Mysore

ಮೈಸೂರು ನಗರಪಾಲಿಕೆಯಲ್ಲಿ ಕೆಲಸಕ್ಕೆ ಬಾರದವರಿಗೂ ಸಂಬಳ ನೀಡಿದ ಸಿಬ್ಬಂದಿ ಸಸ್ಪೆಂಡ್

ಮೈಸೂರು: ಕರ್ತವ್ಯಕ್ಕೆ ಗೈರಾದ ಪೌರಕಾರ್ಮಿಕರಿಗೂ ಸಂಬಳ ನೀಡಿದ ಆರೋಪದ ಮೇರೆಗೆ ಮಹಾನಗರ ಪಾಲಿಕೆಯ ಮೂವರು ಸಿಬ್ಬಂದಿಯನ್ನು ಅಮಾನತುಗೊಳಿಸಿ ಆಯುಕ್ತ ಶೇಖ್ ತನ್ವೀರ್ ಆಸಿಫ್ ಆದೇಶ ಹೊರಡಿಸಿದ್ದಾರೆ.

ಮಹಾನಗರ ಪಾಲಿಕೆಯ ಆರೋಗ್ಯ ಶಾಖೆ ಪ್ರಥಮ ದರ್ಜೆ ಸಹಾಯಕರಾದ ಕೆ.ಎಲ್.ಸಿ.ಪಾಪ, ಪುಷ್ಪಾವತಿ, ದ್ವಿತೀಯ ದರ್ಜೆ ಸಹಾಯಕಿ ಅನಿತಾ.ಸಿ.ಎಚ್ ಅಮಾನತುಗೊಂಡವರು. ಇವರ ವಿರುದ್ಧ ಗೈರು ಹಾಜರಾಗಿರುವ ದಿನಗಳಿಗೆ ಪೌರಕಾರ್ಮಿಕರ ಹೆಚ್ಚುವರಿ ವೇತನ ಪಾವತಿಸಿ ಕರ್ತವ್ಯ ಲೋಪ ಎಸಗಿದ ಆರೋಪ ಕೇಳಿಬಂದಿದೆ.

2025ರ ಸೆಪ್ಟಂಬರ್, ಅಕ್ಟೋಬರ್ ಮತ್ತು ನವೆಂಬರ್ ತಿಂಗಳಿಗೆ ಸಂಬಂಧಿಸಿದಂತೆ ಆರೋಗ್ಯ ನಿರೀಕ್ಷಕರು ನೀಡಿರುವ ಹಾಜರಾತಿ ಪಟ್ಟಿಯೊಂದಿಗೆ ನೀಡಿದ್ದ ವೇತನ ಪರಿಶೀಲಿಸಿದಾಗ ಕರ್ತವ್ಯ ಲೋಪ ಬೆಳಕಿಗೆ ಬಂದಿದೆ. ಪುಷ್ಪಾವತಿ.ಎಂ. ಒಟ್ಟು 1,17,081 ರೂ, ಅನಿತಾ ಸಿ.ಎಚ್. ಒಟ್ಟು 1,54,705 ರೂ., ಕೆ.ಎಲ್.ಸಿ.ಪಾಷ 13,58,525ರೂ.ಗಳನ್ನು ಗೈರು ಹಾಜರಿ ದಿನಗಳಿಗೂ ವೇತನ ಪಾವತಿಸಿರುವುದು ಕಂಡು ಬಂದಿದೆ. ಈ ಹಿನ್ನೆಲೆಯಲ್ಲಿ ಆಯುಕ್ತರು ಇಲಾಖೆ ವಿಚಾರಣೆ ಕಾಯ್ದಿರಿಸಿ ಜ. 21ರಂದು ಸೇವೆಯಿಂದ ಅಮಾನತುಗೊಳಿಸಿ ಆದೇಶಿಸಿದ್ದಾರೆ.

ಸದರಿ ನೌಕರರು ಇಲಾಖೆಯಿಂದ ಒಂದೇ ಕಡೆ ಕೆಲಸ ಮಾಡುತ್ತಿದ್ದು ವರ್ಗಾವಣೆ ಮಾಡುವಂತೆ ಒತ್ತಾಯಿಸಲಾಗಿತ್ತು. ಕಾಯಂ ಪೌರಕಾರ್ಮಿಕರು ನಿಧನರಾದರೆ ಅನುಕಂಪದ ಆಧಾರದ ಕೆಲಸ ನೀಡಲು ಲಕ್ಷಾಂತರ ರೂ. ಲಂಚ ಕೇಳುತ್ತಿದ್ದರು. ಎಲ್‌ ಐಸಿ ಪಾಲಿಸಿಗಳನ್ನು ಇವರೇ ಮಾಡುತ್ತಿದ್ದರು. ಈ ಬಗ್ಗೆ ಆರೋಗ್ಯ ಶಾಖೆಯ ಅಕ್ರಮಗಳ ಬಗ್ಗೆ ನಗರ ಪಾಲಿಕೆ ಆಯುಕ್ತರ ಗಮನಕ್ಕೆ ತರಲಾಗಿತ್ತು ಎಂದು ಕರ್ನಾಟಕ ರಾಜ್ಯ ನಗರ ಪಾಲಿಕೆ, ನಗರಸಭೆ, ಪುರಸಭೆಗಳ ಪೌರಕಾರ್ಮಿಕರ ಮಹಾಸಂಘದ ಜಿಲ್ಲಾಧ್ಯಕ್ಷ ಆರ್ಟಿಸ್ಟ್ ಎಸ್.ನಾಗರಾಜ್ ತಿಳಿಸಿದ್ದಾರೆ.

ನಗರಪಾಲಿಕೆ ಅವ್ಯವಸ್ಥೆಗಳ ಆಗರ: ಸಂಸದ ಯದುವೀರ್ ಒಡೆಯರ್

ಮೈಸೂರು ನಗರಪಾಲಿಕೆ ಈಗ ಅವ್ಯವಸ್ಥೆಗಳ ಆಗರವಾಗಿದೆ. ಉತ್ತರದಾಯಿತ್ವ ಇಲ್ಲದೇ ಅಕ್ರಮಗಳ ಸಂಖ್ಯೆ ಏರಿಕೆಯಾಗಿದೆ. ಇದಕ್ಕೆ ಕಾಂಗ್ರೆಸ್ ಸರ್ಕಾರವೇ ಸಂಪೂರ್ಣ ಹೊಣೆ. ನಗರ ಪಾಲಿಕೆಯಲ್ಲಿ ಸಾರ್ವಜನಿಕ ನಿಧಿಯನ್ನೇ ದುರುಪಯೋಗ ಮಾಡಿಕೊಳ್ಳಲಾಗುತ್ತಿದೆ. ಮೂವರು ಮಹಿಳಾ ಸಿಬ್ಬಂದಿಯನ್ನು ಅಮಾನತು ಮಾಡಿರುವುದೇ ಇದಕ್ಕೆ ಸಾಕ್ಷಿ. ಚುನಾಯಿತ ಪ್ರತಿನಿಧಿಗಳು ಇಲ್ಲದಿರುವುದು, ಸಮರ್ಥ ಮೇಲ್ವಿಚಾರಣೆ ಮಾಡದಿರುವುದು, ಸುಧಾರಣೆ ಕ್ರಮಗಳನ್ನು ಕೈಗೊಳ್ಳದಿರುವುದು, ಉತ್ತರದಾಯಿತ್ವ ಇರದಿರುವುದು ಎಲ್ಲಾ ಸಮಸ್ಯೆಗಳಿಗೆ ಕಾರಣವಾಗಿದೆ. ರಾಜ್ಯ ಸರ್ಕಾರ ಸ್ಥಳೀಯ ಸಂಸ್ಥೆ ಚುನಾವಣೆ ನಡೆಸದೇ ವಿಳಂಬ ಧೋರಣೆ ತೋರುತ್ತಿರುವುದು ಎಲ್ಲದ್ದಕ್ಕೂ ಕಾರಣವಾಗಿದೆ. ಸ್ಥಳೀಯ ಪ್ರಜಾಪ್ರಭುತ್ವ ಹಾದಿ ತಪ್ಪಿದಾಗ, ಭ್ರಷ್ಟಾಚಾರ ಪ್ರಕರಣಗಳು ಹೆಚ್ಚಾಗುತ್ತಿವೆ. ಗ್ರೇಟರ್ ಮೈಸೂರು ಮಾಡುತ್ತೇವೆ ಎಂದು ಹೊರಟಿರುವ ಕಾಂಗ್ರೆಸ್ ಸರ್ಕಾರ, ಅದನ್ನು ಮಾಡದಿದ್ದರೂ ಪರವಾಗಿಲ್ಲ, ನಗರಪಾಲಿಕೆಯಲ್ಲಿ ಗ್ರೇಟರ್ ಸುಧಾರಣೆಗಳನ್ನು ಮಾಡಿದರೆ ಸಾಕಾಗಿದೆ ಎಂದು ಸಂಸದ ಯದುವೀರ್ ಒಡೆಯರ್ ತಿಳಿಸಿದ್ದಾರೆ.

 

 

 

admin
the authoradmin

ನಿಮ್ಮದೊಂದು ಉತ್ತರ

Translate to any language you want