ಮದ್ಯ ವ್ಯಸನಿಯಾಗಿ ಬಾಳಿನ ಸಂತಸ ಕಳೆದುಕೊಂಡ ಸಂತೋಷನ ಬದುಕು ಬದಲಾಗಿದ್ದು ಹೇಗೆ?
ಬದುಕು ಬದಲಿಸಿದ ಬಸವಮಾರ್ಗ !

ಸಂತೋಷ್‌ಗೆ ಬಾಲ್ಯದಿಂದಲೂ ಭಾರತೀಯ ಸೇನೆಗೆ ಸೇರಬೇಕು ಎನ್ನುವ ಹೆಬ್ಬಯಕೆ.! ಯಾರಾದರು ನೀನು ದೊಡ್ಡವನಾದ ಮೇಲೆ ಏನಾಗಬೇಕು ಅಂದುಕೊಂಡ್ಡಿದ್ದೀಯಾ ಎಂದು ಕೇಳಿದರೆ? ನಾನು ಸೈನಿಕನಾಗಬೇಕು ಎಂದುಕೊಂಡಿದ್ದೇನೆ. ಗಡಿ ಕಾಯ್ದು, ದೇಶವನ್ನು ರಕ್ಷಣೆ ಮಾಡುತ್ತೇನೆ ಎಂದು ಅಭಿಮಾನದಿಂದ ಹೇಳುತ್ತಿದ್ದ. ಶಾಲೆಯಲ್ಲೂ ಕೂಡ ಅಷ್ಟೆ ಶಿಸ್ತಿನ ಸಿಪಾಯಿಯಂತೆ ಇದ್ದ ಸಂತೋಷ್ ! ಆದರೆ ವಯಸ್ಸಿಗೆ ಬರುವ ವೇಳೆಗೆ ಪರಿಸ್ಥಿತಿಯ ಒತ್ತಡಕ್ಕೆ ಸಿಲುಕಿದ ಸಂತೋಷ, ವ್ಯಸನಕ್ಕೆ ದಾಸನಾಗಿ, ತನ್ನ ಜೀವನವನ್ನು ನರಕ ಮಾಡಿಕೊಂಡು ಬಿಟ್ಟ ! ಕೊನೆಗೆ ಆತನ ಜೀವ, ಜೀವನಕ್ಕೆ ನೆರವಾದದ್ದು, ಮೈಸೂರಿನ ಬಸವಮಾರ್ಗ ವ್ಯಸನಮುಕ್ತ ಮತ್ತು ಪುನರ್ವಸತಿ ಕೇಂದ್ರ ! ಈಗ ಸಂತೋಷ್ ಹೇಗಿದ್ದಾನೆ, ಎಲ್ಲಿದ್ದಾನೆ…? ತಿಳಿದುಕೊಳ್ಳಬೇಕಾ ? ಆಗಿದ್ದರೆ ಈ ನೈಜ್ಯ ಕಥೆಯನ್ನು ಒಮ್ಮೆ ಓದಿ…!
ಆ ಹುಡ್ಗ ಶಾಲೆಯಲ್ಲಿ ಶಿಸ್ತಿನ ಸಿಪಾಯಿ
ಬಾಲ್ಯದಿಂದಲೂ ಸಂತೋಷ್ ಚಟುವಟಿಕೆಯ ಹುಡುಗ ! ಶಾಲೆಯಲ್ಲೂ ಶಿಸ್ತಿನ ಸಿಪಾಯಿ. ಸಂತೋಷನ ಧೈರ್ಯ, ಸ್ಥೈರ್ಯವನ್ನ ಆ ವಯಸ್ಸಿನಲ್ಲೇ ಮೈಗೂಡಿಸಿಕೊಂಡಿದ್ದ. ತಾನು ಸೈನಿಕನಾಗಬೇಕು ಎಂದು ಮಹಾದಾಸೆ ಇಟ್ಟುಕೊಂಡಿದ್ದ. ಇಂತಹ ಆತನ ಕನಸಿಗೆ ಇಂಬುಕೊಟ್ಟಿದ್ದು ಎನ್ ಸಿಸಿ. ಸೈನಿಕನಾಗಬೇಕು ಎಂದೇ ಸಂತೋಷ್ ಎನ್ ಸಿಸಿಗೆ ಸೇರಿಕೊಂಡಿದ್ದ. ಈತನ ಆಸಕ್ತಿ, ಶ್ರಮ ಕಂಡ ಎನ್ ಸಿಸಿ ಮಾಸ್ಟರ್ ಸಂತೋಷನನ್ನು ಬೆನ್ನುತ್ತಟ್ಟಿ ಸದಾ ಪ್ರೋತ್ಸಾಹ ನೀಡುತ್ತಿದ್ದರು. ಕಡಿಮೆ ಅವಧಿಯಲ್ಲೇ ಎನ್ ಸಿಸಿ ತಂಡದ ಲೀಡರ್ ಆಗಿ ಟೀಮ್ ನ್ನು ಮುನ್ನೆಡೆಸುವ ದೊಡ್ಡ ಜವಾಬ್ದಾರಿಯನ್ನ ತೆಗೆದುಕೊಳ್ಳುವ ಮಟ್ಟಕ್ಕೆ ಹೋಗಿಯೇ ಬಿಟಿದ್ದ ಸಂತೋಷ್ !

ಸೇನಾ ಶಿಬಿರದಿಂದ ಪ್ರೇರಣೆ ಸಿಕ್ತು..
ತನ್ನ ಊರಿನಲ್ಲಿ ಯಾವಾಗಲೋ ಒಮ್ಮೆ ನಡೆದ ಭಾರತೀಯ ಸೇನಾ ಶಿಬಿರದಿಂದ ಮತ್ತಷ್ಟು ಪ್ರೇರಣೆ ಪಡೆದಿದ್ದ ಸಂತೋಷ್. ಶಾಲೆಗೂ ಚಕ್ಕರ್ ಹಾಕಿ ಬೆಳಗ್ಗೆ ಎದ್ದೊಡನೆ ಶಿಬಿರ ನಡೆಯುತ್ತಿದ್ದ ಸ್ಥಳಕ್ಕೆ ಹಾಜರಾಗಿಬಿಡುತ್ತಿದ್ದ. ಅಲ್ಲಿ ಸೈನಿಕರಿಗೆ ನೀಡುತ್ತಿದ್ದ ತರಬೇತಿಗಳನ್ನು ಕುತೂಹಲದಿಂದ ನೋಡುತ್ತ… ನೋಡುತ್ತ… ಮತ್ತಷ್ಟು ಆಕರ್ಷಿತನಾದ. ಅಲ್ಲಿನ ಕಲೆಗಳನ್ನು ಮನೆಗೆ ಬಂದು ಅಭ್ಯಾಸ ಮಾಡುತ್ತಿದ್ದ. ಈ ಬಾಲಕನ ಆಸಕ್ತಿಯನ್ನು ಕಂಡ ಅಲ್ಲಿನ ಅಧಿಕಾರಿಗಳು ಸೇನೆಗೆ ಸೇರುವ ಮಾರ್ಗಗಳ ಬಗ್ಗೆ, ಒಂದಷ್ಟು ಸಲಹೆ, ಮಾರ್ಗದರ್ಶನ ಮಾಡಿದ್ದರು.
ಇದನ್ನೂ ಓದಿ: ಕುಡಿತದ ಚಟಕ್ಕೆ ಬಿದ್ದವನಿಗೆ ತಪ್ಪು ಅರಿವಾಗುವ ವೇಳೆಗೆ ಕಾಲಮಿಂಚಿತ್ತು..
ಕನಸು ಚಿಗುರುವಾಗಲೇ ಚಿವುಟಿದರು..
ಸಂತೋಷನ ಕನಸು ಅತ್ತ ಮೆಲ್ಲ, ಮೆಲ್ಲನೆ ಚಿಗುರುತ್ತಿತ್ತು. ಆ ಕನಸಿಗೆ ನೀರೆರೆದು ಪೋಷಣೆ ಮಾಡಬೇಕಿದ್ದ ಸಂತೋಷ್ ತಂದೆ ಇತ್ತ ಚಿವುಟುವ ಕೆಲಸ ಮಾಡುತ್ತಿದ್ದರು. ಸುಮ್ಮನೆ ಮೇಲ್ನೋಟಕ್ಕೆ ಹೇಳಬೇಕು ಎಂದರೆ ಸಂತೋಷ್ ತಂದೆ ಒಬ್ಬ ಬೇಜಾಬ್ದಾರಿ ಮನುಷ್ಯ. ಮಕ್ಕಳ ಬಗ್ಗೆ ಕಾಳಜಿ ಇಲ್ಲ. ಅವರ ಭವಿಷ್ಯದ ಬಗ್ಗೆ ಕನಸಿಲ್ಲ. ಸದಾ ಉದಾಸೀನದ ಮಾತುಗಳು. ಮನೆಯಲ್ಲಿ ಅನಾವಶ್ಯಕ ಜಗಳಗಳು ಸಂತೋಷ ಆ ಎಳೆಯ ಮನಸ್ಸಿನ ಮೇಲೆ ದೊಡ್ಡ ಪರಿಣಾಮ ಬೀರಿತ್ತು. ಅಷ್ಟು ಸಾಲದು ಎನ್ನುವಂತೆ ಸಂತೋಷ್ ತಂದೆಗೆ ಮೂವರು ಪತ್ನಿಯರು.
ಸದಾ ತನ್ನ ಖುಷಿ, ಸಂತೋಷವನ್ನು ಮಾತ್ರ ಪರಿಗಣಿಸುತ್ತಿದ್ದ ತಂದೆ, ಮಕ್ಕಳ ಭವಿಷ್ಯದ ಬಗ್ಗೆ ಕಿಂಚಿತ್ತೂ ಗಮನಕೊಡುತ್ತಿರಲಿಲ್ಲ. ಮಕ್ಕಳಿಗೆ ಸರಿಯಾದ ಶಿಕ್ಷಣ ಕೊಡಿಸಬೇಕು, ನಾಲ್ಕಾರು ಕಾಸು ಸಂಪಾದನೆ ಮಾಡಬೇಕು. ಮಕ್ಕಳ ಭವಿಷ್ಯಕ್ಕೆ ಅಷ್ಟೋ, ಇಷ್ಟೋ ಆಸ್ತಿ-ಪಾಸ್ತಿ ಮಾಡಬೇಕು ಎಂಬ ಯಾವುದೇ ಗೋಜೀಗೂ ಹೋದವರಲ್ಲ. ಇದರಿಂದ ಸಂತೋಷ್‌ಗೆ ತಂದೆಯನ್ನು ಕಂಡರೆ ಒಂದು ರೀತಿಯ ತಿರಸ್ಕಾರದ ಭಾವ. ಮಕ್ಕಳಿಗೆ ಮದುವೆ ಮಾಡುವ ವಯಸ್ಸಿನಲ್ಲಿ ತಂದೆ ಮತ್ತೊಂದು ಮದುವೆಯಾವುದನ್ನು ಸಹಿಸಲಿಲ್ಲ. ಆದರೆ ಅದನ್ನು ಗಟ್ಟಿಯಾಗಿ ವಿರೋಧಿಸುವ ವಯಸ್ಸು ಅವನದಾಗಿರಲಿಲ್ಲ.

16ನೇ ವಯಸ್ಸಿನಲ್ಲಿ ತಪ್ಪಿತು ಹಾದಿ..
ಸಂತೋಷ್‌ಗೆ ಮನೆಯ ಕಿರಿಕಿರಿ ಸದಾ ಇರುತ್ತಲೇ ಇತ್ತು. ಆದರೂ ಅದರ ನಡುವೆಯೂ ಹೇಗೋ ತನ್ನ ಕನಸನ್ನು ಈಡೇರಿಸಿಕೊಳ್ಳಲು ಸಮಸ್ಯೆಯನ್ನು ಬದಿಗೆ ಒತ್ತಿ ಪ್ರಯತ್ನಿಸುತ್ತಲೇ ಇದ್ದ. ಸಂತೋಷ್ 10ನೇ ತರಗತಿಗೆ ಬರುವ ವೇಳೆಗೆ ಎಲ್ಲವೂ ಚೆನ್ನಾಗಿತ್ತು. ಆದರೆ 10ನೇ ತರಗತಿಯಲ್ಲಿ ತಂದೆಯ ಬಗ್ಗೆ ಮತ್ತಷ್ಟೂ ದ್ವೇಷಕಾರಲು ಶುರುಮಾಡಿದ. ಸಂತೋಷನ ಮನಸ್ಥಿತಿ, ಪರಿಸ್ಥಿತಿ ಎಲ್ಲವೂ ಗೊಂದಲದಿಂದ ಕೂಡಿತ್ತು. ಈ ಸಮಯದಲ್ಲಿ ಕೆಲ ಕೆಟ್ಟ ಸ್ನೇಹಿತರ ಸಹವಾಸ ಸಂತೋಷ್ ಕನಸನ್ನು ಕಂಗೆಡಿಸಿತು. ಇದರಿಂದ ಆತನ ಜೀವನದ ಹಾದಿಯೇ ತಪ್ಪಿತು.
ಇದನ್ನೂ ಓದಿ: ಕುಡಿತಕ್ಕೆ ದಾಸನಾದವನು ಹೆತ್ತವರ ಮಾತು ಕೇಳಲಿಲ್ಲ… ಆಮೇಲೆ ಏನಾಯಿತು?
ಸ್ನೇಹಿತರೊಂದಿಗೆ ಸೇರಿಕೊಂಡು ಶಾಲೆಗೆ ಚೆಕ್ಕರ್ ಹಾಕುವುದು. ಚೆಕ್ಕರ್ ಹಾಕಿ ಸಿನಿಮಾ ನೋಡುವುದು. ಹೀಗೆ ಹಂತ, ಹಂತವಾಗಿ ದುರಭ್ಯಾಸವನ್ನು ಮೈಗೂಡಿಸಿಕೊಂಡು ಬರಲು ಪ್ರಾರಂಭ ಮಾಡಿಬಿಟ್ಟ ಸಂತೋಷ್. ಇದೆಲ್ಲವನು ಕೇಳಿದರೆ ತನ್ನ ಮನೆಯ ಪರಿಸ್ಥಿತಿಯನ್ನು ಕಾರಣವನ್ನಾಗಿ ನೀಡುತ್ತಿದ್ದ. ಪರಿಣಾಮ ಓದಿನ ಕಡೆಗೆ ಹಾಗೂ ತಾನೂ ಸೈನಿಕನಾಗಬೇಕು ಎನ್ನುವ ಗಮನದ ಕಡೆಯಿಂದ ವಿಮುಕ್ತನಾಗುತ್ತ ಬರಲು ತೊಡಗಿದ. ಜೇಬಲ್ಲಿ ದುಡ್ಡು ಇಲ್ಲದಿದ್ದರೂ ಹೇಗಾದರೂ ಮಾಡಿ ಹಣ ಹೊಂದಿಸಿ ಸ್ನೇಹಿತರೊಂದಿಗೆ ಧೂಮಪಾನ ಮಾಡುತ್ತಿದ್ದ. ಈ ವೇಳೆ ಸಣ್ಣದಾಗಿ ಪ್ರಾರಂಭವಾದ ಅಭ್ಯಾಸ, ಅವನಿಗೆ ಗೊತ್ತಿಲ್ಲದ ರೀತಿಯಲ್ಲಿ ಚಟವಾಗಿ ಆವರಿಸಿಕೊಂಡಿತು.
10ನೇ ತರಗತಿಗೆ ಓದು ಮೊಟಕು
ಸಂತೋಷ್ ಶಾಲೆಯಲ್ಲಿ ಕ್ರೀಡೆ ಹಾಗೂ ಎನ್‌ಸಿಸಿಯಲ್ಲಿ ಮುಂದಿದ್ದರೂ ಓದಿನಲ್ಲಿ ಹಿಂದೆ ಬಿದ್ದಿರಲಿಲ್ಲ. ತಕ್ಕಮಟ್ಟಿಗೆ ಓದುತ್ತಿದ್ದ. ಆದರೆ ಧೂಮಪಾನ ಮತ್ತು ಕೆಟ್ಟ ಸ್ನೇಹಿತರ ಸಹವಾಸದಿಂದ ಸಂತೋಷ್ ಓದುವ ಕಡೆಗೆ ಆಸಕ್ತಿ ಕಳೆದುಕೊಂಡಿದ್ದ. ಪರಿಣಾಮ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲೂ ಫೇಲ್ ಆದ. ಸಂತೋಷ ಕನಸನ್ನು ತಿಳಿದಿದ್ದ ತಾಯಿ, ಧೈರ್ಯ ತುಂಬಿದರು. ಫೇಲ್ ಆಗಿರುವ ವಿಷಯವನ್ನು ಮತ್ತೆ ಕಟ್ಟಿ ಪಾಸ್ ಮಾಡಿಕೊಳ್ಳಲು ಮಗನಿಗೆ ಬುದ್ದಿವಾದ ಹೇಳಿದರು.

ನೀನು ಸೇನೆಗೆ ಸೇರುವ ಕನಸನ್ನು ನನಸು ಮಾಡಿಕೊ ಎಂದು ಸ್ಥೆöÊರ್ಯ ತುಂಬುತ್ತಿದ್ದರು. ಆದರೆ ಸಂತೋಷ್‌ಗೆ ಈ ವಿಷಯಗಳು ಅನಾಸಕ್ತಿಯಾಗಿ ತೋರಿತು. ಮಗನ ಈ ನಡಾವಳಿಗೆ ಏನು ಕಾರಣ ಎಂದು ಶೋಧಿಸಿದಾಗ, ಸಂತೋಷನ ಚಟದ ವಿಷಯ ಆಕೆಗೆ ತಿಳಿದು ಹೋಯಿತು. ಇದರಿಂದ ತಾಯಿ ತುಂಬ ನೊಂದುಕೊAಡರು. ತಂದೆ ಮತ್ತಷ್ಟು ನಿಂದಿಸಲು ಶುರು ಮಾಡಿಬಿಟ್ಟರು.
ಕೆಲಸಕ್ಕೆ ಅಲೆದಾಡಿದ ಸಂತೋಷ !
ಯಾವಾಗ ಮಗ ಫೇಲ್ ಆಗಿ ಮನೆಯಲ್ಲಿ ಕುಳಿತುಕೊಳ್ಳಲು ಪ್ರಯತ್ನಿಸಿದನೋ ತಂದೆ-ಮಗನಿಗೆ ಇನ್ನಷ್ಟು ಮುಖ ಮುನಿಸು ಶುರುವಾಗಿಬಿಟ್ಟಿತು. ಈ ಕಾರಣದಿಂದ ಮನೆಯಲ್ಲಿ ಸದಾ ಜಗಳ. ಇತ್ತ ತಾಯಿಗೆ ನೆಮ್ಮದಿ ಇಲ್ಲ. ಸಂತೋಷನಿಗೆ ಬುದ್ದಿವಾದ ಹೇಳಿದರೂ ಕೇಳುತ್ತಿಲ್ಲ. ಕೊನೆಗೆ ಮನೆಯಲ್ಲೇ ಸದಾ ಇರುವುದಿಕ್ಕಿಂತ ಎಲ್ಲಾದರೂ ಕೆಲಸಕ್ಕೆ ಸೇರಿಸಿದರೆ ಆಗಲಾದರೂ ಇಬ್ಬರು ಸರಿಯೋಗಬಹುದು ಎಂದು ಮನಗಂಡು ತಾಯಿ ಕೆಲಸಕ್ಕೆ ಸೇರಿಸಲು ಮುಂದಾಗುತ್ತಾರೆ. ಅದರಂತೆ ಸಂತೋಷ ತಾಯಿಯ ಮಾತನ್ನು ತೆಗೆದುಹಾಕದೆ ಅಂಗಡಿ, ಫ್ಯಾಕ್ಟರಿಗಳಲ್ಲಿ ಕೆಲಸ ಹುಡುಕಿಕೊಂಡು ಹೋಗುತ್ತಾನೆ. ಆದರೆ ಎಲ್ಲೂ ಕೆಲಸ ಸಿಗುವುದಿಲ್ಲ. ಆದರೆ ಕೊನೆಗೆ ಅವನಿಗೆ ಸಿಕ್ಕಿದ್ದು ಬಾರ್ ಅಂಡ್ ರೆಸ್ಟೋರೆಂಟ್‌ನಲ್ಲಿ ಕೆಲಸ.
ಬಾರ್ ಕೆಲಸ ಬೇಡ ಎಂದ ತಾಯಿ..

ಬಾರ್‌ಗಳಲ್ಲಿ ಕೆಲಸ ಮಾಡು. ಇಲ್ಲಿ ತಿಂಗಳಿಗೆ 900 ರೂ. ಸಂಬಳ ಮತ್ತು ನಿತ್ಯ 400 ಟಿಪ್ಸ್ ಸಿಗುತ್ತದೆ. ಅಂಗಡಿ, ಫ್ಯಾಕ್ಟರಿಗಳಲ್ಲಿ ಕೆಲಸ ಮಾಡಿದರೆ ತಿಂಗಳಿಗೆ ಬರಿ 400 ರೂ. ಮಾತ್ರ ಸಿಗುತ್ತದೆ ಎಂದು ಸ್ನೇಹಿತರು ಸಂತೋಷ್ ಮನಸ್ಸನ್ನು ಮೊದಲೇ ಕೆಡಿಸಿದ್ದರು. ಅದರಂತೆ ಸಂತೋಷನೂ ಹಣಕ್ಕೆ ಆಕರ್ಷಿತನಾಗಿ ಬಾರ್‌ನಲ್ಲಿ ಕೆಲಸಕ್ಕೆ ಸೇರಲು ಉತ್ಸುಕನಾಗಿಬಿಡುತ್ತಾನೆ. ಆದರೆ ಬಾರಿಗೆ ಕೆಲಸಕ್ಕೆ ಕಳುಹಿಸಿದರೆ ಮಗ ಎಲ್ಲಿ ಹಾದಿತಪ್ಪುತ್ತಾನೋ ಎಂದು ತಾಯಿ ಆತಂಕಗೊಂಡಿದ್ದಳು. ಬಾರ್‌ಗಳಲ್ಲಿ ಕೆಲಸ ಮಾಡುವುದು ಬೇಡ ಎಂದು ತಾಯಿ ಎಷ್ಟೇ ಹೇಳಿದರೂ ಕೇಳಲಿಲ್ಲ ಸಂತೋಷ್. ಕೊನೆಗೆ ಅಲ್ಲೆ ಕೆಲಸಕ್ಕೆ ಸೇರಿಯೇ ಬಿಟ್ಟ.
ಅದರಂತೆ ಎರಡು ವರ್ಷ ಶ್ರಮ ವಹಿಸಿ ದುಡಿದ, ಹತ್ತಾರು ಕಾಸು ಸಂಪಾದನೆ ಮಾಡಿದ, ತಾಯಿಗೆ ಸಂತೋಷವೂ ಆಯಿತು. ಮಗ ಬಾರ್‌ನಲ್ಲಿ ಕೆಲಸ ಮಾಡುತ್ತಿದ್ದರೂ ಕುಡಿಯುತ್ತಿಲ್ಲ. ಇದೆ ರೀತಿ ಮುಂದುವರಿದು ತನ್ನ ಕಾಲ ಮೇಲೆ ತಾನು ನಿಂತುಕೊಂಡರೆ ಸಾಕು ಎನ್ನುವ ಆಸೆ ಮಾತ್ರ ಇತ್ತು.
ಇದನ್ನೂ ಓದಿ: ಕುಡುಕ ಹೇಮಂತ್ ಬಾಳಲ್ಲಿ ಬಸವಮಾರ್ಗದ ಬೆಳಕು
ಅಲ್ಲಿಂದಲೇ ವ್ಯಸನ ಶುರುವಾಯ್ತು!
ಬಾರ್‌ನಲ್ಲಿ ಕೆಲಸಕ್ಕೆ ಸೇರಿ 2 ವರ್ಷದ ವರೆಗೂ ಮದ್ಯವನ್ನೂ ಕಿಂಚಿತ್ತೂ ಮುಟ್ಟದ ಸಂತೋಷ, ಒಂದು ದಿನ ಕುತೂಹಲಕ್ಕಾಗಿ ರುಚಿ ನೋಡಿಯೇ ಬಿಡುತ್ತಾನೆ. ಈ ಮೊದಲ ಕುಡಿತ ಸಂತೋಷನ ಬದುಕಿಗೆ ಮಾರಕವಾಗಿ ಬಿಡುತ್ತದೆ. ದಿನ ಕಳೆಯುತ್ತ ಕಳೆಯುತ್ತ, ಮದ್ಯ ಸಂತೋಷನನ್ನು ಆವರಿಸಿಕೊಳ್ಳಲು ಪ್ರಾರಂಭಿಸುತ್ತದೆ. ಆದರೆ ಇದರ ಬಗ್ಗೆ ಆತನಿಗೆ ಕಿಂಚಿತ್ತೂ ಪ್ರಜ್ಞೆ ಇರುವುದಿಲ್ಲ. ಸ್ನೇಹಿತರೊಂದಿಗೆ ಪಾರ್ಟಿ, ಅದು ಇದು ಎಂದು ಒಂದಲ್ಲ ಒಂದು ಕಾರಣಕ್ಕೆ ಸಂತೋಷ್ ಮದ್ಯವನ್ನು ಸೇವನೆ ಮಾಡುತ್ತಲೇ ಇರುತ್ತಾನೆ.

ಈ ಅಭ್ಯಾಸ ಆತನನ್ನು ಎಲ್ಲಿಗೆ ತೆಗೆದುಕೊಂಡು ಹೋಗಿಬಿಟ್ಟಿತು ಎಂದರೆ, ನಿತ್ಯ ಮುಂಜಾನೆಯಿಂದ ಮಧ್ಯರಾತ್ರಿಯ ವರೆಗೂ ನಶೆಯಲ್ಲೇ ಇರುವ ಪರಿಸ್ಥಿತಿಗೆ ತೆಗೆದುಕೊಂಡು ಹೋಗಿ ಬಿಡುತ್ತದೆ. ಪರಿಣಾಮ ಮದ್ಯ ಸಂತೋಷನ ವ್ಯಕ್ತಿತ್ವದಲ್ಲಿ ದೊಡ್ಡ ಮಟ್ಟದ ಬದಲಾವಣೆ ತಂದಿದಂತು ಸುಳ್ಳಲ್ಲ. ಬಾಲ್ಯದಿಂದಲೂ ಎಲ್ಲರಿಂದಲೂ ಸರಿ ಎನ್ನಿಸಿಕೊಂಡಿದ್ದ ಸಂತೋಷ, ಕುಡಿತದ ದಾಸ್ಯದಿಂದ ಎಲ್ಲರಿಂದಲೂ ನಿಂದನೆಗೆ ಒಳಗಾಗುವ ಪರಿಸ್ಥಿತಿಗೆ ಬಂದುಬಿಟ್ಟ. ಕುಡಿದರೆ ಸಂತೋಷ ಮನುಷ್ಯನಾಗಿರುತ್ತಿರಲಿಲ್ಲ. ಅವರಿವರ ಬಳಿ ಸುಮ್ಮ, ಸುಮ್ಮನೆ ಜಗಳ ತೆಗೆಯುತ್ತಿದ್ದ. ಮನೆಯಲ್ಲಿ ಗದ್ದಲ ಎಬ್ಬಿಸುತ್ತಿದ್ದ. ಬರುಬರುತ್ತ ಬಾರ್ ಗ್ರಾಹಕರ ಜೊತೆಗೂ ಜಗಳ, ಹೊಡೆದಾಟ, ಬಡಿದಾಟ ಮಾಡಲು ಶುರುಮಾಡಿಬಿಟ್ಟ. ತಾನು ಧೈರ್ಯವಾಗಿ ಜಗಳವಾಡಬೇಕು ಎಂದರೆ ಕುಡಿಯಬೇಕು ಎನ್ನುವುದನ್ನು ಮಿತ್ಯದಲ್ಲಿದ್ದ ಸಂತೋಷ.
4 ವರ್ಷದ ಬಳಿಕ ಆರೋಗ್ಯ ಸಮಸ್ಯೆ
ಕುಡಿತ ಶುರು ಮಾಡಿದ ಪ್ರಾರಂಭದ 4 ವರ್ಷಗಳಲ್ಲಿ ಯಾವುದೆ ಆರೋಗ್ಯ ಸಮಸ್ಯೆ ಸಂತೋಷ್‌ಗೆ ಕಾಡಲಿಲ್ಲ. ಆದರೆ ಆ ಬಳಿಕ ಅವನಿಗೆ ಹಂತ, ಹಂತವಾಗಿ ಆರೋಗ್ಯ ಸಮಸ್ಯೆ ಕಾಡಲು ಶುರುವಾಗಿಬಿಟ್ಟಿತ್ತು. ಅದು ಎಲ್ಲಿಗೆ ಹೋಗಿ ತಲುಪಿತು ಎಂದರೆ ಕುಡಿದರೆ ಸಾಕು, ರಕ್ತವನ್ನೆ ವಾಂತಿ ಮಾಡುವ ಪರಿಸ್ಥಿತಿಗೆ ಬಂತು. ಸರಿಯಾಗಿ ಊಟ ಮಾಡುತ್ತಿರಲಿಲ್ಲ. ಹೊತ್ತು, ಗೊತ್ತು ನೋಡದೆ ಕುಡಿಯುತ್ತಿದ್ದ ಕುಡಿತ ಸಂತೋಷ್‌ನನ್ನು ಇನ್ನಿಲ್ಲದಂತೆ ಆರೋಗ್ಯ ಸಮಸ್ಯೆಗೆ ಈಡು ಮಾಡಿಬಿಟ್ಟಿತ್ತು. ಆದರೂ ಕೂಡ ಸಂತೋಷ್‌ಗೆ ಕುಡಿತ ಬಿಟ್ಟು ಇರಲು ಸಾಧ್ಯವಾಗುತ್ತಿರಲಿಲ್ಲ.

ಇದನ್ನು ಕಂಡ ತಾಯಿಗೆ ದಿಕ್ಕೆ ತೋಚದಂತೆ ಆಗಿ ಹೋಯಿತು. ಕೂಡಲೇ ಸಂತೋಷ್‌ನನ್ನು ಒಂದೊಳ್ಳೆ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಿದರು. ವೈದ್ಯರು ಕೂಡ ಕುಡಿದರೆ ಸಾವು ಸಂಭವಿಸಬಹುದು ಎನ್ನುವ ಎಚ್ಚರಿಕೆಯನ್ನೂ ನೀಡಿದ್ದರು. ಆದರೆ ಸಂತೋಷ, ಸ್ವಲ್ಪ ಗುಣಮುಖನಾದ ಕೂಡಲೇ ಮತ್ತೆ ಕುಡಿತದ ವ್ಯಸನಕ್ಕೆ ಜಾರಿ ಬಿಡುತ್ತಿದ್ದ.
ಕುಡಿತ ಬಿಡಲು ಸಾಧ್ಯವಾಗಲಿಲ್ಲ..
ಕುಡಿತದಿಂದ ಆದ ಅನಾರೋಗ್ಯದ ಬಗ್ಗೆ ಸಂತೋಷನಿಗೆ ಸ್ವಯಂ ಭಯ ಶುರುವಾಗಿಬಿಟ್ಟಿತ್ತು. ಕುಡಿದರೆ ನಾನು ಸತ್ತು ಹೋಗಬಹುದು ಎನ್ನುವ ಆತಂಕ ಅವನ್ನನ್ನು ಆವರಿಸಿಕೊಂಡು ಬಿಟ್ಟಿತ್ತು. ಇಲ್ಲ ನಾನು ಬದುಕಬೇಕು.! ಹೇಗಾದರೂ ಮಾಡಿ ನಾನು ಕುಡತ ಬಿಡಬೇಕು ಎಂದು ತನಗೆ ತಾನೆ, ಸ್ವಯಂ ಪ್ರೇರಣೆ ತೆಗೆದುಕೊಳ್ಳುತ್ತಾನೆ ಸಂತೋಷ ಹಾಗೂ ತನ್ನ ನಡಾವಳಿಕೆಗಳಿಗೆ ಸ್ವಯಂ ನಿರ್ಬಂಧಗಳನ್ನು ಹಾಕಿಕೊಳ್ಳುತ್ತಾನೆ. ಆಗ ಅವನು ಹೋಗುವುದೇ ದೇವರ ಮೊರೆಗೆ.
ಹೌದು..! ಕುಡಿತ ಬಿಡಲು ದೇವರಿಗೆ ಹರಕೆ ಕಟ್ಟಿಕೊಳ್ಳುವುದು, ಮುಡಿಕೊಡುವುದು, ತಿಂಗಳುಗಟ್ಟಲೆ ಅಯ್ಯಪ್ಪನ ಮಾಲೆ ಹಾಕಿಕೊಳ್ಳುವುದು. ಹೀಗೆ ಕುಡಿತ ಬಿಡಲು ಒಂದಲ್ಲ ಒಂದು ಸ್ವಯಂ ಮಾರ್ಗವನ್ನು ಹಾಕಿಕೊಂಡು ಬರುತ್ತಿರುತ್ತಾನೆ. ಆದರೆ ವ್ರತ ಮುಗಿಯುತ್ತಿದ್ದಂತೆ ಮತ್ತೆ ಕುಡಿತ ಶುರು ಮಾಡಿಬಿಡುತ್ತಿದ್ದ. ಇದು ಅವನಲ್ಲಿ ಗೊಂದಲಕ್ಕೆ ಸಿಲುಕಿಕೊಳ್ಳುವಂತೆ ಮಾಡಿಬಿಡುತ್ತದೆ.
ಬದುಕು ಬದಲಿಸಿದ ಬಸವಮಾರ್ಗ

ಹೀಗೆ ಸತತ 16 ವರ್ಷಗಳ ಕಾಲ ಕುಡಿತ ಸಂತೋಷನಿಗೆ ಮೈಸೂರಿನ ಜೆಎಸ್‌ಎಸ್ ವತಿಯಿಂದ ಆಯೋಜಿಸಿದ್ದ ಕುಡಿತ ಬಿಡಿಸುವ ಶಿಬಿರ ನೆರವಿಗೆ ಬರುತ್ತದೆ. ಪತ್ರಿಕೆಯಲ್ಲಿ ಶಿಬಿರದ ಬಗ್ಗೆ ಮಾಹಿತಿ ತಿಳಿದ ಸಂತೋಷ ಹಿಂದು, ಮುಂದು ನೋಡದೆ ಶಿಬಿರಕ್ಕೆ ದಾಖಲಾಗಿಬಿಡುತ್ತಾನೆ. ಅಲ್ಲಿ ಅವನಿಗೆ ಕುಡಿತ ಒಂದು ದೈಹಿಕ, ಮಾನಸಿಕ ಮತ್ತು ಆತ್ಮಿಕ ಕಾಯಿಲೆ ಎಂದು ಗೊತ್ತಾಗುತ್ತದೆ. ಆತನೂ ಸೇರಿದಂತೆ ಮನೆಯಲ್ಲಿ ಶಿಬಿರದಿಂದ ಬಂದ ಮೇಲೆ ಕುಡಿತ ಬಿಡುತ್ತಾನೆ. ಹೊಸ ಮನುಷ್ಯನಾಗಿ ಬಾಳುತ್ತಾನೆ ಎಂದು ಎಲ್ಲರೂ ಅಂದುಕೊಂಡಿದ್ದರು. ಆದರೆ ಮತ್ತೆ ಎಡವಿ ಬೀಳುತ್ತಾನೆ. ಮತ್ತೆ ಕುಡಿತಕ್ಕೆ ದಾಸನಾಗುತ್ತಾನೆ. ಈ ವೇಳೆ ಆತನ ಕೈ ಹಿಡಿದದ್ದು, ಮೈಸೂರಿನ ಬಸವಮಾರ್ಗ ವ್ಯಸನಮುಕ್ತ ಮತ್ತು ಪುನರ್ವಸತಿ ಕೇಂದ್ರ. ಬಸವಮಾರ್ಗ ಸಂಸ್ಥೆ ಉಗಮ ಸಂತೋಷನ ಕುಡಿತಕ್ಕೆ ಬ್ರೇಕ್ ಹಾಕುತ್ತದೆ. ಸಂಸ್ಥೆಯ ನಿರಂತರ ಸಂಪರ್ಕದಿAದ ಸಂತೋಷನ ಬದುಕಲ್ಲಿ ಆನಂದ ಮರಳುತ್ತದೆ.
ಬಸವಮಾರ್ಗದಲ್ಲೇ ವೃತ್ತಿ ಆರಂಭ..

ಬಸವಮಾರ್ಗದಲ್ಲಿ ಸೇವೆ ಮತ್ತು ಆಲ್ಕೋಹಾಲ್ ಅನಾನಿಮಸ್ ಕಾರ್ಯಕ್ರಮದಿಂದ ಆರಂಭವಾದ ವೃತ್ತಿ, ಆತನ ಜೀವನಕ್ಕೆ ಹೊಸ ತಿರುವನ್ನು ಕೊಟ್ಟಿತ್ತು. ಸಂತೋಷ್ ಕಳೆದ 6 ವರ್ಷಗಳಿಂದ ಬಸವಮಾರ್ಗ ವ್ಯಸನಮುಕ್ತ ಕೇಂದ್ರದಲ್ಲೇ ಒಬ್ಬ ಪ್ರಾಮಾಣಿಕ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದಾನೆ. ಕುಡಿತ ಬಿಟ್ಟು ಉತ್ತಮ ವ್ಯಕ್ತಿಯಾಗಿ ಬದಲಾಗಿದ್ದಾನೆ. ಮನಃಪರಿವರ್ತನೆ ಮಾಡಿಕೊಂಡು ಕುಟುಂಬದ ಜೊತೆಯಲ್ಲೂ ಅನ್ಯೂನ್ಯವಾಗಿ ಇದ್ದಾನೆ. 23 ವರ್ಷಗಳಿಂದ ಮಾತು ಬಿಟ್ಟಿದ ತಂದೆಯ ಜೊತೆ ಅನ್ಯೂನ್ಯವಾಗಿದ್ದಾನೆ. ವ್ಯಸನ ತ್ಯೆಜಿಸಿದ ಮೇಲೆ ಆತನಿಗೆ ಮದುವೆಯೂ ಆಗಿದೆ. ಬಸವಮಾರ್ಗ ಫೌಂಡೇಷನ್ ಸಂತೋಷ ಜೀವನಕ್ಕೆ ಹೊಸ ಅರ್ಥಕೊಟ್ಟಿದೆ. ಕುಡಿತ ಬಿಟ್ಟ ಮೇಲೆ ಸಂತೋಷ ಈಗ ಸಂತೋಷದಿಂದ ಜೀವನ ಮಾಡುತ್ತಿದ್ದಾನೆ. ಸಂತೋಷ ಇತರೆ ವ್ಯಸನಿಗಳಿಗೆ ಮಾದರಿಯಾಗಲಿ ಶುಭವಾಗಲಿ ಸಂತೋಷ್….!
ಕೊನೆಮಾತು: ಕುಡಿತ ಬಿಟ್ಟ ಸಂತೋಷನ ಬದುಕು ಇತರರಿಗೂ ಮಾದರಿಯಾಗಲಿ..








