ಮೈಸೂರು: ಗ್ರಾಹಕರಿಗೆ ಕಡಿಮೆ ದರದ ಹಾಗೂ ಗುಣಮಟ್ಟದ ತಿಂಡಿ, ಊಟ ಪೂರೈಸಲು ರಾಜ್ಯ ಸರ್ಕಾರ ಘೋಷಣೆ ಮಾಡಿದ್ದ ಅಕ್ಕ ಕೆಫೆಯನ್ನು ಮುಖ್ಯಮಂತ್ರಿ ತವರು ಮೈಸೂರು ಜಿಲ್ಲೆಯಲ್ಲಿ ಮೊದಲ ಕೆಫೆ ಆರಂಭಿಸಲಾಗಿದ್ದು, ಇದರಿಂದ ಬಹಳಷ್ಟು ಮಂದಿಗೆ ಅನುಕೂಲವಾಗಲಿದೆ.
ಜಿ.ಪಂ ಕಚೇರಿ ಹಿಂಭಾಗದಲ್ಲಿ ರಾಷ್ಟ್ರೀಯ ಗ್ರಾಮೀಣೋಪಾಯ ಅಭಿಯಾನದಡಿ 15ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಿಸಿರುವ ಅಕ್ಕ ಕೆಫೆಯನ್ನು ಉದ್ಘಾಟಿಸಿದ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ, ಶಾಸಕರಾದ ಜಿ.ಟಿ.ದೇವೇಗೌಡ, ತನ್ವೀರ್ ಸೇಠ್, ಡಿ.ರವಿಶಂಕರ್, ಜಿಲ್ಲಾಧಿಕಾರಿ ಜಿ.ಲಕ್ಷ್ಮಿಕಾಂತ ರೆಡ್ಡಿ, ಜಿಪಂ ಸಿಇಒ ಎಸ್.ಯುಕೇಶ್ ಕುಮಾರ್ ಅವರೊಂದಿಗೆ ಉಪ್ಪಿಟ್ಟು, ಕೇಸರಿಬಾತ್ ಸವಿದು ಗಮನಸೆಳೆದರು.

ಜಿ.ಪಂ ಆವರಣದ ಅಕ್ಕ ಕೆಫೆಯನ್ನು ನಿರ್ವಹಣೆ ಮಾಡಲು ಅರ್ಜಿ ಕರೆದಿದ್ದಾಗ ಆರು ಮಹಿಳಾ ಸ್ವಹಾಯ ಸಂಘಗಳು ಅರ್ಜಿ ಸಲ್ಲಿಸಿದ್ದವು. ಇದರಲ್ಲಿ ಜಿಪಂ ಸಿಇಒ ನೇತೃತ್ವದ ಸಮಿತಿ ಸಂಘಗಳು ತಯಾರಿಸಿದ ತಿಂಡಿಯ ಸ್ಯಾಂಪಲ್‌ಗಳನ್ನು ಸವಿದು ಅಂತಿಮವಾಗಿ ನಾಗವಾಲ ಗ್ರಾಮದ ಶ್ರೀಗಂಗಾ ಮಹಿಳಾ ಸ್ವಸಹಾಯ ಸಂಘಕ್ಕೆ ವಹಿಸಲಾಗಿತ್ತು. ಇದೀಗ ಈ ಸಂಘ ಅಕ್ಕ ಕೆಫೆಯನ್ನು ನಿರ್ವಹಣೆ ಮಾಡಲಿದೆ. ಹದಿನೈದು ಲಕ್ಷ ರೂ ವೆಚ್ಚದಲ್ಲಿ ಎನ್‌ಆರ್‌ಎಲ್‌ಎಂ ವತಿಯಿಂದ ಕೆಫೆ ಕಟ್ಟಡ ನಿರ್ಮಾಣ ಮಾಡಲಾಗಿದ್ದು, ಅಡುಗೆ ಪದಾರ್ಥಗಳನ್ನು ಸಂಘ ಖರೀದಿಸಿದೆ. ಬರುವ ಆದಾಯ ಸಂಘದ ಖಾತೆಯಲ್ಲಿ ಉಳಿಯಲಿದೆ. ಬೇರೆ ಕ್ಯಾಂಟೀನ್‌ಗಳಿಗಿಂತ ಬೆಲೆ ಐದು ರೂಪಾಯಿ ಕಡಿಮೆಯಾಗಿರುತ್ತದೆ.
ಜಿಪಂ ಉಪ ಕಾರ್ಯದರ್ಶಿಗಳಾದ ಬಿ.ಎಂ.ಸವಿತಾ, ಭೀಮೇಶ್ ಕೆ.ಲಾಳಿ, ಮುಖ್ಯ ಯೋಜನಾಧಿಕಾರಿ ಕೆ.ಬಿ.ಪ್ರಭುಸ್ವಾಮಿ, ಮುಖ್ಯ ಲೆಕ್ಕಾಧಿಕಾರಿ ಸಿದ್ದಗಂಗಮ್ಮ, ತಾ.ಪಂ ಇಒ ಕೃಷ್ಣ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಬಿ.ಬಸವರಾಜು, ಪಶುಪಾಲನಾ ಮತ್ತು ಪಶುವೈದ್ಯಕೀಯ ಇಲಾಖೆ ಉಪ ನಿರ್ದೇಶಕ ಡಾ.ಎನ್.ನಾಗರಾಜು ಮತ್ತಿತರರು ಹಾಜರಿದ್ದರು. ನಗರದ ಮಿನಿ ವಿಧಾನಸೌಧದ ಕಟ್ಟಡದ ಹಿಂಭಾಗ ಮತ್ತೊಂದು ಅಕ್ಕ ಕೆಫೆ ಕಟ್ಟಡ ಸಿದ್ಧವಾಗಿದ್ದು, ಶೀಘ್ರದಲ್ಲೇ ಉದ್ಘಾಟಿಸಲಾಗುತ್ತದೆ.








