Mysore

ಈ ಬಾರಿ ದೆಹಲಿ ಗಣರಾಜ್ಯೋತ್ಸವ ಪರೇಡ್‌ನಲ್ಲಿಲ್ಲ ರಾಜ್ಯದ ಸ್ತಬ್ಧಚಿತ್ರ… ಸಂಸದ ಯದುವೀರ್ ಹೇಳಿದ್ದೇನು?

ಮೈಸೂರು: ಕರ್ನಾಟಕದಿಂದ ಸಿರಿಧಾನ್ಯದಿಂದ ಮೈಕ್ರೋಚಿಪ್ ವರೆಗೆ (ಮಿಲ್ಲೆಟ್ ಟು ಮೈಕ್ರೋಚಿಪ್) ಎನ್ನುವ ಸ್ತಬ್ಧಚಿತ್ರವನ್ನು 2026ರ ಜನವರಿ 26 ರಂದು ನವದೆಹಲಿಯಲ್ಲಿ ನಡೆಯುವ ಗಣರಾಜ್ಯೋತ್ಸವದ ಪಥಸಂಚಲನದಲ್ಲಿ ಪ್ರದರ್ಶಿಸಲಾಗುತ್ತಿದೆ ಎಂದು ತಿಳಿಸಲಾಗಿತ್ತು. ಆದರೆ ಇದೀಗ ಪರೇಡ್ ನಲ್ಲಿ ರಾಜ್ಯದ ಸ್ಥಬ್ದ ಚಿತ್ರ ಭಾಗವಹಿಸುತ್ತಿಲ್ಲ ಎಂಬುದು ತಿಳಿದು ಬಂದಿದೆ.

ಈ ಕುರಿತಂತೆ ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಮಾಹಿತಿ ನೀಡಿದ್ದು, ರಾಜ್ಯದಿಂದ ಸರಿಯಾಗಿ ಪತ್ರ ವ್ಯವಹಾರ ನಡೆಯದ ಹಿನ್ನೆಲೆ ಈ ಬಾರಿಯ ಗಣರಾಜ್ಯೋತ್ಸವದ ಪರೇಡ್ ನಲ್ಲಿ ರಾಜ್ಯದ ಸ್ಥಬ್ದ ಚಿತ್ರ ಭಾಗವಹಿಸುತ್ತಿಲ್ಲ ಎಂದು ತಿಳಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸ್ತಬ್ಧಚಿತ್ರ ಕಳಿಸುವ ಸಂಬಂಧ ರಾಜ್ಯ ಸರ್ಕಾರದಿಂದ ಸಮರ್ಪಕವಾಗಿ ಪತ್ರ ವ್ಯವಹಾರ ನಡೆದಿಲ್ಲ. ಹೀಗಾಗಿ ಸಾಕಷ್ಟು ಗೊಂದಲ ಉಂಟಾಗಿತ್ತು. ಈ ಹಿನ್ನೆಲೆ ಈ ಬಾರಿಯ ಗಣರಾಜ್ಯೋತ್ಸವದಲ್ಲಿ ನಮ್ಮ ರಾಜ್ಯದ ಸ್ತಬ್ಧಚಿತ್ರ ಇರುವುದಿಲ್ಲ ಎಂದು ಹೇಳಿದ್ದಾರೆ.

ಮೈಸೂರು-ಕುಶಾಲನಗರ ರೈಲ್ವೆ ಯೋಜನೆ ಸ್ಥಗಿತ ವಿಚಾರವಾಗಿ ಮಾತನಾಡಿ, ಯೋಜನೆಗೆ ಅಗತ್ಯವಿರುವ ಭೂಮಿಯನ್ನು ರಾಜ್ಯ ಸರ್ಕಾರ ಹಸ್ತಾಂತರ ಮಾಡಿಲ್ಲ. ಈ ಬಗ್ಗೆ ಪುನರ್ ಪರಿಶೀಲನೆ ಮಾಡುವಂತೆ ರೈಲ್ವೆ ಇಲಾಖೆಯ ಗಮನಕ್ಕೆ ತಂದಿದ್ದೇನೆ. ಈ ಭಾಗಕ್ಕೆ ರೈಲ್ವೆ ಯೋಜನೆ ಅಗತ್ಯವಿದೆ. ಮೈಸೂರು-ಕೊಡಗು ಜನರ ಹಿತದೃಷ್ಟಿಯಿಂದ ಯೋಜನೆ ಅನುಷ್ಠಾನಗೊಳ್ಳಬೇಕು. ಮತ್ತೊಮ್ಮೆ ಕೇಂದ್ರದ ಗಮನ ಸೆಳೆಯುತ್ತೇನೆ. ರಾಜ್ಯ ಸರ್ಕಾರ ಕೂಡ ಇದಕ್ಕೆ ಸಹಕಾರ ನೀಡಬೇಕು ಎಂದರು.

ಬಳ್ಳಾರಿಯಲ್ಲಿ ಮತ್ತೊಮ್ಮೆ ಗಲಾಟೆ ನಡೆದಿರುವ ಬಗ್ಗೆ ಪ್ರತಿಕ್ರಿಯಿಸಿ, ರಾಜ್ಯದಲ್ಲಿ ಕಾನೂನು ಸುವ್ಯವಸ್ಧೆ ಸಂಪೂರ್ಣ ಹದಗೆಟ್ಟಿದೆ. ಈ ಬಗ್ಗೆ ಹೋರಾಟ ಕೂಡ ಮಾಡಿದ್ದೇವೆ. ರಾಜ್ಯ ಸರ್ಕಾರ ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಸೂಕ್ತ ನಿರ್ಧಾರ ಕೈಗೊಳ್ಳಬೇಕು ಎಂದರಲ್ಲದೆ, ವಿಧಾನಸಭಾ ಅಧಿವೇಶನದಲ್ಲಿ ರಾಜ್ಯಪಾಲರಿಗೆ ಕಾಂಗ್ರೆಸ್‌ನಿಂದ ಅಗೌರವ ವಿಚಾರಕ್ಕೆ ಪ್ರತಿಕ್ರಿಯಿಸಿ, ರಾಜ್ಯ ಸರ್ಕಾರದ ನಡೆಯನ್ನು ಜನ ಗಮನಿಸಿದ್ದಾರೆ. ರಾಜ್ಯಪಾಲರು ಸಂವಿಧಾನಾತ್ಮಕವಾಗಿ ತಮ್ಮ ಜವಾಬ್ದಾರಿ ನಿಭಾಯಿಸಿ ಹೋಗಿದ್ದಾರೆ. ಆದರೆ, ಕೆಲ ಶಾಸಕರ ಗೂಂಡಾ ರೀತಿಯ ವರ್ತನೆ ಖಂಡನೀಯ. ರಾಜ್ಯಪಾಲರು ಸಂವಿಧಾನ ಬದ್ಧವಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಅವರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿರುವುದು ಪ್ರಜಾಪ್ರಭುತ್ವದ ಕಗ್ಗೊಲೆ. ಇದನ್ನು ನಾವು ಖಂಡಿಸುತ್ತೇವೆ ಎಂದು ಹೇಳಿದರು.

ಚಾಮುಂಡಿ ಬೆಟ್ಟದ ಪ್ರಸಾದ್ ಕಾಮಗಾರಿಗೆ ವಿರೋಧ ವ್ಯಕ್ತವಾಗಿರುವ ಬಗ್ಗೆ ಮಾತನಾಡಿ, ಅಲ್ಲಿನ ಗ್ರಾಮಸ್ಥರು ವಿರೋಧ ಮಾಡಿದ್ದಾರೆ. ಬೆಟ್ಟದ ದೇಗುಲದ ಪಕ್ಕದಲ್ಲೇ ಕಾಮಗಾರಿ ನಡೆಯುತ್ತಿದೆ. ಸುತ್ತಮುತ್ತಲಿನ ಕಾಮಗಾರಿಯಿಂದ ಗೋಪುರಕ್ಕೆ ತೊಂದರೆಯಾಗಬಹುದು ಅಂಬ ಆತಂಕವಿದೆ. ಈ ಹಿಂದೆ ಯಾವ ರೀತಿ ಕಾಮಗಾರಿ ಮಾಡಿದ್ದಾರೆ ಎಂಬುದನ್ನು ತಿಳಿಯಲಿ. ನಂತರ ಕಾಮಗಾರಿ ಮುಂದುವರೆಸಲಿ. ಚಾಮುಂಡಿ ಬೆಟ್ಟದ ಅಭಿವೃದ್ಧಿ ಕೂಡ ಆಗಬೇಕಿದೆ. ಪರಿಸರ ಸಂರಕ್ಷಿಸಬೇಕಿದೆ. ನನ್ನ ಅನುಮತಿಗಿಂತ ಕಾಮಗಾರಿಗೆ ವಿರೋಧ ಮಾಡಿರುವವರ ಅನುಮತಿ ತುಂಬಾ ಮುಖ್ಯ. ಅಧಿಕಾರಿಗಳು ತರಾತುರಿಯಲ್ಲಿ ಕಾಮಗಾರಿ ಮಾಡುತ್ತಿರುವುದು ಯಾಕೆ ಎಂಬುದು ಗೊತ್ತಿಲ್ಲ. ಜನರ ಅಭಿಪ್ರಾಯ ಪಡೆದು ಕಾಮಗಾರಿ ಮುಂದುವರೆಸಲಿ ಎಂದು ಹೇಳಿದ್ದಾರೆ.

admin
the authoradmin

ನಿಮ್ಮದೊಂದು ಉತ್ತರ

Translate to any language you want