅವಕಾಶ ನೀಡಲಿಲ್ಲ. ಆದರೆ ನಾನು ಸೋತಮೇಲೆ ಈಗ 15 ಬಾರ್ ಗಳು ನಮ್ಮ ಕ್ಷೇತ್ರದಲ್ಲಿ ತೆಲೆ ಎತ್ತಿವೆ.  ಇದರಿಂದ ಯಾರಿಗೆ ಒಳ್ಳೆಯದಾಗುತ್ತಿದೆ. ಕ್ಷೇತ್ರದ ನಮ್ಮ ಅಣ್ಣ, ತಮ್ಮಂದಿರೇ ಕುಡಿತದ ಚಟಕ್ಕೆ ಬಲಿಯಾಗಿ ಜೀವನ ಹಾಳು ಮಾಡಿಕೊಳ್ಳುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

ಸಂಸ್ಕೃತಿಗೆ ಹೆಸರಾದ ಮೈಸೂರಿನಲ್ಲೂ ಕೂಡ ಕಾಣದ ನಾನಾ ದಂಧೆಗಳಿಗೆ ಸಿಲುಕಿ ನಲುಗುತ್ತಿದೆ.  ಕೆಲವು ವರ್ಷಗಳ ಹಿಂದೆ ಗೋವಾದಿಂದ ಮೈಸೂರಿಗೆ ಗಾಂಜಾ, ಡ್ರಗ್ಸ್ ಗಳು ಸರಾಗವಾಗಿ ಬರುತ್ತಿತ್ತು. ಈ ಬಗ್ಗೆ ಮೊದಲು ಧ್ವನಿ ಎತ್ತಿ ಅದರ ವಿರುದ್ಧ ಹೋರಾಟ ಮಾಡಿದೆ. ಈ ಮಾರ್ಗದಲ್ಲಿ ಸಂಚಾರ ಮಾಡುತ್ತಿದ್ದ ವಿಮಾನವನ್ನು ರದ್ದು ಮಾಡಿಸಲು ಹರ ಸಾಹಸ ಮಾಡಿದೆ. ಎಷ್ಟೆ ಎಚ್ಚರ ವಹಿಸಿದರೂ ಅಲ್ಲೊಂದು, ಇಲ್ಲೊಂದು ಪ್ರಕರಣಗಳು ಮತ್ತೆ ಜರುಗುತ್ತಿದೆ. ಇದರ ಬಗ್ಗೆ ಮೈಸೂರು ಸಂಸದರ ಗಮನಕ್ಕೂ ತಂದು ಕಡಿವಾಣ ಹಾಕಲಾಗುತ್ತಿದೆ. ಇದು ಕೇವಲ ಜನ ಪ್ರತಿನಿಧಿಗೂ, ಅಧಿಕಾರಿಗಳ ಕೆಲಸ ಮಾತ್ರವಲ್ಲ. ಪ್ರತಿಯೊಬ್ಬರ ಕರ್ತವ್ಯ. ಆಗಿದ್ದರೆ ಮಾತ್ರ ವ್ಯಸನಮುಕ್ತ ಸಮಾಜ ನಿರ್ಮಾಣ ಮಾಡಲು ಸಾಧ್ಯ ಎಂದು ಅಭಿಪ್ರಾಯ ಪಟ್ಟರು.

ನಾವು ಯಾವ ರೀತಿ ಬದುಕಬೇಕು ಎಂಬುದರ ಬಗ್ಗೆ ಸ್ಪಷ್ಟ ಅರಿವು ಇರಬೇಕು. ಒಂದು ಮನೆಯಲ್ಲಿ ಪುರುಷನೇ ಸರಿ ಇಲ್ಲ ಎಂದರೆ ನಾನಾ ಜನರು ನಮ್ಮ ಮನೆಯ ಮೇಲೆ ಕಣ್ಣಾಕುತ್ತಾರೆ‌ ಎಂಬುದರ ಬಗ್ಗೆ ವ್ಯಸನಿಗೆ ಜಾಗೃತಿ ಇರಬೇಕು‌. ಈ ಶಿಬಿರದಲ್ಲಿ ಶಿಬಿರಾರ್ಥಿಗಳಿಗೆ 10 ದಿನಗಳ ಕಾಲ ಹಾಕಿಕೊಟ್ಟ ಮಾರ್ಗವನ್ನು ಸರಿಯಾಗಿ ಪಾಲನೆ ಮಾಡಬೇಕು. ಮನೆಗೆ ತೆರಳಿದ ಬಳಿಕವೂ  ಶಿಬಿರದ ಜೀವನ ಶೈಲಿಯನ್ನೇ ಪಾಲನೆ ಮಾಡಬೇಕು. ಆ ಮಾರ್ಗವನ್ನು ಸರಿಯಾಗಿ ಅನುಸರಿಸದೆ ಇದ್ದರೆ ಮತ್ತೆ ವ್ಯಸನಕ್ಕೆ ದಾಸರಾಗಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು‌.

ಬಸವಮಾರ್ಗ ವ್ಯಸನಮುಕ್ತ ಮತ್ತು ಪುನರ್ವಸತಿ ಕೇಂದ್ರದ ಸಂಸ್ಥಾಪಕ ಎಸ್.ಬಸವರಾಜು ಮಾತನಾಡಿ, ಬಸವಮಾರ್ಗ ವ್ಯಸನಮುಕ್ತ ಮತ್ತು ಪುನರ್ವಸತಿ ಕೇಂದ್ರ ಸಮಾಜ ಸೇವೆಗೆ ತನ್ನನ್ನು ತಾನು ಅರ್ಪಿಸಿಕೊಂಡಿದೆ. ಸಂಸ್ಥೆ 6 ವರ್ಷಗಳಲ್ಲಿ‌ 56 ಕುಡಿತ ಬಿಡಿಸುವ ಉಚಿತ ಶಿಬಿರವನ್ನು ಆಯೋಜಿಸಿ ಯಶಸ್ವಿಯಾಗಿದೆ. ಇದುವರೆಗೆ 15 ಸಾವಿರಕ್ಕೂ ಹೆಚ್ಚು ಜನರು ಇಲ್ಲಿಂದ ಚಿಕಿತ್ಸೆ ಪಡೆದಿದ್ದಾರೆ. ಸಾವಿರಾರು ಜನರಲ್ಲಿ  ಮನಃಪರಿವರ್ತನೆಯಾಗಿ ಇಂದು ತಮ್ಮ ಹೆಂಡತಿ, ಮಕ್ಕಳ ಜತೆ ಉತ್ತಮ ಬದಕು ಕಂಡುಕೊಂಡು ಉತ್ತಮ ಪ್ರಜೆಗಳಾಗಿದ್ದಾರೆ ಎಂದು ತಿಳಿಸಿದರು.

ಬಸವಮಾರ್ಗ ಸಂಸ್ಥೆ 6ನೇ ವರ್ಷಕ್ಕೆ ಕಾಲಿಡುತ್ತಿದೆ. ಈ ಹಿನ್ನೆಲೆಯಲ್ಲಿ ತನ್ನ ಸೇವಾ ಕಾರ್ಯವನ್ನು ಮತ್ತಷ್ಟು ವಿಸ್ತಾರ ಮಾಡಲಾಗುತ್ತಿದೆ. ವ್ಯಸನಕ್ಕೆ ದಾಸರಾದ ಪಾಲಕರ ಮಕ್ಕಳಿಗೆ ಸೂರು ಮತ್ತು ಶಿಕ್ಷಣದ ವ್ಯವಸ್ಥೆ ಕಲ್ಪಿಸಿಕೊಡುವ ನಿಟ್ಟಿನಲ್ಲಿ  ಸಂಸ್ಥೆ ಮುಂದಾಗಿದೆ. ಜತೆಗೆ ವ್ಯಸನಕ್ಕೆ ತುತ್ತಾದ 18 ವರ್ಷದ ಮಕ್ಕಳನ್ನು ಸಂಸ್ಥೆಗೆ‌ ನೀಡಿದರೆ ಅವರ ಪಾಲನೆ ಪೊಷಣೆ ಮಾಡಲಾಗುತ್ತದೆ. ಆ ಮಕ್ಕಳ ಶಿಕ್ಷಣದ ಖರ್ಚನ್ನು ಕೂಡ ಸಂಸ್ಥೆಯೇ ವಹಿಸಿಕೊಂಡು ಸ್ವಸ್ಥ ಸಮಾಜ ನಿರ್ಮಾಣ ಮಾಡಲಾಗುತ್ತದೆ ಎಂದು‌ ತಿಳಿಸಿದರು. ಕಾರ್ಯಕ್ರಮದಲ್ಲಿ ಅಖಿಲ ಭಾರತ ವೀರಶೈವ ಮಹಾಸಭಾದ ಹುಣಸೂರು ಘಟಕದ ಅಧ್ಯಕ್ಷ ಸೋಮಶೇಖರ್ ಇತರರು ಇದ್ದರು‌.

admin
the authoradmin

ನಿಮ್ಮದೊಂದು ಉತ್ತರ

Translate to any language you want