ಶಿಕ್ಷಣ ಕ್ಷೇತ್ರಕ್ಕೆ ಗೇಮ್ ಚೇಂಜರ್ ಆಗಲಿರುವ ಎಐ ಆಧಾರಿತ ಆಪ್… ವಿದ್ಯಾರ್ಥಿಗಳಿಗೆ ಕೊಡುಗೆ!
ಇದು ಪ್ರೊ. ಡಾ. ಎಸ್.ಎಸ್. ಅಯ್ಯಂಗಾರ್ ಅಭಿವೃದ್ಧಿಪಡಿಸಿದ ಆಪ್

ಬೆಂಗಳೂರು: ಗ್ರಾಮೀಣ ಮತ್ತು ನಗರ ಪ್ರದೇಶಗಳ ವಿದ್ಯಾರ್ಥಿಗಳ ನಡುವಿನ ಶಿಕ್ಷಣ ಅಂತರವನ್ನು ಕಡಿಮೆ ಮಾಡುವ ಮಹತ್ವದ ಹೆಜ್ಜೆಯಾಗಿ, ಹಿರಿಯ ವಿಜ್ಞಾನಿ ಪ್ರೊ. ಡಾ. ಎಸ್.ಎಸ್. ಅಯ್ಯಂಗಾರ್ ಅವರು ಕರ್ನಾಟಕದ ಪದವಿ ಮತ್ತು ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗಾಗಿ ಅತ್ಯಾಧುನಿಕ ಎಐ ಆಧಾರಿತ ಸ್ವಯಂ ಕಲಿಕಾ ಆಪ್ ಅನ್ನು ಅಭಿವೃದ್ಧಿಪಡಿಸಿದ್ದಾರೆ.
ಈ ಆಪ್ ರಾಜ್ಯದ ಉನ್ನತ ಶಿಕ್ಷಣ ಇಲಾಖೆಯ ಪ್ರಯತ್ನಗಳಿಗೆ ಪೂರಕವಾಗಿದ್ದು, ಬಿಎ, ಬಿಕಾಂ, ಬಿಎಸ್ಸಿ ಹಾಗೂ ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ತಾವು ಬೇಕಾದ ವಿಷಯಗಳು, ಅಧ್ಯಯನ ಸಾಮಗ್ರಿಗಳು ಮತ್ತು ಉತ್ತರಗಳನ್ನು ಸುಲಭವಾಗಿ ಪಡೆಯಲು ಸಹಾಯ ಮಾಡಲಿದೆ. ಎಐ ತಂತ್ರಜ್ಞಾನದ ಮೂಲಕ ವಿದ್ಯಾರ್ಥಿಗಳಲ್ಲಿ ಸ್ವಯಂ ಕಲಿಕೆಯ ಸಾಮರ್ಥ್ಯವನ್ನು ವೃದ್ಧಿಸುವುದು ಇದರ ಮುಖ್ಯ ಉದ್ದೇಶವಾಗಿದೆ.

ಈ ಬಗ್ಗೆ ಮಾಹಿತಿ ನೀಡಿರುವ ಪ್ರೊ. ಡಾ. ಎಸ್.ಎಸ್. ಅಯ್ಯಂಗಾರ್, ಈ ಎಐ ಆಪ್‌ನ ವಿನ್ಯಾಸ ಬಹುತೇಕ ಪೂರ್ಣಗೊಂಡಿದ್ದು, ಶೀಘ್ರದಲ್ಲೇ ವಿದ್ಯಾರ್ಥಿಗಳಿಗೆ ಲಭ್ಯವಾಗಲಿದೆ ಎಂದು ಹೇಳಿದರು. ಎಐ ತಂತ್ರಜ್ಞಾನ ಬಳಕೆಯಿಂದ ಕಲಿಕೆ ಹೆಚ್ಚು ಪರಿಣಾಮಕಾರಿ ಮತ್ತು ಸುಲಭವಾಗುತ್ತದೆ. ವಿಶೇಷವಾಗಿ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಇದು ಬಹಳ ಸಹಾಯಕವಾಗಲಿದೆ ಎಂದು ಅವರು ಹೇಳಿದರು.
ಈ ಆಪ್ ಅನ್ನುಮೊಬೈಲ್ ವಾಟ್ಸಾಪ್ ಹಾಗೂ ಡೆಸ್ಕ್‌ಟಾಪ್ ಪ್ಲಾಟ್‌ಫಾರ್ಮ್‌ಗಳಲ್ಲಿ ಬಳಸಬಹುದಾಗಿದ್ದು, ಡಿಜಿಟಲ್ ಸೌಲಭ್ಯ ಕಡಿಮೆ ಇರುವ ವಿದ್ಯಾರ್ಥಿಗಳಿಗೂ ಇದು ಅನುಕೂಲಕರವಾಗಿದೆ. ವಿದ್ಯಾರ್ಥಿ ಸಮುದಾಯಕ್ಕೆ ಸೇವೆ ಸಲ್ಲಿಸುವ ಉದ್ದೇಶದಿಂದ ಈ ಆಪ್ ಅಭಿವೃದ್ಧಿಪಡಿಸಲಾಗಿದೆ ಎಂದಿದ್ದಾರೆ.
ಪ್ರೊ. ಡಾ. ಎಸ್.ಎಸ್. ಅಯ್ಯಂಗಾರ್ ಅವರು ಈಗಾಗಲೇ ಶಿಕ್ಷಣ ಕ್ಷೇತ್ರಕ್ಕೆ ಮಹತ್ವದ ಕೊಡುಗೆ ನೀಡಿದ್ದು, ಬೆಂಗಳೂರು ಹಾಗೂ ಸುತ್ತಮುತ್ತಲಿನ ಗ್ರಾಮೀಣ ಪ್ರದೇಶಗಳಲ್ಲಿ ಅನೇಕ ಸಂಸ್ಥೆಗಳಿಗೆ ₹50 ಲಕ್ಷ ಮೌಲ್ಯದ ಡೆಸ್ಕ್‌ಟಾಪ್ ಕಂಪ್ಯೂಟರ್‌ಗಳನ್ನು ವಿತರಿಸಿದ್ದಾರೆ. ದೇಶದಾದ್ಯಂತ ಇಂತಹ ಶಿಕ್ಷಣಾಭಿವೃದ್ಧಿ ಯೋಜನೆಗಳನ್ನು ವಿಸ್ತರಿಸುವ ಮಹತ್ವಾಕಾಂಕ್ಷೆಯ ಯೋಜನೆಗಳನ್ನೂ ಹೊಂದಿದ್ದಾರೆ.

ಈ ಯೋಜನೆ ಕರ್ನಾಟಕದಲ್ಲಿ ಶಿಕ್ಷಣ ಕ್ಷೇತ್ರಕ್ಕೆ ಗೇಮ್ ಚೇಂಜರ್ ಆಗಿ ಪರಿಣಮಿಸಲಿದೆ. ಗ್ರಾಮೀಣ ಮತ್ತು ನಗರ ವಿದ್ಯಾರ್ಥಿಗಳು ವಾಣಿಜ್ಯ, ವಿಜ್ಞಾನ, ಕಲಾ ಹಾಗೂ ಅಕೌಂಟಿಂಗ್ ಕ್ಷೇತ್ರಗಳಲ್ಲಿ ವೇಗವಾಗಿ ಮತ್ತು ಪರಿಣಾಮಕಾರಿಯಾಗಿ ಕಲಿಯಲು ಇದು ಸಹಕಾರಿಯಾಗಲಿದೆ. ತಾಂತ್ರಿಕ ಸಲಹೆಗಾರರಾಗಿ ಕಾರ್ಯನಿರ್ವಹಿಸುತ್ತಿರುವ ಅವರು, ಪ್ರತಿಯೊಬ್ಬ ವಿದ್ಯಾರ್ಥಿಗೂ ಜ್ಞಾನ ಮತ್ತು ಆತ್ಮವಿಶ್ವಾಸವನ್ನು ನೀಡಿ ಜಾಗತಿಕ ಮಟ್ಟದಲ್ಲಿ ಸ್ಪರ್ಧಿಸಲು ಸಿದ್ಧಗೊಳಿಸುವ ದೃಷ್ಟಿಯನ್ನು ಹೊಂದಿದ್ದಾರೆ.
ಅವರ ವಿಶಿಷ್ಟ ಸಾಧನೆಗಳಿಗೆ ಮಾನ್ಯತೆ ನೀಡಿ, “ಎಐ ಮತ್ತು ಡಿಜಿಟಲ್ ಫರೆನ್ಸಿಕ್ಸ್ ಕ್ಷೇತ್ರದ ಸ್ಥಾಪಕ ಪಿತಾಮಹ” ಎಂಬ ಗೌರವ ಪ್ರಶಸ್ತಿಯನ್ನೂ ಅವರಿಗೆ ನೀಡಲಾಗಿದೆ. ಮೈಸೂರು ಜಿಲ್ಲೆಯ ಟಿ. ನರಸಿಪುರ ತಾಲ್ಲೂಕಿನ ಹೆಮ್ಮಿಗೆ ಗ್ರಾಮದ ಮೂಲದವರು ಆದ ಅವರು, ಶ್ರೀರಾಮಪುರ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ ಪಡೆದು, 1970ರಲ್ಲಿ ಅಮೇರಿಕಾದ ವಿಶ್ವವಿದ್ಯಾಲಯದಲ್ಲಿ ಉನ್ನತ ಶಿಕ್ಷಣ ಪಡೆದಿದ್ದಾರೆ. ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ತಂತ್ರಜ್ಞಾನದ ಮೂಲಕ ಶಿಕ್ಷಣ ಒದಗಿಸುವುದು ತನ್ನ ಧ್ಯೇಯ ಎಂದು ಅವರು ತಿಳಿಸಿದ್ದಾರೆ.
ಎಸ್‌ಎಸ್‌ಐಟಿ ಶಿಕ್ಷಣ ಸಂಸ್ಥೆಗಳ ಹಿರಿಯ ಸಲಹೆಗಾರ ಕೈಲಾಶ್ ಶಿವನಗಿ ಮಾತನಾಡಿ ಎಐ ತಂತ್ರಜ್ಞಾನದಿಂದ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ದೊರೆಯಲಿದೆ. ಅವರು ಕೇಳುವ ಎಲ್ಲ ಪ್ರಶ್ನೆಗಳಿಗೆ ಸ್ಪಷ್ಟ ಉತ್ತರಗಳು ಸಿಗಲಿವೆ ಎಂದು ಹೇಳಿದ್ದಾರೆ.







