ರೇಡಿಯೋ ಎಂದಾಕ್ಷಣ ನಮ್ಮ ನೆನಪುಗಳು ಬಾಲ್ಯದ ಕಡೆಗೆ ಓಡುತ್ತವೆ… ಏಕೆಂದರೆ ನಾವೆಲ್ಲರೂ ರೇಡಿಯೋ ಕೇಳುತ್ತಾ ಬೆಳೆದವರು.. ಹೀಗಾಗಿ ಅವತ್ತಿನ ಅದರೊಂದಿಗಿನ ಒಡನಾಟಗಳು ಮತ್ತೆ, ಮತ್ತೆ ನೆನಪಿಗೆ ಬರುತ್ತವೆ.. ಮನೋರಂಜನೆಗೆ ಬರವಿದ್ದ ಕಾಲದಲ್ಲಿ ನಮಗೆ ಖುಷಿ, ಸಂತಸ ಕೊಟ್ಟಿದಷ್ಟೇ ಅಲ್ಲದೆ ಸುದ್ದಿ ಸಮಾಚಾರ ನೀಡಿದ್ದು, ದೈನಂದಿನ ಬದುಕನ್ನು ಸುಪ್ರಭಾತದೊಂದಿಗೆ ಆರಂಭಿಸಿದ್ದು ಎಲ್ಲವೂ ರೇಡಿಯೋನೇ… ಹಿರಿಯ ಬರಹಗಾರರಾದ ಕುಮಾರ ಕವಿ ನಟರಾಜ ಅವರು ರೇಡಿಯೋ ಬಗ್ಗೆ ನೆನಪು ಮಾಡಿಕೊಂಡಿದ್ದಾರೆ… ಅದೇನು ಎಂಬುದನ್ನು ಓದಿ ಬಿಡಿ..
ಕ್ರಿ.ಶ.1895ರಲ್ಲಿ, ಇಟಲಿ ದೇಶದ ಗುಗ್ಲಿಯೆಲ್ಮೊ ಮಾರ್ಕೋನಿ ಎಂಬ ವಿಜ್ಞಾನಿ ‘ರೇಡಿಯೋ’ಎಂಬ ಅದ್ಭುತ ಆವಿಷ್ಕಾರ ವೊಂದನ್ನು ಕಂಡು ಹಿಡಿದು 19ನೇ ಶತಮಾನದ ಜಗತ್ತು ಅಚ್ಚರಿ ಪಡುವಂತೆ ಮಾಡಿದನು. ಈ ನಿತ್ಯನೂತನ ತಂತ್ರ ಯಂತ್ರವನ್ನು ಅಂದು, ಇಂದು, ಮುಂದು, ಎಂದೆಂದೂ ಒಂದು ಸದುಪಯೋಗಿ ವಸ್ತು ಆಗಿಸಿದ್ದಕ್ಕೆ ಇಡೀ ಮನುಕುಲವೆ ಇವನಿಗೆ ಚಿರಋಣಿ!
ಅಂದಿನಿಂದ ಮೊದಲ್ಗೊಂಡು ಇಂದಿನವರೆಗೆ ಪ್ರಪಂಚದಾದ್ಯಂತ ನೂರಾರು ರೇಡಿಯೋ ತಯಾರಿಕಾ ಕಂಪನಿಗಳು ಇರುತ್ತವೆ. ಉಧಾ:- ಮುಲ್ಲರ್ಡ್, ಜಿ.ಈ, ಫಿಲಿಪ್ಸ್, ಸೋನಿ, ಬುಶ್, ಮರ್ಫಿ, ರೆಮ್ಕೊ, ನ್ಯಾಶನಲ್ ಎಖೊ, ನ್ಯಾಶನಲ್ ಪ್ಯಾನಸಾನಿಕ್, ಅಕಾಯ್ ಮುಂತಾದ ಸಹಸ್ರಾರು ಮಾಡೆಲ್/ಡಿಸೈನ್ ಗಳನ್ನು ಆಗಾಗ್ಗೆ ಪರಿಷ್ಕರಿಸುತ್ತ ಬಂದಿವೆ.
ಇದನ್ನೂ ಓದಿ: ಆ ಕಾಲದಲ್ಲಿ ಜನರಿಗೆ ರೇಡಿಯೋ ಸಂಗಾತಿ… ರೇಡಿಯೋ ಕಾರ್ಯಕ್ರಮದ ಜತೆಗೆ ದಿನಚರಿ ಶುರು…!
ಪುರಾತನ ಕಾಲದ ವಿನ್ಯಾಸಗಳಿಂದ ಪ್ರಾರಂಭಿಸಿ, ಆಯಾ ಕಾಲಕ್ಕೆ ತಕ್ಕಂತೆ ವಿವಿಧ ದೇಶ-ಭಾಷೆ-ಆರ್ಥಿಕ ಸಾಮರ್ಥ್ಯ ಅವಶ್ಯಕತೆಗೆ ಸರಿ ಹೊಂದುವಂತೆ ಯೋಜ(ಚ)ನೆ ರೂಪಿಸಿಕೊಂಡು ಅದಕ್ಕೆ ತಕ್ಕಂತೆ ರೇಡಿಯೋ ಮಾರುಕಟ್ಟೆಯಲ್ಲಿ ಗ್ರಾಹಕರ ಬೇಡಿಕೆ/ಬಯಕೆ ಪೂರೈಸಿವೆ. ತತ್ಪರಿಣಾಮವಾಗಿ ಮಾರುಕಟ್ಟೆಯ ರೇಡಿಯೋ ಉತ್ಪನ್ನವು ಹಾಗೂ ಹೀಗೂ ಕಳೆದ ಶತಮಾನದ ಅಂತ್ಯದವರೆಗೆ ಯಶಸ್ವಿಯಾಗಿ ಮುಂದುವರೆಯಿತು.
20ನೇ ಶತಮಾನದಿಂದ ಇದರ ಅವನತಿ ಆರಂಭವಾಯಿತೇನೊ ಎಂದು ವಿಶ್ವದಾದ್ಯಂತ ಇರುವ ರೇಡಿಯೊ ಅಭಿಮಾನಿಗಳಿಗೆ ಅನಿಸದೆ ಇರುವುದಿಲ್ಲ. ಏಕೆಂದರೆ ಟಿ.ವಿ.-ಡಿ.ವಿ.ಡಿ, ಕೇಬಲ್ ಮೊಬೈಲ್ ಇಂಟರ್ನೆಟ್ ಮುಂತಾದ ಅನೇಕ ಆಧುನಿಕ ವಿಜ್ಞಾನ, ತಂತ್ರಜ್ಞಾನ ದೃಶ್ಯ ಮಾಧ್ಯಮಗಳ ಭರಾಟೆ ದಿನಗಳಲ್ಲಿ, ಕೇವಲ ಶ್ರವಣ ಮಾಧ್ಯಮದ ರೇಡಿಯೋ ಪ್ರಸಾರ ಕಾರ್ಯಕ್ರಮವು ಎಲ್ಲಿ ತನ್ನ ಅಸ್ತಿತ್ವವನ್ನು ಕಳೆದುಕೊಂಡು, ಪ್ರಾಶಸ್ತ್ಯವನ್ನು ಉಳಿಸಿಕೊಳ್ಳ ಲಾರದೇನೊ? ಎಂಬ ಭಾವನೆಗಳು ರೇಡಿಯೋ ಭಕ್ತರನ್ನು ಕಾಡಿದವು. ಇಂತಹ ಸಹಜ ಅನುಮಾನವನ್ನು ಹೋಗಲಾಡಿಸಿ ಇತ್ತೀಚಿಗೆ ಮಸ್ತ್ ಮಜಾ ಮಾಡಲು ‘ಎಫ್.ಎಂ’ ರೇಡಿಯೊ ಮತ್ತು ಮೊಬೈಲ್-ರೇಡಿಯೊ ಬಳಕೆಗೆ ಬಂದವು. ಸಧ್ಯ! ಇವು ರೇಡಿಯೊ ಪ್ರಿಯರಿಗೆ ಸಂತೋಷದ ಸಂಗತಿಯಾದರೆ ಪಾಶ್ಚಾತ್ಯ ಸಂಸ್ಕೃತಿಗೆ ದಾಸರಾಗಿರುವವರಿಗೆ ಮಾತ್ರ ಇದು ಒಂಥರಾ ಕೀಳರಿಮೆ ಉಂಟಾಗುತ್ತದೆ. ಆದರೆ ಎಫ್.ಎಂ.ರೇಡಿಯೊಗಳು ಸಹ ಪೂರ್ವ-ಪಶ್ಚಿಮ ರಾಷ್ಟ್ರಗಳಿಂದ ಬಂದ ಬಳುವಳಿಯೇ ಹೌದು!
ಅದೇನೆ ಇರಲಿ ಅಂತೂ ಇಂತೂ ರೇಡಿಯೋ [ಕಂಪನಿ]ಗಳಿಗೆ ಪುನರ್ಜನ್ಮ ನೀಡಿ ಶ್ರೋತೃಗಳಿಗೆ ಸಾಂತ್ವನ ಹೇಳಲು ಸ್ಥಾಪನೆ ಗೊಂಡಿರುವ ಪ್ರತಿಯೊಂದು ಎಫ್.ಎಂ. ಕೇಂದ್ರದವರಿಗೆ ನಮ್ಮೆಲ್ಲರ ಹೃದಯಾಂತರಾಳದ ಅಭಿನಂದನೆ ಮತ್ತು ಕೃತಜ್ಞತಾಪೂರ್ವಕ ಅಭಿವಂದನೆಗಳು. ಸ್ವಾತ್ಯಂತ್ರ್ಯಪೂರ್ವದಲ್ಲಿ ಶೇಕಡ1%ರಷ್ಟು ಮಾತ್ರ ರೇಡಿಯೊ ಅನುಕೂಲವಿದ್ದ ಮನೆಯು ಇದ್ದರೆ, ಸ್ವಾತಂತ್ರ್ಯಾ ನಂತರದ ಆರಂಭ ಕಾಲದಲ್ಲಿ ಶೇ.3%ರಷ್ಟಿತ್ತು, ಕಾಲಕ್ರಮೇಣ ಪ್ರತಿ ವರ್ಷವೂ ಏರಿಕೆಯುಂಟಾಗಿ 1960ರಲ್ಲಿ ಶೇ.20ರಷ್ಟು, 1970ರಲ್ಲಿ ಶೇ.30ರಷ್ಟು ಇದ್ದಿತು.1975ರಲ್ಲಿ ಕೇಂದ್ರ ಸರ್ಕಾರವು ರೇಡಿಯೋ ಲೈಸೆನ್ಸ್ ಫೀಯನ್ನು ಪೂರ್ಣ ಮನ್ನಾ ಮಾಡಿದ್ದರ ಪರಿಣಾಮದಿಂದ ಒಂದು ರೀತಿಯ ಕಾರಣವಾದರೆ, ಇನ್ನೊಂದು ರೀತಿಯಲ್ಲಿ 1980ರ ದಶಕದಲ್ಲಿ ಪರಿಚಯಗೊಂಡ ಪ್ಯಾಕೆಟ್ ಸೈಜ್ ಟ್ರಾನ್ಸಿಸ್ಟರ್. ಇದನ್ನು ಜೇಬಿನಲ್ಲಿ ಇರಿಸಿಕೊಂಡು ವಾರ್ತೆ ಮೆಚ್ಚಿನ ಚಿತ್ರಗೀತೆ, ಕ್ರಿಕೆಟ್ ಮತ್ತು ಎಲೆಕ್ಷನ್ ಕಾಮೆಂಟರಿ, ಇತ್ಯಾದಿ ಕೇಳುವ ಸಲುವಾಗಿ ರೇಡಿಯೋ ಗ್ರಾಹಕರ ಸಂಖ್ಯೆಯಲ್ಲಿ ಗಣನೀಯ ಏರಿಕೆ ಉಂಟಾಯಿತು. ಈ ಎರಡು ಪ್ರಮುಖ ಕಾರಣಗಳಿಂದ ರೇಡಿಯೋ ಗ್ರಾಹಕರ ಪ್ರಮಾಣವು 1980ರಲ್ಲಿ ಶೇ.50ರಷ್ಟು 1990ರಲ್ಲಿ ಶೇ.70ರಷ್ಟು ಹಾಗೂ 2000ನೇ ಇಸವಿಯಲ್ಲಿ ಶೇ.80ರಷ್ಟು ಏರಿಕೆಯನ್ನು ಕಂಡಿತು.
ಹೆಚ್ಚು ಕಡಿಮೆ ಎಲ್ಲಾ ರೇಡಿಯೋ ಕೇಂದ್ರಗಳು ಉಪಯುಕ್ತ ಜಾಹೀರಾತುಗಳಿಂದಾಗಿ ಆರ್ಥಿಕ ಸದೃಢತೆ ಪಡೆದು ತಮ್ಮ ಜನಪ್ರಿಯತೆಯನ್ನು ದ್ವಿಗುಣಗೊಳಿಸಿಕೊಂಡವು, ಅಭಿಮಾನಿ ಶ್ರೋತೃಗಳ ಸಂಖ್ಯೆಯನ್ನೂ ವೃದ್ಧಿಸಿಕೊಂಡವು. ಪ್ರತಿದಿನ ಬೆಳ್ಳಂಬೆಳಗ್ಗೆ ಕೋಳಿಕೂಗಿದ ನಂತರ, ಹಕ್ಕಿಗಳ ಚಿಲಿಪಿಲಿ, ನಷೆಯ ಉಷೆಯೊಡನೆ ರವಿಯು ಉದಯವಾಗುತ್ತಿದ್ದಂತೆ ಮನೆ/ಮಠ/ಉದ್ಯಾನವನ/ದೇವಸ್ಥಾನದ ರೇಡಿಯೋಗಳು ತಮ್ಮ ಕರ್ತವ್ಯವನ್ನು ಶುಭ ಶಕುನದ ಸೂಚ್ಯವಾಗಿ ದೇವರನಾಮ/ಸುಪ್ರಭಾತ/ನಾದಸ್ವರ ಇವುಗಳೊಡನೆ ಪ್ರಾರಂಭಿಸುತ್ತವೆ.
ಪ್ರತಿಯೊಬ್ಬ ಪ್ರಜೆ ಅಂದಿನ ತನ್ನ ಕೆಲಸ-ಕಾರ್ಯಗಳನ್ನು ಇಷ್ಟಪಟ್ಟು ಸಹನೆಯಿಂದ ಶುರು ಮಾಡಲು ಯೋಗ್ಯವಾದ ಸುಭಾಷಿತ/ಚೆನ್ನುಡಿ/ಚಿಂತನ, ಇತ್ಯಾದಿ ಕಾರ್ಯಕ್ರಮಗಳು ಬಿತ್ತರವಾಗುತ್ತವೆ. ಇವುಗಳನ್ನು ಆಲಿಸುತ್ತ ಪ್ರತಿಮನೆಯಲ್ಲಿ ಯಜಮಾನ, ಗೃಹಿಣಿ, ಮಕ್ಕಳು, ಅತ್ಯಂತ ಹುರುಪಿನಿಂದ ಅಂದಿನ ಕೆಲಸಗಳಲ್ಲಿ ತೊಡಗಿಸಿಕೊಳ್ಳುತ್ತಾರೆ. ಸಾಮಾನ್ಯವಾಗಿ, ರೇಡಿಯೊ ಕಾರ್ಯಕ್ರಮಗಳು ಮುಂಜಾನೆ ಆರಂಭವಾಗಿ, ಹೊತ್ತು ನೆತ್ತಿಗೇರಿದ ಮಧ್ಯಾಹ್ನದ ರಸಗವಳ ಕಾರ್ಯಕ್ರಮಗಳ ಮೂಲಕ ಮುಂದುವರೆಯುತ್ತ, ದಿನಕರ ಮುಳುಗುವ ಗೋಧೂಳಿ ಹೊತ್ತಿನ ತನಕ ಸಾರ್ಥಕ ಕಾರ್ಯಕ್ರಮದೊಡನೆ ಸಾಗಿ, ರಾತ್ರಿವರೆಗೂ ಬಗೆಬಗೆಯ ಆಕರ್ಷಕ ಮನರಂಜನಾತ್ಮಕ ಕಾರ್ಯಕ್ರಮಗಳ ಮುಖೇನ ಮುಕ್ತಾಯಗೊಂಡು, ಕೇಳುಗರ ತನು-ಮನ ಸೂರೆ ಗೊಳ್ಳುತ್ತವೆ. ಕೆಲವು ಕಾರ್ಯಕ್ರಮವಂತೂ, ರೇಡಿಯೋ ಆಫ್ ಮಾಡಿದ ಮೇಲೂ ಮೆಲುಕು ಹಾಕುವಂತಿರುತ್ತವೆ.
ಇದನ್ನೂ ಓದಿ: ಆ ಕಾಲದಲ್ಲಿ ಜನರಿಗೆ ರೇಡಿಯೋ ಸಂಗಾತಿ… ರೇಡಿಯೋ ಕಾರ್ಯಕ್ರಮದ ಜತೆಗೆ ದಿನಚರಿ ಶುರು…!
ಧನ್ಯತಾ ಮನೋಭಾವದಿಂದ ಅನ್ನದಾತ ರೈತ, ದೇಶಕಾಯೋ ಯೋಧನಿಂದ ಮೊದಲ್ಗೊಂಡು ಸರ್ಕಾರದ/ಖಾಸಗಿ ಆಸ್ಪತ್ರೆ, ವಿವಿಧ ಇಲಾಖೆಯ ಕರ್ತವ್ಯ ತಾಣಗಳಲ್ಲಿ, ವಿದ್ಯಾರ್ಥಿ ಗಳಿಗೆಂದೇ ಮಧ್ಯಾಹ್ನದ ಹೊತ್ತು ಮೀಸಲಿರುವ ಯು.ಜಿ.ಸಿ. ರೇಡಿಯೋ ಶಿಕ್ಷಣ ಕಾರ್ಯಕ್ರಮ ಮೂಲಕ ಶಾಲೆಗಳಲ್ಲಿ ಹಾಗೂ ಜನಸ್ತೋಮದ ಪಿಕ್‍ನಿಕ್/ವಾಕಿಂಗ್ ಸ್ಥಳಗಳಲ್ಲಿ, ರೇಡಿಯೋ ನೀಡುವಂಥಹ ಒಂದು ಜೀವನ ಸಂತೃಪ್ತಿ ಅಥವಾ ಬದುಕಿನ ಸಮಾಧಾನ ಬೇರಾವ ಮನರಂಜನೆ ಮಾಧ್ಯಮ ಗಳಿಂದಾಗಲೀ ಇನ್ಯಾವ ರಂಜನಾತ್ಮಕ ಸ್ಥಳದಲ್ಲಿ ಆಗಲೀ ಯಾವುದೇ ಖರ್ಚಿಲ್ಲದೆ ಯಾವುದೇ ದುಡಿಮೆಗೆ ತೊಡಕಾಗದೆ ಯಾರದೇ ಮನಸ್ಸಿಗೆ ಧಕ್ಕೆತಾರದೆ ದೊರಕಲು ಸಾಧ್ಯವಿಲ್ಲ!
Thank you so much Lava sir and goodnight
Wonderful RADIO article sir
Hello sir, RADIO article is really interesting and fantastic article 👏 👍
Excellent information article about RADIO the first and best entertainer of rich poor people including common man, so many many thanks sir
ನಮಸ್ಕಾರ ಸರ್/ಮೇಡಂ
ರೇಡಿಯೋ ಬಗ್ಗೆ ಉತ್ತಮ ಲೇಖನ ಮತ್ತು ಅಮೂಲ್ಯ ಮಾಹಿತಿ ನೀಡಿದ ಎಲ್ಲರಿಗೂ ನಮ್ಮ ಹೆಮ್ಮೆಯ ಧನ್ಯವಾದ
ಶುಭರಾತ್ರಿ ಮಹಾಶಯರೇ
ರೇಡಿಯೋ ವಿಷಯದ ವಿಶೇಷ ಲೇಖನ ಓದಿ ನನಗೆ ತುಂಬ ಇಷ್ಟವಾಯಿತು
ನಮಸ್ಕಾರ