ArticlesCrimeLatest

ಮಹಿಳೆ, ಮಕ್ಕಳ ರಕ್ಷಣೆಗೆ ‘ಅಕ್ಕ ಪಡೆ’ ಸನ್ನದ್ಧ! ಇದರ ಕಾರ್ಯ ನಿರ್ವಹಣೆ ಹೇಗಿರಲಿದೆ?

“ಅಕ್ಕ ಪಡೆ" 31 ಜಿಲ್ಲೆ, 5 ಪೊಲೀಸ್ ಕಮೀಷನರೇಟ್‌ಗಳಲ್ಲಿ ಸನ್ನದ್ಧ

ಮಹಿಳೆ  ಪುರುಷರಿಗೆ ಕಡಿಮೆ ಇಲ್ಲದಂತೆ ಎಲ್ಲ ಕ್ಷೇತ್ರಗಳಿಗೆ ಕಾಲಿಟ್ಟು ಯಶಸ್ವಿಯಾಗಿದ್ದರೂ ಆಕೆಯ ಮೇಲೆ ನಡೆಯುತ್ತಿರುವ ದೌರ್ಜನ್ಯ, ಲೈಂಗಿಕ ಕಿರುಕುಳ, ಮಾರಾಟ ಮೊದಲಾದವುಗಳಿಂದ ಆಕೆ ಬಿಡುಗಡೆ ಆದಂತೆ ಕಾಣುತ್ತಿಲ್ಲ. ಅಲ್ಲಲ್ಲಿ ಆಕೆಯ ಮೇಲೆ ಒಂದಲ್ಲ ಒಂದು ರೀತಿಯಲ್ಲಿ ದೌರ್ಜನ್ಯ ನಡೆಯುತ್ತಲೇ ಇದೆ.. ಇದು ಕೇವಲ ಮಹಿಳೆ ಮಾತ್ರವಲ್ಲ ಮಕ್ಕಳ ವಿಚಾರದಲ್ಲಿಯೂ ನಡೆಯುತ್ತಿದೆ. ಪುಂಡ, ಪೋಕರಿಯ ಹಾವಳಿಯೂ ಇಲ್ಲದಿಲ್ಲ… ಇಂತಹ ಕೃತ್ಯಕ್ಕೆ ಕಡಿವಾಣ ಹಾಕಲೆಂದೇ ಸರ್ಕಾರ ರಾಜ್ಯದಲ್ಲಿ ‘ಅಕ್ಕಪಡೆ’ಯನ್ನು ಹುಟ್ಟುಹಾಕಿದೆ… ಈ ಅಕ್ಕಪಡೆಗೆ ಈಗಾಗಲೇ ರಾಜ್ಯದಾದ್ಯಂತ ಚಾಲನೆ ದೊರೆತಿದ್ದು, ಇದು  ಯಶಸ್ವಿಯಾದರೆ ಈ ರಾಜ್ಯಕ್ಕೆ ಸಮಾಜಕ್ಕೆ ದೊಡ್ಡ ಕೊಡುಗೆಯಾಗಲಿದೆ.

ಅಕ್ಕಪಡೆ ಮಹಿಳಾ ಮತ್ತು ಮಕ್ಕಳ ಸ್ನೇಹಿಯಾಗಿ ಕಾರ್ಯನಿರ್ವಹಿಸಿದ್ದೇ ಆದರೆ ಮಕ್ಕಳು ಮತ್ತು ಮಹಿಳೆಯರಿಗೆ ವರದಾನವಾಗಲಿದ್ದು, ಬಹುತೇಕ ಕೃತ್ಯಗಳಿಗೆ ಕಡಿವಾಣ ಹಾಕಲು ಸಾಧ್ಯವಾಗಲಿದೆ.  ಕಳೆದ ನವೆಂಬರ್ ತಿಂಗಳಲ್ಲಿ  (28-11-2025) ಕರ್ನಾಟಕ ರಾಜ್ಯ ಸರ್ಕಾರವು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮತ್ತು ಗೃಹ ಇಲಾಖೆಯ ಸಹಯೋಗದೊಂದಿಗೆ “ಅಕ್ಕ ಪಡೆ” ಎಂಬ ನೂತನ ಯೋಜನೆಯನ್ನು ಜಾರಿ ಮಾಡಿದ್ದು, ಮಹಿಳೆಯರು ಮತ್ತು ಮಕ್ಕಳಲ್ಲಿ ಕಾನೂನು ಅರಿವು, ಜಾಗೃತಿ ಶಿಕ್ಷಣ ನೀಡುವುದರ ಜೊತೆಗೆ ಸಂಕಷ್ಟದಲ್ಲಿರುವ ಮಹಿಳೆಯರು ಮತ್ತು ಮಕ್ಕಳಿಗೆ ತಕ್ಷಣದ ರಕ್ಷಣೆ, ನೆರವು ನೀಡುವುದು ಅಕ್ಕಪಡೆಯ ಉದ್ದೇಶವಾಗಿದೆ.

ಆಧುನಿಕ ಮತ್ತು ಮಾಹಿತಿ ತಂತ್ರಜ್ಞಾನ ಯುಗದಲ್ಲಿ ಮಹಿಳೆಯರು ಮತ್ತು ಮಕ್ಕಳ ವಿರುದ್ಧ ನಡೆಯುವ ದೌರ್ಜನ್ಯ (ಅತ್ಯಾಚಾರ, ಲೈಂಗಿಕ ಕಿರುಕುಳ, ಮಾನವ ಕಳ್ಳ ಸಾಗಣೆ, ವರದಕ್ಷಿಣೆ ಕಿರುಕುಳ, ಬಾಲ್ಯ ವಿವಾಹ ಮತ್ತು ಪೋಕ್ಸ್) ಅಂತಹ ಪ್ರಕರಣಗಳಿಂದ ಮಹಿಳೆಯರು ಮತ್ತು ಮಕ್ಕಳ ಮೇಲೆ ಮಾನಸಿಕ, ದೈಹಿಕವಾಗಿ ಮತ್ತು ಸಾಮಾಜಿಕವಾಗಿ ಹಿಂಸೆ ತಡೆಯಲು ಅಕ್ಕಪಡೆ ಸಹಕಾರಿಯಾಗಲಿದೆ.

ಇದರ ಜತೆಗೆ ಮಹಿಳೆಯರು ಮತ್ತು ಮಕ್ಕಳ ವಿರುದ್ಧ ಪ್ರಖರವಾಗಿ ನಡೆಯುವ ಅಪರಾಧಗಳ ಬಗ್ಗೆ ಕಾನೂನು ಅರಿವು ಜಾಗೃತಿ ಮೂಡಿಸಲು ಶಿಕ್ಷಣ ನೀಡುವುದು, ಜೊತೆಗೆ ಸಂಕಷ್ಟದಲ್ಲಿ ಇರುವ ಮಹಿಳಾ ಮತ್ತು ಮಕ್ಕಳಿಗೆ ತಕ್ಷಣ ರಕ್ಷಣೆ, ನೆರವು ನೀಡಲಿದ್ದು ಸದ್ಯ “ಅಕ್ಕ ಪಡೆ” ರಾಜ್ಯದ 31 ಜಿಲ್ಲೆ ಮತ್ತು 5 ಪೊಲೀಸ್ ಕಮೀಷನರೇಟ್‌ಗಳಲ್ಲಿ ಸನ್ನದ್ಧವಾಗುತ್ತಿದೆ.

ಇಷ್ಟಕ್ಕೂ ಅಕ್ಕಪಡೆ ಎಂದರೇನು? ಇದರ ಕಾರ್ಯ ಮತ್ತು ಕಾರ್ಯವ್ಯಾಪ್ತಿ ಹೇಗಿರುತ್ತದೆ? ಇದರಲ್ಲಿ ಯಾರೆಲ್ಲ ಇರುತ್ತಾರೆ ಎಂಬಿತ್ಯಾದಿಗಳನ್ನು ನೋಡಿದ್ದೇ ಆದರೆ  ಅಕ್ಕ ಪಡೆಯ ತಂಡಕ್ಕೆ ಪ್ರತಿ ಜಿಲ್ಲೆ, ಕಮೀಷನರೇಟ್‌ಗಳಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಮತ್ತು ಪೊಲೀಸ್ ಆಯುಕ್ತರು ಸದೃಢ ದೇಹದಾರ್ಡ್ಯತೆ ಮತ್ತು ಆರೋಗ್ಯ ಹೊಂದಿರುವ 35 ವರ್ಷದೊಳಗಿನ ನಾಲ್ಕು ಮಂದಿ ಮಹಿಳಾ ಹೋಂಗಾರ್ಡ್‌ (ಗೃಹ ರಕ್ಷಕದಳ)ಗಳನ್ನು ನೇಮಕ ಮಾಡುತ್ತಾರೆ.

ಹೀಗೆ ಆಯ್ಕೆಯಾದ ಮಹಿಳಾ ಹೋಂಗಾರ್ಡ್‌ ಗಳಿಗೆ ಮಹಿಳೆಯರು ಮತ್ತು ಮಕ್ಕಳ ಮೇಲಿನ ದೌರ್ಜ್ಯನಗಳ ಕುರಿತು ಸಂಪೂರ್ಣ ತರಬೇತಿಯನ್ನು ನೀಡಿ ಅವರಿಗೆ ಈ ಬಗ್ಗೆ, ಕೈಪಿಡಿಯನ್ನು ನೀಡಿ ಕರ್ತವ್ಯವನ್ನು ನಿರ್ವಹಿಸಲು ತಿಳಿಸಲಾಗುತ್ತಿದೆ. ಒಂದು ವಾರದ ತರಬೇತಿಯನ್ನು ನೀಡಲಾಗುತ್ತದೆ.

ತರಬೇತಿ ಪಡೆದು ಅಕ್ಕ ಪಡೆ ತಂಡದಲ್ಲಿ ಕರ್ತವ್ಯ ನಿರ್ವಹಿಸುವ ಮಹಿಳಾ ಹೋಂ ಗಾರ್ಡ್ ಗಳಿಗೆ ಸರ್ಕಾರವು ನಿಗಧಿಪಡಿಸಿದ ವೇತನದ ವೆಚ್ಚವನ್ನು ಮಹಿಳಾ ಮತ್ತು ಮಕ್ಕಳ ಅಭೀವೃದ್ಧಿ ಇಲಾಖೆಯಿಂದ ವಿತರಿಸಲಾಗುತ್ತದೆ. ಅಲ್ಲದೇ ಅಕ್ಕ ಪಡೆ ತಂಡಗಳು ಜಿಲ್ಲಾ ಹಾಗೂ ಕಮೀಷನರೇಟ್ ವ್ಯಾಪ್ತಿಯಲ್ಲಿ ಗಸ್ತು ಸಂಚರಿಸಲು ಅಗತ್ಯವಾದ ವಾಹನಗಳನ್ನು (ಮಹೇಂದ್ರ ಬೊಲೆರೊ) ಮಹಿಳಾ ಮತ್ತು ಮಕ್ಕಳ ಘಟಕಗಳಿಗೆ ಅಭಿವೃದ್ಧಿ ಇಲಾಖೆಯಿಂದ ನೀಡಲಾಗುತ್ತದೆ.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಹಂಚಿಕೆ ಮಾಡಲಾದ ವಾಹನಗಳ ಚಾಲನೆ, ನಿರ್ವಹಣೆ. ಮತ್ತು ಇಂಧನದ ವೆಚ್ಚವನ್ನು ಆಯಾ ಪೊಲೀಸ್ ಇಲಾಖೆಯ ಘಟಕಾಧಿಕಾರಿಗಳು ಸಾರಿಗೆ ವೆಚ್ಚದಡಿ ಭರಿಸಬೇಕಾಗುತ್ತದೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಹಂಚಿಕೆಮಾಡಲಾಗಿರುವ ವಾಹನವನ್ನು ಅಕ್ಕ ಪಡೆಯ ಕರ್ತವ್ಯಕ್ಕೆ ಮಾತ್ರ ಉಪಯೋಗಿಸ ಬೇಕಾಗುತ್ತದೆ.

ಇನ್ನು ಅಕ್ಕ ಪಡೆಯಲ್ಲಿ ಕಾರ್ಯನಿರ್ವಹಿಸುವ ಮಹಿಳಾ ಹೋಂ ಗಾರ್ಡ್ ಗಳಿಗೆ ಕಮಾಂಡೋ (camouflage) ಸಮವಸ್ತ್ರವನ್ನು ಆಯಾ ಜಿಲ್ಲಾ ಪೊಲೀಸ್ ಮತ್ತು ಕಮೀಷನರೇಟ್ ಕಛೇರಿಯಿಂದ ಒದಗಿಸಲಾಗುತ್ತದೆ. ಅಲ್ಲದೆ  ಅಕ್ಕ ಪಡೆಯ ಕಾರ್ಯನಿರ್ವಹಣೆಯನ್ನು ಜಿಲ್ಲಾ ಮತ್ತು ಕಮೀಷನರೇಟ್ ಮಟ್ಟದಲ್ಲಿ ಪರಿಶೀಲಿಸಲು ಹಾಗೂ ವಿವಿಧ ಇಲಾಖೆಗಳೊಂದಿಗೆ ಸಮನ್ವಯ ಸಾಧಿಸಲು ಕೆಲವು ಸಮಿತಿಯನ್ನು ರಚಿಸಲಾಗುತ್ತದೆ.

ಹೀಗೆ ರಚಿಸಲಾದ ಅಕ್ಕ ಪಡೆಯ ಕಾರ್ಯನಿರ್ವಹಣೆಯ ಜಿಲ್ಲಾ ಮತ್ತು ಕಮೀಷನರೇಟ್ ಮಟ್ಟದ ಸಮಿತಿಯಲ್ಲಿ ಅಧ್ಯಕ್ಷರಾಗಿ ಜಿಲ್ಲಾ ಪೊಲೀಸ್ ಅಧೀಕ್ಷಕರು, ಪೊಲೀಸ್ ಕಮೀಷನರ್, ಉಪಾಧ್ಯಕ್ಷರಾಗಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಜಿಲ್ಲಾ ಉಪ ನಿರ್ದೇಶಕರು ಇರಲಿದ್ದಾರೆ. ಸದಸ್ಯರಾಗಿ ಜಿಲ್ಲಾ ಶಿಕ್ಷಣ ಇಲಾಖೆ ಉಪ ನಿರ್ದೇಶಕರು, ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕರು, ಪೊಲೀಸ್ ಇಲಾಖೆಯ ಉಪಾಧೀಕ್ಷಕರು (ಮಹಿಳೆ) ಇರಲಿದ್ದಾರೆ.

ಅಕ್ಕ ಪಡೆಯ ಕಾರ್ಯ ಮತ್ತು ಜವಾಬ್ದಾರಿಗಳು ಹೆಚ್ಚಾಗಿದ್ದು,. ಅಕ್ಕ ಪಡೆಯ ತಂಡವು ಶಾಲಾ, ಕಾಲೇಜು ಮತ್ತು ವಿದ್ಯಾರ್ಥಿ, ವಿದ್ಯಾರ್ಥಿನಿಯರ ವಸತಿ ನಿಲಯಗಳಿಗೆ ಪ್ರತಿ ವಾರ ಕಡ್ಡಾಯವಾಗಿ ಭೇಟಿ ನೀಡುವುದಲ್ಲದೆ ಸಾರ್ವಜನಿಕ ಜನ ಸಂದಣಿ ಸ್ಥಳಗಳಲ್ಲಿ ಮಹಿಳೆಯರ ವಿರುದ್ಧ ಲೈಂಗಿಕ ಕಿರುಕಳು ಕುರಿತು ಮೂಂಜಾಗ್ರತಾ ಕ್ರಮಗಳ ಬಗ್ಗೆ ಅರಿವು ಮೂಡಿಸಬೇಕಾಗುತ್ತದೆ.

ಪ್ರತಿದಿನವೂ ಜಿಲ್ಲಾ, ಕಮೀಷನರೇಟ್‌ನ ವ್ಯಾಪ್ತಿಯಲ್ಲಿ ಬರುವ ಶಾಲಾ ಮತ್ತು ಕಾಲೇಜುಗಳಿಗೆ ತೆರಳಿ ಮಕ್ಕಳಲ್ಲಿ ಪೋಕ್ಸ್ ಮತ್ತು ಸೈಬರ್ ಅಪರಾಧ ಹಾಗೂ ಮಾದಕ ವಸ್ತು ಸೇವನೆ ದುಷ್ಪರಿಣಾಮದ ಬಗ್ಗೆ ಜಾಗೃತಿಯ ಕುರಿತು ಅರಿವು ಮೂಡಿಸಬೇಕಾಗುತ್ತದೆ. ವಾರದಲ್ಲಿ ಒಂದು ದಿನ ಜಿಲ್ಲೆಯ ಇತರೇ ತಾಲ್ಲೂಕುಗಳಲ್ಲಿ ಮತ್ತು ವುಮುಖ ಪಟ್ಟಣಗಳ ಶಾಲೆ ಹಾಗೂ ಕಾಲೇಜುಗಳು ಹಾಗೂ ರೈಲ್ವೇ ನಿಲ್ದಾಣ, ಬಸ್ ನಿಲ್ದಾಣ, ಜನನಿಬಿಡ ಪದೇಶಗಳಲ್ಲಿ ಗಸ್ತು (Patroling) ಮೂಲಕ ಮಹಿಳೆ ಮತ್ತು ಮಕ್ಕಳ ಸುರಕ್ಷತೆ ಬಗ್ಗೆ ಅರಿವು ಮೂಡಿಸುವ ಬಗ್ಗೆ ಕ್ರಮ ಕೈಗೊಳ್ಳಬೇಕಾಗುತ್ತದೆ.

ಜಿಲ್ಲೆಯಲ್ಲಿ/ಕಮೀಷನರೇಟ್ ವ್ಯಾಪ್ತಿಯಲ್ಲಿ ಬರುವ ಶಾಲಾ ಕಾಲೇಜುಗಳಲ್ಲಿನ ಹೆಣ್ಣು ಮಕ್ಕಳ ವಸತಿ ನಿಲಯಗಳಿಗೆ ಕಡ್ಡಾಯವಾಗಿ ಭೇಟಿ ನೀಡಿ ಅಲ್ಲಿಯ ಹೆಣ್ಣು, ಮಕ್ಕಳೊಂದಿಗೆ ಸಂವಾದ ನಡೆಸಿ ಕುಂದು ಕೊರತೆ ಮತ್ತು ಸುರಕ್ಷತೆ ಕುರಿತಂತೆ ಸಂಬಂಧಪಟ್ಟ ಇಲಾಖೆಯ ಮುಖ್ಯಸ್ಥರ ಗಮನಕ್ಕೆ ತರಬೇಕಾಗುತ್ತದೆ. ಗಸ್ತು ಸಂದರ್ಭದಲ್ಲಿ ಅಹಿತಕರ ಘಟನೆ ಸಂಭವಿಸಿದ್ದಲ್ಲಿ ತುರ್ತಾಗಿ ERSS-122 ಜೊತೆ ಸಂವಹನೆ ಮಾಡಿ ಸೂಕ್ತ ರಕ್ಷಣೆಯನ್ನು ಒದಗಿಸಬೇಕಾಗುತ್ತದೆ. ಮಹಿಳೆ ಮತ್ತು ಮಕ್ಕಳ ವಿರುದ್ಧ ಸಂಭವಿಸುವ ಪ್ರಮುಖ ಪ್ರಕರಣಗಳ ಬಗ್ಗೆ ಜಿಲ್ಲಾ, ಕಮೀಷನರ್ ಪೊಲೀಸ್ ಕಛೇರಿಯ ನಿಯಂತ್ರಣ ಕೊಠಡಿಗೆ (Control Room) ಮಾಹಿತಿಯನ್ನು ಶೀಘ್ರವಾಗಿ ರವಾನಿಸಬೇಕಾಗುತ್ತದೆ.

ಮಹಿಳಾ ಕಿರುಕುಳ ಪ್ರಕರಣಗಳ ಬಗೆ, ವ್ಯಾಪ್ತಿಯಲ್ಲಿರುವ ಪೊಲೀಸ್ ಠಾಣೆಗೆ ವರದಿ ಮಾಡುವುದು, ಮಹಿಳೆ ಮತ್ತು ಮಕ್ಕಳಿಗೆ ಸ್ವಯಂ ರಕ್ಷಣೆ ಕಾರ್ಯವಿಧಾನದ ತರಬೇತಿ ನೀಡುವುದು, ಮಹಿಳೆಯರ ಕಿರುಕುಳ ಮತ್ತು ಈವ್ ಟೀಸಿಂಗ್ ತಡೆಗಟ್ಟಲು ಶಾಲೆ ಕಾಲೇಜು, ಉದ್ಯಾನವನ, ಸಿನಿಮಾ ಮಂದಿರ, ಮಾಲ್‌ಗಳು, ಸ್ಥಳೀಯ ಮಾರುಕಟ್ಟೆಗಳಿಗೆ, ಧಾರ್ಮಿಕ ಸ್ಥಳಗಳಲ್ಲಿ ಬಸ್, ರೈಲ್ವೆ, ಮೇಟ್ರೋ ನಿಲ್ದಾಣಗಳು ಹಾಗೂ ಬಸ್‌ಗಳಲ್ಲಿ ಪ್ರಯಾಣಿಸುವಾಗ ನಿಯಮಿತವಾಗಿ ಭೇಟಿ ನೀಡಿ ಮುಂಜಾಗೃತ ಕ್ರಮ ಕೈಗೊಳ್ಳಬೇಕಾಗುತ್ತದೆ.

ಶಾಲಾ ಮತ್ತು ಕಾಲೇಜು ವಿದ್ಯಾರ್ಥಿಗಳಲ್ಲಿ ಗುಡ್ ಟಚ್ ಮತ್ತು ಬ್ಯಾಡ್ ಟಚ್ ಹಾಗೂ ಅಪರಿಚಿತರ ಬಗ್ಗೆ ಎಚ್ಚರದಿಂದಿರುವುದರ ಬಗ್ಗೆ, ಜಾಗೃತಿ ಮೂಡಿಸುವುದು, ಫೋಸ್ಕೋ (POCSO), ಬಾಲ್ಯವಿವಾಹ. ಬಾಲ ಕಾರ್ಮಿಕ ಪದ್ಧತಿ, ಮಕ್ಕಳ ಮತ್ತು ಮಹಿಳೆಯರ ಮೇಲಿನ ದೌರ್ಜನ್ಯ ಮಹಿಳೆಯರು ಮತ್ತು ಮಕ್ಕಳ ಕಳ್ಳಸಾಗಣೆ ಮಾದಕ ವಸ್ತುಗಳ ದುರುಪಯೋಗದ ಬಗ್ಗೆ ಜಾಗೃತಿ ಮೂಡಿಸುವುದು, ಮಾದಕ ದ್ರವ್ಯಗಳು ಮತ್ತು ಮಾದಕ ದ್ರವ್ಯಗಳ ದುರುಪಯೋಗ ಮತ್ತು ಆರೋಗ್ಯದ ಮೇಲೆ ಅದರ ಪರಿಣಾಮದ ಬಗ್ಗೆ. ಜಾಗೃತಿ ಮೂಡಿಸುವುದು.

ಸಂಚಾರ ನಿಯಮಗಳು ಮತ್ತು ನಿಯಮಗಳ ಬಗ್ಗೆ ಜಾಗೃತಿ ಮೂಡಿಸುವುದು, ಸಹಾಯವಾಣಿ 1098 181, 112, ಇತ್ಯಾದಿಗಳ ಬಗ್ಗೆ, ಜಾಗೃತಿ ಮೂಡಿಸುವುದು, ಸಾಮಾಜಿಕ ಜಾಲತಾಣಗಳಿಂದ ಮಹಿಳೆ ಮತ್ತು ಮಕ್ಕಳ ವಿರುದ್ಧ ಸಂಭವಿಸುವ ಸೈಬರ್ ಅಪರಾಧಗಳ ದುಷ್ಪರಿಣಾಮಗಳು ಮತ್ತು ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಅರಿವು, ಜಾಗೃತಿ ಮೂಡಿಸುವುದು. ಶಾಲೆ, ಕಾಲೇಜು, ಹುಡುಗಿಯರು ಮತ್ತು ಉದ್ಯೋಗಸ್ತ ಮಹಿಳೆಯರ ವಸತಿ ನಿಲಯಗಳ ಆವರಣದಲ್ಲಿ ದುಷ್ಕರ್ಮಿಗಳ ಮೇಲೆ ನಿಗಾ ಇರಿಸಬೇಕಾಗುತ್ತದೆ.

ಸಿಗ್ನಲ್ ಬಳಿ ಮಹಿಳೆ ಮತ್ತು ಮಕ್ಕಳ ಭಿಕ್ಷಾಟನೆಯನ್ನು ತಡೆಗಟ್ಟುವ ಜೊತೆಗೆ ವಿಶೇಷವಾಗಿ ನಿಗಾವಹಿಸುವುದು, ಕಳ್ಳಸಾಗಣೆಯಿಂದ ರಕ್ಷಿಸಲ್ಪಟ್ಟ ಮಹಿಳೆಯರು ಮತ್ತು ಮಕ್ಕಳಿಗೆ ಪುನರ್ವಸತಿ ಕಲ್ಪಿಸುವುದು, ಸಹಾಯವಾಣಿಗಳಿಂದ ಬರುವ ಎಲ್ಲಾ ತುರ್ತು ಕರೆಗಳಿಗೆ ಸ್ಪಂದಿಸುವುದು ಮತ್ತು ಸೂಕ್ತ ಶಿಷ್ಟಾಚಾರದೊಂದಿಗೆ ಸಂತ್ರಸ್ತೆಯರನ್ನು ರಕ್ಷಿಸುವುದು, ಶಾಲಾ ಮತ್ತು ಕಾಲೇಜು ವಿದ್ಯಾರ್ಥಿಗಳಿಗೆ ವರದಕ್ಷಿಣೆ ನಿಷೇಧ ಕಾಯ್ದೆ ಬಗ್ಗೆ ಅರಿವು ಮೂಡಿಸುವುದು.

ಅಕ್ಕ ಪಡೆ ಕಾರ್ಯನಿರ್ವಹಣೆ ಕುರಿತಂತೆ ಪ್ರತಿ ತಿಂಗಳ ಅಂತ್ಯದಲ್ಲಿ ಜಿಲ್ಲಾ ಪೊಲೀಸ್ ಅಧೀಕ್ಷಕರು ಮತ್ತು ಪೊಲೀಸ್ ಆಯುಕ್ತರು ರವರುಗಳ ನೇತೃತ್ವದಲ್ಲಿ ರಚಿಸಲಾದ ಸಮಿತಿ ಸಭೆ ನಡೆಸಿ ಅಕ್ಕ ಪಡೆಯ ಸಾಧಕ ಮತ್ತು ಭಾದಕಗಳ ಬಗ್ಗೆ, ಇತರೆ ಸಂಬಂಧಪಟ್ಟ ಇಲಾಖೆಗಳೊಂದಿಗೆ ಸಭೆಯಲ್ಲಿ ಚರ್ಚಿಸಿ ತೆಗೆದುಕೊಂಡ ನಿರ್ಣಯಗಳ ಕುರಿತು ಸಭಾ ನಡವಳಿಯನ್ನು ಪ್ರತಿ ತಿಂಗಳ 05 ತಾರೀಕಿನೊಳಗೆ ಮಾಹಿತಿಯನ್ನು ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರು, ಅಪರಾಧ ಮತ್ತು ತಾಂತ್ರಿಕ ಸೇವೆಗಳು ಬೆಂಗಳೂರು ರವರಿಗೆ ಸಲ್ಲಿಸಬೇಕಾಗುತ್ತದೆ.

ಇದೆಲ್ಲವನ್ನು ಗಮನಿಸಿದ ಬಳಿಕ ಅಕ್ಕಪಡೆಯ ರಚನೆ ಮತ್ತು ಉದ್ದೇಶಗಳು ಎಲ್ಲವೂ ಅತ್ಯುತ್ತಮವೇ ಆಗಿದೆ. ಆದರೆ ಸೀಮಿತ ಸಿಬ್ಬಂದಿಗಳಿಂದ ಅಷ್ಟೊಂದು ಜವಬ್ದಾರಿಗಳನ್ನು ನಿರ್ವಹಣೆ ಮಾಡಲು ಸಾಧ್ಯನಾ? ಎಂಬ ಪ್ರಶ್ನೆಗಳು ಮೂಡುವುದು ಸಹಜವೇ… ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಿ ಅಗತ್ಯ ಸೌಲಭ್ಯ ಮತ್ತು ಅನುದಾನಗಳನ್ನು ಕಲ್ಪಿಸಬೇಕಾಗುತ್ತದೆ. ಇಲ್ಲದೆ ಹೋದರೆ ಸರ್ಕಾರದ ಇತರೆ ಯೋಜನೆಗಳಂತೆ ಇದು ಹಳ್ಳಹಿಡಿದರೂ ಅಚ್ಚರಿಯಿಲ್ಲ. ಈಗಾಗಲೇ ರಾಜ್ಯದಲ್ಲಿ ಪೊಲೀಸ್ ಇಲಾಖೆ ಸಿಬ್ಬಂದಿ ಕೊರತೆಯನ್ನು ಎದುರಿಸುತ್ತಿದೆ. ಇದರ ಜತೆಗೆ ಅಕ್ಕಪಡೆಯ ನಿರ್ವಹಣೆ ಮಾಡುವುದೆಂದರೆ ಸುಲಭದ ಮಾತಲ್ಲ…

ಒಟ್ಟಾರೆ ಸರ್ಕಾರ ಜಾರಿಗೆ ತಂದಿರುವ ‘ಅಕ್ಕಪಡೆ’ ಯೋಜನೆ ಉತ್ತಮ ಯೋಜನೆ ಆಗಿರುವುದರಲ್ಲಿ ಎರಡು ಮಾತಿಲ್ಲ. ಆದರೆ ಅದು ಎಷ್ಟರ ಮಟ್ಟಿಗೆ ಅನುಷ್ಠಾನಗೊಂಡು ಜನಸ್ನೇಹಿ ಆಗುತ್ತದೆ ಎಂಬುವುದು ಮುಂದಿನ ದಿನಗಳಲ್ಲಿ ಗೊತ್ತಾಗಲಿದೆ.

ಹೇಗಿರಲಿದೆ ಅಕ್ಕ ಪಡೆಯ  ಕಾರ್ಯನಿರ್ವಹಣೆ?

ಅಕ್ಕ ಪಡೆ ತಂಡದಲ್ಲಿ ನೇಮಕಗೊಂಡ ತಲಾ ಇಬ್ಬರು ಹೋಂಗಾರ್ಡ್‌ಗಳು ಪ್ರತಿದಿನ ಬೆಳಿಗ್ಗೆ 6 ಗಂಟೆಯಿಂದ ಮಧ್ಯಾಹ್ನ 2ಗಂಟೆಯ ವರೆಗೆ ಮೊದಲನೆ ಪಾಳಿಯಲ್ಲಿ  ಎರಡನೇ ಪಾಳೆಯಲ್ಲಿ 2ರಿಂದ ರಾತ್ರಿ 10 ಗಂಟೆ ವರೆಗೆ ಗಸ್ತು ಕರ್ತವ್ಯ ನಿರ್ವಹಿಸಬೇಕಾಗುತ್ತದೆ. ಇವರೊಂದಿಗೆ ಮಹಿಳಾ ಠಾಣೆಯ ಇಬ್ಬರು ಮಹಿಳಾ ಪೊಲೀಸ್ ಸಿಬ್ಬಂದಿ ಇರಲಿದ್ದಾರೆ.  ಮಹಿಳಾ ಠಾಣೆಯ ಪಿಐ ಇದರ ಉಸ್ತುವಾಗಿ ವಹಿಸಲಿದ್ದಾರೆ. ಅಲ್ಲದೆ ಈ ಪಡೆಯ ತಂಡವು ಪ್ರತಿ ಜಿಲ್ಲೆ ಮತ್ತು ಕಮೀಷನರೇಟ್ ವ್ಯಾಪ್ತಿಯಲ್ಲಿ ಕರ್ತವ್ಯ ನಿರ್ವಹಿಸಲಿದೆ.

ಇನ್ನು ಪ್ರತಿ ದಿನ ಕರ್ತವ್ಯ ನಿರ್ವಹಿಸಿದ ಬಗ್ಗೆ, ಕರ್ತವ್ಯಯಾದಿ (Duty Dairy)  ನಿರ್ವಹಿಸಬೇಕಾಗುತ್ತದೆ.  ಜಿಲ್ಲಾ ಮತ್ತು ತಾಲ್ಲೂಕು ಮಟ್ಟದಲ್ಲಿ ಅಕ್ಕ ಪಡೆ ತಂಡವು ಸ್ಥಳೀಯ ಪೊಲೀಸರ   ನಿಕಟ ಸಹಯೋಗದೊಂದಿಗೆ ಶಾಲೆ, ಕಾಲೇಜು, ಬಾಲಕಿಯರ, ಮಹಿಳಾ ಹಾಸ್ಟೆಲ್, ಬಸ್      ನಿಲ್ದಾಣಗಳು, ರೈಲ್ವೆ ನಿಲ್ದಾಣಗಳು, ಸ್ಥಳೀಯ ಮಾರುಕಟ್ಟೆ ಪ್ರೇಕ್ಷಣಿಯ ಸ್ಥಳಗಳು. ವವಿತ್ರ ಸ್ಥಳಗಳು ಮತ್ತು ಇತರ ಸೂಕ್ಷ್ಮ ಸ್ಥಳಗಳಿಗೆ ಭೇಟಿ ನೀಡಿ  ಅಲ್ಲಿ ಆಗುವ ಮಹಿಳೆ ಮತ್ತು ಮಕ್ಕಳ ಮೇಲಿನ ದೌರ್ಜನ್ಯ ತಡೆಗಟ್ಟುವುದಲ್ಲದೆ ಮಹಿಳೆಯರ ಮತ್ತು ಮಕ್ಕಳ ವಿರುದ್ಧ ಅಹಿತಕರ ಘಟನೆ ಸಂಭವಿಸಿದಲ್ಲಿ ಕೂಡಲೇ ಜಿಲ್ಲಾ ಕಮಿಷನರೇಟ್ ವ್ಯಾಪ್ತಿಯ ನಿಯಂತ್ರಣ  ಕೊಠಡಿಗೆ ಶೀಘ್ರವಾಗಿ ಮಾಹಿತಿ ನೀಡಲಿದೆ.

-ಬಿ.ಎಂ.ಲವಕುಮಾರ್

 

admin
the authoradmin

Leave a Reply

Translate to any language you want