DasaraLatest

ಅರಮನೆಯಲ್ಲಿ ಅಲಮೇಲಮ್ಮನಿಗೆ ಪೂಜೆ ಮಾಡುವುದೇಕೆ? ಈ ಪೂಜೆಯ ಹಿಂದಿದೆ ರೋಚಕ ಇತಿಹಾಸ…!

Compressed by jpeg-recompress

ಮೈಸೂರು ದಸರಾ ವೇಳೆ ಅರಮನೆಯಲ್ಲಿ ಅಲಮೇಲಮ್ಮನಿಗೂ ಪೂಜೆ ನಡೆಯುತ್ತದೆ ಎಂದರೆ ಅಚ್ಚರಿಯಾಗಬಹುದು ಆದರೆ ಇದು ನಿಜ.. ಮೈಸೂರು ಭಾಗದಲ್ಲಿ ಅಲಮೇಲಮ್ಮನ ಬಗ್ಗೆ  ಗೊತ್ತೇ ಇರುತ್ತದೆ. ಆಕೆ ಮೈಸೂರು ಮಹಾರಾಜರಿಗೆ ಶಾಪ ನೀಡಿದ್ದಳು ಎಂಬ ಕಥೆಯೂ ಪ್ರಚಲಿತದಲ್ಲಿದೆ. ಈ ಕಥೆಗೂ ಅಲಮೇಲಮ್ಮನಿಗೆ ನಡೆಯುವ ಪೂಜೆಗೂ ಸಂಬಂಧ ಇರುವುದನ್ನು ನಾವು ಕಾಣಬಹುದಾಗಿದೆ. ಅದರ ಬಗ್ಗೆ ತಿಳಿಯುತ್ತಾ ಹೋದರೆ ಚಾರಿತ್ರಿಕ ಹಿನ್ನಲೆ ತೆರೆದುಕೊಳ್ಳುತ್ತಾ ಹೋಗುತ್ತದೆ.

ಅಲಮೇಲಮ್ಮ ಯಾರು ಎಂಬುದನ್ನು ನೋಡುವುದಾದರೆ ವಿಜಯನಗರದ ಅರಸರ ಪ್ರತಿನಿಧಿಯಾಗಿ ಶ್ರೀರಂಗಪಟ್ಟಣ ಪ್ರದೇಶವನ್ನು ಆಳುತ್ತಿದ್ದ ರಾಜ ಶ್ರೀರಂಗರಾಯನ ಪತ್ನಿಯೇ ಅಲಮೇಲಮ್ಮ. ಮೈಸೂರಿನ ರಾಜಒಡೆಯರು ಶ್ರೀರಂಗಪಟ್ಟಣವನ್ನು ವಶಪಡಿಸಿಕೊಂಡ ನಂತರ ಅಲ್ಲಿದ್ದ ಶ್ರೀರಂಗರಾಯ ತಲಕಾಡಿಗೆ ಓಡಿಹೋಗಿ ಅಲ್ಲಿಯೇ ಪತ್ನಿಯೊಡನೆ ವಾಸಿಸುತ್ತಿರುತ್ತಾನೆ. ಕೆಲ ದಿನಗಳ ನಂತರ ಶ್ರೀರಂಗರಾಯ ಮರಣ ಹೊಂದುತ್ತಾನೆ. ಆ ಸಮಯದಲ್ಲಿ ನವರಾತ್ರಿ ಉತ್ಸವಕ್ಕೆ ಶ್ರೀರಂಗನಾಥ ಸ್ವಾಮಿಯನ್ನು ಅಲಂಕರಿಸಲು ತಲಕಾಡಿನಲ್ಲಿದ್ದ  ಅಲಮೇಲಮ್ಮನಿಗೆ ಅವಳಲಿದ್ದ ಒಡವೆಗಳನ್ನು ತಂದು ತಮಗೊಪ್ಪಿಸುವಂತೆ ರಾಜಾಜ್ಞೆ ಮಾಡಲಾಗುತ್ತದೆ.

ಆದರೆ ಅಲಮೇಲಮ್ಮ ರಾಜಾಜ್ಞೆಯನ್ನು ತಿರಸ್ಕರಿಸುತ್ತಾಳೆ. ಆಗ ಆಕೆಯಿಂದ ಬಲವಂತವಾಗಿ ಒಡವೆಗಳನ್ನು ಕಿತ್ತುಕೊಂಡು ಬರುವಂತೆ ರಾಜಒಡೆಯರು ಅಪ್ಪಣೆ ಮಾಡುತ್ತಾರೆ. ಆಗ ರಾಜಧಾನಿ ಶ್ರೀರಂಗಪಟ್ಟಣದಿಂದ ರಾಜಭಟರು ಅಲಮೇಲಮ್ಮ ವಾಸವಿದ್ದ ತಲಕಾಡಿನತ್ತ ಹೊರಡುತ್ತಾರೆ. ರಾಜಭಟರು ತಲಕಾಡಿನತ್ತ ಬರುತ್ತಿರುವ  ವಿಷಯ ತಿಳಿದ ಅಲಮೇಲಮ್ಮ ಅವರಿಂದ ತಪ್ಪಿಸಿಕೊಳ್ಳುವ ಸಲುವಾಗಿ ತಲಕಾಡಿನಿಂದ ಮಾಲಂಗಿಯತ್ತ ಓಡಿಹೋಗುತ್ತಾಳೆ. ಆದರೆ ರಾಜಭಟರು ಅವಳ ಬೆನ್ನಟ್ಟುತ್ತಾರೆ ಆಗ ಅವಳಿಗೆ ಅವರಿಂದ ತಪ್ಪಿಸಿಕೊಂಡು ಮುಂದೆ ಸಾಗಲು ಸಾಧ್ಯವಾಗುವುದಿಲ್ಲ. ಬೇರೆ ದಾರಿ ಕಾಣದ ಆಕೆ  ಕೋಪದಿಂದ “ಮಾಲಂಗಿ ಮಡುವಾಗಿ, ತಲಕಾಡು ಮರಳಾಗಿ, ಮೈಸೂರು ಅರಸರಿಗೆ ಮಕ್ಕಳಾಗದಿರಲಿ” ಎಂದು ಶಾಪ ನೀಡಿ ತನ್ನಲಿದ್ದ ಒಡವೆಗಂಟನ್ನು ಉಡಿಯಲ್ಲಿ ಕಟ್ಟಿಕೊಂಡು ಮಾಲಂಗಿ ಸಮೀಪದ ಕಾವೇರಿ ನದಿಗೆ ಹಾರಿ ಪ್ರಾಣ ಬಿಡುತ್ತಾಳೆ.

ಅಲಮೇಲಮ್ಮನ ಶಾಪದ ಪ್ರಭಾವ ಎನ್ನುವಂತೆ ಅಂದಿನಿಂದ ಇಂದಿನ ತನಕವೂ ತಲಕಾಡು ಮರಳು ತುಂಬಿದ ಪ್ರದೇಶವಾಗಿದೆ. ಹಾಗೆಯೇ ಇದರ ಸಮೀಪದ ಮಾಲಂಗಿ ಕೂಡ ಮಡುವಾಗಿ ಭಯಂಕರ ಪ್ರಪಾತವಾಗಿದೆ. ಅಷ್ಟೇ ಅಲ್ಲ ಆ ಕಾಲದಿಂದಲೂ ಮೈಸೂರು ಅರಸರಿಗೆ ಮಕ್ಕಳಾಗದೆ ಅವರು ದತ್ತುಪಡೆದವರಿಗೆ ಮಾತ್ರ ಸಂತಾನ ಪ್ರಾಪ್ತವಾಗುವುದು ನಡೆದುಕೊಂಡು ಬರುತ್ತಿದೆ. ಈ ಘಟನೆ ನಡೆದ ಬಳಿಕ ಮಹಾರಾಜರು ಅಲಮೇಲಮ್ಮನ ಶಾಪ ನಿವಾರಣೆಗಾಗಿ ರಾಜ ಒಡೆಯರು ಅಲಮೇಲಮ್ಮನ  ಚಿನ್ನದ ವಿಗ್ರಹವೊಂದನ್ನು ಮಾಡಿಸಿ ಅವರ ಕಾಲದಿಂದಲೇ ನವರಾತ್ರಿ ಹಬ್ಬದಲ್ಲಿ ಅದಕ್ಕೆ ವಿಶೇಷ ಪೂಜೆ ಸಲ್ಲಿಸುವ ಸಂಪ್ರದಾಯ ಜಾರಿಗೆ ತಂದರು ಎನ್ನಲಾಗಿದ್ದು, ಅಲ್ಲಿಂದ ಇಲ್ಲಿವರೆಗೂ ನಿರಂತರವಾಗಿ ಪೂಜೆ ನಡೆದುಕೊಂಡು ಬಂದಿದೆ.

ಇನ್ನು ಐತಿಹಾಸಿಕ ಅರಮನೆಯಲ್ಲಿ  ಆಯುಧ ಪೂಜಾ ವಿಧಿವಿಧಾನಗಳು ಕೂಡ ನಡೆಯುತ್ತವೆ. ಆಯುಧ ಪೂಜಾ ದಿನ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಪ್ರಾತಃಕಾಲದಿಂದಲೇ ಪೂಜಾ ಕಾರ್ಯ ಆರಂಭಿಸಿ ಮಧ್ಯಾಹ್ನದವರೆಗೂ ನಡೆಸುತ್ತಾರೆ. ಅರಮನೆಯ ಆವರಣದಲ್ಲಿ ಆಯುಧಪೂಜೆಯನ್ನು ರಾಜಪರಂಪರೆಯಂತೆ ಆರಂಭಿಸಿ ಮೊದಲು ಸಾಲಿಗ್ರಾಮ ಪೂಜೆ ನೇರವೇರಿಸಿ. ಆ ನಂತರ ಅರಮನೆ ಆವರಣದಲ್ಲಿರುವ ಕೋಡಿ ಸೋಮೇಶ್ವರ ದೇವಾಲಯಕ್ಕೆ ಚಿನ್ನದ ಖಡ್ಗ, ಪಿಸ್ತೂಲು ಸೇರಿದಂತೆ ಅರಮನೆಯ ಆಯುಧಗಳನ್ನು ಚಿನ್ನಲೇಪಿತ ಪಲ್ಲಕ್ಕಿಯಲ್ಲಿ ಕೊಂಡೊಯ್ದು ಪುರಾತನ ಬಾವಿಯ ಗಂಗೆಯಿಂದ ಶುಚಿಗೊಳಿಸಿ ಬಳಿಕ ಪೂಜೆ ಮಾಡಲಾಗುತ್ತದೆ. ಇದೇ ಸಮಯದಲ್ಲಿ ಅರಮನೆಯಲ್ಲಿ ಮಹಾರಾಜ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್  ಅವರು ವಿವಿಧ ಪೂಜೆ ಹೋಮ ಹವನಗಳನ್ನು ಮಾಡುತ್ತಾರೆ.

ಇತ್ತ ಕೋಡಿ ಸೋಮೇಶ್ವರ ದೇವಾಲಯದಿಂದ ಶುಚಿಗೊಳಿಸಿ ಪಲ್ಲಕಿಯಲ್ಲಿ ತಂದ ಆಯುಧ ಸೇರಿದಂತೆ ಇತರೆ ವಸ್ತುಗಳನ್ನು ಅರಮನೆಯ ಆನೆಬಾಗಿಲು ಮೂಲಕ  ಕಲ್ಯಾಟಮಂಟಪಕ್ಕೆ ಕೊಂಡೊಯ್ದು ಜೋಡಿಸಲಾಗುತ್ತದೆ. ಆ ನಂತರ ಆಗಮಿಸಿದ ರಾಜಪುರೋಹಿತರು ನೀಡಿದ ಮಾರ್ಗದರ್ಶನದಂತೆ ಆಯುಧಗಳನ್ನು ಜೋಡಿಸಿ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್  ಎಲ್ಲ ಆಯುಧಗಳಿಗೆ ಪೂಜೆ ಸಲ್ಲಿಸುತ್ತಾರೆ. ಇದೆಲ್ಲದರ ನಡುವೆ ಖಾಸಗಿ ದರ್ಬಾರ್ ಆರಂಭವಾಗುವ ಮುನ್ನ ಸಿಂಹಾಸನಕ್ಕೆ ಜೋಡಿಸಿದ್ದ ಸಿಂಹಕ್ಕೆ ಪೂಜೆ ಸಲ್ಲಿಸಿ ವಿಸರ್ಜಿಸಲಾಗುತ್ತದೆ.

ಬೆಳಗ್ಗೆ ಚಂಡಿಕಾ ಹೋಮ ಆರಂಭಿಸಿ ಬಳಿಕ ಪೂರ್ಣಾಹುತಿ ನಡೆಯುತ್ತದೆ. ಆ ನಂತರ ಕರಿಕಲ್ಲು ತೊಟ್ಟಿಯಲ್ಲಿ ಆಯುಧ  ಪೂಜೆಯ ವಿವಿಧ ಕ್ರಮಗಳನ್ನು ನೆರವೇರಿಸಲಾಗುತ್ತದೆ. ಇದೇ ವೇಳೆಯಲ್ಲಿ ಅರಮನೆಯಲ್ಲಿರುವ ಐಷಾರಾಮಿ ಕಾರು ಮತ್ತು ಇತರೆ ವಾಹನಗಳಿಗೂ ಪೂಜೆಯನ್ನು ಮಾಡಲಾಗುತ್ತದೆ.  ಆ ನಂತರ ಅರಮನೆಯಲ್ಲಿರುವ ಪಟ್ಟದ ಆನೆ, ಪಟ್ಟದ ಕುದುರೆಗಳು, ಪಟ್ಟದ ಒಂಟೆಗಳು, ಪಟ್ಟದ ಹಸುಗಳಿಗೆ ಸಂಪ್ರದಾಯಬದ್ಧ ಪೂಜೆ ನೆರವೇರಿಸಿ ಪ್ರಾರ್ಥನೆ ಸಲ್ಲಿಸಲಾಗುತ್ತದೆ.

B M Lavakumar

admin
the authoradmin

Leave a Reply