LatestPolitical

ಉಪಚುನಾವಣೆ ನಂತರ ‘ಕೈ’ಗೆ ಶುರುವಾಗಿದೆ ಅಗ್ನಿಪರೀಕ್ಷೆ… ಅಲ್ಪಸಂಖ್ಯಾತರು ತಿರುಗಿ ಬೀಳ್ತಾರಾ?

ರಾಜ್ಯದಲ್ಲಿ ಎರಡು ವಿಧಾನಸಭಾ ಕ್ಷೇತ್ರಗಳಿಗೆ ನಡೆದ ಉಪಚುನಾವಣೆ ಬಳಿಕ ಕಾಂಗ್ರೆಸ್ ನಲ್ಲಿ ಅಸಮಾಧಾನದ ಹೊಗೆ ಎದ್ದಿದೆ… ಇದು ಮುಂದಿನ ದಿನಗಳಲ್ಲಿ ಯಾವ ರೀತಿಯಲ್ಲಿ ಪಕ್ಷದ ಮೇಲೆ ಪರಿಣಾಮ ಬೀರುತ್ತೋ ಗೊತ್ತಿಲ್ಲ. ಆದರೆ ಬಹುದೊಡ್ಡ ಬೆಳವಣಿಗೆಯಂತು ಆಗಿಯೇ ಆಗುತ್ತದೆ ಎಂಬುದರ ಸೂಚನೆ ಈಗ ಸಿಗಲಾರಂಭಿಸಿದೆ… ಮುಂದಿನ ದಿನಗಳಲ್ಲಿ ಅಲ್ಪ ಸಂಖ್ಯಾತರು ತಿರುಗಿ ಬೀಳುವ ಲಕ್ಷಣಗಳು ಗೋಚರಿಸುತ್ತಿವೆ… ಅಲ್ಪ ಸಂಖ್ಯಾತರ ಉದ್ಧಾರದ ಬಗ್ಗೆ ಮಾತನಾಡುತ್ತಾ ಪ್ರಮುಖ ಓಟ್ ಬ್ಯಾಂಕ್ ಮಾಡಿಕೊಂಡಿದ್ದ ಕಾಂಗ್ರೆಸ್ ಉಪಚುನಾವಣೆಗೆ ಮುಸ್ಲಿಂ ಅಭ್ಯರ್ಥಿಗೆ ಟಿಕೆಟ್ ನೀಡದೆ ಕುಟುಂಬ ರಾಜಕಾರಣಕ್ಕೆ ಮಣೆ ಹಾಕಿರುವುದು ಒಂದು ರೀತಿಯಲ್ಲಿ ಅಲ್ಪಸಂಖ್ಯಾತರಿಗೆ ಮಾಡಿದ ದ್ರೋಹದಂತೆ ಬಿಂಬಿತವಾಗುತ್ತಿದೆ… ಇದನ್ನು ಕಾಂಗ್ರೆಸ್ ನಾಯಕರು ಹೇಗೆ ಸರಿಪಡಿಸಿಕೊಳ್ಳುತ್ತಾರೆ ಎಂಬುದೇ  ಸದ್ಯಕ್ಕಿರುವ ಪ್ರಶ್ನೆಯಾಗಿದೆ.

ರಾಜ್ಯದಲ್ಲಿ ಈ ಹಿಂದೆ ಜೆಡಿಎಸ್ ಬಲಿಷ್ಠವಾಗಿತ್ತು. ಹೀಗಾಗಿ ಅಲ್ಪ ಸಂಖ್ಯಾತರಿಗೆ ಕಾಂಗ್ರೆಸ್ ಹೊರತು ಪಡಿಸಿ ಜೆಡಿಎಸ್ ನ ಆಯ್ಕೆಯಿತ್ತು. ಆದರೆ ಒಂದಷ್ಟು ವರ್ಷಗಳ ಕಾಲ ಜೆಡಿಎಸ್ ನ ಕೈಹಿಡಿದಿದ್ದ ಮುಸ್ಲಿಂ ನಾಯಕರು ಕಾಂಗ್ರೆಸ್ ಕಡೆಗೆ ಮುಖ ಮಾಡಿರುವುದು ಮತ್ತು ಬಿಜೆಪಿ ಜೊತೆ ಸೇರಿ ಸರ್ಕಾರ ರಚಿಸಿದ್ದು ಅಲ್ಪಸಂಖ್ಯಾತರು ದೂರ ಸರಿಯುವಂತೆ ಮಾಡಿತ್ತು. ಆದರೂ ಕಳೆದ 2023 ವಿಧಾನಸಭಾ ಚುನಾವಣೆ ತನಕವೂ ಜೆಡಿಎಸ್ ನ ನಾಯಕರು ಅಲ್ಪ ಸಂಖ್ಯಾತರು ತಮ್ಮ ಕೈಹಿಡಿಯುತ್ತಾರೆಂದೇ ನಂಬಿದ್ದರು. ಆದರೆ ಅದು ಭ್ರಮೆಯಾಗಿತ್ತು. ಅವರೆಲ್ಲರೂ ಕಾಂಗ್ರೆಸ್ ಕಡೆಗೆ ಮುಖ ಮಾಡಿದರು.

2024ರ ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್  ಬಿಜೆಪಿ ನೇತೃತ್ವದ ಎನ್ ಡಿಎ ಜೊತೆಗೆ ಕೈಜೋಡಿಸಿದ ಬಳಿಕ ಅಲ್ಪಸಂಖ್ಯಾತರು ಅವರಿಂದ ಸಂಪೂರ್ಣ ದೂರ ಸರಿದಿದ್ದಾರೆ. ಹೀಗಾಗಿ ಕಾಂಗ್ರೆಸ್ ಗೆ ಅಲ್ಪಸಂಖ್ಯಾತರು ತಮ್ಮ ಜತೆಗಿರುತ್ತಾರೆ ಎಂಬ ನಂಬಿಕೆ ಇಮ್ಮಡಿಯಾಗಿದೆ. ಅಲ್ಪಸಂಖ್ಯಾತರು ಕೂಡ ಕಾಂಗ್ರೆಸ್ ನ್ನು ನಂಬಿದ್ದರು. ಆದರೆ ದಾವಣಗೆರೆಯಲ್ಲಿ ಯಾವಾಗ  ಮುಸ್ಲಿಂ ಅಭ್ಯರ್ಥಿಗೆ ಟಿಕೆಟ್ ನೀಡದೆ ಹೋದರೋ ಆಗಲೇ ಕಾಂಗ್ರೆಸ್ ನಲ್ಲಿರುವ ಅಲ್ಪಸಂಖ್ಯಾತ ನಾಯಕರೇ ಸಿಡಿಮಿಡಿಗೊಳ್ಳುವಂತಾಗಿದೆ.

ಕೆಲವರು ಬಹಿರಂಗವಾಗಿ ಅದನ್ನು ತೋರ್ಪಡಿಸಿ ಬಂಡಾಯ ಎದ್ದು ಚುನಾಣೆಗೆ ಸ್ಪರ್ಧಿಸಿದ್ದರೆ,. ಕೆಲವರ ಮನವೊಲಿಕೆ ಮಾಡುವ ಕೆಲಸ ಕಾರ್ಯ ನಡೆದು ಒಂದಷ್ಟು ಮಂದಿಯನ್ನು ಕಣದಿಂದ ಹಿಂದಕ್ಕೆ ಸರಿಯುವಂತೆ ಮಾಡುವ ಕೆಲಸವಾಯಿತು ಆದರೆ ಮುಖ್ಯವಾಗಿ ಕಾಂಗ್ರೆಸ್ ನ ಮುಖಂಡ ಟಿಕೆಟ್ ಸಿಗದಕ್ಕೆ ಬಂಡಾಯವಾಗಿ ನಾಮಪತ್ರ ಸಲ್ಲಿಸಿದ್ದ  ಸಾದಿಕ್ ಪೈಲ್ವಾನ್ ಅವರು ಎಷ್ಟೇ ಒತ್ತಡ ತಂದರೂ ನಾಮಪತ್ರ ಹಿಂತೆಗೆದುಕೊಂಡಿರಲಿಲ್ಲ. ಇದಾದ ನಂತರ ಖುದ್ದು ಸಿಎಂ ಸಿದ್ದರಾಮಯ್ಯರವರು ಮಾತನಾಡಿ ಕಣದಿಂದ ನಿವೃತ್ತಿ ಮಾಡುವ ಪ್ರಯತ್ನ ಮಾಡಿದರು. ಇದೆಲ್ಲದರ ನಡುವೆ ಮುಸ್ಲಿಂ ಸಮುದಾಯಕ್ಕೆ ಟಿಕೆಟ್ ನೀಡದ್ದಕ್ಕೆ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದ ಘಟನೆಯೂ ನಡೆದು ಹೋಯಿತು.

ಮೇಲ್ನೋಟಕ್ಕೆ ಅಸಮಾಧಾನದ ಕಾರಣದಿಂದಾಗಿ ದಾವಣಗೆರೆಯಲ್ಲಿ ಕಾಂಗ್ರೆಸ್ ವಿರೋಧಿ ಅಲೆಯೇ ಜಾಸ್ತಿಯಿರುವುದು ಎದ್ದು ಕಾಣಿಸುತ್ತಿದೆ. ಏಕೆಂದರೆ ಕಾಂಗ್ರೆಸ್ ನಿಂದ ಕುಟುಂಬ ರಾಜಕಾರಣಕ್ಕೆ ಮಣೆ ಹಾಕಲಾಗಿದೆ ಎಂಬ ಆರೋಪ ದೊಡ್ಡ ಮಟ್ಟದಲ್ಲಿದೆ. ದಾವಣಗೆರೆ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಸಮರ್ಥ್ ಶ್ಯಾಮನೂರು ಅವರ ತಂದೆ ಶಾಸಕರಾಗಿದ್ದಾರೆ, ತಾಯಿ ಸಂಸದರಾಗಿದ್ದಾರೆ. ಹೀಗಿರುವಾಗ 27 ವರ್ಷದ ಸಮರ್ಥ್ ಶ್ಯಾಮನೂರಿಗೆ ಟಿಕೆಟ್ ಕೊಡುವ ಔಚಿತ್ಯ ಏನಿತ್ತು? ಎಂಬುದು ಅಲ್ಪಸಂಖ್ಯಾತ ನಾಯಕರ ಪ್ರಶ್ನೆಯಾಗಿತ್ತು. ಹೀಗಾಗಿ ಬಿಜೆಪಿಯನ್ನು ಹೊರತುಪಡಿಸಿ  ಎಸ್ ಡಿಪಿಐನ ಅಫ್ಸರ್ ಕೊಡ್ಲಿಪೇಟೆ, ಉಳಿದಂತೆ ಖಾದರ್ ಅದಿಲ್ ಬಾಷಾ ಸೇರಿ 14 ಮುಸ್ಲಿಂ ಅಭ್ಯರ್ಥಿಗಳು ಪಕ್ಷೇತರರಾಗಿ ಸ್ಪರ್ಧೆ ಮಾಡಿದ್ದರೂ ಅವರೆಲ್ಲರ ಸ್ಪರ್ಧೆ ಕಾಂಗ್ರೆಸ್ ವಿರುದ್ಧವೇ ಆಗಿದೆ.

ಇಲ್ಲಿ ಕಾಂಗ್ರೆಸ್ ಮತಗಳು ಹಂಚಿಹೋಗುವ ಲಕ್ಷಣಗಳು ಕಂಡು ಬಂದಿದ್ದು, ಅದರ ಪರಿಣಾಮ ಕಾಂಗ್ರೆಸ್ ಮೇಲೆ ಆಗಲಿದೆ. ಹೀಗಾಗಿಯೇ ಕಾಂಗ್ರೆಸ್ ನಾಯಕರು ಬೆಚ್ಚಿ ಬಿದ್ದಿದ್ದಾರೆ. ಕಾಂಗ್ರೆಸ್ ವಿರುದ್ಧವೇ ಬಂಡಾಯ ಮಾಡಿದ ಮುಸ್ಲಿಂ ನಾಯಕರ ತಲೆದಂಡಕ್ಕೆ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದ್ದು, ಸಚಿವ ಜಮೀರ್ ಖಾನ್ ಸೇರಿದಂತೆ ಹಲವು ಮುಸ್ಲಿಂ ಮುಖಂಡರ ವಿರುದ್ಧ ಹೈಕಮಾಂಡ್ ಗೆ ದೂರು ಸಲ್ಲಿಕೆಯಾಗಿದೆ. ಸದ್ಯ ಕೆಪಿಸಿಸಿ ಅಲ್ಪಸಂಖ್ಯಾತ ವಿಭಾಗದ ಅಧ್ಯಕ್ಷ ಸ್ಥಾನಕ್ಕೆ  ಅಬ್ದುಲ್ ಜಬ್ಬಾರ್ ರಾಜೀನಾಮೆ ನೀಡಿದ್ದಾರೆ. ಇದು ಚುನಾವಣಾ ಫಲಿತಾಂಶ ಬರುವ ಮುನ್ನವೇ ಕಾಂಗ್ರೆಸ್ ನಲ್ಲಿ ಆಗುತ್ತಿರುವ ಬೆಳವಣಿಗೆಯಾಗಿದೆ.

ಮೇ.4ರಂದು ಫಲಿತಾಂಶ ಬರಲಿದ್ದು ಅವತ್ತು ಕಾಂಗ್ರೆಸ್ ಪರ ಫಲಿತಾಂಶ ಬಂದರೆ ಬಹುಶಃ ದಾವಣಗೆರೆಯ ಕಾಂಗ್ರೆಸ್ ನಾಯಕರ ನಡುವಿನ ಜಟಾಪಟಿ ತಣ್ಣಗೆ ಆಗಬಹುದು. ಒಂದು ವೇಳೆ ಕಾಂಗ್ರೆಸ್ ಗೆ ವಿರುದ್ಧವಾಗಿ ಫಲಿತಾಂಶ ಬಂದರೆ ಅಸಮಾಧಾನದ ಹೊಗೆ ರಾಜ್ಯವ್ಯಾಪಿ ಹರಡಲೂ ಬಹುದು.. ಆದರೂ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ನಡೆದ ವಿದ್ಯಮಾನಗಳು ಕಾಂಗ್ರೆಸ್ ಪಕ್ಷದ ಮುಖಂಡರ ನಿದ್ದೆಗೆಡಿಸಿದಂತು ನಿಜ.. ಇಲ್ಲಿ ಹೈಕಮಾಂಡ್ ತೆಗೆದುಕೊಳ್ಳುವ ಕ್ರಮಗಳು ಪಕ್ಷದ ಮೇಲೆ ವ್ಯತಿರಿಕ್ತ ಪರಿಣಾಮಗಳನ್ನುಂಟು ಮಾಡುವುದಂತು ನಿಜ..

ಅತ್ತ ಬಾಗಲಕೋಟೆಯಲ್ಲಿಯೂ ಕಾಂಗ್ರೆಸ್ ವಿಚಾರದಲ್ಲಿ ಎಲ್ಲವೂ ಸರಿಯಿದೆ ಎಂದರೆ ತಪ್ಪಾಗುತ್ತದೆ. ಅಲ್ಲಿ ಬಹಳ ಕಸರತ್ತು ನಡೆದು ಅಂತಿಮವಾಗಿ ಉಮೇಶ್ ಮೇಟಿ ಅವರಿಗೆ ಟಿಕೆಟ್ ನೀಡಲಾಗಿದೆ. ಸಿಎಂ ಸಿದ್ದರಾಮಯ್ಯ ಅವರ ಸಂಧಾನದ ಫಲವಾಗಿ ಉಮೇಶ್ ಮೇಟಿಗೆ ಟಿಕೆಟ್ ನೀಡಿದ್ದರೂ ಕುಟುಂಬದೊಳಗಿನ ಅಸಮಾಧಾನ ಕಡಿಮೆ ಆದಂತೆ ಕಾಣುತ್ತಿಲ್ಲ. ಹೀಗಾಗಿ ಅಲ್ಲಿಯೂ ಕಾಂಗ್ರೆಸ್ ಗೆ ಗೆಲುವು ಸುಲಭವಾಗುತ್ತದೆ ಎನ್ನುವುದನ್ನು ಒಪ್ಪಿಕೊಳ್ಳಲಾಗುವುದಿಲ್ಲ. ಏಕೆಂದರೆ ಬಿಜೆಪಿ ಅಲ್ಲಿ ವೀರಣ್ಣ ಚರಂತಿ ಮಠ ಅವರನ್ನು ಕಣಕ್ಕಿಳಿಸಿ ಹೋರಾಟ ನಡೆಸಿದೆ. ಸದ್ಯದ ಪರಿಸ್ಥಿತಿಗಳನ್ನು ಗಮನಿಸಿದ್ದೇ ಆದರೆ ಮಳೆ ನಿಂತರೂ ಮರದ ಹನಿ ನಿಂತಿಲ್ಲ ಎಂಬಂತೆ ಉಪಚುನಾವಣೆ ನಂತರದ ಬೆಳವಣಿಗೆಗಳು ಕಾಂಗ್ರೆಸ್ ನಲ್ಲಿ ಗೋಚರಿಸುತ್ತಿವೆ.

ಉಪಚುನಾವಣೆಯಲ್ಲಿ ಆಗಿರುವ ಬೆಳವಣಿಗೆಗಳ ಬಗ್ಗೆ ರಾಜ್ಯದ ಹಿರಿಯ ನಾಯಕರು ಮತ್ತು ಹೈಕಮಾಂಡ್ ನಾಯಕರು ತಲೆಕೆಡಿಸಿಕೊಂಡಿದ್ದರೆ, ಕಾಂಗ್ರೆಸ್ ನಲ್ಲಿರುವ ಮತ್ತೆ ಕೆಲವು ಹಿರಿಯ ಶಾಸಕರು ಸಚಿವ ಸ್ಥಾನಕ್ಕಾಗಿ ಕಸರತ್ತು ನಡೆಸಲು ಆರಂಭಿಸಿದ್ದಾರೆ. ಸುಮಾರು ಇಪ್ಪತ್ತರಿಂದ ಇಪ್ಪತ್ತೈದು ಮಂದಿ ಆಕಾಂಕ್ಷಿಗಳಿದ್ದು ಅವರೆಲ್ಲರೂ ತಮ್ಮ ಗಾಡ್ ಫಾದರ್ ಗಳ ಮೂಲಕ ಲಾಭಿ ನಡೆಸುತ್ತಿದ್ದಾರೆ.

ಸರ್ಕಾರ ಅಧಿಕಾರಕ್ಕೆ ಬಂದು ಮೂರು ವರ್ಷಗಳಾಗುತ್ತಿವೆ. ಅಧಿಕಾರ ಇನ್ನು ಎರಡು ವರ್ಷ ಮಾತ್ರ ಬಾಕಿಯಿದೆ ಹೀಗಾಗಿ ಸಂಪುಟ ಪುನರ್ರಚನೆ ಮಾಡಿ ತಮಗೆ ಸಚಿವ ಸ್ಥಾನ ನೀಡಿ ಎಂಬುದು ಹಿರಿಯ ಶಾಸಕರ ಆಗ್ರಹವಾಗಿದೆ. ಆದರೆ ಸಂಪುಟ ಪುನರ್ರಚನೆಗೆ ಕೈಹಾಕುವುದು ಜೇನುಗೂಡಿಗೆ ಕಲ್ಲು ಹೊಡೆಯುವುದು ಒಂದೇ ಎಂಬಂತಾಗಿದೆ ಹೈಕಮಾಂಡ್ ಪರಿಸ್ಥಿತಿ. 2028ರ ವಿಧಾನಸಭಾ ಚುನಾವಣೆಗೆ ಕೇವಲ ಎರಡು ವರ್ಷವಷ್ಟೇ ಬಾಕಿ ಇರುವುದರಿಂದ ನಾಯಕತ್ವ ಬದಲಾವಣೆ ಸೇರಿದಂತೆ ಸಂಪುಟ ಪುನರ್ರಚನೆ ಮಾಡಿದರೆ ಅಸಮಾಧಾನ, ಆಕ್ರೋಶ, ಬಂಡಾಯಗಳು ಭುಗಿಲೇಳುವ ಸಾಧ್ಯತೆ ಇರುತ್ತದೆ. ಅದನ್ನು ತಣ್ಣಗೆ ಮಾಡಿ ಯಥಾ ಸ್ಥಿತಿಗೆ ತರುವ ಹೊತ್ತಿಗೆ ಚುನಾವಣೆ ಬರಲಿದ್ದು, ಅದಕ್ಕೂ ಸಿದ್ಧತೆಗಳನ್ನು ಮಾಡಿಕೊಳ್ಳಬೇಕಾಗುತ್ತದೆ.

ಸಂಪುಟ ಪುನರ್ರಚನೆ ವಿಚಾರವಂತು ಹಿರಿಯ ಮತ್ತು ಕಿರಿಯ ಶಾಸಕರ ನಡುವಿನ ಕಿತ್ತಾಟಕ್ಕೆ ದಾರಿ ಮಾಡಿಕೊಟ್ಟರೂ ಅಚ್ಚರಿಯಿಲ್ಲ. ಈಗಾಗಲೇ ನೂತನವಾಗಿ ಆರಿಸಿ ಬಂದಿರುವ ಶಾಸಕರು ನಮಗೆ ಸಚಿವ ಸ್ಥಾನ ನೀಡಿ ಎಂದು ಹೈಕಮಾಂಡ್ ಗೆ ಪತ್ರ ಬರೆದಿದ್ದ ವಿಚಾರಗಳು ಬಹಿರಂಗಗೊಂಡಿದ್ದವು. ಇದರ ನಡುವೆ ನಾವು ಹಿರಿಯರು ಪಕ್ಷಕ್ಕಾಗಿ ದುಡಿದುಕೊಂಡು ಬಂದಿದ್ದೇವೆ. ಹೀಗಾಗಿ ಇನ್ನುಳಿದ ಎರಡು ವರ್ಷದ ಅವಧಿಗಾದರೂ ನಮಗೆ ಅವಕಾಶ ಮಾಡಿಕೊಡಿ ಎಂದು ಹಿರಿಯ ಶಾಸಕರು ದುಂಬಾಲು ಬೀಳುತ್ತಿದ್ದಾರೆ. ಇಲ್ಲಿ ಅಧಿಕಾರ ಕೊಟ್ಟರೆ  ಖುಷಿಪಡುತ್ತಾರೆ.  ಕೊಡದೆ ಹೋದರೆ ತಿರುಗಿ ಬೀಳುತ್ತಾರೆ.. ಹೀಗಾಗಿ ಏನೇ ಮಾಡಿದರೂ ಕಾಂಗ್ರೆಸ್ ಗೆ ಸಂಕಷ್ಟ ತಪ್ಪಿದಲ್ಲ..

ಸದ್ಯ ರಾಜ್ಯ ನಾಯಕರು ಹೈಕಮಾಂಡ್ ಮೇಲೆ ಭಾರ ಹಾಕಿ ತೆಪ್ಪಗಾಗಿರುವಂತೆ ಗೋಚರಿಸುತ್ತದೆ. ರಾಜ್ಯ ಕಾಂಗ್ರೆಸ್ ಡಿಕೆಶಿ- ಸಿದ್ದರಾಮಯಯ ಹೀಗೆ ಎರಡು ಬಣಗಳಾಗಿ ಹೋಳಾಗಿದ್ದರೂ ಉಪಚುನಾವಣೆಯಲ್ಲಿ ನಾವೆಲ್ಲರೂ ಒಗ್ಗಟ್ಟಾಗಿದ್ದೇವೆ ಎಂಬುದನ್ನು ತೋರ್ಪಡಿಸಲು ಸರ್ವ ರೀತಿಯ ಪ್ರಯತ್ನಗಳನ್ನು ಮಾಡಿದ್ದಾರೆ. ಆದರೆ ಅಲ್ಪಸಂಖ್ಯಾತ ನಾಯಕರು ಸಿಡಿದೆದ್ದಿರುವುದು ನುಂಗಲಾರದ ತುತ್ತಾಗಿ ಪರಿಣಮಿಸಿದೆ.  ಮುಂದಿನ ವಿಧಾನಸಭಾ ಚುನಾವಣೆ ಹೊತ್ತಿಗೆ ಬಹುತೇಕ ಮುಸ್ಲಿಂ ನಾಯಕರು ಕಾಂಗ್ರೆಸ್ ನಿಂದ ದೂರವಾಗಿ ಪರ್ಯಾಯ ಪಕ್ಷದ ಕಡೆಗೆ ಒಲವು ತೋರಿದರೂ ಅಚ್ಚರಿ ಪಡಬೇಕಾಗಿಲ್ಲ. ಇದೆಲ್ಲ ಬೆಳವಣಿಗೆಯನ್ನು ಗಮನಿಸಿದರೆ ಕಾಂಗ್ರೆಸ್ ಗೆ ಈಗಿನಿಂದಲೇ ಅಗ್ನಿಪರೀಕ್ಷೆ ಶುರುವಾಗಿದೆ ಎಂಬುದನ್ನು ತಳ್ಳಿಹಾಕುವಂತಿಲ್ಲ… ಮುಂದಿನ ಬೆಳವಣಿಗೆಯನ್ನು ಕಾದು ನೋಡೋಣ…

 

-ಬಿ.ಎಂ.ಲವಕುಮಾರ್

 

 

admin
the authoradmin

Leave a Reply

Translate to any language you want