Editor choiceLatest

ಕೊಡಗಿನ ‘ಶಕ್ತಿ’ಯಾದ ಪತ್ರಿಕೆಗೆ 69ನೇ ಹುಟ್ಟುಹಬ್ಬದ ಸಂಭ್ರಮ… ಪತ್ರಿಕೆ ಇಷ್ಟವಾಗುವುದು ಏಕೆ?

ಶಕ್ತಿ ಬಳಗಕ್ಕೆ ಶುಭ ಹಾರೈಕೆಗಳು…

ಕೊಡಗಿನ ಮನೆಮಾತಾಗಿರುವ ‘ಶಕ್ತಿ’ ದಿನಪತ್ರಿಕೆ 69ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದೆ.. ಆರಂಭದಿಂದ ಇಲ್ಲಿಯವರೆಗೆ ಅದೇ ಜನಪ್ರಿಯತೆ ಮತ್ತು ವಿಶ್ವಾಸರ್ಹತೆಯನ್ನು ಉಳಿಸಿಕೊಂಡು ತನ್ನ ಪ್ರಸಾರವನ್ನು ವೃದ್ಧಿಸಿಕೊಂಡು ಮುನ್ನಡೆಯುವುದು ಸುಲಭದ ಕೆಲಸವಲ್ಲ.. ಆದರೆ ‘ಶಕ್ತಿ’ ಪತ್ರಿಕೆ ಅದನ್ನು ಮಾಡಿರುವುದು ನಿಜಕ್ಕೂ ಸಂತಸ ಪಡುವ ವಿಚಾರವಾಗಿದೆ..

ಹಾಗೆನೋಡಿದರೆ ಕಳೆದ ನಾಲ್ಕೈದು ದಶಕಗಳಲ್ಲಿ ಕೊಡಗಿನಲ್ಲಿ ಹಲವು ಪತ್ರಿಕೆಗಳು ಬಂದು ಹೋಗಿವೆ.. ಇನ್ನು ಕೆಲವು ಪತ್ರಿಕೆಗಳು ಈಗಲೂ ಇವೆ. ಆದರೆ ಇಲ್ಲಿಯ ಜನ ಶಕ್ತಿಪತ್ರಿಕೆಯನ್ನು ಬಿಡಲೇ ಇಲ್ಲ. ಇವತ್ತಿಗೂ ಜಿಲ್ಲೆಯ ಕುಗ್ರಾಮಗಳಿಗೆ ಹೋದರೂ ಅಲ್ಲಿ ಶಕ್ತಿ ಪತ್ರಿಕೆ ಕಾಣಿಸುತ್ತದೆ ಎಂದರೆ ಅದರ ತಾಕತ್ ಹೇಗಿರಬಹುದು? ಜನ ಅದನ್ನು ಎಷ್ಟರ ಮಟ್ಟಿಗೆ ಇಷ್ಟಪಟ್ಟಿರ ಬಹುದು ಎಂಬುದಕ್ಕೆ ಸಾಕ್ಷಿಯಾಗಿದೆ.

ಇವತ್ತು ಕೊಡಗಿನಿಂದ ಪತ್ರಕರ್ತರಾಗಿ ಹೊರ ಹೋದ ಮತ್ತು ಇತರೆ ಪತ್ರಿಕೆಗಳಲ್ಲಿ ಕೆಲಸ ಮಾಡುತ್ತಿರುವ ಬಹುತೇಕರು ‘ಶಕ್ತಿ’ ಪತ್ರಿಕೆ ಮೂಲಕವೇ ಹೊರ ಬಂದವರು ಎನ್ನುವುದು ಹೆಮ್ಮೆಯ ವಿಚಾರ… ಕೆಲವರು ಪತ್ರಿಕಾ ಕಚೇರಿಯಲ್ಲಿ ಕೆಲಸ ಮಾಡಿದ್ದರೆ, ಮತ್ತೆ ಕೆಲವರು ಹೊರಗಿನಿಂದ ಪ್ರಿಲಾನ್ಸ್ ಪತ್ರಕರ್ತರಾಗಿ, ವರದಿಗಾರರಾಗಿ ಕೆಲಸ ಮಾಡಿದವರೇ ಆಗಿದ್ದಾರೆ. ಪತ್ರಕರ್ತರಾಗಿ ಬೆಳೆಯುವವರಿಗೆ ಕೊಡಗಿನ ಮಟ್ಟಿಗೆ ಇದೇ ಪತ್ರಿಕೋದ್ಯಮದ ವಿಶ್ವ ವಿದ್ಯಾನಿಲಯ ಎಂದರೆ ತಪ್ಪಾಗಲಾರದು.

ಜಿಲ್ಲೆಯ ಪ್ರತಿ ಊರಿನ ಸಮಸ್ಯೆ, ಊರ ಹಬ್ಬ, ಕಾರ್ಯಕ್ರಮ ಮಾತ್ರವಲ್ಲದೆ ನಿಧನ ಸುದ್ದಿಗಳನ್ನು ತಪ್ಪದೆ ಪ್ರಕಟಿಸುವ ಮೂಲಕ ಜನರಿಗೆ ವಿಚಾರಗಳನ್ನು ತಲುಪಿಸುವ ಕೆಲಸ ಮಾಡುತ್ತಿರುವುದು ಜನಪ್ರಿಯತೆಗೆ ಸಾಕ್ಷಿಯಾಗಿದೆ. ಜಿಲ್ಲೆಯ ಯಾವುದೇ ಮೂಲೆಯ ಸುದ್ದಿಯನ್ನು ಕಳುಹಿಸಿಕೊಟ್ಟರೂ ಅದನ್ನು ಪ್ರಕಟಿಸುವುದು ವಿಶೇಷವಾಗಿದೆ. ಪತ್ರಿಕೆಯ ಉಭಯಕುಶಲೋಪರಿಗೆ ಪ್ರಶ್ನೆಗಳನ್ನು ಬರೆದು ಕೇಳುತ್ತಾ? ಊರಿನ ಸಣ್ಣಪುಟ್ಟ ಸುದ್ದಿಗಳನ್ನು ಬರೆದು ಕಳುಹಿಸುತ್ತಾ… ಲೇಖನ ಬರೆಯುತ್ತಾ ಪತ್ರಕರ್ತರಾಗಿ ಬೆಳೆದವರು ಬಹಳಷ್ಟು ಮಂದಿ ಇದ್ದಾರೆ.

ಇವತ್ತಿಗೂ ಬರೀ ಸುದ್ದಿ ಮಾತ್ರವಲ್ಲದೆ ಲೇಖನಗಳನ್ನು ಬರೆಯಲು ಬರಹಗಾರರಿಗೆ ಅವಕಾಶ ಮಾಡಿಕೊಟ್ಟಿದ್ದಲ್ಲದೆ, ಬರೆದ ಬರಹಗಾರರನ್ನು ಪ್ರೋತ್ಸಾಹಿಸುವ ಸಲುವಾಗಿ ಗೌರವಧನವನ್ನು ನೀಡುವುದು ಮೆಚ್ಚುವಂತಹದ್ದು, (ಇವತ್ತು ಹೆಚ್ಚಿನ ಪತ್ರಿಕೆಗಳು ಗೌರವಧನ ನೀಡುವುದನ್ನೇ ನಿಲ್ಲಿಸಿಬಿಟ್ಟಿವೆ) ಇದು ಪ್ರತಿಯೊಬ್ಬ ಬರಹಗಾರನಿಗೆ ಇನ್ನಷ್ಟು ಬರೆಯಲು ಪ್ರೋತ್ಸಾಹಿಸುತ್ತಿದೆ.

ಅವತ್ತಿನ ಅಚ್ಚುಮೊಳೆಯಿಂದ ಇವತ್ತಿನ ಕಂಪ್ಯೂಟರ್ ಯುಗದ ತನಕ ಸಾಗಿದ ಬಂದಿದ್ದು ಹೂವು ಹಾಸಿನ ಹಾದಿಯಲ್ಲ.. ಹಲವು ಎಡರು ತೊಡರು, ಸವಾಲ್ ಗಳು ಹೀಗೆ ಎಲ್ಲವನ್ನು ಎದುರಿಸಿ ನಡೆಯುತ್ತಿದೆ. ಶಕ್ತಿ ಪತ್ರಿಕೆ ಓದುಗರಿಗೆ ಏಕೆ ಇಷ್ಟವಾಗುತ್ತದೆ ಎಂಬುದಕ್ಕೆ ಒಂದು ಘಟನೆಯನ್ನು ಪ್ರಸ್ತಾಪಿಸಬೇಕಾಗುತ್ತದೆ. ಬಹುಶಃ ಸುಮಾರು ಮೂವತ್ತೆರಡು ವರ್ಷಗಳ ಹಿಂದೆ ಇರಬಹುದು.. ಪತ್ರಿಕೆಯಲ್ಲಿ ಪ್ರತಿಭಾನುವಾರ ಪ್ರಕಟವಾಗುವ  ಉಭಯಕುಶಲೋಪರಿಯಲ್ಲಿ ಓದುಗನೊಬ್ಬ ಕೇಳಿದ ಪ್ರಶ್ನೆಗೆ ನೀಡಿದ ಉತ್ತರ ವಿವಾದದ ಹೊಗೆ ಎಬ್ಬಿಸಿತು.

ಸಂಘಟನೆಯೊಂದು ಪತ್ರಿಕೆ ವಿರುದ್ಧ ಪ್ರತಿಭಟನೆಗೆ ಮುಂದಾಯಿತಲ್ಲದೆ, ಈ ಸಂಬಂಧ  ಪ್ರತಿಭಟನೆ ನಡೆಸುವ ಸಂಬಂಧ ಪತ್ರಿಕಾಗೋಷ್ಟಿ ಕರೆಯಲಾಗಿತ್ತು. ಪತ್ರಿಕಾಗೋಷ್ಠಿಯಲ್ಲಿ ಸಂಘಟಕರು ಪ್ರತಿಭಟನೆಯ ಮಾಹಿತಿ ನೀಡಿದ್ದರು. ಮಾರನೆಯ ದಿನ ಬೇರೆ ಎಲ್ಲ ಪತ್ರಿಕೆಗಳಲ್ಲಿ ಇಂದು ಪತ್ರಿಕೆಯೊಂದರ ವಿರುದ್ಧ ಪ್ರತಿಭಟನೆ ಎಂದು ವರದಿ ಮಾಡಿದ್ದವು. ಬೇರೆ ಪತ್ರಿಕೆಗಳು ಶಕ್ತಿ ಪತ್ರಿಕೆ ಹೆಸರನ್ನು ಗೌಪ್ಯವಾಗಿಟ್ಟಿದ್ದವು.  ಆ ಮೂಲಕ ಪತ್ರಿಕಾ ಧರ್ಮ ಕಾಪಾಡುವ ಕೆಲಸ ಮಾಡಿದ್ದರು.

ಅವತ್ತು ಬೆಳಗ್ಗಿನ ಶಕ್ತಿ ಪತ್ರಿಕೆಯಲ್ಲಿ ಅದೇ ಸುದ್ದಿ ಮುಖಪುಟದಲ್ಲಿ ಬಾಕ್ಸ್ ಐಟಂನಲ್ಲಿ ಪ್ರಕಟವಾಗಿತ್ತು. ತಲೆಬರಹ ಹೀಗಿತ್ತು.. ಇಂದು ‘ಶಕ್ತಿ’ಯ ವಿರುದ್ಧ ಪ್ರತಿಭಟನೆ….  ಶಕ್ತಿ ಪತ್ರಿಕೆ ಕೊಡಗಿನಲ್ಲಿ ಏಕೆ ಮನೆ ಮಾತಾಗಿದೆ ಎಂಬುದಕ್ಕೆ ಇದೇ ಸಾಕ್ಷಿಯಾಗಿದೆ. ನಿಜಹೇಳಬೇಕೆಂದರೆ ಪತ್ರಿಕೆ ವಿರುದ್ಧ ಬಹಳಷ್ಟು ಪ್ರತಿಭಟನೆಗಳಾಗಿವೆ. ಮಾಜಿ ಶಾಸಕರಾಗಿದ್ದ ದಿವಂಗತ ಎ.ಕೆ.ಸುಬ್ಬಯ್ಯನವರು ಬಹಿರಂಗವಾಗಿ ಪತ್ರಿಕೆಯನ್ನು ಸುಟ್ಟು ಆಕ್ರೋಶ ವ್ಯಕ್ತಪಡಿಸಿದ್ದರು. ಆದರೆ ಎಲ್ಲವನ್ನೂ ಅರಗಿಸಿಕೊಂಡು ಪತ್ರಿಕೆ ಮುನ್ನಡೆಯುತ್ತಿದೆ. ಅದುವೇ ಪತ್ರಿಕೆಯ ‘ಶಕ್ತಿ’ ಯಾಗಿದೆ.

ಇಂತಹ ಪತ್ರಿಕೆ ಮೂಲಕವೇ ನಾವು ಬೆಳೆದು ಬಂದಿದ್ದು… ಕಳೆದ ಮೂರು ದಶಕಗಳಿಗಿಂತಲೂ ಹೆಚ್ಚಿನ ಒಡನಾಟವಿದೆ.. ಇವತ್ತು ನಾವೇನಾದರೂ ಪತ್ರಕರ್ತರಾಗಿ ಕೆಲಸ ಮಾಡುತ್ತಿದ್ದರೆ ಅದಕ್ಕೆ ಕಾರಣ ‘ಶಕ್ತಿ’ ಪತ್ರಿಕೆಯಾಗಿದೆ.. ಹಾಗೆಯೇ ನಮ್ಮ ಲೇಖನಗಳನ್ನು ಪ್ರಕಟಿಸಿ ನಾವು ಬರಹಗಾರರಾಗಿ ಉಳಿದುಕೊಳ್ಳುವಂತೆ ಮಾಡುವಲ್ಲಿಯೂ ಶಕ್ತಿ ಬಳಗದ ಸಹಕಾರವಿದೆ… ಪತ್ರಿಕೆ ಹೀಗೆ ಮುನ್ನಡೆಯಲಿ ಎಂಬುದೇ ಆಶಯ… ಶಕ್ತಿ ಬಳಗಕ್ಕೆ ಶುಭ  ಹಾರೈಕೆಗಳು…

-ಬಿ.ಎಂ.ಲವಕುಮಾರ್

 

ಕೊಡಗಿನ ಜನಮನದ ಜೀವ ನಾಡಿ ಶಕ್ತಿಗೆ 69 ವಸಂತಗಳು  ತುಂಬಿದ ಶುಭಾಶಯಗಳು…

admin
the authoradmin

Leave a Reply

Translate to any language you want