ದಾದರ್ (ಹೆಬ್ಬಾಲೆ ರಘು) : ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಪುಣ್ಯತಿಥಿ 2025 ಡಿಸೆಂಬರ್ 6 ರಂದು ಶನಿವಾರ ಮುಂಬೈನ ದಾದರ್ ನ ಚೈತ್ಯ ಭೂಮಿಗೆ ದೇಶ ವಿವಿಧೆಡೆಯಿಂದ ಜನ ಸಾಗರವೇ ಹರಿದು ಬಂದಿತು.
ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರ ಪುಣ್ಯತಿಥಿಯನ್ನು ಮಹಾಪರಿನಿರ್ವಾಣ ದಿವಸ್ ಎಂದು ಆಚರಿಸಲಾಗುತ್ತದೆ. ಅವರಿಗೆ ಗೌರವ ಸಲ್ಲಿಸಲು ಲಕ್ಷಾಂತರ ಜನರು ಪ್ರತಿ ವರ್ಷ ದಾದರ್ ನಲ್ಲಿ ಸೇರುತ್ತಾರೆ. ಮತ್ತು ಅನೇಕರು ದಾದರ್‌ನ ಚೈತ್ಯ ಭೂಮಿಗೆ “ಜೈ ಭೀಮ್” ಜೈ ಭೀಮ್ ಎಂದು ಕೂಗುತ್ತಾ ಅಂಬೇಡ್ಕರ್ ಅವರಿಗೆ ಗೌರವ ಸಲ್ಲಿಸುತ್ತಾರೆ. ಮಹಾಪರಿನಿರ್ವಾಣ ದಿವಸ್ ಅವರ ಅಸಾಧಾರಣ ಕೊಡುಗೆಗಳನ್ನು ಗೌರವಿಸುವ ಮತ್ತು ನ್ಯಾಯಯುತ ಮತ್ತು ಸಮಾನ ಸಮಾಜದ ಅವರ ದೃಷ್ಟಿಕೋನವನ್ನು ಪ್ರತಿಬಿಂಬಿಸುವ ದಿನವಾಗಿದೆ.

ಡಾ. ಬಿ.ಆರ್. ಅಂಬೇಡ್ಕರ್ ಪುಣ್ಯತಿಥಿ ಮಹಾಪರಿನಿರ್ವಾಣ ದಿವಸ್, ಭಾರತೀಯ ಸಂವಿಧಾನದ ಪಿತಾಮಹ ಡಾ. ಬಿ.ಆರ್. ಅಂಬೇಡ್ಕರ್ ಅವರ ಪುಣ್ಯತಿಥಿಯನ್ನು ಸೂಚಿಸುತ್ತದೆ. ಡಾ. ಅಂಬೇಡ್ಕರ್ ಅವರು ಆಧುನಿಕ ಭಾರತವನ್ನು ರೂಪಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸಿದ ಪ್ರಮುಖ ನಾಯಕರಾಗಿದ್ದರು. ಅವರು ನ್ಯಾಯಶಾಸ್ತ್ರಜ್ಞ, ಅರ್ಥಶಾಸ್ತ್ರಜ್ಞ, ಸಾಮಾಜಿಕ ಸುಧಾರಕ ಮತ್ತು ರಾಜಕಾರಣಿಯಾಗಿದ್ದರು.
ಭಾರತೀಯ ಸಂವಿಧಾನವನ್ನು ರಚಿಸಿದ ಸಮಿತಿಯ ಅಧ್ಯಕ್ಷರಾಗಿ, ಡಾ. ಅಂಬೇಡ್ಕರ್ ಅವರು ಎಲ್ಲಾ ನಾಗರಿಕರಿಗೆ ನ್ಯಾಯ, ಸಮಾನತೆ ಮತ್ತು ಘನತೆಯನ್ನು ಖಚಿತಪಡಿಸಿಕೊಳ್ಳಲು ಅವಿಶ್ರಾಂತವಾಗಿ ಶ್ರಮಿಸಿದರು. ಸಂವಿಧಾನ ಸಭೆಗೆ ಅವರ ಕೊಡುಗೆಗಳು ಪ್ರಜಾಪ್ರಭುತ್ವ ಮತ್ತು ಎಲ್ಲರನ್ನೂ ಒಳಗೊಂಡ ಭಾರತಕ್ಕೆ ಅಡಿಪಾಯ ಹಾಕಿದವು.

ಜವಾಹರಲಾಲ್ ನೆಹರು ಅವರ ಸಂಪುಟದಲ್ಲಿ ಡಾ. ಅಂಬೇಡ್ಕರ್ ಅವರು ಮೊದಲ ಕಾನೂನು ಮತ್ತು ನ್ಯಾಯ ಸಚಿವರಾಗಿಯೂ ಸೇವೆ ಸಲ್ಲಿಸಿದರು, ಅಲ್ಲಿ ಅವರು ನಿರ್ಣಾಯಕ ಕಾನೂನು ಸುಧಾರಣೆಗಳಲ್ಲಿ ಕೆಲಸ ಮಾಡಿದರು. ನಂತರದ ಜೀವನದಲ್ಲಿ, ಅವರು ಬೌದ್ಧಧರ್ಮವನ್ನು ಸ್ವೀಕರಿಸಿದರು, ಹಿಂದೂ ಧರ್ಮದ ಜಾತಿ ಆಧಾರಿತ ಅಸಮಾನತೆಗಳನ್ನು ತಿರಸ್ಕರಿಸಿದರು ಮತ್ತು ದಲಿತ ಬೌದ್ಧ ಚಳುವಳಿಗೆ ಮಾರ್ಗದರ್ಶಕ ವ್ಯಕ್ತಿಯಾದರು, ಸಾಮಾಜಿಕ ಸಮಾನತೆ ಮತ್ತು ಘನತೆಗಾಗಿ ಹೋರಾಡಲು ಲಕ್ಷಾಂತರ ಜನರನ್ನು ಪ್ರೇರೇಪಿಸಿದರು.

ಬೆಂಗಳೂರು ಎಸ್.ಎಲ್.ಎನ್.ಕಾಲೇಜಿನ ಉಪನ್ಯಾಸಕ ಲಿಂಗರಾಜು ಕೊಮರನಪುರ ಮಾತನಾಡಿ, ಪ್ರತಿ ವರ್ಷ ದಾದರ್ ನ ಚೈತ್ಯ ಭೂಮಿಗೆ ಬರುತ್ತೇವೆ. ಇಲ್ಲಿಗೆ ಬಂದರೆ ನಮಗೆ ಪವಿತ್ರ ಪುಣ್ಯಭೂಮಿಗೆ ಬಂದಷ್ಟು ಸಂತೋಷವಾಗುತ್ತದೆ. ಅಂಬೇಡ್ಕರ್ ಎಂದರೆ ಬರೀ ವ್ಯಕ್ತಿಯಲ್ಲ. ಅವರು ಮಹಾನ್ ಶಕ್ತಿ. ಧ್ಯೇಯ, ತತ್ವವೇ ಅಂಬೇಡ್ಕರ್ ಆಗಿದ್ದಾರೆ. ದೇಶದ ಅಖಂಡತೆಗೆ ಅವರ ಸೇವೆ ಅನನ್ಯವಾದುದು. ಅವರನ್ನು ಕೇವಲ ಶೋಷಿತ ವರ್ಗದ ನಾಯಕರು ಎಂದು ಭಾವಿಸುವಂತಿಲ್ಲ. ಅವರು ಸಮಾಜದ ಎಲ್ಲ ವರ್ಗಗಳ ನಾಯಕರಾಗಿದ್ದಾರೆ ಎಂದು ಹೇಳಿದರು.

ವ್ಯಾಪಾರ ಭರಾಟೆ ಜೋರು : ಪರಿ ನಿರ್ವಾಣ ದಿವಸ್ ದಾದರ್ ರಸ್ತೆಯ ಎರಡು ಕಡೆಗಳಲ್ಲಿ ಅಂಬೇಡ್ಕರ್ ಅವರ ಮೂರ್ತಿಗಳು, ಕ್ಯಾಲೆಂಡರ್, ಪೋಟೋ ಸೇರಿದಂತೆ ಇನ್ನಿತರ ವಸ್ತುಗಳ ಭರಾಟೆ ಜೋರಾಗಿತ್ತು.ಅಂಬೇಡ್ಕರ್ ಅಭಿಮಾನಿಗಳು ದೂರದ ಊರುಗಳಿಂದ ಆಗಮಿಸಿದ್ದ ಲಕ್ಷಾಂತರ ಮಂದಿಗೆ ಅನ್ನದಾನ, ಕುಡಿಯಲು ನೀರು, ಬಿಸ್ಕತ್ತು ,ಕಾಫಿ,ಟೀ,ಜ್ಯೂಸ್ ಅನ್ನು ಉಚಿತವಾಗಿ ನೀಡಿದರು.








