ArticlesLatest

ಕೇರಳದ ಬೈತೂರಪ್ಪನ ಉತ್ಸವದಲ್ಲಿ ಕೊಡಗಿನವರದ್ದೇ ಪಾರುಪತ್ಯೆ… ಏನಿದು ಸಂಪ್ರದಾಯ? ದೇಗುಲದ ವಿಶೇಷತೆ ಏನು?

ಕೇರಳ(kerala)ದ ಇರಿಟ್ಟಿ ನಡುವಿನ ಕಣ್ಣೂರು ಜಿಲ್ಲೆಗೆ ಸೇರಿದ ಬೈತೂರು ಗ್ರಾಮದಲ್ಲಿರುವ ವೈಯತ್ತೂರು ಕಲಿಯೂರು ದೇವಾಲಯ

ಗಡಿಯಾಚೆಗಿನ ಕೇರಳದಲ್ಲಿದ್ದರೂ ಕೊಡಗಿನವರು ಆರಾಧಿಸುವ, ಪೂಜಾ ಕೈಂಕರ್ಯಗಳನ್ನು ನೆರವೇರಿಸಿ, ಸಂಪ್ರದಾಯವನ್ನು ಪಾಲಿಸಿ, ಉತ್ಸವದಲ್ಲಿ ಪಾಲ್ಗೊಳ್ಳುವಂತಹ ದೇಗುಲವೊಂದಿದ್ದರೆ ಅದು ಕೊಡಗು ಮತ್ತು ಕೇರಳ ಗಡಿ ಪ್ರದೇಶದ ಮಾಕುಟ್ಟ ಮತ್ತು ಕೇರಳ(kerala)ದ ಇರಿಟ್ಟಿ ನಡುವಿನ ಕಣ್ಣೂರು ಜಿಲ್ಲೆಗೆ ಸೇರಿದ ಬೈತೂರು ಗ್ರಾಮದಲ್ಲಿರುವ ವೈಯತ್ತೂರು ಕಲಿಯೂರು(vayathur kaliyar temple) ದೇವಾಲಯವಾಗಿದೆ. ಇದನ್ನು ಬೈತೂರಪ್ಪ ದೇಗುಲ ಎಂದೇ ಕರೆಯಲಾಗುತ್ತದೆ.

ಈ ದೇವಾಲಯದಲ್ಲಿ  ವರ್ಷಕ್ಕೊಮ್ಮೆ ನಡೆಯುವ ಉತ್ಸವದಲ್ಲಿ ಕೊಡಗಿನವರು ಸಾಂಪ್ರದಾಯಿಕ ಉಡುಗೆಯಲ್ಲಿ  ದುಡಿ, ಕೊಂಬು, ವಾಲಗ, ಎತ್ತುಗಳೊಂದಿಗೆ ಅಕ್ಕಿಯನ್ನು ತಲೆಯಲ್ಲಿ ಹೊತ್ತು ತಂದು ದೇವರಿಗೆ ಸಮರ್ಪಿಸಿ,, ಎತ್ತು ಪೋರಾಟ ನಡೆಸಿ ಉತ್ಸವದಲ್ಲಿ ನೃತ್ಯ ಮಾಡಿ ಪ್ರಸಾದ ಸ್ವೀಕರಿಸಿ ಮಳೆ, ಬೆಳೆ, ಆರೋಗ್ಯಕ್ಕಾಗಿ ಪ್ರಾರ್ಥಿಸುವುದು ಹಿಂದಿನಿಂದಲೂ ನಡೆದುಕೊಂಡು ಬಂದ ಸಂಪ್ರದಾಯವಾಗಿದೆ.

ಪ್ರತಿವರ್ಷದಂತೆ ಈ ಬಾರಿಯೂ ಬೈತೂರಪ್ಪ ದೇವಾಲಯದ ಉತ್ಸವ ಈಗಾಗಲೇ ಆರಂಭವಾಗಿದ್ದು, ಭಾನುವಾರ ತನಕ ನಡೆಯಲಿದೆ. ಉತ್ಸವದ ಅಂಗವಾಗಿ ಕೊಡಗಿನ ಪುಗ್ಗೇರ ಕುಟುಂಬದಿಂದ ಎತ್ತು ಪೋರಾಟ್ ಹಾಗೂ ಅಕ್ಕಿ ಅಳೆಯುವ ಶಾಸ್ತ್ರ ಈಗಾಗಲೇ ನಡೆದಿದ್ದು, ಸಂಪ್ರದಾಯದಂತೆ ಊಟು ಹಬ್ಬದ ಅಕ್ಕಿಯನ್ನು ಕೊಡಗಿನಿಂದ ದೇವಸ್ಥಾನಕ್ಕೆ ತರಲಾಯಿತು. ಇನ್ನು ಕೊಡಗಿನ ಐತಿಹಾಸಿಕ ಪುಗ್ಗೇರ ಮನೆಯಿಂದ ಇಲ್ಲಿನ ಊಟು ಉತ್ಸವಕ್ಕಾಗಿ ಅಕ್ಕಿ ತರುವುದು ಸಂಪ್ರದಾಯವಾಗಿದ್ದು,     ದೇವಸ್ಥಾನಕ್ಕೆ ಅಕ್ಕಿ ಹಾಗೂ ಎತ್ತುಗಳೊಂದಿಗೆ ಆಗಮಿಸಿದ ಕೊಡವರನ್ನು ಸಂಪ್ರದಾಯದಂತೆ ಬರಮಾಡಿಕೊಂಡು, ಕೊಡಗಿನಿಂದ ತಂದ ಅಕ್ಕಿಯನ್ನು ಅಳೆದ ಬಳಿಕ ಉತ್ಸವಕ್ಕೆ ಚಾಲನೆ ದೊರೆಯುತ್ತದೆ.

ಉತ್ಸವದಲ್ಲಿ ಗುರುವಾರ (ಜ.22)ಶ್ರೀ ಭೂತಬಲಿ, ವಿಶೇಷ ಪೂಜೆ, ನೈವೇದ್ಯ, ಪುಗ್ಗೆರ ಮನೆಯವರ ಪೂಜಾ ಕೈಂಕರ್ಯಗಳು ನಡೆದಿದ್ದರೆ, ಶುಕ್ರವಾರ (ಜ.23)  ಬೆಳಿಗ್ಗೆ ಕೊಡಗಿನವರಿಂದ ಮೆರವಣಿಗೆ, ವಿವಿಧ ಸಾಂಪ್ರದಾಯಿಕ ಕಾರ್ಯಕ್ರಮಗಳು, (9 ಊಟ್)  ನಾಡಿನ ಎತ್ತು ಪೋರಾಟ, ಅಕ್ಕಿ ಅಳೆಯುವುದು, ರಾತ್ರಿ 8.30 ಗಂಟೆಗೆ ಪುಗ್ಗೆರ ಕುಟುಂಬದ ವಿಶೇಷ ಪೂಜೆ, 9 ಗಂಟೆಗೆ ಬೇಟೆ ಕುರುಮಗನ್ ದೇವಸ್ಥಾನದಲ್ಲಿ ಒಂದು ಸಾವಿರ ತೆಂಗನಕಾಯಿ ಒಡೆಯುವ ಕಾರ್ಯಕ್ರಮ ಜರುಗಿದೆ.

ಶನಿವಾರ (ಜ.24) (10 ಊಟ್) ರಂದು ದೊಡ್ಡ ಹಬ್ಬ, ಅಪರಾಹ್ನ 2.30 ಗಂಟೆಗೆ ಆನೆ ಅಂಬಾರಿ ಪ್ರದಕ್ಷಿಣೆ ನಡೆದರೆ, ಭಾನುವಾರ  (ಜ.25)  (11ಊಟ್) ರಂದು ಬೆಳಿಗ್ಗೆ 9.30 ಗಂಟೆಗೆ ಕೊಡಗಿನ ಎಲ್ಲಾ ತಿರುವಳಕಾರರ ದರ್ಶನ ಹಾಗೂ ಬೈತೂರಪ್ಪ ದೇವರ ಆರ್ಶೀವಾದ ಕಾರ್ಯಕ್ರಮ ನಡೆಯಲಿದೆ. ಪ್ರತಿವರ್ಷವೂ ಅದ್ಧೂರಿಯಾಗಿ ನಡೆಯುವ ಬೈತೂರುಗ್ರಾಮದ ಉತ್ಸವ ಮತ್ತು ಇಲ್ಲಿನ ದೇಗುಲದ ಬಗ್ಗೆ ನೋಡಿದ್ದೇ ಹಲವು ವಿಶೇಷತೆಗಳನ್ನು ನಾವು ಕಾಣಬಹುದಾಗಿದೆ. ಇಲ್ಲಿರುವ ವೈಯತ್ತೂರು ಕಲಿಯೂರು ದೇವಾಲಯದಲ್ಲಿರುವ ಲಿಂಗವು ಮಹಿಮೆಯನ್ನು ಹೊಂದಿದ್ದು,  ಶಿವಪಾರ್ವತಿ ಒಂದೇ ಲಿಂಗದಲ್ಲಿ ಐಕ್ಯವಾಗಿರುವ ಅಪರೂಪದ ಉದ್ಭವ ಲಿಂಗವಾಗಿದೆ.

ಈ ವ್ಯಾಪ್ತಿಯಲ್ಲಿ ಕೊಡಗಿನ ಸಂಸ್ಕೃತಿಯ ಕುರುಹು ಇರುವುದು ವಿಶೇಷ. ಹಿಂದಿನ ಕಾಲದಲ್ಲಿ  ಕೊಡಗಿನಲ್ಲಿ ಭತ್ತವನ್ನಷ್ಟೆ ಬೆಳೆಯುತ್ತಿದ್ದ ರೈತರು ಅಕ್ಕಿ ಮಾಡಿ ಅದನ್ನು ಕೇರಳಕ್ಕೆ ಎತ್ತುಗಳ ಮೇಲೆ ಹೇರಿಕೊಂಡು ಹೋಗಿ ಅಲ್ಲಿ ಮಾರಾಟ ಮಾಡಿ ಅಲ್ಲಿಂದ ಸಾಂಬಾರ ಪದಾರ್ಥಗಳನ್ನು ತರುತ್ತಿದ್ದರು. ದುರ್ಗಮ ಕಾಡಿನ ಹಾದಿಯಲ್ಲಿ ಹೋಗಬೇಕಾದರೆ ಹುಲಿ ಸೇರಿದಂತೆ ವನ್ಯಪ್ರಾಣಿಗಳ ದಾಳಿಯನ್ನು ಎದುರಿಸಬೇಕಾಗುತ್ತಿತ್ತು. ಇಂತಹ ಸಂದರ್ಭದಲ್ಲಿ ತಮಗೆ ಯಾವುದೇ ತೊಂದರೆ ಆಗದಂತೆ  ಮತ್ತು ಮಳೆ ಬೆಳೆ ಆಗುವಂತೆ ಪ್ರಾರ್ಥಿಸಿ ಅಕ್ಕಿಯನ್ನು ಬೈತೂರಪ್ಪನಿಗೆ ಅರ್ಪಿಸಿ ನೈವೇದ್ಯ ಮಾಡಿ ಪ್ರಾರ್ಥಿಸಿಕೊಳ್ಳುತ್ತಿದ್ದರು.

ಬದಲಾದ ಕಾಲದಲ್ಲಿ ಸಂಪ್ರದಾಯ ಮುಂದುವರೆದಿದ್ದು, ಉತ್ಸವದಲ್ಲಿ ಹರಕೆ ಸಲ್ಲಿಸುವುದಲ್ಲದೆ, ಪೂಜಾ ಕೈಂಕರ್ಯಗಳಲ್ಲಿ ಕೊಡಗಿನವರು ಭಾಗವಹಿಸುವುದು ನಡೆದುಕೊಂಡು ಬಂದಿದೆ. ಇವತ್ತಿಗೂ ಕೇರಳದಿಂದ ಬಂದು ದೇವರು ಮತ್ತು ದೈವಗಳು ಕೊಡಗಿನಲ್ಲಿ ನೆಲೆನಿಂತಿರುವುದನ್ನು ಕಾಣಬಹುದು ಹಾಗೆಯೇ ಕೇರಳದಲ್ಲಿರುವ ದೇವರಿಗೂ ಕೊಡಗಿಗೂ ನಂಟು ಇರುವುದನ್ನು ನಾವು ಕಾಣಬಹುದಾಗಿದೆ. ಅದು ಏನೇ ಇರಲಿ ಬೈತೂರಪ್ಪ ಉತ್ಸವ ಕೊಡಗು ಕೇರಳದ ಸಂಗಮದ ಉತ್ಸವ ಎನ್ನುವುದರಲ್ಲಿ ಎರಡು ಮಾತಿಲ್ಲ.

B.M.Lavakumar

admin
the authoradmin

ನಿಮ್ಮದೊಂದು ಉತ್ತರ

Translate to any language you want