ಮಡಿಕೇರಿ: ಸಂವಿಧಾನದ ಮೂಲಭೂತ ಹಕ್ಕುಗಳಲ್ಲಿ ಒಂದಾದ ಅಭಿವ್ಯಕ್ತಿ ಸ್ವಾತಂತ್ರ್ಯದ ಬಳಕೆಯನ್ನು ಆತ್ಮಸಾಕ್ಷಿಗೆ ಅನುಗುಣವಾಗಿ ಮಾಡಬೇಕು ಎಂದು ಪತ್ರಕರ್ತರಿಗೆ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ವಿಧಾನ ಸಭಾ ಕ್ಷೇತ್ರದ ಶಾಸಕರಾದ ಎ.ಎಸ್.ಪೊನ್ನಣ್ಣ ನವರು ಕಿವಿಮಾತು ಹೇಳಿದರು.
ಕೊಡಗು ಪತ್ರಕರ್ತರ ಸಂಘ (ರಿ) ಮಡಿಕೇರಿ ಹಾಗೂ ಕೊಡಗು ಪತ್ರಕರ್ತರ ಕ್ಷೇಮಾಭಿವೃದ್ಧಿ ಸಮಿತಿಯವರು ಮಡಿಕೇರಿಯ ಜನರಲ್ ತಿಮ್ಮಯ್ಯ ಕ್ರೀಡಾಂಗಣದಲ್ಲಿ ಆಯೋಜಿಸಿದ ಪತ್ರಕರ್ತರ ಸಂಕ್ರಾಂತಿ ಸಂಭ್ರಮ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಅವರು ಪತ್ರಕರ್ತರು ಸಮಾಜವನ್ನು ತಿದ್ದುವ ಮಹತ್ವದ ಜವಾಬ್ದಾರಿ ಯನ್ನು ನಿಭಾಯಿಸುತ್ತಿದ್ದು ಪತ್ರಕರ್ತರ ಕ್ಷೇಮದ ಬಗ್ಗೆ ಸಮಾಜ ಕಾಳಜಿ ವಹಿಸಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ವಿಧಾನ ಪರಿಷತ್ ಸದಸ್ಯರಾದ ಸುಜಾಕುಶಾಲಪ್ಪ ನವರು ಮಾತನಾಡಿ ಜೀವದ ಹಂಗು ತೊರೆದು ಸಮಾಜದ ಒಳಿತಿಗಾಗಿ ಶ್ರಮಿಸುವವರು ಪತ್ರಕರ್ತರಾಗಿದ್ದು ಅವರ ಸಂಕಷ್ಟಕ್ಕೆ ಸ್ಪಂದಿಸುವುದು ಪ್ರತಿಯೊಬ್ಬ ನಾಗರೀಕನ ಕರ್ತವ್ಯ ಎಂದು ಹೇಳಿದರಲ್ಲದೆ, ಕೆಲವು ಪತ್ರಕರ್ತರು ಬ್ಲಾಕ್ ಮೇಲ್ ಮಾಡುವ ಮೂಲಕ ಪತ್ರಿಕಾರಂಗಕ್ಕೆ ಅಪಮಾನ ಮಾಡುತ್ತಿರುವುದು ವಿಷಾದನೀಯ ಎಂದು ಹೇಳಿದರು.
ಹೈಕೋರ್ಟ್ ಹಿರಿಯ ವಕೀಲ ಹಾಗೂ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಹೆಚ್.ಎಸ್.ಚಂದ್ರಮೌಳಿಯವರು ಮಾತನಾಡಿ ಪತ್ರಕರ್ತರು ಸಮಾಜವನ್ನು ತಿದ್ದುವ ಕೆಲಸ ಮಾಡುತ್ತಿದ್ದು ತಿದ್ದುವ ಕೆಲಸ ಅತಿರೇಕ ಆಗಬಾರದು ಎಂದು ಸಲಹೆ ನೀಡಿದರು.
ಗ್ಯಾರೆಂಟಿ ಅನುಷ್ಠಾನ ಸಮಿತಿಯ ರಾಜ್ಯ ಉಪಾಧ್ಯಕ್ಷರಾದ ಮೆಹರೋಜ್ ಖಾನ್ ರವರು ಕೊಡಗು ಪತ್ರಕರ್ತರು ಉತ್ತಮವಾಗಿ ಕೆಲಸ ಮಾಡುತ್ತಿದ್ದು ಕೊಡಗಿನಲ್ಲಿ ಹಲವಾರು ಧರ್ಮಗಳು ಇದ್ದು ಇವುಗಳ ನಡುವೆ ಮನೆ ಮನೆಗಳಲ್ಲಿ ಕ್ರೀಡೆಗೆ ಪ್ರೋತ್ಸಾಹ ನೀಡಿ ಕ್ರೀಡೆ ಕೂಡ ಒಂದು ಧರ್ಮವಾಗಿ ಸಹಬಾಳ್ವೆಯ ಸಂಕೇತವಾಗಿರುವದು ನಮ್ಮ ಜಿಲ್ಲೆಯ ಸೊಬಗು ಎಂದು ಬಣ್ಣಿಸಿದರು.

ಉದ್ಯಮಿ ನಾಪಂಡ ಮುತ್ತಪ್ಪ ನವರು ಪತ್ರಕರ್ತರಿಗಾಗಿ ಸರ್ಕಾರ ವಿಶೇಷ ಕ್ಷೇಮಾಭಿವೃದ್ಧಿ ನಿಧಿ ಸ್ಥಾಪನೆ ಮಾಡಬೇಕು ಎಂದು ಒತ್ತಾಯಿಸಿದರು.
ಸಂಘದ ಅಧ್ಯಕ್ಷರಾದ ಅನಿಲ್ ಹೆಚ್.ಟಿ. ಹೆಚ್ಚುವರಿ ಪೋಲೀಸ್ ವರಿಷ್ಠಾಧಿಕಾರಿ ಬಾರಿಕೆ ದಿನೇಶ್, ಉಪವಿಭಾಗಾಧಿಕಾರಿ ನಿತಿನ್ ಛಬ್ಬಿ, ನಗರ ಸಭೆ ಅಧ್ಯಕ್ಷೆ ಕಲಾವತಿ, ಮೂಡಾ ಅಧ್ಯಕ್ಷರಾದ ರಾಜೇಶ್ ಯಲ್ಲಪ್ಪ, ಪ್ರಮುಖರಾದ ಮಹೇಶ್ ಜೈನಿ, ಬಿಜೆಪಿ ಜಿಲ್ಲಾಧ್ಯಕ್ಷ ನಾಪಂಡ ಕಾಳಪ್ಪ, ಪ್ರಮುಖರಾದ ಯಡಿಕೇರಿ ಪ್ರಸನ್ನ, ಅಪ್ರು ರವೀಂದ್ರ, ತೆನ್ನಿರ ಮೈನಾ , ಸುರಯ್ಯ ಅಬ್ರಾರ್, ಇಸ್ಮಾಯಿಲ್, ಸೂರಜ್ ಹೊಸೂರು, ಮನು ಮುತ್ತಪ್ಪ, ಚುಮ್ಮಿ ದೇವಯ್ಯ, ಪತ್ರಕರ್ತರ ಸಂಘದ ಪಧಾಧಿಕಾರಿಗಳು,
ಸದಸ್ಯರು , ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು. ಸುರೇಶ್ ಬಿಳಿಗೇರಿ ಸ್ವಾಗತಿಸಿ, ವಿನೋದ್ ಮೂಡಗದ್ದೆ ಕಾರ್ಯಕ್ರಮ ನಿರೂಪಿಸಿದರು.








