CinemaLatest

ಈ ದೇಹದಿಂದ ದೂರನಾದೆ ಏಕೆ ಆತ್ಮನೆ….? ವಿಜಯನಾರಸಿಂಹರ ಈ ಹಾಡು ಮರೆಯಲು ಸಾಧ್ಯನಾ?..

ತಂದೆಯ ಬಗ್ಗೆ ಪುತ್ರಿ ವಿಜಯಲಕ್ಷ್ಮಿ(ಸವಿತ ) ಹೇಳಿದ್ದೇನು? ಸ್ವಗತದಲ್ಲಿ ಓದಿ ಬಿಡಿ…

ಕನ್ನಡ ಚಿತ್ರ ರಂಗದಲ್ಲಿ ಅತ್ಯುತ್ತಮ ಹಾಡುಗಳನ್ನು ಬರೆದವರು ವಿಜಯನಾರಸಿಂಹ. ಬಾಲಕರಾಗಿದ್ದಾಗ ಹಾಡುಗಳನ್ನು ಬರೆಯುತ್ತಿದ್ದ ಇವರ ಪ್ರತಿಭೆ ಗುರುತಿಸಿದವರು ಅಕ್ಕ ವಿಶಾಲಾಕ್ಷಮ್ಮ. ಇವರು ಮೈಸೂರಿನ ಹೆಸರಾಂತ ಅಗರ್ ಬತ್ತಿ ಅರವಿಂದ ಪರಿಮಳ ವರ್ಕ್ಸ್  ಮಾಲೀಕರಾದ ಅಯ್ಯಾ ಅವರ ಪತ್ನಿ. ಇವರ ಹೆಸರಲ್ಲೇ ಮೈಸೂರಿನಲ್ಲೇ ಬಹು ಅಂತಸ್ತಿನ ಕಟ್ಟಡ ಇದೆ. ಈ ದಂಪತಿ ಮಗ ರಾಮತೀರ್ಥ ಮಗಳು ಚೇತನ ಖ್ಯಾತ ಕ್ರಿಕೆಟ್ ಪಟು ಅನಿಲ್ ಕುಂಬ್ಳೆ ವಿವಾಹವಾಗಿದ್ದಾರೆ. 1927ರ ಜನವರಿ. 16 ರಂದು ಜನಿಸಿದ ವಿಜಯ ನಾರಸಿಂಹ ಇಂದು ಬದುಕಿದ್ದರೆ 99 ವರ್ಷ ಆಗಿರುತ್ತಿತ್ತು. 2012 ರಲ್ಲಿ ಇವರ ಮಗಳು ಶ್ರೀಮತಿ ವಿಜಯಲಕ್ಷ್ಮಿ (ಸವಿತ )ರನ್ನು ಸಂದರ್ಶನ ನಡೆಸಿದ್ದ  ಎಸ್.ಪ್ರಕಾಶ್  ಬಾಬು ಅವರು ಇಲ್ಲಿ ತೆರೆದಿಟ್ಟಿದ್ದಾರೆ. ಶ್ರೀಮತಿ ವಿಜಯ ಲಕ್ಸ್ಮಿ (ಸವಿತ ) ಅವರ ಸ್ವಗತದಲ್ಲೇ ತಂದೆ ವಿಜಯ ನಾರಸಿಂಹ ಬಗ್ಗೆ ಹೇಳಿಕೊಂಡು ಹೋಗಿದ್ದಾರೆ, ಓದಿ.

ತುಂಬಾ ಆಸ್ತಿಕ ಮನೋಭಾವದವರು. ಯಾವುದೇ  ಕಾರ್ಯ ಕೈಗೆತ್ತಿಕೊಂಡರೂ ಇಷ್ಟ ದೇವರ ಸ್ಮರಿಸದೆ ಇರುತ್ತಿರಲಿಲ್ಲ. ಓಹಿಲೇಶ್ವರದ  “ಈ ದೇಹದಿಂದ ದೂರನಾದೆ ಏಕೆ ಆತ್ಮನೆ” ಯಿಂದ ಮೊದಲ್ಗೊಂಡು `ಒಡ ಹುಟ್ಟಿದವರು’ ಚಿತ್ರದ  “ಜನಕನ ಮಾತ ಶಿರದಲಿ ಧರಿಸಿದ” ಹಾಡಿನವರೆಗೂ ದೇವರ ಸ್ಮರಿಸಿಯೇ ಬರವಣಿಗೆ ಆರಂಭಿಸುತ್ತಿದ್ದರು. ಬರೆದ ಕಾಗದದ ಒಕ್ಕಣೆಯಲ್ಲಿ  “ಶ್ರೀ ಲಲಿತಾ” ಎಂದು ಮೊದಲು ಬರೆದು ಹಾಡುಗಳ ರಚನೆಗೆ  ಇಳಿಯುತ್ತಿದ್ದರು. ಅಷ್ಟೊಂದು ಶ್ರದ್ಧಾ ಭಕ್ತಿ ದೇವರ ಮೇಲಿತ್ತು. ಅಷ್ಟೇ ಶ್ರದ್ಧಾ ಶಕ್ತಿ ವೃತ್ತಿಯ ಮೇಲೂ ಇತ್ತು.

ಸಾಹಿತ್ಯದ ಅಧಿದೇವತೆ ವಾಗ್ದೇವಿ. ಆಕೆಯ ಕರದಲ್ಲಿ ಮಿಂದು ಬರೆಯುವಾಗ ಭಕ್ತಿ ಭಾವನೆ ಇರಬೇಕು. ಆರಾಧನಾ ಶಕ್ತಿ ಹೆಚ್ಚು ಇದ್ದಷ್ಟು ಸಾಹಿತ್ಯದ ಝರಿ ವಿಫುಲವಾಗಿ ಹರಿಯುತ್ತದೆಂದು ನಂಬಿದ್ದರು. ಅದರಂತೇ  ನಡೆದುಕೊಂಡರು. ಕನ್ನಡ ಚಿತ್ರರಂಗಕ್ಕೆ  ನೂರಾರು ಹಾಡುಗಳನ್ನು ಕೊಟ್ಟರು. ಯಾವುದೂ ಸತ್ವ ಹೀನವಾಗದಂತೆ ನೋಡಿ ಕೊಂಡರು. ದುಃಖದ, ವಿರಹದ, ಭಕ್ತಿಯ, ಪ್ರೇಮಗೀತೆಯ ಎಲ್ಲಾ ಪ್ರಾಕಾರಗಳನ್ನು ಅನುಭವಿಸಿ ಬರೆದರು. ಕನ್ನಡ ಚಿತ್ರ ರಂಗದ ಸಾಹಿತ್ಯದಲ್ಲಿ ಸದಭಿರುಚಿಯ ಪರಂಪರೆ ನಿರ್ಮಿಸಿದರು.

ಒಂದು ಹಾಡು ಮತ್ತೊಂದು ಹಾಡಿಗೆ  ಹೋಲಿಕೆಯಾಗದೆ ಭಿನ್ನವಾಗಿ ಇರುವಂತೆ ಬರೆದವರು ನನ್ನ ತಂದೆ ವಿಜಯನಾರಸಿಂಹ. ಏಕತಾನತೆಯಿಂದ ಸಾಹಿತ್ಯ ಸವಕಲಾಗುತ್ತದೆ ಎಂಬ ಕಟು ಸತ್ಯ ಅರಿತಿದ್ದರು. ಪ್ರತಿ ಹಾಡು ಬರೆಯುವ ಸಂದರ್ಭದಲ್ಲೂ ಹೊಸತನದ ಹುಡುಕಾಟದಲ್ಲಿರುತ್ತಿದ್ದರು. ಒಂದು ಹಾಡಿನ ಯಶಸ್ಸಿನ ಮೇಲೆ ಹತ್ತು ಹಾಡುಗಳ ಜೊಳ್ಳು ಸುರಿಸಿ ನಿರಾಳವಾಗಿ ಹಣ ಸಂಪಾದಿಸುವ ಕಡೆ ಅವರೆಂದೂ  ಮನಸು ಕೊಡುತ್ತಿರಲಿಲ್ಲ. ನಿನ್ನೆ ಬರೆದ ಹಾಡಿಗಿಂತ ಇಂದು ಬರೆದ ಹಾಡು ಮತ್ತಷ್ಟು ಚೆನ್ನಾಗಿ ವಿಭಿನ್ನವಾಗಿ ಮೂಡಿ ಬರಬೇಕೆಂಬ ಹಂಬಲದಲ್ಲೇ ಬರೆಯುತ್ತಿದ್ದರು. ಅದಕ್ಕಾಗಿ ಹಗಲಿರುಳು ಮನಸು ದಂಡಿಸಿ ಹೊಸ ಹೊಸ ಪದಗಳ  ಆವಿಷ್ಕಾರಕ್ಕೆ  ಶ್ರಮಿಸುತ್ತಿದ್ದರು. ಪ್ರತಿ ಕ್ಷಣವೂ ಹೊಸತಿಗಾಗಿ ತುಡಿಯುತ್ತಿದ್ದ ಅನ್ವೇಷಕ ತನವೇ ಅವರನ್ನು ಗಟ್ಟಿಯಾದ  ಚಿತ್ರ ಸಾಹಿತಿಯಾಗಿಸಿತು.

ವಿಜಯ ನಾರಸಿಂಹರ ಏಕೈಕ ಪುತ್ರಿಯಾಗಿ ಹತ್ತಿರದಿಂದ ಕಂಡ ಅವರ ಜೀವನಾನುಭವಗಳನ್ನು ಹೇಳುವಾಗ ನನಗೆ ರೋಮಾಂಚನವಾಗುತ್ತದೆ. ಸಾಹಿತ್ಯದ ಭೈರಾಗಿಯಂತೆ ಪೂಜಿಸಿ ಆರಾಧಿಸುತ್ತಿದ್ದ ಅವರ ವೃತ್ತಿ ವೈಖರಿ ಈಗಲೂ ನನಗೆ ಬೆರಗು ಮೂಡಿಸುತ್ತದೆ. ಕುಳಿತಲ್ಲಿ ನಿಂತಲ್ಲಿ ಎಲ್ಲೆ ಇರಲಿ ಹಾಡಿನ ರಚನೆಯಲ್ಲೆ ಯಾವಾಗಲೂ ತಲ್ಲೀನರಾಗಿರುತ್ತಿದ್ದರು. ಥಟ್ಟನೆ ಯಾವುದಾದರೊಂದು ಸಾಲು ನೆನಪಿಗೆ ಬಂದರೆ ಕೈಗೆ ಸಿಕ್ಕ ತುಂಡು ಪೇಪರಿನ ಮೇಲೆ  ಬರೆದಿಡುತ್ತಿದ್ದರು. ಮನದಲ್ಲಿ  ಮೂಡಿದ ಹಾಡಿನ ರಸಪಾಕ ಇಳಿಸಲು ಇಂತಹದೇ ಪೆನ್ನು ಪೇಪರು ಬೇಕೆಂದು ಬಯಸುತ್ತಿರಲಿಲ್ಲ. ಪ್ರಸವ ವೇದನೆಯಲ್ಲಿ ತೊಳಲುತ್ತಿರುವ ಗರ್ಭಿಣಗೆÂ ಹೇಗೆ ಹೆರಿಗೆ ಆದರೇನು? ಸುಖ ಪ್ರಸವವಾದರೆ  ಸಾಕೆಂದು  ಚಡಪಡಿಸುವಂತೆಯೇ, ಸಿಕ್ಕ ತಾವಲ್ಲೆ, ಸಿಕ್ಕ ಅವಕಾಶದಲ್ಲೆ ಪದಗಳ ಒಸೆದು, ಹಾಡಿನ ಒಸಗೆ ಬಡಿಸುತ್ತಿದ್ದರು.

ನನ್ನ ತಂದೆಯ ಇಂಥ ಹಾಡು ಬರೆವ ವರ್ತನೆಯಿಂದಲೇ  ಇವರೊಬ್ಬ ಒಳ್ಳೆ ಕವಿಯಾಗಬಲ್ಲ ಎಂಬ ಸತ್ಯ  ಬೆಳಕಿಗೆ ಬಂದಿದ್ದು. ಅವರೊಳಗಿನ ಸಾಹಿತಿಯನ್ನು ಮೊದಲು ಗುರುತಿಸಿದವರು ಅವರ ಅಕ್ಕ ವಿಶಾಲಾಕ್ಷಮ್ಮ. ಅದೊಂದು ದಿನ ಕಾಫಿ ಪುಡಿಯನ್ನು ಶೆಟ್ಟರ ಅಂಗಡಿಯಿಂದ ಮನೆಗೆ  ತಂದಾಗ ಕಾಫಿ ಪುಡಿ ಕಟ್ಟಿದ ಪೇಪರಿನ ತುಂಡಿನಲ್ಲಿ ಸೊಗಸಾದ ಕವಿತಾ ಸಾಲು ಕಂಡಿತು. ಅದು ಯಾರದೆಂದು ಶೋಧಿಸಿ ನೋಡಿದಾಗ, ಅದು ಕಿರಿಯ  ಸೋದರ ವಿಜಯನಾರಸಿಂಹನ ಕೈ ಬರಹ ಎಂಬುದು  ಗೊತ್ತಾಯಿತು. ಶೆಟ್ಟರ ಅಂಗಡಿಗೆ ಕೊಟ್ಟಿದ್ದ ಹಳೆ ಬುಕ್‌ಗಳ ಮೇಲೆಲ್ಲ ಬರೆದ ಕವಿತೆ  ಬರೆಯುತ್ತಿದ್ದ ತಮ್ಮನ ಕವಿತಾ ಶಕ್ತಿ ಅರಿತು, ಅಂದಿನಿಂದ ಆಕೆ ಪ್ರೋತ್ಸಾಹಿಸಿ ಬೆಳೆಸಿದರು.

ಅಕ್ಕ ವಿಶಾಲಾಕ್ಷಮ್ಮ ಕವಿತಾ ಶಕ್ತಿಯನ್ನು ಗುರುತಿಸಿದರೆ, ಅಣ್ಣ  ರಾಮಚಂದ್ರ ಶಾಸ್ತ್ರಿ ತಮ್ಮನ ವೃತ್ತಿ ಜೀವನವನ್ನು ಉತ್ತೇಜಿಸಿ ಬೆಳೆಸಿದರು. ಹುಟ್ಟೂರಿನಲ್ಲಿದ್ದರೆ ತಮ್ಮನ ಸಾಹಿತ್ಯಕ್ಕೆ ಅವಕಾಶ ಸಿಕ್ಕದೆಂದು  ತಾವಿದ್ದ ಮದರಾಸಿಗೆ ಕರೆಸಿಕೊಂಡು ಆಶ್ರಯ ನೀಡಿದರು. ದಕ್ಷಿಣ  ಭಾರತದ ಚಿತ್ರರಂಗ ಆಗ ಸಂಪೂರ್ಣ ಮದ್ರಾಸ್ (ಚೆನ್ನೈ)ನ್ನೆ ಅವಲಂಬಿಸಿದ್ದರಿಂದ ನನ್ನ ತಂದೆ ವಿಜಯ ನಾರಸಿಂಹರಿಗೆ ವೃತ್ತಿ ಬದುಕು ಕಂಡು ಕೊಳ್ಳಲು ಅಣ್ಣನ ನೆರವು ಸಹಕಾರಿಯಾಯಿತು. 1958ರಲ್ಲಿ ಡಾ. ರಾಜ್‌ಕುಮಾರ್ ಅಭಿನಯದ `ಓಹಿಲೇಶ್ವರ’ ಚಿತ್ರಕ್ಕೆ ಮೊದಲ ಹಾಡು ಬರೆದರು.

ಮೊದಲ ಹಾಡೇ ಭರ್ಜರಿ ಹಿಟ್ ಆಗಿ ಭಾರಿ ಜನಪ್ರಿಯತೆ ತಂದು ಕೊಟ್ಟಿತು.  “ಈ ದೇಹದಿಂದ ದೂರನಾದೆ ಏಕೆ ಆತ್ಮನೆ ಈ ಸಾವು ನ್ಯಾಯವೆ” ಎಂಬ ಆ ಹಾಡು ಇಂದಿಗೂ ಜನಪ್ರಿಯ ಗೀತೆಯಾಗಿ ಜನರ ಮನಸ್ಸಿನಲ್ಲಿ ನೆಲೆ ನಿಂತಿದೆ ಸುಮಾರು 17-18ನೇ ವಯಸ್ಸಿನಲ್ಲೇ ಮದರಾಸು  ಸೇರಿ ಚಿತ್ರರಂಗದಲ್ಲಿ ಅವಕಾಶಕ್ಕಾಗಿ ನಿರ್ಮಾಪಕ-ನಿರ್ದೇಶಕರ ಭೇಟಿಗಾಗಿ ಅಲೆದದ್ದು ಅದಕ್ಕಾಗಿ ಅವರು ಪಾದ ಸವೆಸಿದ್ದುಅಷ್ಟ್ಟಿಷ್ಟಲ್ಲ. ಯಾವಾಗ ಮೊದಲ ಹಾಡೇ ಅವರನ್ನು ಜನಪ್ರಿಯರನ್ನಾಗಿಸಿತೋ, ನಿರ್ಮಾಪಕ- ನಿರ್ದೇಶಕರು ವಿಜಯನಾರಸಿಂಹರನ್ನು ಹುಡುಕಿಕೊಂಡು ಬರತೊಡಗಿದರು. ಇಂಥ ಸಂದರ್ಭದಲ್ಲೂ ಅವರು ಯಶಸ್ಸಿನ ಮದ ತಲೆಗೇರಿಸಿ ಕೊಳ್ಳಲಿಲ್ಲ. ಸ್ಥಿತ ಪ್ರಜ್ಞರಂತೆ ವರ್ತಿಸಿದ್ದರು.

ಹೀಗಾಗಿ ಸಾಹಿತ್ಯ ಸರಸ್ವತಿ ಅವರ ಕೊನೆ ಉಸಿರಿರುವವರೆಗೂ ಕೈ ಹಿಡಿದು ಮುನ್ನಡೆಸಿದಳು. ನನ್ನ ತಂದೆ ವಿಜಯನಾರಸಿಂಹರ ಹುಟ್ಟೂರು ಮಂಡ್ಯ ಜಿಲ್ಲೆ ಪಾಂಡವಪುರ ತಾಲೂಕಿನ ಹಳೆಬೀಡು ಗ್ರಾಮ. ಸಾವಿತ್ರಮ್ಮ ಮತ್ತು ಕೃಷ್ಣಶಾಸ್ತ್ರಿ ಅವರ 5ಗಂಡು5 ಹೆಣ್ಣು ಮಕ್ಕಳಲ್ಲಿ ಹತ್ತನೆಯವರಾಗಿ  ಜನಿಸಿದ್ದರು. ಅಕ್ಕ ವಿಶಾಲಾಕ್ಷಮ್ಮ 1963ರಲ್ಲಿ ಸ್ಥಾಪಿತವಾದ ವಿಶ್ವದ ಹೆಸರಾಂತ ಅಗರ್ ಬತ್ತಿ ಕಂಪೆನಿ ಅರವಿಂದ ಪರಿಮಳ ವರ್ಕ್ಸ್ ಮಾಲಿಕರಾದ ಎಚ್.ಎನ್.ಅಯ್ಯಾರನ್ನು ವಿವಾಹವಾಗಿದ್ದರು. ಇವರ ಮಗ ಎಚ್.ಎನ್.ರಾಮ್‌ ತೀರ್ಥರ ಪುತ್ರಿ ಚೇತನಾರನ್ನು ಕ್ರಿಕೆಟ್ ಪಟು ಅನಿಲ್ ಕುಂಬ್ಳೆ ಮದುವೆಯಾಗಿದ್ದಾರೆ.

ಗ್ರಾಮ  ಪುರೋಹಿತರಾಗಿದ್ದ ಅಜ್ಜ ಕೃಷ್ಣಶಾಸ್ತ್ರಿ ಅವರು ಬರುವ  ಅಲ್ಪ ಆದಾಯದಲ್ಲಿ 12 ಜನರಿದ್ದ ಸಂಸಾರ ಸರಿದೂಗಿಸಬೇಕಿತ್ತು. ಇಂಥ ತುಂಬು ಕುಟುಂಬದಲ್ಲಿ ಜನಿಸಿದ್ದರಿಂದಲೋ (16-1-1927) ಏನೋ, ನನ್ನ ತಂದೆ ವಿಜಯನಾರಸಿಂಹರಲ್ಲಿ  ಹಂಚಿ ತಿನ್ನುವ ಪರೋಪಕಾರಿ ಬುದ್ದಿ ಇತ್ತು. ಯಾರೆ ಕಷ್ಟ ಅಂತ ಬಂದರೂ ಅವರಿಗೆ ಸಹಾಯ ಮಾಡಬೇಕೆಂಬ ಹಂಬಲ ಅವರಲ್ಲಿ ತುಡಿಯುತ್ತಿತ್ತು. ಹೀಗಾಗಿ ಪುಟ್ಟಣ್ಣ ಕಣಗಾಲ್ ಕೊನೆವರೆಗೂ  ನನ್ನ ತಂದೆಯೊಂದಿಗೆ  ಅನ್ಯೋನ್ಯ ಮಿತ್ರರಾಗಿ  ಉಳಿದರು. ಇವರಿಬ್ಬರ ಜೋಡಿ ಕನ್ನಡ ಚಿತ್ರರಂಗದ ಸಾಹಿತ್ಯಕ್ಕೆ ಅದ್ಭುತ ಕೊಡುಗೆ  ನೀಡಿತು. ಪುಟ್ಟಣ್ಣ ಕಣಗಾಲ್ 1985ರ ಜೂನ್ ತಿಂಗಳಿನಲ್ಲಿ ಮೃತರಾದಾಗ ನನ್ನ ತಂದೆ ತೀರ ತಲ್ಲಣಗೊಂಡಿದ್ದರು. ಚಿಕ್ಕ ವಯಸ್ಸಿನಲ್ಲೇ  ಜೀವ ಬಿಟ್ಟ ಸ್ನೇಹಿತನ ನೆನೆನೆನೆದು  ಕಣ್ಣೀರಿಟ್ಟ ದಿನಗಳಿರಲಿಲ್ಲ. ಆ ನೋವಿನಿಂದ ಹೊರ ಬರುವುದೇ ಅವರಿಗೆ ತುಂಬ ಕಷ್ಟಕರವಾಗಿತ್ತು. ಗೆಳೆಯನ ನೆನಪಿಗಾಗಿ ‘ಪುಟ್ಟಣ್ಣ ಕಣಗಾಲ್’ ಅವರ ಜೀವನ ಚರಿತ್ರೆ ಪುಸ್ತಕ ಬರೆದರು.

ಇವರಿಬ್ಬರೂ ಒಟ್ಟಿಗೆ ದುಡಿದ ಚಿತ್ರ ಮತ್ತು ಅದರಲ್ಲಿನ ಹಾಡುಗಳು ಬಲು ಜನಪ್ರಿಯ ವಾಗುತ್ತಿತ್ತು. `ಹಾವಿನ ದ್ವೇಷ ಹನ್ನೆರಡು ವರ್ಷ’ ಎಂಬ ರೋಷಾವಿಷ್ಟ ಹಾಡಿನಷ್ಟೆ ಸಂಯಮದಲ್ಲಿ, `ಭಾರತ ಭೂಶಿರ ಮಂದಿರ ಸುಂದರಿ’ ಅಂತ ಭಾರತ ಮಾತೆಯನ್ನು ಕೊಂಡಾಡಿ ಬರೆಯುತ್ತಿದ್ದರು “ವಿರಹ ನೂರು ನೂರು ತರಹ” ಎಂದು ಹೆಣ್ಣಿನ ವಿರಹ ವೇದನೆಯನ್ನು ವಿವರವಾಗಿ  ಬಿಡಿಸಿಟ್ಟ ಕ್ಷಣವೆ `ನಿಲ್ಲು ನಿಲ್ಲೆ ಪತಂಗ ಬೇಡ ಬೇಡ ಬೆಂಕಿಯ ಸಂಗ’ ಎಂದು ಕಾಮದ ಮತ್ತಿನಲ್ಲಿ ಹಾದಿ ತಪ್ಪುವ ಹೆಣ್ಣನ್ನು ಎಚ್ಚರಿಸುತ್ತಿದ್ದರು.   `ಆ ದೇವರೆ ನುಡಿದ ಮೊದಲ ನುಡಿ ಪ್ರೇಮ ಪ್ರೇಮ’ ಎಂದು ಬರೆದ ಅವರೇ, “ನೀನೇ  ಸಾಕಿದ ಗಿಣಿ ನಿನ್ನ ಮುದ್ದಿನ ಗಿಣಿ” ಅಂತ ಪ್ರೇಮ ವಂಚಕಿ ಬಗೆಗೂ  ಬರೆಯುತ್ತಿದ್ದರು. “ಆಸೆಯ ಭಾವ ಒಲವಿನ ಜೀವ” ಎಂದು ಪ್ರೇಮದ ಉತ್ತುಂಗ ಗಾನದ ಹಾಡು ಬರೆದವರೆ, “ಹಿಂದೂ ಸ್ಥಾನವೂ ಎಂದೂ ಮರೆಯದ ಭಾರತ ರತ್ನವು ಜನ್ಮಿಸಲಿ” ಅಂತ ದೇಶದ ಭವಿಷ್ಯದ ಪ್ರಜೆಗಳಾದ ಮಕ್ಕಳನ್ನು ಹುರಿದುಂಬಿಸಿ ಬರೆದರು.

ಒಂದೊಂದು ಹಾಡುಗಳು ಒಂದನ್ನೊಂದು ಪೈಪೋಟಿಯಲ್ಲಿ ಮೀರಿಸುವಂತೆ  ಬರೆದರು.  ಪ್ರೇಮ-ವಿರಹ ಗೀತೆಗಳನ್ನು ಬರೆದಷ್ಟೆ ಸುಲಲಿತವಾಗಿ ಭಕ್ತಿ ಗೀತೆಗಳನ್ನು ರಚಿಸಿದರು. ನನ್ನ ತಂದೆ ಬರೆದ “ಗಜಮುಖನೆ ಗಣಪತಿಯೆ ನಿನಗೆ ವಂದನೆ” ಹಾಗೂ “ಭಾದ್ರಪದ ಶುಕ್ಲದ ಚೌತಿಯಂದು ಚಂದಿರನ ನೋಡಿದರೆ ಅಪವಾದ ತಪ್ಪದು”  ಭಕ್ತಿಗೀತೆಗಳು 35 ವರ್ಷ ಕಳೆದರೂ ಜನಪ್ರಿಯವಾಗಿಯೇ ಉಳಿದಿವೆ. 2001ರ ಅಕ್ಟೋಬರ್ 31ರಂದು  ಅವರು  ಕೊನೆ ಉಸಿರು ಬಿಡುವಾಗಲು ಆಂಜನೆಯ, ಸಾಯಿಬಾಬಾ ಮತ್ತಿತರ ದೇವರ ಭಕ್ತಿಗೀತೆಗಳನ್ನು ರಚಿಸಿದ್ದರು. ಅವರ  ಕಾಲಾ ನಂತರದಲ್ಲಿ ಬೆಂಗಳೂರಿನ ಬನಶಂಕರಿಯ ರಾಗಂ ಆಡಿಯೋದವರು  ಶ್ರೀ ಮಂಜುನಾಥ ಮತ್ತು ಅನ್ನಪೂರ್ಣೇಶ್ವರಿ  ಮೇಲೆ ಬರೆದ ಭಕ್ತಿಗೀತೆಗಳ ಆಡಿಯೊ ಕ್ಯಾಸೆಟ್ ಹೊರತಂದರು.

ನನ್ನ ತಂದೆಯವರ ಸಾಹಿತ್ಯ ಕೃಷಿಯಲ್ಲಿ ನನ್ನ ತಾಯಿಸರಸ್ವತಿ ಅವರ ಪಾತ್ರ  ಬಹಳ ದೊಡ್ಡದು. ಗಂಡನ ಏಕಾಂತಕ್ಕೆ ಭಂಗ ಬಾರದಂತೆ ನಡೆದುಕೊಳ್ಳುತ್ತಿದ್ದ ರೀತಿ  ನೆನೆದರೆ ನನ್ನ ಅಮ್ಮನ ವ್ಯಕ್ತಿತ್ವದ ಬಗ್ಗೆ ಹೆಮ್ಮೆಯಾಗುತ್ತೆ. ಸಂಸಾರದ ಯಾವ ತಾಪತ್ರಯವೆ ಇರಲಿ ಗಂಡನ ಬಳಿ ಹೇಳಿಕೊಳ್ಳದೆ, ತಾವೇ ಸರಿಪಡಿಸಿಕೊಳ್ಳುವ  ಸಾತ್ವಿಕ ಸ್ವಭಾವದವರಾಗಿದ್ದರು. ಒಬ್ಬ ಯಶಸ್ವಿ ಪುರುಷನ ಹಿಂದೆ ಒಬ್ಬಳು ಸ್ಪೂರ್ತಿ ತುಂಬುವ ಹೆಣ್ಣಿರುತ್ತಾಳೆ ಎಂಬುದಕ್ಕೆ  ನನ್ನ ಅಮ್ಮನೆ ಸಾಕ್ಷಿಯಾಗಿದ್ದರು. ಎಷ್ಟೊ ಸಂದರ್ಭಗಳಲ್ಲಿ ಗಂಡ ಬರೆದ ಹಾಡುಗಳನ್ನು ಓದಿ ವಿಮರ್ಶಿಸುತ್ತಿದ್ದರು. ತಮಗೆ ಸರಿ ಕಾಣಿಸದನ್ನು ನೇರವಾಗಿಯೇ ಹೇಳಿಬಿಡುತ್ತಿದ್ದರು.  ಇದರಿಂದಾಗಿಯೇ ಶರಪಂಜರದ  ಜನಪ್ರಿಯ ಗೀತೆ “14 ವರ್ಷ ವನವಾಸದಿಂದ  ಮರಳಿ ಬಂದಳು ಸೀತೆ” ಆ ಚಿತ್ರಕ್ಕೆ  ಅರ್ಥವತ್ತಾಗಿ ರಚನೆಯಾಗುವಂತಾಯಿತು.

ಈ ಹಾಡನ್ನು “12 ವರ್ಷ ವನವಾಸದಿಂದ ಕಾವೇರಿ (ಚಿತ್ರದ ನಾಯಕಿ) ಬಂದಳು ” ಎಂದು ನನ್ನ ತಂದೆ ವಿಜಯ ನಾರಸಿಂಹರು ಬರೆದಿದ್ದರಂತೆ. ಇದನ್ನು ಓದಿದ ನನ್ನ ತಾಯಿ ಆಕ್ಷೇಪಿಸಿ, ’12 ವರ್ಷ ವನವಾಸ ಎಂದರೆ ಅರ್ಥ ಹೀನ.’ “14 ವರ್ಷ ವನವಾಸದಿಂದ ಮರಳಿ ಬಂದಳು ಸೀತೆ” ಎಂದು ಬದಲಿಸುವಂತೆ  ಸೂಚಿಸಿದರು. ಪತ್ನಿಯ ಸಮಯ ಪ್ರಜ್ಞೆ ಅರಿತ ನನ್ನ ತಂದೆಗೆ ತಮ್ಮ ತಪ್ಪಿನ ಅರಿವಾಗಿ  ಹಾಡಿನ ಸಾಲನ್ನು ಬದಲಿಸಿದ್ದರು. ಇದರಿಂದ ಈ ಹಾಡು ಭಾರಿ ಜನಪ್ರಿಯವಾಗಿ ಈಗಲೂ ಕೇಳುಗರ ಹೃನ್ಮನ ಸೆಳೆಯುತ್ತಿದೆ. ಹೀಗೆ ನನ್ನ ತಂದೆ ವಿಜಯ ನಾರಸಿಂಹರ ಹಲವು ಹಾಡುಗಳ ಮಾರ್ಪಾಡು ನನ್ನ ತಾಯಿಯಿಂದಲೇ ಆಗುತ್ತಿತ್ತು.

ಏಕೆಂದರೆ ಅವರು ಬರೆದ ಹಾಡಿನ ಮೊದಲ ಓದುಗರು ಹಾಗೂ ಮೊದಲ ವಿಮರ್ಶಕಿ ನನ್ನ ತಾಯಿಯೇ ಆಗಿರುತ್ತಿದ್ದರು. ನನ್ನ ತಂದೆಯ ಅಲೆದಾಟದ ಬದುಕಿನ ನಡುವೆ ಸಂಸಾರ ರಥವನ್ನು ಸಾಗಿಸಿದ್ದು ನನ್ನ ತಾಯಿಯವರೇ. ಹಿಂದಿ ಶಿಕ್ಷ್ಷಕಿಯಾಗಿ ಅವರು ಸಂಸಾರಕ್ಕೆ ಆರ್ಥಿಕ ಬಲ ತುಂಬಿದ್ದರು. ಸ್ವತಃ ಕತೆಗಾರ್ತಿಯಾಗಿದ್ದ ಅವರು, ಅನೇಕ ಕತೆಗಳನ್ನು ಹಿಂದಿಯಿಂದ ಕನ್ನಡಕ್ಕೆ ಅನುವಾದಿಸಿದ್ದರು. ಹಲವು ಆಧ್ಯಾತ್ಮಿಕ ಲೇಖನಗಳನ್ನೂ ಬರೆದಿದ್ದರು.

ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಭಾಷಾಂತರಕಾರರಾಗಿದ್ದ ಶಾರದಾಪ್ರಸಾದ್ ರೊಂದಿಗೆ ನನ್ನ ಮದುವೆಯಾದ ನಂತರ, ನನ್ನ ಇಬ್ಬರು ಮಕ್ಕಳಾದ ಅರ್ಚನಾ  ಹಾಗೂ ಸುದತ್ತಗೌತಮ್‌ರನ್ನು ಬೆಂಗಳೂರಿನಲ್ಲಿ ಅವರೆ ಸಾಕಿದರು. ಕೊನೆಮಗ ಸಂದೀಪ ಗೌತಮ ಮಾತ್ರ ನನ್ನೊಂದಿಗೆ ಬೆಳೆದ. ಮೊಮ್ಮಕ್ಕಳನ್ನು ಕಂಡರೆ ಅದೆಂಥ ಪ್ರೀತಿ ಅಜ್ಜ-ಅಜ್ಜಿಗೆ ಇರುತ್ತೆ ಎಂಬುದಕ್ಕೆ ಅವರನ್ನು ಉದಾಹರಿಸಬಹುದಾಗಿತ್ತು. ಅವರು ಬೆಳಿಗ್ಗೆ  ಮನೆ ಬಿಟ್ಟರೆ ಗಾಂಧಿ ನಗರಕ್ಕೆ ಹೋಗಿ, ಮಧ್ಯಾಹ್ನ ಮನೆಗೆ ಊಟಕ್ಕೆ ಬರುವಾಗ  ಬರಿಗೈಲಿ ಬರುತ್ತಿರಲಿಲ್ಲ.ಮೊಮ್ಮಕ್ಕಳಿಗಾಗಿ ಏನಾದರು ತಿಂಡಿ,ಆಟದ ಸಾಮಾನು ತರುತ್ತಿದ್ದರು.

ಅಜ್ಜ  ಅಜ್ಜಿಯ  ಉತ್ಕಟ  ಪ್ರೀತಿಯಲ್ಲಿ ಬೆಳೆದ ನನ್ನ ಮಗಳು  ಅರ್ಚನಾ ಈಗ ನರಸಿಂಹ ಪ್ರಸಾದ್‌ರನ್ನು ವಿವಾಹವಾಗಿ ಲಂಡನ್‌ನಲ್ಲಿದ್ದಾಳೆ. ಸಾತ್ವಿಕ್, ವಿಷ್ಣು ಎಂಬಿಬ್ಬರು ಮಕ್ಕಳೊಂದಿಗೆ ಹಾಯಾಗಿದ್ದಾಳೆ. ಮಗ ಸುದತ್ತ ಗೌತಮ್ ಇನ್‌ಸ್ಟೂಮೆಂಟಲ್  ಟೆಕ್ನಾಲಜಿಯಲ್ಲಿ  ಇಂಜಿನಿಯರಿಂಗ್ ಪದವಿ ಪಡೆದು ಅಮೆರಿಕಾದಲ್ಲಿದ್ದಾನೆ. ಇವನ ಪತ್ನಿ ದೀಪಾ ಸಹ ಇಂಜಿನಿಯರ್. ಮಗಳು ಅನನ್ಯಳೊಂದಿಗೆ ಅನ್ಯೋನ್ಯವಾಗಿದ್ದಾನೆ. ಕಿರಿಯ ಮಗ ಸಂದೀಪ್ ಗೌತಮ್ ಎಂಬಿಎ ಮಾಡಿ  ಬೆಂಗಳೂರಿನ ಹೆಸರಾಂತ ಕಂಪೆನಿಯೊಂದರ ಉದ್ಯೋಗಿಯಾಗಿದ್ದಾನೆ.

ಕಾಲ ಸರಿದಂತೆ ವಿಜಯನಾರಸಿಂಹರ ಮಗಳಾಗಿದ್ದ ನಾನೀಗ  ಮೂರು ಮೊಮ್ಮಕ್ಕಳಿಗೆ ಅಜ್ಜಿಯಾಗಿದ್ದೇನೆ. ಅಜ್ಜನ ಸ್ಥಾನದಲ್ಲಿದ್ದ ನನ್ನ ತಂದೆ ಕಾಲವಾಗಿ ಹಲವರ್ಷಗಳು ಉರುಳಿ ಹೋದವು. ಅಜ್ಜಿ  ಸ್ಥಾನದಲ್ಲಿದ್ದ ನನ್ನ ತಾಯಿ ಸರಸ್ವತಿ  ೨೦೦೯ರಲ್ಲಿ ಕಾಲನ ಕರೆಗೆ ಓಗೊಟ್ಟರು. ಬದುಕಿನ ಸರಪಣಿ ಸರಿದಂತೆ ಸರದಿ ಬಂದಾಗ ನಾವು ಇಹದ ಬಂಧ ಕಳೆದುಕೊಳ್ಳಲೇಬೇಕು.ಅವರೆ ಬರೆದಂತೆ “ಯಾವುದೋ ಮೋಡಿಯಲ್ಲಿ ಲೋಕವೆಲ್ಲ ಕೂಡಿ ಸಾಗಿದೆ”.ಇದರ ಮಧ್ಯೆ “ಜೀವನ ಜ್ಯೋತಿ ಬಾಳಲಿ ಕೂಡಿ, ಹಾಯಾಗಿ ಸಾಗಲಿ” ಎಂಬಂತೆ ಪ್ರತಿಯೊಬ್ಬರ ಬದುಕಿನ ಪಯಣ ಸಾಗಿದೆ. ಜೀವನದ ಪ್ರಯಾಣ ಪ್ರಯಾಸವಾಗದೆ ಸುಲಲಿತವಾಗಿ, ಸೇರಬೇಕಾದ ತೀರ ಸೇರಿದರೆ, ಆ ಜೀವ ಸಾರ್ಥಕ ಪಡೆಯುತ್ತದೆ.

ಈ ಹಿನ್ನೆಲೆಯಲ್ಲಿ ನೋಡಿದಾಗ ನನ್ನ ತಂದೆಗೆ ಚಿತ್ರರಂಗದಿಂದ ಸಿಗಬೇಕಾದ  ಉನ್ನತ ಗೌರವಗಳು  ಸಿಗಲಿಲ್ಲ ಎಂಬ ಲೌಕಿಕ ನೋವುಗಳು ಗೌಣವಾಗಿ ಬಿಡುತ್ತವೆ. ಇಹದ ವ್ಯವಹಾರವನ್ನು ಯಾವುದೇ ಕಪ್ಪು ಚುಕ್ಕಿ ಇಲ್ಲದಂತೆ ಶುಭ್ರವಾಗಿ ಚುಕ್ತ ಮಾಡಿದ ಅವರ ಪಾರಮಾರ್ಥಿಕ ಗುಣಗಳು ನನ್ನ ಮನಸ್ಸಿಗೆ ಆರ್ದ್ರವಾಗಿ ಬಿಡುತ್ತದೆ. ತಂದೆಯ ನೆನಪುಗಳು ನನ್ನ ಮನಸ್ಸನ್ನು ತೋಯಿಸಿದಷ್ಟು ನಿರಾಳ ಅನುಭವವಾಗುತ್ತದೆ. ಇಂಥ ನೆಮ್ಮದಿಯ ಸುಖದ ನೆನಪುಗಳನ್ನು ಕೊಟ್ಟವರ ಮಗಳಾಗಿ ಹುಟ್ಟಿದ ನಾನೇ ಧನ್ಯೆ ಎಂಬ ಹೆಮ್ಮೆಯು ಇದೆ. (ಶ್ರೀಮತಿ ವಿಜಯಲಕ್ಷ್ಮಿ(ಸವಿತಾ) ಪ್ರಸಾದ್ 20-12-23ರಂದು ನಿಧನರಾದರು)

ಸಿನಿಮಾಗೆ ಸಂಬಂಧಿಸಿದ ಲೇಖನ, ಸುದ್ದಿಗಳಿಗೆ ಇದರ ಮೇಲೆ ಕ್ಲಿಕ್ ಮಾಡಿ ಓದಿ…

admin
the authoradmin

ನಿಮ್ಮದೊಂದು ಉತ್ತರ

Translate to any language you want