“ಅಪರ್ಣ” ಈ ಹೆಸರೇ ಒಂದು ರೀತಿಯಲ್ಲಿ ರೋಮಾಂಚನವನ್ನುಂಟು ಮಾಡುವಂಥದ್ದು. ಇವರನ್ನು ನಮ್ಮ ನಾಡು ಕಳೆದುಕೊಂಡು ಒಂದು ವರ್ಷ ಕಳೆದರೂ ಕೂಡ ಅವರ ನೆನಪು ಸದಾ ಕಾಡುತ್ತದೆ. ಕರುನಾಡಿನ ಉದ್ದಕ್ಕೂ ಶುದ್ಧ ಕನ್ನಡದ ಸೊಗಡಿನೊಂದಿಗೆ ಎಲ್ಲೆಡೆ ಕನ್ನಡದ ಕಂಪನ್ನು ಹೊರಸೂಸಿ, ಮಧ್ಯೆ ಯಾವುದೆ ಇಂಗ್ಲಿಷ್ ಬೆರೆಸದೆ, ಸುಲಲಿತವಾಗಿ ಮಾತನಾಡಿ ಎಲ್ಲಾ ಕೇಳುಗರನ್ನು ಮಂತ್ರ ಮುಗ್ಧರನ್ನಾಗಿ ಮಾಡುತ್ತಿದ್ದ ಅವರ ನಿರೂಪಣಾ ಶೈಲಿಯು ತುಂಬಾ ವಿಶಿಷ್ಟವಾಗಿತ್ತು.
ಇದರಿಂದಲೇ ಎಲ್ಲಾ ಕನ್ನಡಿಗರ ಮನೆ- ಮನದಲ್ಲಿ ಸ್ಥಾನ ಪಡೆದುಕೊಂಡಿದ್ದರು. ಪ್ರಾರಂಭದಲ್ಲಿ ಚಂದನದ ಚಂದದ ನಿರೂಪಕಿ, ವಾರ್ತಾವಾಚಕಿ, ಜೊತೆ ಜೊತೆಗೆ ಆಕಾಶವಾಣಿ ಯಂತಹ ಪ್ರಬಲ ಮಾಧ್ಯಮದಲ್ಲೂ ಕೂಡ ರೇಡಿಯೋ ಜಾಕಿಯಾಗಿ ಅಲ್ಲೂ ಕೂಡ ಸುಲಲಿತ ಕನ್ನಡವನ್ನು ಅಲೆ ಅಲೆಗಳ ಮೂಲಕ ಎಲ್ಲರ ಕಿವಿ, ಮನಸ್ಸುಗಳಿಗೆ ತಲುಪಿಸುವಂತಹ ಶ್ರೇಷ್ಠ ಕಾರ್ಯವನ್ನು ಮಾಡಿದವರು. ಅವರು ಮಾತನಾಡುವ ಶೈಲಿಯೇ ಎಲ್ಲರನ್ನು ಬೆರಗು ಮೂಡಿಸುವಂಥದ್ದು. ಮಾತಿನ ಮಧ್ಯೆ ನಗು, ಹಾಸ್ಯ, ಮಾಹಿತಿಗಳ ಮಹಾಪೂರ. ಜೊತೆಗೆ ಆಯಾ ಸಂದರ್ಭದಲ್ಲಿ ಕಾರ್ಯಕ್ರಮಗಳಿಗೆ ತಕ್ಕಂತಹ ನಿರೂಪಣಾ ಸಾಮಗ್ರಿಯನ್ನು ತಮ್ಮ ಮನಸ್ಸಿನಲ್ಲಿ ಸದಾ ತುಂಬಿಕೊಂಡಿದ್ದರು.
ಇದರಿಂದಾಗಿ ಅವರಿಗೆ ನಿರೂಪಣೆ ಎನ್ನುವುದು ಕಬ್ಬಿಣದ ಕಡಲೆ ಆಗಲಿಲ್ಲ. ಸುಲಿದ ಬಾಳೆಹಣ್ಣಿನಂತೆ ಕನ್ನಡ ಪದಗಳ ಚಮತ್ಕಾರ ನಡೆದು ಬಿಡುತ್ತಿತ್ತು!. ಸದಾ ಹಸನ್ಮುಖಿಯಾಗಿ ಇಡೀ ಕಾರ್ಯಕ್ರಮದ, ಸಭೆಯ ವಾತಾವರಣವನ್ನೇ ತಿಳಿಗೊಳಿಸಿ ಬಿಡುತ್ತಿದ್ದರು. ಅಪರ್ಣರವರು ಕಾರ್ಯಕ್ರಮದ ನಿರೂಪಣೆ ಮಾಡುತ್ತಿದ್ದಾರೆ ಎಂದರೆ ಆಯೋಜಕರಿಗೆ ಒಂದು ರೀತಿಯಲ್ಲಿ ನೆಮ್ಮದಿ!. ಕಾರ್ಯಕ್ರಮದ ಯಶಸ್ಸು ನೂರಕ್ಕೆ ನೂರರಷ್ಟು. ಮುಖ್ಯವಾಗಿ ಸರ್ಕಾರದ ಕಾರ್ಯಕ್ರಮಗಳಲ್ಲೂ ಕೂಡ ಇದೆ ಅನುಭವ ಆಗುತ್ತಿತ್ತು. ಎಂತಹ ಗಣ್ಯರು ಬಂದರೂ ಕೂಡ ಅವರನ್ನೆಲ್ಲ ಆತ್ಮೀಯವಾಗಿ ಸ್ವಾಗತಿಸಿ, ನಿರೂಪಣೆ ಮಾಡುತ್ತಿದ್ದರು.
ಸಿನಿಮಾ ಕಾರ್ಯಕ್ರಮ ಆಗಿರಬಹುದು, ಸರ್ಕಾರದ ಕಾರ್ಯಕ್ರಮ ಆಗಿರಬಹುದು, ಸಾರ್ವಜನಿಕ ಕಾರ್ಯಕ್ರಮ ಆಗಿರಬಹುದು ಯಾವುದಕ್ಕೂ ಅವರು ತಮ್ಮ ನಿರೂಪಣಾ ಶೈಲಿಯಿಂದ ಮನ ಗೆದ್ದವರು. ಉದ್ಯಾನಗರ ಮೈಸೂರಿನಲ್ಲೇ ಹಲವು ಕಾರ್ಯಕ್ರಮಗಳನ್ನು ನಿರೂಪಣೆ ಮಾಡಿದ್ದಾರೆ. ಅದರಲ್ಲೂ ಸಂಗೀತ ಸಂಜೆ ಕಾರ್ಯಕ್ರಮಗಳಂತೂ ಹಾಡಿನ ಸುತ್ತಮುತ್ತ ಮಾಹಿತಿ, ಚಿತ್ರದ ಸುತ್ತಮುತ್ತ ಇರುವ ಅನೇಕ ಕುತೂಹಲಕಾರಿ ಅಂಶ ಎಲ್ಲವನ್ನೂ ಸೇರಿ ನಿಜಕ್ಕೂ ಸ್ವರ್ಗವೇ ಧರೆಗಿಳಿಯುವಂತೆ ಮಾಡಿ ಬಿಡುತ್ತಿದ್ದರು.
ಇದನ್ನೂ ಓದಿ:ಭಾರತದ ಚಿತ್ರರಂಗದಲ್ಲಿ ಅಚ್ಚಳಿಯದ ಹೆಸರು ಬಿ.ಆರ್.ಪಂತುಲು.. ಇವರಿಗೆ ಕನ್ನಡ ಚಿತ್ರರಂಗದ ನಂಟು ಹೇಗಿತ್ತು?
ಅವರ ಸಿನಿಪಯಣ ದ ಹಾದಿಗೂ ಮುಂಚೆ ನಾಟಕ ರಂಗದಲ್ಲಿ ಆಸಕ್ತಿ ಹೊಂದಿದ್ದರು, ಇದರ ಫಲವಾಗಿಯೇ ಅವರು ಪುಟ್ಟಣ್ಣ ಕಣಗಾಲ್ ರವರ ನಿರ್ದೇಶನದ “ಮಸಣದ ಹೂವು”- ಚಿತ್ರದಲ್ಲಿ ಪಾತ್ರ ಮಾಡಲು ಸಹಾಯವಾಯಿತು. ಮಸಣದ ಹೂವಿನಿಂದ…… ಮಜಾ ಟಾಕೀಸ್ ವರೆಗೆ…… ಅಂದರೆ ಹಿರಿತೆರೆ ಇಂದ….. ಕಿರುತೆರೆವರೆಗೆ…. ಇವರ ಪಯಣ ರೋಮಾಂಚನವನ್ನುಂಟು ಮಾಡುವಂಥದ್ದು!.
ಇಲ್ಲಿ ಗಮನಿಸಬೇಕಾದ ಅಂಶವೆಂದರೆ 1984 ರಲ್ಲಿ ಚಿತ್ರ ಬ್ರಹ್ಮ ದಿವಂಗತ ಪುಟ್ಟಣ ಕಣಗಾಲ್ ನಿರ್ದೇಶಿಸಿದ “ಮಸಣದ ಹೂವು” ಚಿತ್ರದ “ಪಾರ್ವತಿ” ಎಂಬ ಪ್ರಮುಖ ಪಾತ್ರಕ್ಕೆ ಅಪರ್ಣಾ ಆಯ್ಕೆಗೊಂಡಾಗ ಅವರ ಬದುಕಿನಲ್ಲಿ ಒಂದು ಹೊಸ ಅದ್ಯಾಯ ಪ್ರಾರಂಭವಾಯಿತು. ಇದರ ನಂತರ ಇನ್ಸ್ ಪೆಕ್ಟರ್ ವಿಕ್ರಂ, ಒಂದಾಗಿ ಬಾಳು, ಡಾ.ಕೃಷ್ಣ, ಒಂಟಿ ಸಲಗ, ಒಲವಿನ ಆಸರೆ, ಚಕ್ರವರ್ತಿ ಮುಂತಾದ ಬೆರಳೆಣಿಕೆಯ ಚಲನ ಚಿತ್ರಗಳಲ್ಲಿ ನಟಿಸಿದ್ದರೂ ಸಹ ಈ ನಡುಗೆ ಸಿಕ್ಕಿದ್ದು ಅವರಿಗೆ ಅಪಾರ ಜನಮನ್ನಣೆ. ಹಿರಿಯ ಪತ್ರಕರ್ತ ತಂದೆ ಕೆ.ಎಸ್.ನಾರಾಯಣ ಸ್ವಾಮಿ, ತಾಯಿ ಪದ್ಮಾವತಿ ರವರ ಮಗಳಾಗಿ ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಪಂಚನಹಳ್ಳಿ ಗ್ರಾಮದಲ್ಲಿ 14 ಅಕ್ಟೋಬರ್, 1966 ರಲ್ಲಿ ಜನಿಸಿದರು. ನಾನು ಕೂಡ ತಂದೆಯಂತೆ ಪತ್ರಕರ್ತೆ ಆಗುತ್ತೇನೆ ಎಂದಿದ್ದರು.
ಕನ್ನಡದ ಹೃದಯವೇ ಎನ್ನುವಂತಿದ್ದ ಅಪರ್ಣರವರು ನಂತರ ಸಾಧನೆ ಮಾಡಿದ್ದು ಅಪಾರ. ಸ್ನಿಗ್ಧ ನಗುವಿನ ಜೊತೆಗೆ ಶುದ್ಧ ಕನ್ನಡದ ಚಮತ್ಕಾರ. ಪ್ರತಿಯೊಬ್ಬ ಕನ್ನಡಿಗರಲ್ಲೂ ಇವರದೇ ಮಾತು. ಅಪರ್ಣ ರವರ ಪತಿ ನಾಗರಾಜು ವಸ್ತಾರೆ ರವರು ಖ್ಯಾತ ಸಾಹಿತಿಗಳು, ಕಥೆಗಾರರು, ಚಿಂತಕರು ಇವರ ಹಾಗೂ ಅಪರ್ಣ ರವರ ದಾಂಪತ್ಯ ಜೀವನ ಸುಮಧುರವಾಗಿತ್ತು.
ಕನ್ನಡಿಗರನ್ನು ನಗಿಸಿ ನಗಿಸಿ ಹೊಟ್ಟೆ ಹುಣ್ಣಾಗಿಸಿದ ವರಲಕ್ಷ್ಮಿ ಪಾತ್ರ. ಮೆಟ್ರೋದಲ್ಲಿ ಅವರ ಧ್ವನಿ, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಿಎಂಟಿಸಿ, ಬಿಎಸ್ ಎನ್ ಎಲ್, ಏರ್ ಟೆಲ್ ಮುಂತಾದ ಸಂಸ್ಥೆಗಳಿಗೂ ಕೂಡ ಧ್ವನಿ ನೀಡಿದ್ದ ಇವರು ಧೀಮಂತ ಪ್ರತಿಭೆ. ಅವರೇ ಖುದ್ದಾಗಿ ಮೆಟ್ರೋದಲ್ಲಿ ನನ್ನ ಧ್ವನಿ ಹೇಗೆ ಬರುತ್ತದೆ ಎಂದು ಹೋಗಿ ಕೇಳಿದ್ದರಂತೆ. ಅಪರ್ಣ ರವರ ಜೊತೆಯಲ್ಲೇ ಹಲವು ನಿರೂಪಣೆಯನ್ನು ಮಾಡಿರುವ ಶಂಕರ್ ಪ್ರಕಾಶ್ ಅವರು ಕೂಡ ಅವರ ನಿರೂಪಣಾ ಶೈಲಿಗೆ ಮನಸೋತಿದ್ದಾರೆ. ಎಸ್ ಪಿ ಬಾಲಸುಬ್ರಹ್ಮಣ್ಯಂ ರವರು ಕೂಡ ಒಂದು ಕಾರ್ಯಕ್ರಮದಲ್ಲಿ ನಾನು ಒಂದು ತಿಂಗಳು ಅಪರ್ಣ ಜೊತೆ ತರಬೇತಿ ಪಡೆಯಬೇಕು ಎಂದಿದ್ದರಂತೆ. ನಿಜಕ್ಕೂ ನಮ್ಮ ಕನ್ನಡ ಈಗ ಅನಾಥವಾಗಿದೆ. ಅವರಲ್ಲಿದ್ದ ಸರಾಗವಾದ ಪದಪುಂಜಗಳು ಸೊರಗಿವೆ. ಹೀಗೊಂದು ರಂಗ ಕಲಿಕೆ ನವರಸ ರಂಗ ಮಾಲಿಕೆಯಲ್ಲಿ ಶಾಂತರಸರ ಬಗ್ಗೆ ಅರ್ಥಪೂರ್ಣವಾಗಿ ಮಾತನಾಡಿದ್ದಾರೆ. ಹಾಡು, ಹರಟೆ, ಮಾಹಿತಿ, ನಗು, ನಿರೂಪಣೆ ಎಲ್ಲವೂ ಈಗ ಮಾಯವಾಗಿದೆ.
ನಿರೂಪಕಿ ಅಷ್ಟೇ ಆಗಿರಲಿಲ್ಲ. ಬದಲಿಗೆ ಅತ್ಯುತ್ತಮ ಕಲಾವಿದೆ ಕೂಡ ಆಗಿದ್ದರು. ಮೂಡಲ ಮನೆ.. ಇಂತಿ ನಿನ್ನ ಸುಜಾತಾ ಧಾರಾವಾಹಿಯಲ್ಲಿಯೂ ತಮ್ಮ ಛಾಪು ಮೂಡಿಸಿದ್ದರು. ಟಿ.ಎನ್.ಸೀತಾರಾಂ ಅವರ ಮುಕ್ತ ಧಾರಾವಾಹಿಯ ಶೀಲಾ ದೀಕ್ಷಿತ್ ಪಾತ್ರದಿಂದ ನಟಿಯಾಗಿ ಜನರ ಮನಸಿನಲ್ಲಿ ಉಳಿದರು. ಸಿನಿಮಾ .. ಧಾರಾವಾಹಿ .. ದೂರದರ್ಶನ ನಿರೂಪಣೆ .. ಅನೇಕ ಅವಕಾಶಗಳು ಅಪರ್ಣಾ ಅವರನ್ನು ಹುಡುಕಿಕೊಂಡು ಹೋಗಿದ್ದವು. ಬಿಗ್ ಬಾಸ್ ನ ಸೀಜನ್ ಪ್ರಾರಂಭದಲ್ಲಿ ಕೂಡ ಭಾಗಿಯಾಗಿದ್ದರು. ಕಾಮಿಡಿ ಸಿನಿಮಾಗಳಲ್ಲಿ ಅಭಿನಯಿಸುವ ಚಾನ್ಸ್ ಅಪರ್ಣಾಗೆ ಸಿಕ್ಕಿತ್ತು. ಆದ್ರೆ, ಅದನ್ನು ಅಪರ್ಣಾ ಒಪ್ಪಿಕೊಳ್ಳಲಿಲ್ಲ. ಬದಲಿಗೆ ರಿಜೆಕ್ಟ್ ಮಾಡಿದ್ದರು. ಜನರನ್ನು ನಗಿಸುವುದು ಸುಲಭ ಅಲ್ಲ. ಅದು ತುಂಬಾ ಕಷ್ಟದ ಕೆಲಸ. ನಾನು ಕಾಮಿಡಿಯನ್ ಅಲ್ಲ. ಆದ್ದರಿಂದ ನಾನು ಕಾಮಿಡಿ ಸಿನಿಮಾಗಳನ್ನು ಒಪ್ಪಿಕೊಳ್ಳಲಿಲ್ಲ ಎಂದು ಸಂದರ್ಶನವೊಂದರಲ್ಲಿ ಹಿಂದೆ ಹೇಳಿದ್ದರು.
ಇದನ್ನೂ ಓದಿ: ಆಗಿನ ಕಾಲದಲ್ಲೆ ಬಾಲಿವುಡ್ ನಲ್ಲಿ ಕನ್ನಡಬಾವುಟ ಹಾರಿಸಿದ್ದ ಆರ್.ನಾಗೇಂದ್ರರಾವ್… ಇಲ್ಲಿದೆ ಅವರ ಸಿನಿಮಾಕಥೆ!
1998 ರಲ್ಲಿ ದೀಪಾವಳಿ ಹಬ್ಬದ ಕಾರ್ಯಕ್ರಮ ಒಂದರಲ್ಲಿ ಎಂಟು ಗಂಟೆಗಳು ನಿರಂತರವಾಗಿ ನಿರೂಪಣೆ ಮಾಡಿದರು. ಇದೊಂದು ದಾಖಲೆಯ ಸರಿ. ಒಂದು ಸಂದರ್ಭದಲ್ಲಿ ಅಪರ್ಣ ಅವರು ಹೇಳುತ್ತಾರೆ……. ಎಲ್ಲರ ಬೆನ್ನ ಹಿಂದೆ ಒಂದು ಕಥೆ ಇದ್ದೇ ಇರುತ್ತದೆ. ಕಷ್ಟ ಇದ್ದೇ ಇರುತ್ತದೆ. ಆ ಕಷ್ಟವನ್ನು ಎದುರಿಸಿ ಮೆಟ್ಟುನಿಂತು ಮುನ್ನುಗ್ಗಬೇಕು. ಏನೂ ಇಲ್ಲದ ಹಾಗೆ ನಕ್ಕು ಬದುಕನ್ನ ಸವಾಲಾಗಿ ತೆಗೆದುಕೊಳ್ಳುವುದೇ ಬದುಕು ಎನ್ನುತ್ತಾರೆ. ಮುಂದುವರೆದು …. ಈ ಜೀವನ ಒಂದು ನಿತ್ಯೋತ್ಸವ. ಹಕ್ಕಿ ಹಾರೋದು ಒಂದು ಸಂಭ್ರಮ, ಹೂವು ಅರಳೋದು ಒಂದು ಸಂಭ್ರಮ. ಅದನ್ನು ನೋಡುವ ದೃಷ್ಟಿ ನಮಗೆ ಬರಬೇಕು. ಇಷ್ಟು ಕೋಟಿ ಜನ ಇದ್ದರೆ ಇಷ್ಟು ಕೋಟಿ ಮನಸ್ಸು ಇದ್ದೇ ಇರುತ್ತವೆ. ಅಷ್ಟು ಕೋಟಿ ಆಸೆ- ಆಕಾಂಕ್ಷೆಗಳು ಕೂಡ ಇರುತ್ತವೆ. ಈ ನಡುವೆ ಪರ- ವಿರೋಧ ನಿಲುವುಗಳು ಇದ್ದೇ ಇರುತ್ತವೆ. ಅವೆಲ್ಲ ಸರಿಹೋದರೆ ಒಪ್ಪಿಕೊಳ್ಳಿ. ಇಲ್ಲದಿದ್ದರೆ ಬಿಟ್ಟಾಕಿ. ಜೊತೆಗೆ ಸದಾ ನಗೋಣ ಅನ್ನುವವರ ಮಾತು ನಿಜಕ್ಕೂ ಎಷ್ಟೊಂದು ಅರ್ಥಪೂರ್ಣ ಜೊತೆಗೆ ಮೌಲ್ಯಯುತವಾಗಿವೆ.
ಬಹುಶಃ ಈ ಮಾತನ್ನು ತಮ್ಮ ಜೀವನದಲ್ಲೂ ಕೂಡ ಅಳವಡಿಸಿಕೊಂಡಿದ್ದರು. ಅದರ ಫಲವಾಗಿ ಅವರು ತಮ್ಮ ಜೀವನದುದ್ದಕ್ಕೂ ಬಂದ ಕಷ್ಟಗಳನ್ನು ಎದುರಿಸಿ, ಕಷ್ಟದಲ್ಲಿ ನೊಂದು ಬಳಲುತ್ತಿರುವರಿಗೆ ಸ್ಪೂರ್ತಿಯ ಸೆಲೆಯಾದರು. ಅವರು ಕೇವಲ ನಿರೂಪಣೆಯನ್ನು ಮಾಡಲಿಲ್ಲ ನಿರೂಪಣೆಯ ಜೊತೆಜೊತೆಗೆ ಒಂದು ರೀತಿಯಲ್ಲಿ ಜೀವನ ಸ್ಪೂರ್ತಿಯ ಮಾತುಗಳನ್ನು ತಿಳಿಸುತ್ತಿದ್ದರು. ಅದು ಚಿಕ್ಕವರಿಗಷ್ಟೇ ಅಲ್ಲದೆ ದೊಡ್ಡವರಿಗೂ ಕೂಡ ಬರವಸೆ ಬೆಳಕಾಗಿತ್ತು. ಇಂತಹ ಸದಾ ಜಾಗೃತಿಯಾಗಿದ್ದುಕೊಂಡು ಲವಲವಿಕೆ ಯಿಂದ ಇದ್ದ ಕನ್ನಡತಿ ಹಸನ್ಮುಖಿ ಮೌನಕ್ಕೆ ಶರಣಾಗಿದ್ದರು.
ಇದನ್ನೂ ಓದಿ: ರಿಯಲ್ ಹೀರೋ ಮೈಸೂರಿನ ಕೆಂಪರಾಜ ಅರಸು… ಇದು ಕನ್ನಡಚಿತ್ರರಂಗದಲ್ಲಿ ಶೋಕಿಗಾಗಿ ನಟನಾದವನ ಕಥೆ!
ತಮ್ಮದೇ ಆದ ನಿರೂಪಣಾ ಶಾಲೆಯನ್ನು ತೆರೆಯುವ ಕನಸನ್ನು ಇವರು ಇಟ್ಟುಕೊಂಡಿದ್ದರು. ಈ ಮೂಲಕ ಕನ್ನಡದ ನಿರೂಪಕರನ್ನು ತಯಾರು ಮಾಡುವ ಕಾಯಕ ಇವರದಾಗಿತ್ತು. ಆದರೆ ಅವರ ಆಸೆ ನೆರವಿರಲಿಲ್ಲ. ನಿರೂಪಣೆಗಾಗಿ ಜೀ ವಾಹಿನಿಯಲ್ಲಿ ಅತ್ಯುತ್ತಮ ಪ್ರಶಸ್ತಿ ಪಡೆದಿದ್ದಾರೆ. “ಪ್ರೀತಿ ಇಲ್ಲದ ಮೇಲೆ” ಧಾರಾವಾಹಿಯ ಪಲ್ಲವಿಯ ಪಾತ್ರಕ್ಕಾಗಿ ಶ್ರೇಷ್ಠ ನಟಿ ಪ್ರಶಸ್ತಿ ಕೂಡ ಬಂದಿದೆ. ಕಿರುತೆರೆಯ ಮಾಧ್ಯಮ ದ ಈವರೆಗಿನ ಸಾಧನೆಗಾಗಿ ಕಿರುತೆರೆಯ ಸರ್ವೋಚ್ಚ ಪ್ರಶಸ್ತಿ ಕೂಡ ಬಂದಿದೆ. “ಮಸಣದ ಹೂವು”- ಚಿತ್ರದ “ಯಾವ ಕಾಣಿಕೆ ನೀಡಲಿ ನಿನಗೆ… ಹಾಡು ಮಾತ್ರ ಕನ್ನಡಿಗರ ಎದೆಯಲ್ಲಿ ಶಾಶ್ವತವಾಗಿ ಉಳಿದಿದೆ. ಅದೇ ನಗುವನ್ನು, ಅದೇ ಸೌಂದರ್ಯವನ್ನು, ಅದೇ ಮುಗ್ದತೆಯನ್ನು, ಅದೇ ನಯ, ವಿನಯವನ್ನು ಕೊನೆಯವರೆಗೂ ಕೂಡ ಕಾಪಿಟ್ಟುಕೊಂಡು ಬಂದವರು ಅಪರ್ಣ.
ಕನ್ನಡವನ್ನು ಉಳಿಸಿ ಬೆಳೆಸುತ್ತಾ ಕನ್ನಡಾಂಬೆಗೆ ಸೇವೆ ಮಾಡುತ್ತಾ ಬಂದ ಅಪರ್ಣ ರವರ ಹೆಸರಿನಲ್ಲಿ ಯಾವುದಾದರೊಂದು ಪ್ರಶಸ್ತಿಗಳನ್ನು ಸ್ಥಾಪಿಸಿ, ಕನ್ನಡಕ್ಕಾಗಿ ದುಡಿಯುತ್ತಿರುವ ಎಲೆಮರೆಕಾಯಿ ಪ್ರತಿಭೆಗಳನ್ನು ಗುರುತಿಸಿ, ಅವರಿಗೆ ನೀಡಿದರೆ ಅವರ ಹೆಸರು ಶಾಶ್ವತವಾಗಿ ಕನ್ನಡದ ಸೊಗಡಿನಲ್ಲಿ ಉಳಿಯುತ್ತದೆ.