ಹುಣಸೂರಿನ ಹಿರೀಕ್ಯಾತನಹಳ್ಳಿಯಲ್ಲಿ ವಿಧವೆ ಅತ್ತಿಗೆ.. ವಿಧುರ ಮೈದುನ… ಬಾಳ ಸಂಗಾತಿಯಾದರು! ಏನಿದು ಮದುವೆ?

ಹುಣಸೂರು(ಹಿರೀಕ್ಯಾತನಹಳ್ಳಿ ಸ್ವಾಮಿಗೌಡ): ವಿಧವೆ ಅತ್ತಿಗೆಗೆ ವಿಧುರ ಮೈದುನ ತಾಳಿ ಕಟ್ಟಿ ಮದುವೆಯಾಗುವ ಮೂಲಕ ಬಾಳು ನೀಡಿರುವ ಅಪರೂಪದ ಘಟನೆ ಹುಣಸೂರು ತಾಲೂಕಿನ ಹಿರೀಕ್ಯಾತನಹಳ್ಳಿ ಗ್ರಾಮದ ಹೈಸ್ಕೂಲ್ ಬಡಾವಣೆಯಲ್ಲಿ ಗ್ರಾಮಸ್ಥರ ಸಮ್ಮುಖದಲ್ಲಿ ಶನಿವಾರ ನಡೆದಿದ್ದು, ನೂತನ ದಂಪತಿಗಳಿಗೆ ಗ್ರಾಮಸ್ಥರು ಶುಭಹಾರೈಸಿದ್ದಾರೆ.
ಹಿರೀಕ್ಯಾತನಹಳ್ಳಿ ಗ್ರಾಮದ ನಿವಾಸಿ ಸತ್ಯ ಶೆಟ್ಟಿ ಎಂಬಾತನೇ ಅತ್ತಿಗೆ ಜ್ಯೋತಿಗೆ ತಾಳಿಕಟ್ಟಿ ಮದುವೆಯಾಗಿ ಬಾಳುನೀಡಿದವರು. ಸತ್ಯಶೆಟ್ಟಿಗೆ ಈ ಹಿಂದೆಯೇ ಮದುವೆಯಾಗಿ ಮೂರು ಹೆಣ್ಣು ಮಕ್ಕಳಿದ್ದಾರೆ. ಆದರೆ ಅವರ ಹೆಂಡತಿ ಎರಡು ವರ್ಷಗಳ ಹಿಂದೆ ಮೃತಪಟ್ಟಿದ್ದರು. ಇನ್ನು ಅಣ್ಣನ ಹೆಂಡತಿ ಅತ್ತಿಗೆ ಜ್ಯೋತಿಗೆ ಮದುವೆಯಾಗಿ ಇಬ್ಬರು ಗಂಡು ಮಕ್ಕಳಿದ್ದಾರೆ. ಆದರೆ ಕಳೆದ ಏಳೆಂಟು ವರ್ಷಗಳ ಹಿಂದೆ ಜ್ಯೋತಿಯ ಗಂಡ ಮೃತಪಟ್ಟಿದ್ದರು. ಅಲ್ಲಿಂದ ಇಲ್ಲಿವರೆಗೆ ಮಕ್ಕಳನ್ನು ಸಾಕಿಕೊಂಡು ಬಂದಿದ್ದರು.

ಈ ನಡುವೆ ಒಂದೇ ಕುಟುಂಬದಲ್ಲಿದ್ದ ಇವರನ್ನು ಒಂದು ಮಾಡುವ ಪ್ರಯತ್ನವನ್ನು ಗ್ರಾಮಸ್ಥರು ಮಾಡಿದ್ದು ಅದರಂತೆ ಮೈದುನ ಸತ್ಯಶೆಟ್ಟಿ ಅತ್ತಿಗೆ ಜ್ಯೋತಿಗೆ ಗ್ರಾಮಸ್ಥರ ಸಮ್ಮುಖದಲ್ಲಿ ತಾಳಿ ಕಟ್ಟಿ ಮದುವೆಯಾಗಿದ್ದಾರೆ. ಈ ವೇಳೆ ಎರಡು ಕಡೆಯ ಕುಟುಂಬಸ್ಥರು ಸೇರಿ ಶನಿವಾರ ಗ್ರಾಮದ ಮನೆ ಎದುರು ಸರಳವಾಗಿ ವಿವಾಹ ನಡೆಸಿ, ನಿಮ್ಮ ಜೀವನ ಸುಖಕರವಾಗಿರಲಿ ಎಂದು ಸಿಹಿ ನೀಡಿ ಶುಭ ಹಾರೈಸಿದ್ದಾರೆ.
ಈ ವೇಳೆ ಗ್ರಾಮದ ಯಜಮಾನರಾದ ಜಗದೀಶ್, ಹೈಸ್ಕೂಲ್ ಬಡಾವಣಿಯ ಯಜಮಾನರಾದ ನಂಜೇಗೌಡ ಹಾಗೂ ಚಿನ್ನಪ್ಪನ ಸಣ್ಣನಾಯಕ ಮುಖಂಡರಾದ ಅಂಗಡಿ ಸುರೇಶ್, ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಸಿದ್ದ ನಾಯಕ, ಸಣ್ಣೇಗೌಡ, ಪುಟ್ಟೇಗೌಡ, ಗಾಣಿಗ ಸಮಾಜದ ಮುಖಂಡ ವೆಂಕಟರಮಣಶೆಟ್ಟಿ, ತಾ.ಪಂ. ಮಾಜಿ ಅಧ್ಯಕ್ಷ ಬಿ. ನಾಗರಾಜನಾಯಕ, ಹಾಗೂ ಮದುವೆಯ ಜೋಡಿಯ ಕುಟುಂಬಸ್ಥರು ಸೇರಿದಂತೆ ಹಲವರು ಉಪಸ್ಥಿತರಿದ್ದರು.







