Crime

ಹುಣಸೂರಿನಲ್ಲಿ ಚಿನ್ನದಂಗಡಿ ದರೋಡೆ ಮಾಡಿದ್ದ  ಬಿಹಾರದ ಇಬ್ಬರ ಬಂಧನ…ಸಿಕ್ಕಿದೆಷ್ಟು ಚಿನ್ನ ಗೊತ್ತಾ?

ಮೈಸೂರು: ಕಳೆದ ಡಿಸೆಂಬರ್‌ನಲ್ಲಿ ಹಾಡಹಗಲೇ ಪಿಸ್ತೂಲ್ ತೋರಿಸಿ ಹುಣಸೂರಿನ ಚಿನ್ನದಂಗಡಿ ದರೋಡೆ ಮಾಡಿದ್ದ ಅಂತಾರಾಜ್ಯ ದರೋಡೆಕೋರರ ಪೈಕಿ ಇಬ್ಬರನ್ನು ಮೈಸೂರು ಜಿಲ್ಲಾ ಪೊಲೀಸರು ಬಿಹಾರದಲ್ಲಿ ಬಂಧಿಸಿದ್ದು ಅವರಿಂದ 12.5ಗ್ರಾಂ ಚಿನ್ನಾಭರಣ, 92 ಸಾವಿರ ರೂ.ನಗದು ಹಾಗೂ ಕೃತ್ಯಕ್ಕೆ ಬಳಸಿದ್ದ ದ್ವಿಚಕ್ರವನ್ನು ವಶಕ್ಕೆ ಪಡೆಯಲಾಗಿದೆ

ಹುಣಸೂರು ಪಟ್ಟಣದಲ್ಲಿನ ಸ್ಕೈ ಗೋಲ್ಡ್ ಅಂಡ್ ಡೈಮಂಡ್ ಅಂಗಡಿಗೆ ಡಿ.28ರಂದು ಮಧ್ಯಾಹ್ನ 2ಗಂಟೆಯ ಸುಮಾರಿನಲ್ಲಿ ಐದು ಮಂದಿಯ ತಂಡ ಅಂಗಡಿಗೆ ಏಕಾಏಕಿ ನುಗ್ಗಿ, ಪಿಸ್ತೂಲ್ ತೋರಿಸಿ 10 ಕೋಟಿ ರೂ. ಮೌಲ್ಯದ ಚಿನ್ನಾಭರಣವನ್ನು ದರೋಡೆ ಮಾಡಿ ಪರಾರಿಯಾಗಿತ್ತು. ಪ್ರಕರಣ ಭೇದಿಸಲು 50ಕ್ಕೂ ಹೆಚ್ಚು ಮಂದಿ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗಳನ್ನೊಳಗೊಂಡ ಐದು ತಂಡ ರಚಿಸಲಾಗಿತ್ತು.

ಘಟನಾ ಸ್ಥಳದಲ್ಲಿ ಇದ್ದ ಸಿಸಿ ಕ್ಯಾಮೆರಾ ದೃಶ್ಯಾವಳಿ ಆಧರಿಸಿ ಇಬ್ಬರ ಗುರುತು ಪತ್ತೆಹಚ್ಚಿದ್ದ ಪೊಲೀಸರು ಭಾನುವಾರ ಬಿಹಾರದಲ್ಲಿ ಬಂಧಿಸಿದ್ದಾರೆ. ಬಂಧಿತರಿಂದ 12.5 ಗ್ರಾಂ ಚಿನ್ನಾಭರಣ, 92 ಸಾವಿರ ರೂ.ನಗದು ಹಾಗೂ ಕೃತ್ಯಕ್ಕೆ ಬಳಸಿದ್ದ ದ್ವಿಚಕ್ರವನ್ನು ವಶಕ್ಕೆ ಪಡೆಯಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ತಿಳಿಸಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸೋಮವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಬಿಹಾರ ರಾಜ್ಯದ ರಿಷಿಕೇಶ್ ಕುಮಾರ್ ಸಿಂಗ್, ಪಂಕಜ್ ಕುಮಾರ್ ಅವರುಗಳನ್ನು ದರ್ಬಾಂಗ್ ಜಿಲ್ಲೆಯಲ್ಲಿ ಬಂಧಿಸಲಾಗಿದೆ. ಕಾರ್ಯಾಚರಣೆಗೆ ಬಿಹಾರ ಪೊಲೀಸರು ಸಹಕಾರ ನೀಡಿದ್ದಾರೆ. ತಂಡದಲ್ಲಿ ಹತ್ತಕ್ಕೂ ಹೆಚ್ಚು ಮಂದಿ ಇದ್ದಾರೆ ಎಂಬುದು ತಿಳಿದುಬಂದಿದ್ದು, ಇವರೆಲ್ಲ ಪುನರಾವರ್ತಿತ ಅಪರಾಧಿಗಳಲ್ಲದೇ, ಕೇರಳ, ಆಂಧ್ರ, ರಾಜಸ್ಥಾನ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಇವರ ವಿರುದ್ಧ ಸುಲಿಗೆ, ದರೋಡೆ ಮತ್ತು ಕಳ್ಳತನ ಪ್ರಕರಣಗಳು ದಾಖಲಾಗಿವೆ ಎಂದು ತಿಳಿಸಿದರು.

ದರೋಡೆ ಕೃತ್ಯದಲ್ಲಿ ಭಾಗಿಯಾಗಿರುವ ಎಲ್ಲರೂ ಪುನರಾವರ್ತಿತ ಅಪರಾಧಿಗಳಾಗಿದ್ದು, ಈಗಾಗಲೇ ಬಿಹಾರ, ರಾಜಸ್ಥಾನದಲ್ಲಿ ಶಿಕ್ಷೆಯೂ ಆಗಿತ್ತು. ತಂಡದಲ್ಲಿ ಇರುವವರು ಜೈಲಿನಲ್ಲೆ ಪರಿಚಯವಾಗಿ ತಂಡ ಕಟ್ಟಿಕೊಂಡು ದರೋಡೆ ನಡೆಸುವುದನ್ನೇ ಉದ್ಯೋಗ ಮಾಡಿಕೊಂಡಿದ್ದಾರೆ. ಈ ತಂಡ ಕರ್ನಾಟಕದಲ್ಲಿ ನಡೆಸಿರುವ ಮೊದಲ ಕೃತ್ಯವಾಗಿದೆ. ಶೀಘ್ರದಲ್ಲೇ ಉಳಿದವರನ್ನು ಬಂಧಿಸಿ, ದರೋಡೆ ಮಾಡಿರುವ ಚಿನ್ನಾಭರಣ ವಶಪಡಿಸಿಕೊಳ್ಳಲಾಗುವುದು ಎಂದು ತಿಳಿಸಿದರು.

ಹುಣಸೂರಿನಲ್ಲಿ ದರೋಡೆ ನಡೆಸುವುದಕ್ಕೂ ಮುನ್ನಾ ಕೊಡಗು, ಹಾಸನ ಮತ್ತು ಮೈಸೂರು ಭಾಗದಲ್ಲಿ ದರೋಡೆ ಮಾಡುವ ಜಾಗಕ್ಕಾಗಿ ಹುಡುಕಾಟ ನಡೆಸಿ, ಕೊನೆಗೆ ಹುಣಸೂರು ಚಿನ್ನದಂಗಡಿಯನ್ನು ಗುರುತು ಮಾಡಿಕೊಂಡಿದ್ದಾರೆ. ಕೃತ್ಯ ನಡೆಸಿದ ಬಳಿಕ ಒಟ್ಟಿಗೆ ತೆರಳದೆ ಇಬ್ಬಾಗವಾಗಿ ಬೇರೆ ಬೇರೆ ಕಡೆಗೆ ಚದುರಿ ಪರಾರಿಯಾಗಿದ್ದರು ಎಂದರು.

ಕೃತ್ಯ ನಡೆಸಿದ ದರೋಡೆಕೋರರು 450 ವಿವಿಧ ಮಾದರಿಯ 10ಕೋಟಿ ರೂ. ಮೌಲ್ಯದ 8.34ಕೆಜಿ ಚಿನ್ನಾಭರಣ ದೋಚಿದ್ದರು. ಈ ಆರೋಪಿಗಳನ್ನು ಪತ್ತೆ ಹಚ್ಚಲು ಐವತ್ತು ಮಂದಿ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿರುವ ಐದು ತಂಡಗಳನ್ನು ರಚಿಸಲಾಗಿತ್ತು. ಪೊಲೀಸರು ಎರಡು ವಾರದಿಂದ ಸತತವಾಗಿ ಹುಡುಕಾಟ ನಡೆಸಿದ್ದರು ಎಂದು ಹೇಳಿದರು.

ಇದನ್ನೂ ಓದಿ: ಹಾಡಹಗಲೇ ಹುಣಸೂರು ಚಿನ್ನದಂಗಡಿ ದರೋಡೆ

admin
the authoradmin

ನಿಮ್ಮದೊಂದು ಉತ್ತರ

Translate to any language you want