LatestLife style

ಬಿಪಿಗೆ ಆಹಾರ ಕ್ರಮ ಹೇಗಿರಬೇಕು? ಮಾತ್ರೆ ಜತೆಗೆ ಯಾವ ರೀತಿಯ ಆಹಾರ ಸೇವಿಸ ಬಹುದು?

ನಮ್ಮ ಜೀವನ ಶೈಲಿಯಲ್ಲಿನ ಬದಲಾವಣೆ, ಒತ್ತಡದಿಂದ ಕೂಡಿದ ಬದುಕು ನಮಗೆ ಗೊತ್ತಿಲ್ಲದಂತೆ ನಮ್ಮನ್ನು ರೋಗದ ಮಡುವಿಗೆ ತಳ್ಳುತ್ತಿದೆ. ಹೀಗಾಗಿ ವೃದ್ಧಾಪ್ಯದಲ್ಲಿ ಬರಬೇಕಾದ ಕಾಯಿಲೆಗಳೆಲ್ಲವೂ ಯೌವನದಲ್ಲಿಯೇ ಅಡರಿಕೊಳ್ಳಲು ಆರಂಭಿಸಿವೆ. ಅಷ್ಟೇ ಅಲ್ಲದೆ, ರಕ್ತದೊತ್ತಡ, ಮಧುಮೇಹ ಮೊದಲಾದವುಗಳು ಸಾಮಾನ್ಯ ರೋಗವಾಗಿ ಅದರೊಂದಿಗೆ ಜೀವನ ಮಾಡಬೇಕಾದ ಅನಿವಾರ್ಯತೆಯನ್ನು ಸೃಷ್ಟಿ ಮಾಡಿವೆ. ಮಧುಮೇಹ ಮತ್ತು ರಕ್ತದೊತ್ತಡ ಒಮ್ಮೆ ತಗುಲಿಕೊಂಡರೆ ಅದನ್ನು ನಿಯಂತ್ರಣದಲ್ಲಿಟ್ಟುಕೊಳ್ಳಬೇಕೇ ಹೊರತು ಸಂಪೂರ್ಣ ವಾಸಿ ಮಾಡುವುದು ಕಷ್ಟಸಾಧ್ಯ..

ಇತ್ತೀಚೆಗೆ ಹಲವು ಕಾರಣಗಳಿಗೆ ಒತ್ತಡದ ಜೀವನಕ್ರಮವನ್ನು ಅನುಸರಿಸುತ್ತಿರುವುದರಿಂದ ರಕ್ತದೊತ್ತಡ ಹೆಚ್ಚು ಹೆಚ್ಚಾಗಿ ಕಾಡಲಾರಂಭಿಸಿದೆ. ಹೀಗಾಗಿ ಕಾಯಿಲೆಯನ್ನು ನಿಯಂತ್ರಿಸಲು ಔಷಧಿ ಮಾತ್ರವಲ್ಲದೆ  ಆಹಾರಕ್ರಮಗಳನ್ನು ರೂಢಿಸಿಕೊಳ್ಳುವುದು ಕೂಡ ಬಹಳ ಮುಖ್ಯವಾಗುತ್ತದೆ. ಅಷ್ಟೇ ಅಲ್ಲದೆ ಇದು ಇಂದಿನ ಅನಿವಾರ್ಯವೂ ಹೌದು. ಮಧುಮೇಹ ಇರುವವರು ಹೇಗೆ ಆಹಾರ ಸೇವನೆಯಲ್ಲಿ ಪಥ್ಯಕ್ರಮವನ್ನು ಅನುಸರಿಸಬೇಕೋ ಹಾಗೆಯೇ ಅಧಿಕ ರಕ್ತದೊತ್ತಡ (ಹೈಪರ್ ಟೆನ್ಷನ್)ದಿಂದ ಬಳಲುತ್ತಿರುವವರು ಕೂಡ ವೈದ್ಯರು ನೀಡುವ ಔಷಧಿಯೊಂದಿಗೆ ದಿನನಿತ್ಯ ಸೇವಿಸುವ ಆಹಾರಗಳಲ್ಲಿಯೂ ನಿಗಾ ವಹಿಸುವುದು ನಿತ್ಯದ ಜೀವನ ಕ್ರಮದಲ್ಲಿ ಒಂದಾಗಿದೆ.

ಅಧಿಕ ರಕ್ತದೊತ್ತಡದಿಂದ ಬಳಲುತ್ತಿರುವವರು ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬೇಕಾದರೆ ಏನು ಮಾಡಬೇಕು? ದಿನ ನಿತ್ಯ ಸೇವಿಸುವ ಆಹಾರಗಳಲ್ಲಿ ಯಾವುದನ್ನು ಬಳಸಬೇಕು? ಯಾವುದನ್ನು ವರ್ಜಿಸಬೇಕು ಎಂಬುದರ ಬಗ್ಗೆ ವೈದ್ಯರು ಒಂದಷ್ಟು ಸಲಹೆಗಳನ್ನು ನೀಡಿದ್ದು, ಅದರಂತೆ ಕಟ್ಟು ನಿಟ್ಟಾಗಿ ಪಾಲಿಸಿದ್ದೇ ಆದರೆ ರೋಗವನ್ನು ನಿಯಂತ್ರಿಸಿಕೊಂಡು ಜೀವನವನ್ನು ನಡೆಸಲು ಸಾಧ್ಯವಾಗುತ್ತದೆ. ಬಹುತೇಕರು ರೋಗ ಕಾಡಿದ ಬಳಿಕ ಆಹಾರಕ್ರಮಗಳನ್ನು ಪಾಲಿಸದ ಕಾರಣದಿಂದಾಗಿ ರೋಗ ಉಲ್ಭಣಗೊಳ್ಳುವಂತೆ ಮಾಡಿಕೊಳ್ಳುತ್ತಾರೆ. ಬಾಯಿ ರುಚಿಗಾಗಿ ವೈದ್ಯರ ಸೂಚನೆಯನ್ನು ಮೀರಿದ ಆಹಾರವನ್ನು ಸೇವಿಸಿ ತೊಂದರೆಯನ್ನು ಎಳೆದುಕೊಳ್ಳುತ್ತಾರೆ.

ಬಿಪಿ ಇರುವವರು ಏನು ಮಾಡಬೇಕು? ಯಾವ ಆಹಾರ ಸೇವಿಸಬೇಕು ಎಂಬಿತ್ಯಾದಿ ವಿವರಗಳನ್ನು  ವೈದ್ಯರು ನೀಡುತ್ತಾರೆ. ಅವರು ಹೇಳುವ ಪ್ರಕಾರ ಮನೆಯಲ್ಲಿಯೇ ತಯಾರಿಸಿದ ತಾಜಾ ಆಹಾರವನ್ನೇ ಸೇವಿಸುವುದು ಒಳ್ಳೆಯದು. ಆದರೆ ಸೇವಿಸುವ ಆಹಾರದಲ್ಲಿ ಅಕ್ಕಿ, ರಾಗಿ, ಗೋಧಿ, ಜೋಳದಂತಹ ಧಾನ್ಯಗಳಿಗೆ ಪ್ರಾಧಾನ್ಯತೆಯಿರಲಿ. ಆದರೆ ಮಿತವಾಗಿರಬೇಕು. ದಿನಕ್ಕೆ 180 ಗ್ರಾಂ.ನಿಂದ 240ಗ್ರಾಂ.ನಷ್ಟಿದ್ದರೆ ಸಾಕು. ನಾರಿನಾಂಶ, ಜೀವಸತ್ವ, ಖನಿಜಾಂಶವುಳ್ಳ ಹಣ್ಣು ತರಕಾರಿಗಳನ್ನು  ದಿನಕ್ಕೆ ಮುನ್ನೂರರಿಂದ ಐನೂರು ಗ್ರಾಂನಷ್ಟು ಸೇವಿಸಬಹುದು. ಕ್ಯಾಲ್ಸಿಯಂ ಹೊಂದಿದ ಕಡಿಮೆ ಕೊಬ್ಬಿನಂಶವುಳ್ಳ ಹಾಲು, ಮೊಸರು ಚೀಸ್ ಸೇವಿಸಬಹುದು. ಇನ್ನು ಕೆನೆತೆಗೆದ 200 ರಿಂದ 300ಮಿ.ಲೀ ಹಾಲು ಮತ್ತು ಮೊಸರನ್ನು ಸೇವಿಸಬಹುದಾಗಿದೆ.

ಸುಮಾರು 50ರಿಂದ 100 ಗ್ರಾಂನಷ್ಟು ಚರ್ಮ ತೆಗೆದ ಕೋಳಿ ಮಾಂಸ ಮೀನು, ಮೊಟ್ಟೆಯ ಬಿಳಿಭಾಗವನ್ನು ಮಾಂಸಹಾರಿಗಳು ಸೇವಿಸಬಹುದು. ಕೊಬ್ಬಿಲ್ಲದ ಮಾಂಸವನ್ನು ಸೇವಿಸುವುದು ಹಿತಕಾರಿ. ಆದರೆ ಮಾಂಸವನ್ನು ಅಪರೂಪಕ್ಕೆ ಸೇವಿಸುವುದು ಒಳ್ಳೆಯದು. ಮೆಗ್ನೀಷಿಯಂ, ಪೊಟ್ಯಾಷಿಯಂ ಹಾಗೂ ನಾರಿನ ಅಂಶವನ್ನು ಹೊಂದಿರುವ ಕಡ್ಲೆಕಾಯಿ, ಬಾದಾಮಿ ಮೊದಲಾದವುಗಳನ್ನು ವಾರಕ್ಕೆ  45ಗ್ರಾಂ.ನಷ್ಟು ಸೇವಿಸಿದರೆ ಸಾಕು. ಬಾಯಿ ರುಚಿಗೆ ಅಧಿಕ ಪ್ರಮಾಣದಲ್ಲಿ ಸೇವಿಸುವುದು ಒಳ್ಳೆಯದಲ್ಲ.

ಹಣ್ಣು, ತರಕಾರಿ, ಬೇಳೆಯ ಸೂಪ್, ಎಳನೀರನ್ನು ಸೇವಿಸುವುದು ಒಳ್ಳೆಯದು. ಉಪ್ಪು ಸೇರಿಸಿದ ಬೆಣ್ಣೆ ತ್ಯಜಿಸಿ, ಉಪ್ಪು ಬೆರೆಸದ ಬೆಣ್ಣೆಯನ್ನು ಸ್ವಲ್ಪ ಪ್ರಮಾಣದಲ್ಲಿ ಬಳಸಬಹುದು. ಇನ್ನು ಅಡುಗೆಗೆ ಉಪ್ಪು ಹಾಕುವ ಬದಲಿಗೆ ಊಟ ಮಾಡುವಾಗ ಅಲ್ಪ ಪ್ರಮಾಣದಲ್ಲಿ ಉಪ್ಪನ್ನು ಹಾಕಿಕೊಳ್ಳುವುದು ಒಳ್ಳೆಯ ಅಭ್ಯಾಸ.

ಕೆಲವರಿಗೆ ಮೇಲುಪ್ಪು ಹಾಕಿಕೊಳ್ಳುವ ಅಭ್ಯಾಸವಿರುತ್ತದೆ. ಅಂತಹವರು ಅದನ್ನು ಬಿಟ್ಟು ಬಿಡಬೇಕು. ಕೊಬ್ಬಿನ ಅಂಶ ಅಧಿಕ ಪ್ರಮಾಣದಲ್ಲಿರುವ ಎಣ್ಣೆಗಳನ್ನು ವರ್ಜಿಸಬೇಕು. ಕೊಲೆಸ್ಟ್ರಾಲ್ ಕಡಿಮೆಯಿರುವ ಎಣ್ಣೆಯನ್ನು 2ರಿಂದ 3 ಟೀ ಚಮಚೆಯಷ್ಟು ಬಳಸುವುದು ಒಳ್ಳೆಯದು. ಕರಿದ ತಿಂಡಿಗಳ ಸೇವನೆಯನ್ನು ಕಡಿಮೆ ಮಾಡಬೇಕು. ಸಾಸ್, ಮಸಾಲ, ಚಾಟ್ ಸೇರಿದಂತೆ ಸಿದ್ಧ ಮಸಾಲೆಗಳನ್ನು ಸೇವಿಸುವುದು ಒಳ್ಳೆಯದಲ್ಲ. ಆಹಾರದಲ್ಲಿ ಹುಳಿ ಅಂಶಕ್ಕಾಗಿ ನಿಂಬೆಹಣ್ಣು, ವಿನಿಗರ್, ಹುಣಸೆ, ಮಾವಿನ ತುರಿಯನ್ನು ಬಳಸಬಹುದು.

ಉಪ್ಪಿನಿಂದ ಸಂಸ್ಕರಿಸಿದ ಚಿಪ್ಸ್, ಹಪ್ಪಳ, ಉಪ್ಪಿನಕಾಯಿ ಮೊದಲಾದ ಪದಾರ್ಥಗಳಿಂದ ದೂರವಿರುವುದು ಕ್ಷೇಮ. ಅಡುಗೆ ಸೋಡಾ ಸೇರಿದಂತೆ ಸೋಡಾವಾಟರ್, ಪೆಪ್ಸಿ, ಕೋಲಾದಂತಹ ಜ್ಯೂಸ್‌ ಗಳನ್ನು ಉಪಯೋಗಿಸದೆ ತಾಜಾ ಹಣ್ಣಿನ ಜ್ಯೂಸ್‌ ಗಳಿಗೆ ಆದ್ಯತೆ ನೀಡಬೇಕು. ಹೀಗೆ ಒಂದಷ್ಟು ಆಹಾರಗಳ ಸೇವನೆಯಲ್ಲಿ ಮಾರ್ಪಾಡು ಮತ್ತು ಎಚ್ಚರಿಕೆಯನ್ನು ವಹಿಸಿದ್ದೇ ಆದರೆ ಅಧಿಕ ರಕ್ತದೊತ್ತದ ನಿಯಂತ್ರಣ ಸಾಧ್ಯವಾಗುತ್ತದೆ. ಅದು ಏನೇ ಇರಲಿ ನಮಗೆ ಆರೋಗ್ಯವೇ ಭಾಗ್ಯವಾಗಿರುವುದರಿಂದ ಅದನ್ನು ಕಾಪಾಡಿಕೊಂಡರಷ್ಟೇ ಸುಖಮಯ ಜೀವನ ನಡೆಸಲು ಸಾಧ್ಯ. ಹಣ, ಆಸ್ತಿ, ಕಾರು, ಬಂಗಲೆ, ಅಧಿಕಾರ ಇವುಗಳನ್ನು ಪಡೆಯುವ ಸಲುವಾಗಿ ಹೋರಾಟ ಮಾಡುವ ನಾವು ಆರೋಗ್ಯವಾಗಿದ್ದರೆ ಮಾತ್ರ ಅದನ್ನು ಪಡೆಯಲು ಸಾಧ್ಯ ಎಂಬುದನ್ನು ಮರೆಯಬಾರದು.

ಹೃದಯದ ಆರೋಗ್ಯ ಕಾಪಾಡುವ ಬೀಟ್ರೋಟ್… ಅಧ್ಯಯನ ನಡೆಸಿದ ಸಂಶೋಧಕರು ಹೇಳಿದ್ದೇನು ಗೊತ್ತಾ?

B M Lavakumar

 

 

admin
the authoradmin

ನಿಮ್ಮದೊಂದು ಉತ್ತರ

Translate to any language you want