ಮೈಸೂರಿನಲ್ಲಿ ಗಂಗಾ ಪರಮೇಶ್ವರಿ ಬೆಸ್ತರ ಸಂಘದ ನೂತನ ಸೊಸೈಟಿ ಉದ್ಘಾಟನೆ.. ಸದಸ್ಯತ್ವಕ್ಕೆ ಚಾಲನೆ

ಮೈಸೂರು: ಮೈಸೂರಿನ ಗಂಗಾ ಪರಮೇಶ್ವರಿ ಬೆಸ್ತರ ಸಹಕಾರ ಸಂಘ ನಿಯಮಿತದ ನೂತನ ಸೊಸೈಟಿಯ ಉದ್ಘಾಟನೆ ಹಾಗೂ ಸದಸ್ಯರ ಸೇರ್ಪಡೆ ಕಾರ್ಯಕ್ರಮ ನಡೆದು ಸಂಘಕ್ಕೆ ನೂತನವಾಗಿ 25ಮಂದಿಯನ್ನು ಆಯ್ಕೆ ಮಾಡಲಾಯಿತು.

ನಗರದ ಬೆಸ್ತರ ಬ್ಲಾಕ್‌ನ ಸುಯೋಜ್ ಫಾರಂ ರಸ್ತೆಯಲ್ಲಿರುವ ಬೆಸ್ತರ ಸಮುದಾಯ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಉದ್ದೇಶಿತ ಗಂಗಾ ಪರಮೇಶ್ವರಿ ಬೆಸ್ತರ ಸಹಕಾರ ಸಂಘ ನಿಯಮಿತದ ಸದಸ್ಯತ್ವಕ್ಕೆ ಅಧಿಕೃತ ಚಾಲನೆ ನೀಡಲಾಯಿತು.

ಈ ವೇಳೆ ಸಂಘದ ಕಾರ್ಯಚಟುವಟಿಕೆಗಳನ್ನು ಹೆಚ್ಚಿಸಿ ಸಂಘವನ್ನು ಮತ್ತಷ್ಟು ಬಲಪಡಿಸುವ ಸಲುವಾಗಿ ಸಂಘದ ಸದಸ್ಯರು ಶ್ರಮಿಸುವ ನಿರ್ಧಾರವನ್ನು ಕೈಗೊಳ್ಳಲಾಯಿತು. ಇಷ್ಟೇ ಅಲ್ಲದೆ ಸಂಘದ ಚಟುವಟಿಕೆಯನ್ನು ಮತ್ತಷ್ಟು ಚುರುಕುಗೊಳಿಸುವ ಉದ್ದೇಶದಿಂದ ಒಟ್ಟು 25 ಮಂದಿ ಸದಸ್ಯರನ್ನು ಇದೇ ವೇಳೆ ಆಯ್ಕೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ನಾಗೇಂದ್ರ ಮುಖ್ಯ ಪ್ರವರ್ತಕರಾಗಿ ಉಪಸ್ಥಿತರಿದ್ದರು. ಗಾಯತ್ರಿ, ಚಾಯಾ, ಗಾಯತ್ರಿ ಜಿ, ಜಯಲಕ್ಷ್ಮಿ ಮಲ್ಲೇಶ, ಸೇರಿದಂತೆ ಹಲವರು ಭಾಗವಹಿಸಿ ಸಲಹೆ ಸೂಚನೆಗಳನ್ನು ನೀಡಿದರಲ್ಲದೆ, ಸಂಘದ ಅಭಿವೃದ್ಧಿಗೆ ಮಾಡಬೇಕಾದ ಕಾರ್ಯಯೋಜನೆಗಳ ಕುರಿತಂತೆ ಚರ್ಚೆ ನಡೆಸಲಾಯಿತು.

ಈ ವೇಳೆ ಹಲವರು ಸಲಹೆ ಸೂಚನೆಗಳನ್ನು ನೀಡಿದರು. ಎಲ್ಲವನ್ನು ಪರಿಗಣಿಸಿ ಮುಂದಿನ ದಿನಗಳಲ್ಲಿ ಸಂಘವನ್ನು ಇನ್ನಷ್ಟು ಉನ್ನತೀಕರಣಗೊಳಿಸಿ, ಸಮುದಾಯದ ಅಭಿವೃದ್ಧಿಗೆ ಬದ್ಧವಾಗಿ ಕೆಲಸ ಮಾಡಲು ಪದಾಧಿಕಾರಿಗಳು ಮತ್ತು ಸಂಘದ ಸದಸ್ಯರ ಸಮ್ಮುಖದಲ್ಲಿ ತೀರ್ಮಾನಿಸಲಾಯಿತು.







