FoodLatest

ನಿತ್ಯದ ಸೇವನೆಗೆ ಅನುಕೂಲವಾಗುವಂತೆ ಅಕ್ಕಿಯಿಂದ ಏನೆಲ್ಲ ತಿಂಡಿ ತಯಾರಿಸಬಹುದು…?

ಸಾಮಾನ್ಯವಾಗಿ ಅಕ್ಕಿ ಎಲ್ಲರ ಮನೆಯಲ್ಲಿಯೂ ಎಲ್ಲ ಸಮಯದಲ್ಲಿಯೂ ಇದ್ದೇ ಇರುತ್ತದೆ. ಪ್ರತಿ ಮನೆಯಲ್ಲಿ ಅಕ್ಕಿಯಿದ್ದರೆ ಅಷ್ಟೇ ಸಾಕು ಅದು ನೆಮ್ಮದಿ ನೀಡುತ್ತದೆ. ಅಕ್ಕಿಯಿದ್ದರೆ ಅನ್ನದ ಹೊರತಾಗಿಯೂ ಒಂದಷ್ಟು ತಿಂಡಿಗಳನ್ನು ಮಾಡಿ ಸೇವಿಸಬಹುದಾಗಿದೆ. ಇವತ್ತಿಗೂ ಮಲೆನಾಡು ಸೇರಿದಂತೆ ಹಲವು ಕಡೆಗಳಲ್ಲಿ ಒಂಟಿ ಮನೆಗಳಿದ್ದು, ಏನೇ ವಸ್ತು ಬೇಕಾದರೂ ಮೂರ್ನಾಲ್ಕು ಕಿ.ಮೀ. ಕ್ರಮಿಸುವ ಪರಿಸ್ಥಿತಿಯಿದೆ. ಇಂತಹ ಸಂದರ್ಭಗಳಲ್ಲಿ ತಮ್ಮ ಮನೆಯಲ್ಲಿ ಏನಿದೆಯೋ ಅದರಿಂದಲೇ ಬೇಕಾದ ತಿಂಡಿಗಳನ್ನು ತಯಾರಿಸಿ ಸೇವಿಸುವ ಜಾಣ್ಮೆಯನ್ನು ಮಹಿಳೆಯರು ಹೊಂದಿರುತ್ತಾರೆ. ಕಡಿಮೆ ಪದಾರ್ಥಗಳನ್ನು ಬಳಸಿ ಅಕ್ಕಿಯಿಂದಲೇ ವಿವಿಧ ತಿಂಡಿಗಳನ್ನು ತಯಾರಿಸಿ ಸೇವಿಸುವ ಅಡುಗೆಯ ಕಲೆ ಎಲ್ಲರಿಗೂ ಸಿದ್ಧಿಸುವುದಿಲ್ಲ. ಅದೊಂದು ರೀತಿಯ ಜಾಣ್ಮೆ ಎಂದರೂ ತಪ್ಪಾಗಲಾರದು. ಹೀಗಾಗಿ ಲಭ್ಯವಿರುವ ಅಕ್ಕಿಯಿಂದಲೇ ಏನೆಲ್ಲ ತಿಂಡಿಗಳನ್ನು ತಯಾರಿಸಬಹುದು ಎಂಬುದರ ಮಾಹಿತಿ ಇಲ್ಲಿದೆ.

1-ಖಾರ ಅಕ್ಕಿರೊಟ್ಟಿಯನ್ನು ತಯಾರು ಮಾಡುವುದು ಹೇಗೆ?

ಅಕ್ಕಿರೊಟ್ಟಿಯನ್ನು ಬೇರೆ, ಬೇರೆ ರೀತಿಯಲ್ಲಿ ಮಾಡಬಹುದಾಗಿದ್ದು, ಅದರಲ್ಲಿ ಖಾರ ಅಕ್ಕಿರೊಟ್ಟಿಯೂ ಒಂದಾಗಿದೆ. ಇದನ್ನು ಮಾಡುವುದು ತುಂಬಾ ಸುಲಭವಾಗಿದ್ದು, ಬಾಯಿಗೆ ರುಚಿ ಜತೆಗೆ ಕೆಲಸ ಮಾಡುವವರಿಗೆ ಶಕ್ತಿಯೂ ಹೌದು. ಮಲೆನಾಡಿನಲ್ಲಿ ಕಠಿಣ ಕೆಲಸಗಳನ್ನು ಮಾಡುವಾಗ ಹಸಿವು ಆಗದಂತೆ ಇದು ತಡೆಯುತ್ತದೆ. ಹಾಗಾದರೆ ಖಾರ ಅಕ್ಕಿ ರೊಟ್ಟಿ ಮಾಡಲು ಬೇಕಾಗುವ ಪದಾರ್ಥಗಳು ಮತ್ತು ಮಾಡುವ ವಿಧಾನದ ವಿವರಗಳು ಇಲ್ಲಿದೆ.

ಬೇಕಾಗುವ ಪದಾರ್ಥಗಳು: ಅಕ್ಕಿ ಹಿಟ್ಟು- ಒಂದು ಕಪ್, ಈರುಳ್ಳಿ- ಹಚ್ಚಿದ್ದು ಅರ್ಧ ಕಪ್, ಮೆಣಸಿನಕಾಯಿ- ಮೂರು

ತೆಂಗಿನಕಾಯಿ ತುರಿ- ಕಾಲು ಕಪ್, ಕೊತ್ತಂಬರಿ ಸೊಪ್ಪು- ಸ್ವಲ್ಪ, ಉಪ್ಪು- ರುಚಿಗೆ ತಕ್ಕಷ್ಟು

ಖಾರ ಅಕ್ಕಿರೊಟ್ಟಿ ಮಾಡುವುದು ಹೇಗೆ?: ಮೊದಲಿಗೆ ಈರುಳ್ಳಿ ಮತ್ತು ಮೆಣಸಿನ ಕಾಯಿಯನ್ನು ಚಿಕ್ಕದಾಗಿ ಹಚ್ಚಿಟ್ಟುಕೊಳ್ಳಬೇಕು. ಆ ನಂತರ ಕಾಯಿತುರಿಯನ್ನು ಸಿದ್ಧ ಮಾಡಿಕೊಳ್ಳಬೇಕು. ಇದಾದ ನಂತರ ಅಗಲವಾದ ಪಾತ್ರೆಯನ್ನು ತೆಗೆದುಕೊಂಡು ಅದರಲ್ಲಿ ಅಕ್ಕಿ ಹಿಟ್ಟು, ಉಪ್ಪು, ಈರುಳ್ಳಿ, ಮೆಣಸಿನಕಾಯಿ, ಕೊತ್ತಂಬರಿ ಸೊಪ್ಪು ಹಾಕಿ ಸ್ವಲ್ಪ ಸ್ವಲ್ಪವೇ ನೀರು ಹಾಕುತ್ತಾ ಕಲೆಸುತ್ತಾ ಹೋಗಬೇಕು ಚಪಾತಿ ಹಿಟ್ಟಿನಂತೆ ಕಲೆಸಿಕೊಂಡು ಬಳಿಕ ಸ್ವಲ್ಪ ಹೊತ್ತು ಹಾಗೆಯೇ ಬಿಡಬೇಕು.

ಆ ನಂತರ ಕಾವಲಿಯನ್ನು ಒಲೆಯ ಮೇಲಿಟ್ಟು ಅದು ಕಾದ ನಂತರ ಒಂದು ಚಮಚ ಎಣ್ಣೆಯನ್ನು ಕಾವಲಿಗೆ ಹಚ್ಚಬೇಕು. ಬಳಿಕ ಮುಷ್ಟಿಯಷ್ಟು ಹಿಟ್ಟನ್ನು ತೆಗೆದುಕೊಂಡು ಉಂಡೆ ಮಾಡಿ ಕಾವಲಿ ಮೇಲಿಟ್ಟು ಅಗಲವಾಗಿ ತಟ್ಟಿ ಎಣ್ಣೆ ಹಾಕಿ ಎರಡು ಬದಿಯೂ ಚೆನ್ನಾಗಿ ಬೇಯಿಸಬೇಕು. ಆ ನಂತರ ತೆಗೆದು ಬಿಸಿ, ಬಿಸಿಯಾಗಿದ್ದಾಗಲೇ ಸೇವಿಸಿದರೆ ಸಕತ್ ಮಜಾ ಆಗಿರುತ್ತದೆ. 

2-ಮಸಾಲೆ ಅಕ್ಕಿರೊಟ್ಟಿಯನ್ನು ಹೀಗೆ ಮಾಡಿ ನೋಡಿ!

ಮಲೆನಾಡಿನಲ್ಲಿ ಬೆಳಗ್ಗಿನ ಉಪಹಾರಕ್ಕೆ ಅಕ್ಕಿ ರೊಟ್ಟಿ ಸೇವನೆ ಮಾಮೂಲಿ. ಆದರೆ ಇದೇ ಅಕ್ಕಿ ರೊಟ್ಟಿಗೆ ಒಂದಷ್ಟು ಮಸಾಲೆಯನ್ನು ಬೆರೆಸಿ ಮಾಡುವ ಮಾಸಾಲೆ ಅಕ್ಕಿರೊಟ್ಟಿ ಇನ್ನಷ್ಟು ರುಚಿಕರವಾಗಿರುತ್ತದೆ. ಇಷ್ಟಕ್ಕೂ ಈ ಮಸಾಲೆ ಅಕ್ಕಿರೊಟ್ಟಿಯನ್ನು ಹೇಗೆ ಮಾಡುವುದು ಎಂಬ ಕುತೂಹಲ ಮೂಡಿದ್ದರೆ ಅದನ್ನು ಮಾಡುವ ವಿಧಾನ ಇಲ್ಲಿದೆ.

ಮಸಾಲೆ ರೊಟ್ಟಿಗೆ ಬೇಕಾಗುವ ಪದಾರ್ಥಗಳು: ಅಕ್ಕಿಹಿಟ್ಟು ಒಂದು ಕಪ್, ತೆಂಗಿನಕಾಯಿ ತುರಿ, ಕೊತ್ತಂಬರಿ ಸೊಪ್ಪು

ಈರುಳ್ಳಿಯ ಚಿಕ್ಕ ಚೂರುಗಳು, ಕರಿಬೇವು, ಮೆಣಸಿನಕಾಯಿ, ಜೀರಿಗೆ ಇಂಗು, ಉಪ್ಪು, ತರಕಾರಿ (ಕ್ಯಾರೆಟ್, ಸೌತೆಕಾಯಿ, ಮೆಂತ್ಯ ಸೊಪ್ಪು ಇವುಗಳ ಪೈಕಿ ಯಾವುದಾದರೊಂದನ್ನು ಬಳಸಬಹುದಾಗಿದೆ.)

ಮಾಡುವ ವಿಧಾನ ಹೀಗಿದೆ: ಮೊದಲು ಎಣ್ಣೆಯಲ್ಲಿ ಸಾಸಿವೆ, ಮೆಣಸಿನ ಕಾಯಿ ಹಾಕಿ ಒಗ್ಗರಣೆ ಮಾಡಿಕೊಳ್ಳಬೇಕು. ಬಳಿಕ ಅದನ್ನು ಅಕ್ಕಿ ಹಿಟ್ಟಿನ ಮೇಲೆ ಸುರಿದುಕೊಂಡು, ಮೊದಲೇ ತೆಗೆದಿಟ್ಟುಕೊಂಡ ಮಸಾಲೆಗಳನ್ನು ಹಾಕಿ ಚೆನ್ನಾಗಿ ಮಿಶ್ರ ಮಾಡಬೇಕು. ಇದಾದ ಬಳಿಕ ಬಿಸಿ ನೀರು ಹಾಕಿಕೊಂಡು ಹದಕ್ಕೆ ಬರುವಂತೆ ನೋಡಿಕೊಂಡು ಹಿಟ್ಟನ್ನು ಕಲೆಸಬೇಕು. ಆ ನಂತರ ಕಲೆಸಿದ ಮಸಾಲೆಗಳನ್ನೊಳಗೊಂಡ ಅಕ್ಕಿಹಿಟ್ಟನ್ನು ತೆಗೆದು ಉಂಡೆಯನ್ನಾಗಿ ಮಾಡಿಕೊಂಡು ಬಳಿಕ ತಟ್ಟಿ ರೊಟ್ಟಿ ಮಾಡಿಕೊಂಡು ಬಾಣಲೆಯಲ್ಲಿ  ಎರಡು ಚಮಚ ಎಣ್ಣೆ ಹಾಕಿ ನಿಧಾನ ಉರಿಯಲ್ಲಿ ಎರಡು ನಿಮಿಷ ಮುಚ್ಚಳ ಮುಚ್ಚಿ  ಬಳಿಕ ತೆಗೆದು ಬೇಯಿಸಬೇಕು. ಬಳಿಕ ತೆಗೆದು ಉಪಯೋಗಿಸಬಹುದಾಗಿದೆ.

ಮುಂಜಾನೆ ಅಥವಾ ಸಂಜೆ ಸಮಯದಲ್ಲಿ ಬಿಸಿ ಬಿಸಿಯಾಗಿ ಮಸಾಲೆ ಅಕ್ಕಿರೊಟ್ಟಿಯನ್ನು ಸೇವಿಸಬಹುದು. ಇದನ್ನು ಚಟ್ನಿಯೊಂದಿಗೆ ಸೇವಿಸ ಬಹುದಾಗಿದೆ. ಮಳೆಗಾಲದಲ್ಲಿ ಇದನ್ನು ಸೇವಿಸುವುದು ಒಂಥರಾ ಮಜಾಕೊಡುತ್ತದೆ.

3-ಅಕ್ಕಿ ರವೆ ಮಿಶ್ರಣದ ಪಕೋಡವನ್ನು ಹೀಗೆ ಮಾಡಿ

ಪಕೋಡ ಎಲ್ಲರಿಗೂ ಗೊತ್ತಿರುತ್ತದೆ. ಅಷ್ಟೇ ಅಲ್ಲದೆ ಮನೆಯಲ್ಲಿ ಆಗಾಗ್ಗೆ ಮಾಡಿಯೂ ಇರುತ್ತೀರ. ಸಾಮಾನ್ಯವಾಗಿ ಕಡ್ಲೆಹಿಟ್ಟಿನಿಂದಲೇ ಹೆಚ್ಚಾಗಿ ಪಕೋಡ ಮಾಡುತ್ತಾರೆ. ಕಡ್ಲೆಹಿಟ್ಟು ಜತೆಗೆ ಅಕ್ಕಿಹಿಟ್ಟು, ರವೆ ಸೇರಿಸಿ ಮಾಡಿದರೆ ಹೇಗಿರಬಹುದು? ಇದನ್ನು ತಿಳಿಯ ಬೇಕಾದರೆ ಒಮ್ಮೆ ಮಾಡಿನೋಡುವುದು ಒಳ್ಳೆಯದು. ಹಾಗಾದರೆ ಅಕ್ಕಿಪಕೋಡ ತಯಾರಿಸಲು ಏನೆಲ್ಲ ಪದಾರ್ಥಗಳು ಬೇಕು? ಮತ್ತು ಹೇಗೆ ತಯಾರಿಸುವುದು ಎಂಬುದರ ಡೀಟೆಲ್ಸ್ ಇಲ್ಲಿದೆ ನೋಡಿ..

ಬೇಕಾಗುವ ಪದಾರ್ಥಗಳು: ಕಡ್ಲೆಹಿಟ್ಟು- ಒಂದು ಕಪ್, ಅಕ್ಕಿ ಹಿಟ್ಟು- ಸ್ವಲ್ಪ, ಸಣ್ಣರವೆ- ಎರಡು ಚಮಚ, ಹಸಿಮೆಣಸಿನ ಕಾಯಿ-ಎರಡು(ಕತ್ತರಿಸಿದ್ದು), ಅಚ್ಚ ಖಾರದ ಪುಡಿ, ಇಂಗು, ಉಪ್ಪು, ಜತಗೆ ಸಣ್ಣಗೆ ಹಚ್ಚಿದ ಈರುಳ್ಳಿ, ಕೊತ್ತಂಬರಿ ಸೊಪ್ಪು, ಕರಿಬೇವು ಸ್ವಲ್ಪ ಪ್ರಮಾಣದಲ್ಲಿ ಹಾಕಬೇಕು

ಮಾಡುವ ವಿಧಾನ ಹೀಗಿದೆ:  ಮೊದಲಿಗೆ ಕಡ್ಲೆಹಿಟ್ಟು, ಅಕ್ಕಿಹಿಟ್ಟು, ಸಣ್ಣರವೆಗೆ ಸ್ವಲ್ವ ಕಾದ ಎಣ್ಣೆಯನ್ನು ಹಾಕಿ ಚೆನ್ನಾಗಿ ಕಲಸಬೇಕು. ಆ ನಂತರ ಹದಕ್ಕೆ ತಕ್ಕಂತೆ ನೀರು ಹಾಕಿ ಹದ ಮಾಡಬೇಕು. ನಂತರ ಅಚ್ಚ ಖಾರದ ಪುಡಿ, ಇಂಗು, ಉಪ್ಪು, ಈರುಳ್ಳಿ, ಕೊತ್ತಂಬರಿ ಸೊಪ್ಪು, ಕರಿಬೇವು ಎಲ್ಲವನ್ನು ಅದಕ್ಕೆ ಹಾಕಿ ಚೆನ್ನಾಗಿ ಮಿಶ್ರಣ ಮಾಡಬೇಕು. ಬಳಿಕ ನಮಗೆ ಹೇಗೆ ಬೇಕೋ ಹಾಗೆ ಉಂಡೆಯಾಕಾರ ಮಾಡಿಕೊಂಡು ಎಣ್ಣೆಯಲ್ಲಿ ಹಾಕಿ ಕರಿಯಬೇಕು. ಆ ನಂತರ ಹೊರಗೆ ತೆಗೆದು ಕಾಫಿಗೆ ಬಿಸಿಬಿಸಿಯಾಗಿದ್ದಾಗಲೇ ಸೇವಿಸಿದಷ್ಟೂ ಬಾಯಿಗೆ ರುಚಿಯಾಗಿ ಮನಸ್ಸಿಗೆ ಖುಷಿಕೊಡುತ್ತದೆ.

4- ಮನೆಯಲ್ಲೇ ಮಾಡಿಬಿಡಿ ರೆಡ್ ಚಿಲ್ಲಿ ಕೋಡುಬಳೆ

ಈಗಂತೂ ಸಂಜೆಯಾಗುತ್ತಿದ್ದಂತೆಯೇ ಮಳೆ ಸುರಿಯಲಾರಂಭಿಸುತ್ತದೆ. ಇಂತಹ ಸಮಯದಲ್ಲಿ ಸಂಜೆಯ ಕಾಫಿಯೊಂದಿಗೆ ಗರಿಗರಿಯಾದ ಖಾರ ಖಾರವಾದ ಕೋಡುಬಳೆ ಇದ್ದರೆ ಒಂಥರಾ ಮಜಾ ಕೊಡುತ್ತದೆ. ಈ ಕೋಡುಬಳೆಯನ್ನು ಮನೆಯಲ್ಲಿಯೇ ಮಾಡಿಟ್ಟುಕೊಂಡು ಉಪಯೋಗಿಸಬಹುದಾಗಿದೆ. ಇದನ್ನು ಹೇಗೆ ತಯಾರಿ ಮಾಡುವುದು ಇಲ್ಲಿದೆ ನೋಡಿ…

ಕೋಡುಬಳೆ ಮಾಡಲು ಬೇಕಾಗುವ ಪದಾರ್ಥಗಳು: ಅಕ್ಕಿಹಿಟ್ಟು – ಒಂದು ಸೇರು, ಸಣ್ಣರವೆ-ಕಾಲುಕೆಜಿ, ಮೈದಾ- ಕಾಲು ಕೆಜಿ, ತುಪ್ಪ- ನೂರೈವತ್ತು ಗ್ರಾಂ, ಜೀರಿಗೆ- ಎರಡು ಚಮಚ, ಒಣಮೆಣಸಿನಕಾಯಿ- ಐದಕ್ಕಿಂತ ಹೆಚ್ಚು, ಈರುಳ್ಳಿ- ಕಾಲು ಕೆಜಿ, ಕಾಯಿತುರಿ- ಒಂದು(ಚಿಕ್ಕ ಒಂದುಕಾಯಿ), ಉಪ್ಪು- ರುಚಿಗೆ ತಕ್ಕಷ್ಟು

ಮಾಡುವ ವಿಧಾನ ಹೀಗಿದೆ: ಮೊದಲಿಗೆ ರವೆ ಮತ್ತು ಮೈದಾವನ್ನು ತುಪ್ಪದಲ್ಲಿ ಬಿಸಿಮಾಡಿ ಅದಕ್ಕೆ ಅಕ್ಕಿ ಹಿಟ್ಟು ಬೆರೆಸಬೇಕು. ಮತ್ತೊಂದೆಡೆ ಜೀರಿಗೆ, ಒಣ ಮೆಣಸಿಕಾಯಿ, ಈರುಳ್ಳಿ ಕಾಯಿತುರಿ ಉಪ್ಪು ಹಾಕಿ ಮಿಕ್ಸಿಯಲ್ಲಿ ರುಬ್ಬಿ ಅದನ್ನು ರವೆ, ಮೈದಾ ಮತ್ತು ಅಕ್ಕಿಹಿಟ್ಟಿನೊಂದಿಗೆ ಹಾಕಿ ಬೆರೆಸಿ ಚೆನ್ನಾಗಿ ಗಟ್ಟಿಯಾಗಿ ಕಲೆಸಬೇಕು. ಬಳಿಕ ಅದನ್ನು ಬಳೆ ಆಕಾರದಲ್ಲಿ ಮಾಡಿ ಎಣ್ಣೆಯಲ್ಲಿ ಹಾಕಿ ಕರೆದರೆ ಗರಿ ಗರಿಯಾದ ರೆಡ್ ಚಿಲ್ಲಿ ಕೋಡುಬಳೆ ಸವಿಯಲು ಸಿದ್ಧವಾಗುತ್ತದೆ.

admin
the authoradmin

Leave a Reply