ಸದ್ದಿಲ್ಲದೆ ಬಿದಿರು ನಾಶವಾಗುತ್ತಿರುವ ಹಿನ್ನಲೆ ಮತ್ತು ಬಿದಿರು ಕಡಿಯಲು ನಿರ್ಬಂಧವಿರುವ ಕಾರಣದಿಂದಾಗಿ ತೋಟದ ಕೆಲಸಗಳಿಗೆ ಬಿದಿರು ಏಣಿಯ ಬದಲಾಗಿ ಅಲ್ಯೂಮಿನಿಯಂ ಏಣಿ ಬಳಕೆಯಾಗುತ್ತಿದೆ. ಹೀಗಾಗಿ ತೋಟ ಹೊಂದಿರುವ ಬಹುತೇಕರು ತಮ್ಮ ಮನೆಗಳಲ್ಲಿ ಅಲ್ಯುಮಿನಿಯಂ ಏಣಿಗಳನ್ನಿಟ್ಟುಕೊಂಡಿದ್ದು ಅದರ ಮೂಲಕ ಮರಗಳಿಗೆ ಹತ್ತಿ ಕಪಾತ್ ಮತ್ತು ಕರಿಮೆಣಸು ಕೊಯ್ಲು ಮಾಡುತ್ತಿದ್ದಾರೆ. ಇದರಿಂದ ಉಪಯೋಗವಿದ್ದರೂ ಮುನ್ನೆಚ್ಚರಿಕೆ ವಹಿಸದ ಕಾರಣದಿಂದಾಗಿ ಹಲವರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ..
ಈಗಾಗಲೇ ಅಲ್ಯುಮಿನಿಯಂ ಏಣಿಯಿಂದ ಮಲೆನಾಡಿನಲ್ಲಿ ಹಲವರು ಪ್ರಾಣಕಳೆದುಕೊಂಡಿದ್ದಾರೆ. ಇದಕ್ಕೆ ಕಾರಣ ಅಲ್ಯುಮಿನಿಯಂ ಏಣಿಯಲ್ಲ ಅದನ್ನು ಬಳಸುವವರು ಮಾಡುವ ಎಡವಟ್ಟು ಎನ್ನುವುದರಲ್ಲಿ ಎರಡು ಮಾತಿಲ್ಲ. ಮಲೆನಾಡಿನಲ್ಲೀಗ ಕಾಫಿ ಕೊಯ್ಲು ಜೋರಾಗಿ ನಡೆಯುತ್ತಿದೆ. ಇದು ಮುಗಿಯುತ್ತಿದ್ದಂತೆಯೇ ಕರಿಮೆಣಸು ಕೊಯ್ಲು ನಡೆಯುತ್ತದೆ. ಕರಿಮೆಣಸು ಕೊಯ್ಲು ಕಾಫಿ ಕೊಯ್ಲುನಷ್ಟು ಸುಲಭವಲ್ಲ. ಏಕೆಂದರೆ ಕರಿಮೆಣಸು ಬಳ್ಳಿ ಮರವನ್ನು ಹಬ್ಬಿ ಬೆಳೆಯುವುದರಿಂದ ಕೊಯ್ಲು ಮಾಡಬೇಕಾದರೆ ಏಣಿಯನ್ನು ಹತ್ತಿ ಕೊಯ್ಲು ಮಾಡಬೇಕು ಈ ವೇಳೆ ಬಹುತೇಕರು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳದೆ ಇರುವುದು, ನಿರ್ಲಕ್ಷ್ಯ ವಹಿಸುವುದು ಪ್ರಾಣ ಕಳೆದುಕೊಳ್ಳುವ ಮಟ್ಟಕ್ಕೆ ಹೋಗುತ್ತಿದೆ.

ಮೊದಲೆಲ್ಲ ಮರಕ್ಕೆ ಹಬ್ಬಿ ಬೆಳೆಯುವ ಬಳ್ಳಿಯಿಂದ ಕರಿಮೆಣಸು ಕೊಯ್ಲು ಮಾಡಲು ಬಿದಿರಿನ ಏಣಿಗಳನ್ನು ಬಳಸುತ್ತಿದ್ದರು. ಅವತ್ತು ಬಿದಿರು ಯಥೇಚ್ಛವಾಗಿತ್ತು. ಹೀಗಾಗಿ ಬಿದಿರು ಮೆಳೆಗಳಿಂದ ಉತ್ತಮವಾದ ಬಿದಿರನ್ನು ಕಡಿದು ಅದರಿಂದ ಏಣಿ ಮಾಡಿಟ್ಟು ಕೊಳ್ಳುತ್ತಿದ್ದರು. ಅದು ಒಂದಷ್ಟು ವರ್ಷಗಳ ಕಾಲ ಬಾಳಿಕೆ ಬರುತ್ತಿತ್ತು. ಆದರೆ ಕ್ರಮೇಣ ಕಾಫಿ ತೋಟಗಳ ಪ್ರಮಾಣ ಹೆಚ್ಚಾಗುತ್ತಿದ್ದಂತೆಯೇ ಬಿದಿರು ಮೆಳೆಗಳು ನಾಶವಾದವು. ಜತೆಗೆ ಅರಣ್ಯಗಳಲ್ಲಿರುವ ಬಿದಿರುಗಳನ್ನು ಕಡಿಯುವುದಕ್ಕೆ ನಿರ್ಬಂಧ ಹೇರಿದ್ದರಿಂದ ಬಿದಿರು ಬಳಕೆ ಕಡಿಮೆಯಾದವು.
ಕಳೆದ ಕೆಲವು ವರ್ಷಗಳಿಂದ ಅಲ್ಯುಮಿನಿಯಂ ಏಣಿಗಳು ಮಾರುಕಟ್ಟೆಗೆ ಬಂದಿರುವುದರಿಂದ ಅವು ಬಹುಕಾಲ ಬಾಳಿಕೆ ಬರುವುದರಿಂದ ಬೆಳೆಗಾರರು ಅದಕ್ಕೆ ಮೊರೆ ಹೋಗಿದ್ದಾರೆ. ಇದು ಹಗುರವಾಗಿರುವುದಲ್ಲದೆ, ಮರವನ್ನು ಬಿಗಿಯಾಗಿ ಹಿಡಿದುಕೊಳ್ಳುವುದರಿಂದ, ಒಂದು ಕಡೆಯಿಂದ ಮತ್ತೊಂದು ಕಡೆಗೆ ಕೊಂಡೊಯ್ಯುವುದು ಸುಲಭವಾಗಿರುವುದರಿಂದ, ಜತೆಗೆ ಹೆಚ್ಚು ವರ್ಷಗಳ ಕಾಲ ಬಾಳಿಕೆ ಬರುವುದರಿಂದ ಬೆಳೆಗಾರರೆಲ್ಲ ಖರೀದಿಸಿ ಮನೆಯಲ್ಲಿಟ್ಟುಕೊಂಡಿದ್ದಾರೆ. ಇದು ಕೇವಲ ಕರಿಮೆಣಸು ಕೊಯ್ಲು ಮಾಡಲು ಮಾತ್ರವಲ್ಲದೆ, ಇತರೆ ಕೆಲಸ ಕಾರ್ಯಗಳಿಗೂ ಸಹಕಾರಿಯಾಗಿದೆ.

ಮಲೆನಾಡಿನ ಪ್ರದೇಶಗಳು ಗುಡ್ಡಕಾಡಿನಿಂದ ಕೂಡಿರುವುದರಿಂದ ಇಲ್ಲೆಲ್ಲ ಕಾಫಿ ತೋಟಗಳನ್ನು ನಿರ್ಮಾಣ ಮಾಡಲಾಗಿದೆ. ಈ ಕಾಫಿ ತೋಟಗಳ ನಡುವೆಯೇ ಒಂದೆಡೆಯಿಂದ ಮತ್ತೊಂದೆಡೆಗೆ ವಿದ್ಯುತ್ ಸಂಪರ್ಕ ಹಾದು ಹೋಗಿವೆ. ಈ ತಂತಿಗಳು ವರ್ಷದಿಂದ ವರ್ಷಕ್ಕೆ ಜೋತು ಬೀಳುತ್ತಿವೆ. ಈ ನಡುವೆ ಮಳೆಗಾಲದಲ್ಲಿ ತಂತಿ ಮೇಲೆ ಮರದ ಕೊಂಬೆಗಳು ಬಿದ್ದು ತಂತಿ ತುಂಡಾಗುವುದು ಮತ್ತು ಸರಿಪಡಿಸುವುದು ಹೀಗೆ ಆಗಾಗ್ಗೆ ಪುನರಾವರ್ತನೆಯಾಗುವುದರಿಂದ ತೋಟದ ನಡುವೆ ಕಂಬದಿಂದ ಕಂಬಕ್ಕೆ ಎಳೆದಿರುವ ತಂತಿಗಳು ಜೋತು ಬಿದ್ದಿದ್ದು ಅವುಗಳಿಂದ ತಪ್ಪಿಸಿಕೊಂಡು ಕೆಲಸ ಮಾಡುವುದೇ ಕಷ್ಟವಾಗುತ್ತಿದೆ.
ಪ್ರತಿ ವರ್ಷವೂ ಚೆಸ್ಕಾಂ ಸಿಬ್ಬಂದಿ ಇವುಗಳ ಬಗ್ಗೆ ಪರಿಶೀಲನೆ ನಡೆಸದ ಕಾರಣ ಮತ್ತು ಬೆಳೆಗಾರರು ಈ ಬಗ್ಗೆ ಸಂಬಂಧಿಸಿದವರ ಗಮನಕ್ಕೆ ತಂದರೂ ನಿರ್ಲಕ್ಷ್ಯ ವಹಿಸುವುದರಿಂದ ಕರಿಮೆಣಸು ಕೊಯ್ಲು ಸಂದರ್ಭ ಈ ವಿದ್ಯುತ್ ತಂತಿಗಳಿಂದ ಅವಘಡ ಹೆಚ್ಚಾಗಿ ಸಂಭವಿಸುತ್ತದೆ. ಕರಿಮೆಣಸು ಕೊಯ್ಲು ಮಾಡುವ ಸಂದರ್ಭ ಕಾರ್ಮಿಕರು ಮತ್ತು ಬೆಳೆಗಾರರು ಮುಂಜಾಗ್ರತೆ ವಹಿಸದೆ ನಿರ್ಲಕ್ಷ್ಯ ಮಾಡುತ್ತಿರುವುದರಿಂದ ಅಲ್ಯುಮಿನಿಯಂ ಏಣಿಗಳು ಎಷ್ಟು ಉಪಯೋಗವಾಗಿವೆಯೋ ಅಷ್ಟೇ ಅಪಾಯವನ್ನು ತಂದೊಡ್ಡುತ್ತಿವೆ. ಕಳೆದ ಆರೇಳು ವರ್ಷಗಳಲ್ಲಿ ಕರಿಮೆಣಸು ಕೊಯ್ಲು ಸಂದರ್ಭ ಏಣಿಯನ್ನು ಒಂದು ಬಳ್ಳಿಯಿಂದ ಮತ್ತೊಂದು ಬಳ್ಳಿಗೆ ಕೊಂಡೊಯ್ದು ಇಡುವಾಗ ಮರಗಳ ನಡುವೆ ಹಾದು ಹೋಗಿರುವ ವಿದ್ಯುತ್ ತಂತಿಯನ್ನು ಗಮನಿಸದೆ ಏಣಿ ಸ್ಪರ್ಶಿಸಿ ಹಲವಾರು ಜನ ಪ್ರಾಣಕಳೆದುಕೊಂಡಿದ್ದಾರೆ. ಈ ಬಗ್ಗೆ ಪ್ರತಿವರ್ಷವೂ ಅರಿವು ಮೂಡಿಸುತ್ತಿದ್ದರೂ ಅವಘಡಗಳು ನಿಲ್ಲುತ್ತಿಲ್ಲ.

ನೂರಾರು ಎಕರೆ ಕಾಫಿ ತೋಟ ಹೊಂದಿರುವ ಬೆಳೆಗಾರರಿಗೆ ತಮ್ಮ ತೋಟದ ನಡುವಿನ ಮರಗಳಿಗೆ ಹಬ್ಬಿಸಿದ ಕರಿಮೆಣಸು ಕೊಯ್ಲು ಮಾಡಲು ಕಾರ್ಮಿಕರನ್ನು ಹುಡುಕುವುದೇ ಸವಾಲಿನ ಕೆಲಸವಾಗಿದೆ. ಕೆಲಸಗಾರರು ಸಿಕ್ಕಿದರೂ ಅವರ ಜತೆಯಲ್ಲಿ ಇರಲು ಸಾಧ್ಯವಿಲ್ಲ. ತಮ್ಮ ತೋಟದ ನಡುವೆ ಹಾದು ಹೋಗಿರುವ ವಿದ್ಯುತ್ ತಂತಿ ಬಗ್ಗೆ ಕೆಲಸಗಾರರ ಗಮನಕ್ಕೆ ತಂದರೂ ಕೆಲವೊಮ್ಮೆ ಕೆಲಸದ ಅವಸರದಲ್ಲಿ ವಿದ್ಯುತ್ ತಂತಿಯನ್ನು ನೋಡದೆ ಏಣಿಯನ್ನು ಹೊತ್ತೊಯ್ಯುವಾಗ ತಂತಿಗೆ ತಗುಲಿ ಅವಘಡಗಳು ಸಂಭವಿಸುತ್ತಿವೆ. ಈ ಬಗ್ಗೆ ಕಾರ್ಮಿಕರು ಕೂಡ ಸುತ್ತಮುತ್ತ ಗಮನಿಸಿಕೊಂಡು ಕೆಲಸವನ್ನು ಮಾಡಬೇಕಾಗುತ್ತದೆ. ಆದರೆ ಮೇಲಿಂದ ಮೇಲೆ ದುರಂತಗಳು ಸಂಭವಿಸುತ್ತಿದ್ದರೂ ಯಾರೂ ಕೂಡ ಇದರತ್ತ ಗಂಭೀರವಾಗಿ ಪರಿಗಣಿಸಿದಂತೆ ಕಾಣುತ್ತಿಲ್ಲ ಎನ್ನುವುದು ಬೇಸರದ ಸಂಗತಿಯಾಗಿದೆ.
ಇನ್ನಾದರೂ ತೋಟಗಳಲ್ಲಿ ಕರಿಮೆಣಸು ಕೊಯ್ಲು ಮಾತ್ರವಲ್ಲದೆ, ಮರಕಪಾತ್ ಸಂದರ್ಭವೂ ಕಾರ್ಮಿಕರು ಏಣಿಯನ್ನು ತೋಟದ ನಡುವೆ ಕೊಂಡೊಯ್ಯುವಾಗ ಎಚ್ಚರಿಕೆ ವಹಿಸಬೇಕು. ಜತೆಗೆ ಬೆಳೆಗಾರರು ಕೂಡ ಕಾರ್ಮಿಕರ ಬಗ್ಗೆ ನಿಗಾವಹಿಸುವ ಅಗತ್ಯವಿದೆ. ಇದರ ಜತೆಗೆ ಅಲ್ಯುಮಿನಿಯಂ ಏಣಿಗೆ ಪರ್ಯಾಯವಾಗಿ ಫೈಬರ್ ಏಣಿಗಳ ಬಳಕೆ ಜಾರಿಗೆ ಬರಬೇಕಾಗಿದೆ ಆಗ ಮಾತ್ರ ವಿದ್ಯುತ್ ಅವಘಡಗಳಿಂದ ಆಗುವ ಪ್ರಾಣ ಹಾನಿಯನ್ನು ತಪ್ಪಿಸಲು ಸಾಧ್ಯವಾಗಬಹುದೇನೋ? ಅದು ಏನೇ ಇರಲಿ ಅಲ್ಯುಮಿನಿಯಂ ಏಣಿಯನ್ನು ಬಳಸುವಾಗ ವಿದ್ಯುತ್ ತಂತಿಯತ್ತ ಎಚ್ಚರವಿರಲಿ ಎನ್ನುವುದೇ ನಮ್ಮ ಆಶಯವಾಗಿದೆ.
B M Lavakumar








