LatestPolitical

ಮೋದಿಯಿಂದ ದಕ್ಷಿಣದ ದಂಡಯಾತ್ರೆ…. ಎಚ್ಚೆತ್ತುಕೊಳ್ಳದಿದ್ದರೆ ಕಾಂಗ್ರೆಸ್ ಗೆ ಉಳಿಗಾಲವಿಲ್ಲ!

ರಾಜಕೀಯ ನಾಯಕರಿಗೆ ಅದರಲ್ಲೂ ರಾಷ್ಟ್ರೀಯ ಪಕ್ಷಗಳ ಸಾರಥ್ಯ ವಹಿಸಿದವರಿಗಂತೂ ಪ್ರತಿದಿನವೂ  ಹೋರಾಟವೇ… ಏಕೆಂದರೆ ವರ್ಷದಲ್ಲಿ ಒಂದಲ್ಲ ಒಂದು ಕಡೆ ಚುನಾವಣೆಗಳು ನಡೆಯುತ್ತಲೇ ಇರುವುದರಿಂದ ಪಕ್ಷದ ಗೆಲುವಿಗೆ ಬೇಕಾದ ಸಿದ್ಧತೆಗಳನ್ನು ಮಾಡಲೇ ಬೇಕಾದ ಅನಿವಾರ್ಯತೆ ಇದ್ದೇ ಇರುತ್ತದೆ. ಇವತ್ತು ಚುನಾವಣೆ ಎನ್ನುವುದು ಬರೀ ಚುನಾವಣೆಯಾಗಿ ಉಳಿದಿಲ್ಲ. ಅದೊಂದು ರೀತಿಯ ಯುದ್ಧದಂತೆಯೇ ಭಾಸವಾಗುತ್ತಿದೆ. ಹೀಗಾಗಿ ಚುನಾವಣಾ ಸಮರ ಗೆಲ್ಲಬೇಕಾದರೆ ಹೋರಾಟ ಮತ್ತು ತಂತ್ರಗಳನ್ನು ಮಾಡಬೇಕಾಗುತ್ತದೆ.

ವಿಶ್ವದಲ್ಲೇ ಬೃಹತ್ ಪ್ರಜಾಪ್ರಭುತ್ವ ರಾಷ್ಟ್ರವಾಗಿರುವ ಭಾರತದಲ್ಲಿ ಯಾರು ಬೇಕಾದರೂ ಪ್ರಧಾನಿಯಾಗಬಹುದು ಎಂಬುದನ್ನು ಈಗಾಗಲೇ ತೋರಿಸಿಕೊಟ್ಟಿದೆ. ಇದು ಇಲ್ಲಿನ ಪ್ರಜಾಪ್ರಭುತ್ವಕ್ಕೆ ಇರುವ ಶಕ್ತಿಯಾಗಿದೆ. ಕುಟುಂಬ ರಾಜಕಾರಣ ಮೇಳೈಸಿದ್ದರೂ ಬದಲಾದ ಕಾಲದಲ್ಲಿ ಇಲ್ಲಿನ ಮತದಾರರು ಅದಕ್ಕೊಂದು ಇತಿಶ್ರೀ ಹಾಡಿದ್ದನ್ನು ರಾಜಕೀಯ ಇತಿಹಾಸ ನಮಗೆ ತೆರೆದಿಡುತ್ತದೆ. ಎಲ್ಲದಕ್ಕೂ ಒಂದು ಅಂತ್ಯ ಇದ್ದೇ ಇರುತ್ತದೆ. ಹೀಗಾಗಿ ಕೋಟೆ ಕಟ್ಟಿ ಮೆರೆದವರು ಬದಲಾದ ಕಾಲಘಟ್ಟದಲ್ಲಿ ತೆರೆಮರೆಗೆ ಸರಿದಿದ್ದಾರೆ.

ಸ್ವಾತಂತ್ರ್ಯ ನಂತರ ಇಡೀ ದೇಶದಲ್ಲಿ ತನ್ನ ಪ್ರಾಬಲ್ಯ ಸಾಧಿಸುವ ಮೂಲಕ ನೆಹರು ಕುಟುಂಬದ ಹಿಡಿತದಲ್ಲಿಯೇ ಮುನ್ನಡೆಯುತ್ತಿರುವ ಕಾಂಗ್ರೆಸ್ ನ ಪರಿಸ್ಥಿತಿ ಇವತ್ತು ಏನಾಗಿದೆ ಎಂಬುದು ನಮ್ಮ ಕಣ್ಣಮುಂದೆಯೇ ಇದೆ. ನೆಹರು ಕುಟುಂಬದ ಹಿಡಿತದಿಂದ ಬಿಡಿಸಿಕೊಂಡು ಈಚೆಗೆ ಬರಲಾರದೆ, ಹೈಕಮಾಂಡ್ ಎಂದರೆ ನೆಹರು ಕುಟುಂಬದ ಕುಡಿಗಳು ಎಂಬಂತಾಗಿದ್ದು, ಇದರಿಂದಾಗಿ ಆ ಕುಟುಂಬದಾಚೆಗೆ ಒಬ್ಬ ಪ್ರಭಾವಿ ನಾಯಕ ಹುಟ್ಟಿಕೊಳ್ಳಲೇ ಇಲ್ಲ ಎಂಬುದನ್ನು ತಳ್ಳಿಹಾಕಲಾಗದು.

ಇವತ್ತು ಕಾಂಗ್ರೆಸ್ ನ ಪ್ರಮುಖ ನಾಯಕನಾಗಿ ಪಕ್ಷದ ಹಿಡಿತವನ್ನು ತನ್ನಲ್ಲಿಟ್ಟುಕೊಂಡಿರುವ ರಾಹುಲ್ ಗಾಂಧಿ ಚುನಾವಣಾ ತಂತ್ರಗಳನ್ನು ಬಳಸುವಲ್ಲಿ ಮತ್ತು ಮತದಾರರ ಮನಗೆಲ್ಲುವಲ್ಲಿ ವಿಫಲರಾಗಿದ್ದಾರೆ. ಇದಕ್ಕೆ ಲೋಕಸಭಾ ಚುನಾವಣೆಯ ನಂತರ ನಡೆದ ಚುನಾವಣೆಗಳಲ್ಲಿ ಕಾಂಗ್ರೆಸ್ ಹೀನಾಯವಾಗಿ ಸೋತಿರುವುದೇ ಪ್ರಮುಖ ಕಾರಣವಾಗಿದೆ. ಇನ್ನು ಚುನಾವಣೆಗಳನ್ನು ತಮ್ಮದೇ ನೇತೃತ್ವದಲ್ಲಿ ನಡೆಸುವಷ್ಟು ಸಬಲರಾಗಿರುವ ನಾಯಕರು ಕಾಂಗ್ರೆಸ್ ನಲ್ಲಿ ಇದ್ದರೂ ಅವರಿಗೆ ಯಾವುದೇ ರೀತಿಯ ಅಧಿಕಾರ ನೀಡದ ಕಾರಣದಿಂದಾಗಿ ಅವರು ಎಲೆ ಮರೆಯ ಕಾಯಿಯಂತೆ ಉಳಿದು ಹೋಗಿದ್ದಾರೆ.

ರಾಹುಲ್ ಗಾಂಧಿ ಅವರು ಚುನಾವಣೆಯ ಸಂದರ್ಭದಲ್ಲಿ ಯಾವುದೇ ರೀತಿಯ ತಂತ್ರಗಳನ್ನು ಮಾಡಿದರೂ ಅದಕ್ಕೆ ಪ್ರತಿತಂತ್ರಗಳನ್ನು ಮೋದಿ ಮತ್ತು ಅಮಿತ್ ಶಾ ಜೋಡಿ ಮಾಡುತ್ತಿದೆ. ಚುನಾವಣೆ ಎನ್ನುವುದು ಬರೀ ಸಮಾವೇಶ ನಡೆಸುವುದು, ಪಾದಯಾತ್ರೆ ತೆರಳುವುದು, ಯಾವುದೋ ಒಂದು ವಿಚಾರವನ್ನಿಟ್ಟುಕೊಂಡು ಅದನ್ನೇ ಹೇಳಿಕೊಂಡು ಓಡಾಡುವುದಲ್ಲ. ಅದರಾಚೆಗೂ ಪಕ್ಷದ ಪ್ರತಿ ನಾಯಕನಿಗೂ ಕೆಲಸಕೊಟ್ಟು ಅವನನ್ನು ಫೀಲ್ಡ್ ಗೆ ಇಳಿಸುವುದಾಗಿದೆ. ಇಷ್ಟೇ ಇಲ್ಲದೆ ಪಕ್ಷದಲ್ಲಿ ಕಾರ್ಯಕರ್ತರನ್ನು ಹುಟ್ಟು ಹಾಕುವ ಕೆಲಸ ಮಾಡಬೇಕಾಗಿದೆ. ಕಾರ್ಯಕರ್ತರೇ ಪಕ್ಷದ ಅಡಿಪಾಯವಾಗಿರುವುದರಿಂದ ಅವರು ತಳಮಟ್ಟದಲ್ಲಿ ಕೆಲಸ ಮಾಡದೆ ಹೋದರೆ ಯಾವುದೇ ಪಕ್ಷವಾಗಲಿ ಬಲಿಷ್ಠವಾಗಿ ಬೆಳೆಯಲು ಸಾಧ್ಯವಾಗುವುದಿಲ್ಲ.

ನಿಜ ಹೇಳಬೇಕೆಂದರೆ ಇವತ್ತು ಕಾಂಗ್ರೆಸ್  ಬಹುತೇಕ ಕಡೆಗಳಲ್ಲಿ  ಕಾರ್ಯಕರ್ತರನ್ನು ಕಳೆದು ಕೊಂಡಿದೆ. ರಾಹುಲ್ ಗಾಂಧಿ ನಡೆಸುವ ಸಮಾವೇಶಗಳಿಗೆ ತಳಮಟ್ಟದ ನಾಯಕರು ಹಣ ನೀಡಿಯೋ, ದುಂಬಾಲು ಬಿದ್ದೋ ಒಂದಷ್ಟು ಜನರನ್ನು ಸೇರಿಸುತ್ತಾರೆ. ಹೀಗಾಗಿ ಮೇಲ್ನೋಟಕ್ಕೆ ಸಮಾವೇಶಗಳು ಯಶಸ್ವಿಯಾಗುತ್ತವೆ. ಆದರೆ ಅವು ಮತಗಳಾಗಿ ಪರಿವರ್ತನೆಯಾಗದ ಕಾರಣದಿಂದಾಗಿ ಕಾಂಗ್ರೆಸ್ ಸೋಲು ಕಾಣುತ್ತಿದೆ. ಇನ್ನು ಕಾಂಗ್ರೆಸ್ ನಲ್ಲಿ ರಾಹುಲ್ ಗಾಂಧಿಗೆ ರಾಜಕೀಯವಾಗಿ ಸಲಹೆ ನೀಡುವ ಮುಖಂಡರು ಇಲ್ಲವೋ? ಅಥವಾ ಮುಖಂಡರು ನೀಡುವ ಸಲಹೆಯನ್ನು ಅವರು ಸ್ವೀಕರಿಸುತ್ತಿಲ್ಲವೋ? ಗೊತ್ತಿಲ್ಲ.

ರಾಹುಲ್ ಗಾಂಧಿ ಎಲ್ಲಿ ಸೋಲುತ್ತಿದ್ದಾರೆ ಎಂದರೆ ಅವರು ಒಮ್ಮೆ ಸೋತ ಕಡೆಗಳಲ್ಲಿ ಮತ್ತೆ ಗೆಲ್ಲಬೇಕೆಂದು ಯೋಚಿಸುವುದೇ ಇಲ್ಲ. ಸೋತ ರಾಜ್ಯಗಳ ಕಡೆಗೆ ಅವರು ತಲೆಹಾಕುವುದೇ ಇಲ್ಲ. ಸೋತಲ್ಲೇ ಮತ್ತೆ ಗೆಲುವು ಪಡೆಯಬೇಕೆಂಬ ಹಠ ಅವರಲ್ಲಿ ಇಲ್ಲವೇ ಇಲ್ಲ. ಹೀಗಾಗಿ ಬಹುತೇಕ ರಾಜ್ಯಗಳಲ್ಲಿ ಅವರು ಪ್ರಾದೇಶಿಕ ಪಕ್ಷಗಳ ಮುಂದೆ ಮಂಡಿಯೂರುವಂತಾಗಿದೆ. ಇನ್ನು ಬಿಜೆಪಿಯನ್ನು ಸೋಲಿಸಲೇ ಬೇಕೆಂಬ ಕಾರಣಕ್ಕಾಗಿ ಸ್ಥಳೀಯ ಪಕ್ಷಗಳೊಂದಿಗೆ ಹೊಂದಾಣಿಕೆ ಮಾಡಿಕೊಂಡು ರಾಷ್ಟ್ರೀಯ ಪಕ್ಷದ ಪ್ರಾಬಲ್ಯವನ್ನು ಕಳೆದುಕೊಳ್ಳುತ್ತಿದ್ದಾರೆ.

ಹಾಗೆನೋಡಿದರೆ  ದೇಶದ ಎಲ್ಲ ರಾಜ್ಯಗಳಲ್ಲಿಯೂ ಕಾಂಗ್ರೆಸ್ ಆಡಳಿತ ನಡೆಸಿದೆ. ಆದರೆ ಅದೇ ರಾಜ್ಯಗಳಲ್ಲಿ ಒಂದೇ ಒಂದು ಸ್ಥಾನವನ್ನು ಗೆಲ್ಲಲು ಸಾಧ್ಯವಾಗದ ಪರಿಸ್ಥಿತಿಗೆ ಬಂದು ನಿಂತಿದೆ. ಬಹುತೇಕ ರಾಜ್ಯಗಳಲ್ಲಿ ಅಲ್ಲಿನ ಪ್ರಾದೇಶಿಕ ಪಕ್ಷಗಳನ್ನು ಎದುರಿಸಲು ಸಾಧ್ಯವಾಗದ ಸ್ಥಿತಿಗೆ ತಲುಪಿದೆ. ಹೀಗಿದ್ದರೂ ರಾಹುಲ್ ಗಾಂಧಿಗಾಗಲೀ, ಕಾಂಗ್ರೆಸ್ ನಾಯಕರಾಗಲೀ ತಳಮಟ್ಟದಿಂದ ಪಕ್ಷವನ್ನು ಕಟ್ಟಿ ನಿಲ್ಲಿಸಲು ಬೇಕಾದ ಸಿದ್ಧತೆಗಳನ್ನು ಮಾಡಿಕೊಳ್ಳದಿರುವುದು ಬೇಸರದ ಸಂಗತಿಯಾಗಿದೆ. ಕೇವಲ ಟೀಕೆ, ಟಿಪ್ಪಣಿಗಳನ್ನು ಮಾಡುವುದರಿಂದ ಗೆಲ್ಲಬಹುದು ಎಂಬುದು ಮೂರ್ಖತನದ ಪರಮಾವಧಿ.

ಕಾಂಗ್ರೆಸ್ ಕೇವಲ ಮೂರು ರಾಜ್ಯಗಳಲ್ಲಿ ಆಡಳಿತದಲ್ಲಿದೆ. ಉಳಿದಂತೆ ಹೆಚ್ಚಿನ ರಾಜ್ಯಗಳಲ್ಲಿ ಬಿಜೆಪಿ ಪಾರುಪತ್ಯೆ ಸಾಧಿಸಿದೆ. ಆದರೆ ದಕ್ಷಿಣ ಭಾರತದಲ್ಲಿ ಬಿಜೆಪಿಗೆ ಕರ್ನಾಟಕ ಹೊರತು ಪಡಿಸಿದರೆ ಬೇರೆ ರಾಜ್ಯಗಳಲ್ಲಿ  ಅಸ್ತಿತ್ವವೇ ಇಲ್ಲದಾಗಿದೆ. ಅಲ್ಲಿ ಏನೇ ಲಾಗಹೊಡೆದರೂ ಒಂದೇ ಒಂದು ಸ್ಥಾನವನ್ನು ಗೆಲ್ಲುವುದು ಕೂಡ ಕಷ್ಟವೇ.. ಹೀಗಿದ್ದರೂ ಬಿಜೆಪಿ ಅಂತಹ ರಾಜ್ಯಗಳಲ್ಲಿ ಸುಮ್ಮನೆ ಕುಳಿತಿಲ್ಲ. ತನ್ನ ಪ್ರಯತ್ನವನ್ನು ಮಾಡುತ್ತಲೇ ಇದೆ.

ಮುಂದಿನ ವಿಧಾನಸಭೆ ಮತ್ತು ಲೋಕಸಭಾ ಚುನಾವಣೆ ಹೊತ್ತಿಗೆ ಒಂದಷ್ಟು ಸ್ಥಾನದ ಜೊತೆಗೆ ಮತಪ್ರಮಾಣವನ್ನು ಹೆಚ್ಚಿಸಿಕೊಳ್ಳುವ ಪ್ರಯತ್ನಕ್ಕೆ ಕೈ ಹಾಕಿದೆ. ಅಷ್ಟೇ ಅಲ್ಲದೆ ಸ್ಥಳೀಯ ಪ್ರಾದೇಶಿಕ ಪಕ್ಷಗಳ ಸಖ್ಯ ಬೆಳೆಸಿ ಆ ಮೂಲಕ ಆಡಳಿತರೂಢರಿಗೆ ಟಾಂಗ್ ನೀಡುವ ಪ್ರಯತ್ನ ಆರಂಭವಾಗಿದೆ. ಅದರ ಮುನ್ಸೂಚನೆಯನ್ನು ಪ್ರಧಾನಿ ನರೇಂದ್ರ ಮೋದಿ ಈಗಾಗಲೇ ತಮಿಳುನಾಡು, ಕೇರಳಕ್ಕೆ ಭೇಟಿ ನೀಡಿ ಸಮಾವೇಶ ನಡೆಸುವ ಮೂಲಕ ದಂಡಯಾತ್ರೆ ಆರಂಭಿಸಿದ್ದೇವೆ ಎನ್ನುವ ಸಂದೇಶ ರವಾನಿಸಿದ್ದಾರೆ.

ಇದೀಗ ಕೇರಳ ಮತ್ತು ತಮಿಳುನಾಡಿನಲ್ಲಿ ನಡೆಸಿರುವ ಸರಣಿ ರ್‍ಯಾಲಿಗಳು 2026ರ ವಿಧಾನಸಭಾ ಚುನಾವಣೆಗೆ ಬಿಜೆಪಿಯ ಪೂರ್ವಸಿದ್ಧತೆ ಎಂದರೂ ತಪ್ಪಾಗಲಾರದು. ಜತೆಗೆ ನಾವು ರಾಜಕೀಯ ಸಮರಕ್ಕೆ ಈಗಿನಿಂದಲೇ ತಯಾರಾಗಿದ್ದೇವೆ ಎಂಬ ಸಂದೇಶ ಇದಾಗಿದೆ. ಮೋದಿ ಬಂದು ಹೋದ ಬೆನ್ನಲ್ಲೇ ಇನ್ನೊಂದಷ್ಟು ನಾಯಕರು ಇಲ್ಲಿಗೆ ಆಗಮಿಸುವ ಸಾಧ್ಯತೆಯಿದೆ. ಅದರಾಚೆಗೆ ರಾಜಕೀಯ ತಂತ್ರಗಳು ಶುರುವಾಗಲಿವೆ. ಈಗಾಗಲೇ ಸಾಧ್ಯವೇ ಇಲ್ಲ ಎಂಬ ಪರಿಸ್ಥಿತಿಯಲ್ಲಿದ್ದ ಕೇರಳದಲ್ಲಿಯೂ ಕಮಲ ನಿಧಾನವಾಗಿ ಅರಳಲು ಆರಂಭಿಸಿದೆ.

ತಮಿಳುನಾಡನ್ನು ಟಾರ್ಗೆಟ್ ಮಾಡಿರುವ ಬಿಜೆಪಿ ಅಲ್ಲಿನ ಸ್ಟಾಲಿನ್ ನೇತೃತ್ವದ ಡಿಎಂಕೆಯನ್ನು ಕೆಳಗಿಳಿಸಿ ಎನ್ ಡಿಎ ನೇತೃತ್ವದ ಸರ್ಕಾರ ರಚಿಸುವ ಕೆಲಸಕ್ಕೆ ಮುಂದಾಗಿದೆ. ಎಡಪ್ಪಾಡಿ ಕೆ. ಪಳನಿಸ್ವಾಮಿ ನೇತೃತ್ವದ  ಎಐಎಡಿಎಂಕೆ, ಟಿಟಿವಿ ದಿನಕರನ್ ಅವರ ಎಎಂಎಂಕೆ ಮತ್ತು ಅನ್ಬುಮಣಿ ರಾಮದಾಸ್ ಅವರ ಪಿಎಂಕೆಯನ್ನು ಒಂದೇ ವೇದಿಕೆಗೆ ತಂದು  ಎನ್ ಡಿಎಯನ್ನು ಗಟ್ಟಿಗೊಳಿಸಿರುವುದು ರಾಜಕೀಯ ತಂತ್ರಗಳಲ್ಲಿ ಒಂದಾಗಿದೆ. ಇದು ಅಲ್ಲಿನ ಡಿಎಂಕೆಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.

ತಮಿಳುನಾಡಿನಲ್ಲಿ ಕಾಂಗ್ರೆಸ್ ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬ ಪರಿಸ್ಥಿತಿಯಲ್ಲಿದೆ. ಡಿಎಂಕೆ ಸಖ್ಯದಲ್ಲಿರುವ ಕಾಂಗ್ರೆಸ್ ಚುನಾವಣೆ ವೇಳೆ ಯಾವ ಪಾತ್ರ ವಹಿಸುತ್ತದೆ ಎಂಬುದನ್ನು ನೋಡಬೇಕಾಗಿದೆ. ಕಾಂಗ್ರೆಸ್ ಅಲ್ಲಿಂದ ಪಲಾಯನ ಮಾಡಿ ಐದಾರು ದಶಕಗಳೇ ಕಳೆದು ಹೋಗಿದೆ. ಮತ್ತೆ ಅಲ್ಲಿ ಅಸ್ತಿತ್ವ ಕಂಡುಕೊಳ್ಳುವ ಪ್ರಯತ್ನ ಮಾಡುತ್ತಾ ಗೊತ್ತಿಲ್ಲ. ಆದರೆ ಅಸ್ತಿತ್ವವೇ ಇಲ್ಲದ ತಮಿಳುನಾಡಿನಲ್ಲಿ ಬಿಜೆಪಿ ತನ್ನದೇ ಚಾಣಕ್ಷ್ಯತನವನ್ನು ಪ್ರದರ್ಶಿಸುತ್ತಿದ್ದು ಚುನಾವಣೆಯ ಆಟ ಶುರುಮಾಡಿದೆ.

ಕೇರಳದಲ್ಲಿ ಲೋಕಸಭಾ ಚುನಾವಣೆ ವೇಳೆ ಎಡಪಕ್ಷ ಮತ್ತು ಕಾಂಗ್ರೆಸ್ ಒಂದೇ ವೇದಿಕೆಯಲ್ಲಿದ್ದರೂ ವಿಧಾನಸಭಾ ಚುನಾವಣೆಯಲ್ಲಿ ಎದುರಾಳಿಯಾಗಿ ಹೋರಾಟ ಮಾಡುತ್ತಿದ್ದಾರೆ. ಅಲ್ಲಿನ ಎಡಪಕ್ಷಗಳಿಗೆ ಕಾಂಗ್ರೆಸ್ ವಿರೋಧ ಪಕ್ಷವಾಗಿರುವುದರಿಂದ ಭಯವಂತು ಇದ್ದೇ ಇದೆ. ಮತದಾರರು ಕಾಂಗ್ರೆಸ್ ಕಡೆಗೆ ಒಲವು ತೋರುತ್ತಿದ್ದಾರೆ.  ಅಲ್ಲಿಯೂ ಬಿಜೆಪಿ ಅಸ್ತಿತ್ವಕ್ಕಾಗಿ ಹೋರಾಡುತ್ತಿದೆ. ಕೇರಳದಲ್ಲಿ ಬಿಜೆಪಿಯ ರಾಜಕೀಯ ಬೆಳವಣಿಗೆಯನ್ನು ನೋಡಿದ್ದೇ ಆದರೆ 2024ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯ ಮತ ಹಂಚಿಕೆ ಶೇ. 20ರ ಸಮೀಪಕ್ಕೆ ತಲುಪಿದೆ. ಕೇವಲ ಒಂದು ಲೋಕಸಭಾ ಸ್ಥಾನ ಗೆದ್ದಿತ್ತು. ಇತ್ತೀಚೆಗಿನ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದು ಒಂದು ಪಾಲಿಕೆಯ ಅಧಿಕಾರ ಪಡೆದುಕೊಂಡಿದೆ.

ಇದೆಲ್ಲವನ್ನು ಗಮನಿಸಿದ್ದೇ ಆದರೆ ಬಿಜೆಪಿ ಸೋಲು ಮತ್ತು ಗೆಲುವಿನಾಚೆಗೂ ಪಕ್ಷದ ಸಂಘಟನೆಗಾಗಿ ಹೋರಾಟ ಮಾಡುತ್ತಲೇ ಬರುತ್ತಿದೆ. ಹೀಗಿರುವಾಗ ಕಾಂಗ್ರೆಸ್  ಈಗಿನಿಂದಲೇ ಎಚ್ಚೆತ್ತು ಕೊಳ್ಳದೆ ಹೋದರೆ ರಾಜಕೀಯವಾಗಿ ಉಳಿಗಾಲವಿಲ್ಲ ಎನ್ನುವುದಂತು ಸತ್ಯ.

 

-ಬಿ.ಎಂ.ಲವಕುಮಾರ್

admin
the authoradmin

ನಿಮ್ಮದೊಂದು ಉತ್ತರ

Translate to any language you want