ಇಂತಹದೊಂದು ಪೈಶಾಚಿಕ ಕೃತ್ಯಗಳು ನಾಗರಿಕ ಸಮಾಜದಲ್ಲಿ ಇನ್ನೂ ನಡೆಯುತ್ತಿದೆಯಾ? ಎಂಬ ಪ್ರಶ್ನೆಗಳು ಮೂಡುತ್ತಿವೆ.. ಇತ್ತೀಚೆಗೆ ಅಪ್ರಾಪ್ತ ಬಾಲಕಿಯರು ನಾಪತ್ತೆಯಾಗುತ್ತಿರುವ ಪ್ರಕರಣಕ್ಕೂ ಈಗ ಬೆಳಕಿಗೆ ಬಂದಿರುವ ಕೃತ್ಯಕ್ಕೂ ನಂಟಿದೆಯಾ? ಎಂಬ ಪ್ರಶ್ನೆಗಳು ಸಾರ್ವಜನಿಕ ವಲಯದಲ್ಲಿ ಹುಟ್ಟಿಕೊಳ್ಳುತ್ತಿದೆ. ಬೇಲಿಯೇ ಎದ್ದು ಹೊಲ ಮೇಯ್ದರೆ ಕಾಯುವವರು ಯಾರು? ಎಂಬಂತೆ ಈಗ ಹೆಂಗಸರೇ ದುಡ್ಡಿನಾಸೆಗೆ ಬಾಲಕಿಯರನ್ನು ಮಾರಾಟ ಮಾಡುವ ದಂಧೆಗೆ ಇಳಿದರೆ ಪರಿಸ್ಥಿತಿ ಏನಾಗಬಹುದು?
ಇದನ್ನೂ ಓದಿ : ಹನಿಟ್ರ್ಯಾಪ್… ಇದು ಮಾಯಾಂಗನೆಯರ ವಿಷವರ್ತುಲ… ಇಲ್ಲಿ ಸಿಕ್ಕಿಬಿದ್ದರೆ ಹಣ, ಮಾನ ಮಾರ್ಯಾದೆ ಖತಂ
ವೇಶ್ಯಾವಾಟಿಕೆ ಬಹಳಷ್ಟು ಜನರ ಹೈಟೆಕ್ ಬದುಕಿಗೆ ಮಾರ್ಗವಾಗಿದೆ. ರಸ್ತೆ ಬದಿಯಲ್ಲೋ ಇನ್ನೆಲ್ಲೋ ನಿಂತು ಗ್ರಾಹಕರನ್ನು ಸೆಳೆದು ಹೊಟ್ಟೆಪಾಡು ಕಳೆಯುವ ವೇಶ್ಯೆಯರಿಗಿಂತ ಹೈಟೆಕ್ ಆಗಿ ದಂಧೆ ನಡೆಸಿ ಹೈಫೈ ಜೀವನ ನಡೆಸುವವರ ಸಂಖ್ಯೆ ಹೆಚ್ಚಾಗಿದೆ. ಇವರೆಲ್ಲರ ಶ್ರೀಮಂತ ಜೀವನಕ್ಕೆ ಇನ್ಯಾರೋ ಅಮಾಯಕ ಅದರಲ್ಲೂ ಈಗಷ್ಟೇ ಋತುಮತಿಯಾಗುವ ಅಪ್ರಾಪ್ತ ಹೆಣ್ಣು ಮಕ್ಕಳು ಬಲಿಯಾಗುತ್ತಿದ್ದಾರೆ ಎಂದರೆ ನಾವೆಲ್ಲರೂ ಯೋಚನೆ ಮಾಡುವ ವಿಚಾರವೇ.
ಹಣವಿದ್ದವರಿಗೆ ಹೆಣ್ಣು ಬೋಗದ ವಸ್ತುವಾಗಿ ಕಾಣುತ್ತಿದ್ದಾಳೆ. ಅದಕ್ಕಾಗಿ ಲಕ್ಷಾಂತರ ರೂಪಾಯಿ ಖರ್ಚು ಮಾಡುವ ಗಿರಾಕಿಗಳಿದ್ದಾರೆ. ಅದರಲ್ಲೂ ಹೆಣ್ಣು ಬಾಕರಿಗೆ ಬೇರೆ, ಬೇರೆ ವಯಸ್ಸಿನ ಹೆಣ್ಣು ಮಕ್ಕಳ ಜೊತೆ ಸುಖಿಸುವ ಖಯಾಲಿ. ಇದಕ್ಕಾಗಿ ಅವರು ಎಷ್ಟು ಹಣ ಬೇಕಾದರೂ ಖರ್ಚು ಮಾಡಲು ತಯಾರಿರುತ್ತಾರೆ. ಹೀಗಾಗಿ ಇಂತಹ ಕಚ್ಚಡ ಹೆಣ್ಣು ಬಾಕರ ದೌರ್ಬಲ್ಯಗಳನ್ನು ಅರಿತಿರುವ ತಲೆ ಮಾಸಿದ ಹೆಂಗಸರು ಅಂತಹವರಿಗಾಗಿ ತಮ್ಮ ಹೆಣ್ತನ ಮರೆತು ಬೇರೆ ಹೆಣ್ಣು ಮಕ್ಕಳ ಬದುಕನ್ನೇ ನಾಶ ಮಾಡುತ್ತಿದ್ದಾರೆ.
ಇದನ್ನೂ ಓದಿ : ಫೇಸ್ ಬುಕ್ ಪ್ರೇಮ.. ಪ್ರಣಯ… ಪ್ರಾಣ ತೆಗೆಯಿತು! ಗಂಡನ ಬಿಟ್ಟು ಬಂದವಳನ್ನು ಪ್ರಿಯಕರ ಕೊಂದು ಬಿಟ್ಟ!
ಅಮಾಯಕ ಬಾಲಕಿಯರಿಗೆ ಹಣದ ಆಮಿಷವೊಡ್ಡಿಯೋ ಅಥವಾ ಹೆತ್ತವರಿಗೆ ಹಣ ನೀಡಿ ತಾವೇ ಚೆನ್ನಾಗಿ ನೋಡಿಕೊಳ್ಳುವುದಾಗಿ ಹೇಳಿಯೋ ಇನ್ನೇನೆನೋ ರೀತಿಯಲ್ಲಿ ಪುಸಲಾಯಿಸಿ ಬಳಿಕ ಭಾರೀ ಬೆಲೆಗೆ ಹೆಣ್ಣು ಬಾಕರ ಮಗ್ಗುಲಿಗೆ ಹಾಕಿ ಬಿಡುತ್ತಾರೆ. ಇವರಿಗೆ ದುಡ್ಡು ಸಿಕ್ಕಿದರೆ ಸಾಕು.. ಆ ಹೆಣ್ಣು ಮಗು ಬದುಕು ಬರ್ಬಾತಾದ್ರೆ ಅವರಿಗೇನು? ಇವತ್ತು ಹೆಚ್ಚಿನ ಪ್ರಕರಣಗಳಲ್ಲಿ ಆಳವಾಗಿ ತನಿಖೆಯಾಗದ ಕಾರಣದಿಂದಾಗಿ ಕೃತ್ಯಗಳ ಹಿಂದೆ ಇರುವ ಮಾಸ್ಟರ್ ಮೈಂಡ್ ಗಳಾಗಲೀ ಕೃತ್ಯದ ಹಿಂದೆಯಿರುವ ಜಾಲವಾಗಲೀ ಗೊತ್ತೇ ಆಗುವುದಿಲ್ಲ.
ಇನ್ನು ದಂಧೆಗಳಲ್ಲಿ ಸಿಕ್ಕಿ ಬಿದ್ದರೂ ಜಾಮೀನು ಕೊಟ್ಟು ಬಿಡಿಸಿಕೊಂಡು ಹೋಗಲು ಅವರದ್ದೇ ಆದ ವ್ಯವಸ್ಥೆ ಇರುವುದರಿಂದ ಬಹಳಷ್ಟು ಪ್ರಕರಣಗಳು ಪತ್ರಿಕೆಯಲ್ಲಿಯೋ, ಟಿವಿಯಲ್ಲಿಯೋ ಒಂದು ದಿನ ಕಾಣಿಸಿಕೊಂಡು ಅಲ್ಲಿಗೆ ಸತ್ತು ಹೋಗುತ್ತದೆ. ಅದರಾಚೆಗೆ ಏನಾಗಿದೆ ಎಂಬುದೇ ಗೊತ್ತಾಗುವುದಿಲ್ಲ. ಹೀಗಾಗಿ ಇಂತಹ ಕೃತ್ಯಗಳು ನಿಲ್ಲದೆ ಮುನ್ನಡೆಯುತ್ತಲೇ ಇರುತ್ತವೆ. ಕೇವಲ ವೇಶ್ಯವಾಟಿಕೆಯ ವಿಚಾರ ವಾದರೆ ಅದು ಇದ್ದದ್ದೇ ಎಂದು ತೆಪ್ಪಗಾಗಿ ಬಿಡಬಹುದು. ಆದರೆ ಈ ವೇಶ್ಯಾವಾಟಿಕೆಗೆ ಅಪ್ರಾಪ್ತ ಋತುಮತಿಯಾದ ಹೆಣ್ಣುಮಕ್ಕಳ ಬಳಕೆ ಮಾಡಿಕೊಳ್ಳುತ್ತಿದೆ ಎಂಬ ವಿಚಾರವನ್ನು ಅಷ್ಟು ಸುಲಭವಾಗಿ ತಳ್ಳಿಹಾಕಲು ಸಾಧ್ಯನಾ?
ಈ ಪ್ರಕರಣದ ಬೆನ್ನು ಬಿದ್ದು ತನಿಖೆ ನಡೆಸಿ ಅದರ ಹಿಂದಿನ ಕಬಂಧ ಬಾಹುವನ್ನು ಕಟ್ ಮಾಡಲೇ ಬೇಕಾಗುತ್ತದೆ. ಇಲ್ಲದೆ ಹೋದರೆ ದುರುಳರು ಇದನ್ನು ಮುಂದುವರೆಸಿ ಹೆಣ್ಮಕ್ಕಳ ಬದುಕಿಗೆ ಕಂಟಕವಾಗಿ ಬಿಡುತ್ತಾರೆ. ಇಷ್ಟಕ್ಕೂ ಅಪ್ರಾಪ್ತ ಋತುಮತಿಯಾದ ಬಾಲಕಿಯರೇ ಇವರ ಟಾರ್ಗೆಟ್ ಏಕೆ? ಎಂಬುದರ ಹಿಂದಿನ ರಹಸ್ಯ ತಿಳಿಯುತ್ತಾ ಹೋದರೆ ಬೆಚ್ಚಿ ಬೀಳುವುದು ಗ್ಯಾರಂಟಿ. ಇತ್ತೀಚೆಗಿನ ವರ್ಷಗಳಲ್ಲಿ ಅಪ್ರಾಪ್ತ ಬಾಲಕಿಯರ ನಾಪತ್ತೆ ಪ್ರಕರಣಗಳು ಹೆಚ್ಚುತ್ತಿವೆ. ಇದೊಂದು ಆತಂಕಕಾರಿ ವಿಚಾರವಾಗಿದೆ. ಈ ಬಗ್ಗೆ ಆಗಾಗ್ಗೆ ಸುದ್ದಿಯಾಗುತ್ತಲೇ ಇರುತ್ತದೆ. ಈ ಬಗ್ಗೆ ಮಕ್ಕಳ ಕಲ್ಯಾಣ ಸಮಿತಿ ಮತ್ತು ಮಕ್ಕಳ ರಕ್ಷಣಾ ಘಟಕಗಳು ಹಲವು ರೀತಿಯ ಕ್ರಮಗಳನ್ನು ಕೈಗೊಂಡರೂ ಪ್ರಯೋಜನವಾಗುತ್ತಿಲ್ಲ.
ಬಹಳಷ್ಟು ಪ್ರಕರಣಗಳಲ್ಲಿ ನಾಪತ್ತೆಯಾದ ಹೆಣ್ಣು ಮಕ್ಕಳ ಸುಳಿವೇ ಸಿಗದಂತೆ ಅವರು ಭೂಗತರಾಗಿ ಬಿಡುತ್ತಾರೆ. ಆದರೆ ಹೀಗೆ ನಾಪತ್ತೆಯಾಗುವ ಹೆಣ್ಮಕ್ಕಳನ್ನು ಮಾರಾಟ ಮಾಡಲಾಗುತ್ತದೆ ಎಂಬ ವಿಚಾರಗಳು ಜನವಲಯದಲ್ಲಿ ಹರಿದಾಡುತ್ತಲೇ ಇರುತ್ತದೆ. ಹೆಣ್ಮಕ್ಕಳ ನಾಪತ್ತೆ ಹಿಂದೆ ಬಲು ದೊಡ್ಡ ಜಾಲವಿದ್ದು ಅವು ವ್ಯವಸ್ಥಿತವಾಗಿ ಕೆಲಸ ಮಾಡುವುದರಿಂದಾಗಿ ಪ್ರಕರಣವನ್ನು ಬೇಧಿಸುವುದು ತುಂಬಾ ಕಷ್ಟವಾಗುತ್ತಿದೆ. ಅದರಲ್ಲೂ ಈ ಕೃತ್ಯಗಳಲ್ಲಿ ತಲೆ ಮಾಸಿದ ಹೆಂಗಸರೇ ಮುಂಚೂಣಿಯಲ್ಲಿರುವುದರಿಂದಾಗಿ ಸ್ವಲ್ಪವೂ ಸಂಶಯ ಬರದಂತೆ ನಡೆದು ಹೋಗಿ ಬಿಡುತ್ತದೆ.
ಇದನ್ನೂ ಓದಿ : ಭಾರತಕ್ಕೆ ಬಾಂಗ್ಲಾ-ನೇಪಾಳಿ ಹುಡ್ಗೀರ್ ಬರೋದ್ಯಾಕೆ?… ಅವರನ್ನು ಕರೆ ತರುವ ಜಾಲ ಯಾವುದು?
ವೇಶ್ಯಾವಾಟಿಕೆಗೆ ಸಂಬಂಧಿಸಿದ ಸುದ್ದಿಗಳು ಮೈಸೂರಿನಲ್ಲಿ ಬೇಕಾದಷ್ಟು ಕೇಳಿ ಬರುತ್ತಿವೆ. ಬೇರೆ, ಬೇರೆ ಮಗ್ಗುಲನ್ನು ಬದಲಿಸಿಕೊಂಡು ಈ ದಂಧೆ ನಡೆಯುತ್ತಿದೆ. ಇದೀಗ ಋತುಮತಿಯಾದ ಅಪ್ರಾಪ್ತ ಬಾಲಕಿಯರನ್ನು ದಂಧೆ ತಳ್ಳುತ್ತಿರುವ ಪ್ರಕರಣ ಬೆಳಕಿಗೆ ಬಂದಿದ್ದು ಹೆಣ್ಣು ಹೆತ್ತವರನ್ನು ಬೆಚ್ಚಿ ಬೀಳಿಸುವಂತೆ ಮಾಡಿದೆ. ಇಲ್ಲಿ ಹೆಂಗಸೊಬ್ಬಳು ಈ ದಂಧೆಯಲ್ಲಿರುವುದು ಹೆಣ್ಣು ಕುಲಕ್ಕೆ ಅವಮಾನ ಮಾಡಿದಂತಾಗಿದೆ. ಇಷ್ಟಕ್ಕೂ ಹಾಗೆ ಮಾಡಲು ಆಕೆಗೆ ಮನಸ್ಸಾದರೂ ಹೇಗೆ ಬಂತು? ಇಷ್ಟಕ್ಕೂ ನಡೆದಿದ್ದೇನು? ಎಂಬುದನ್ನು ನೋಡಿದ್ದೇ ಆದರೆ ಋತುಮತಿಯಾದ ಯುವತಿಯರನ್ನೇ ಟಾರ್ಗೆಟ್ ಮಾಡುವುದು ಈ ಜಾಲದ ಅಜೆಂಡಾ ಆಗಿದೆ.
ಈ ದಂಧೆಯಲ್ಲಿ ಬೆಂಗಳೂರಿನ ಶೋಭಾ (35) ಮತ್ತು ತುಳಸಿಕುಮಾರ್ (42) ತೊಡಗಿಸಿಕೊಂಡಿದ್ದರು ಎನ್ನುವುದು ಒಡನಾಡಿ ಸೇವಾ ಸಂಸ್ಥೆ, ಮಕ್ಕಳ ಕಲ್ಯಾಣ ಸಮಿತಿ ಮತ್ತು ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಎಸ್ ಜೆ ಪಿ ಯು, ಮಕ್ಕಳ ಸಹಾಯವಾಣಿ ಹಾಗೂ ಪೊಲೀಸರ ಸಂಯುಕ್ತ ಕಾರ್ಯಾಚರಣೆಯಿಂದ ಬೆಳಕಿಗೆ ಬಂದಿದೆ. ಸದ್ಯದ ಮಾಹಿತಿ ಪ್ರಕಾರ ಇವರು ಋತುಮತಿಯಾದ ಬಾಲಕಿಯನ್ನು 20ಲಕ್ಷ ರೂಪಾಯಿಗೆ ಮಾರಾಟ ಮಾಡುವ ದಂಧೆಯಲ್ಲಿ ತೊಡಗಿಸಿಕೊಂಡಾಗ ಸಿಕ್ಕಿ ಬಿದ್ದಿದ್ದಾರೆ. ಒಂದು ವೇಳೆ ಇವರು ಸಿಕ್ಕಿ ಬೀಳದೆ ಹೋಗಿದ್ದರೆ ಆ ಬಾಲಕಿಯ ರಕ್ಷಣೆಯೂ ಆಗುತ್ತಿರಲಿಲ್ಲ ದಂಧೆಕೋರರು ಸಿಕ್ಕಿಯೂ ಬೀಳುತ್ತಿರಲಿಲ್ಲ. ದೇವರ ದಯೆ ಕಾಮುಕರಿಗೆ ಬಲಿಯಾಗುತ್ತಿದ್ದ ಬಾಲಕಿ ಬಚಾವಾಗಿದ್ದಾಳೆ. ಆದರೆ ಈ ಶೋಭ ಮತ್ತು ತುಳಸೀಕುಮಾರ್ ಯಾರು? ಅವರ ಹಿಂದೆ ಇನ್ಯಾರಿದ್ದಾರೆ? ದೊಡ್ಡ ಜಾಲ ಇದೆಯಾ? ಬಾಲಕಿಯನ್ನು ಯಾರಿಗೆ ಮಾರಾಟ ಮಾಡಲು ಹೊರಟಿದ್ದರು? ಎಂಬಿತ್ಯಾದಿ ವಿಚಾರಗಳು ಪೊಲೀಸರ ತನಿಖೆಯಿಂದ ಹೊರ ಬರಬೇಕಿದೆ.
ಇದನ್ನೂ ಓದಿ : ಮಗಳು ಮನೆ ಬಿಟ್ಟಳು.. ಹೆತ್ತವರು ಹೆಣವಾದರು.. ಯಾರಿಗೂ ಇಂತಹ ಪರಿಸ್ಥಿತಿ ಬಾರದಿರಲಿ…
ಕೆಲವು ಕಾಮುಕರು ಅಪ್ರಾಪ್ತ ಬಾಲಕಿಯರನ್ನು ಲೈಂಗಿಕವಾಗಿ ಬಳಸಿಕೊಳ್ಳುತ್ತಿದ್ದು, ಅವರ ಮೂಲಕ ತಮ್ಮ ಕಾಮತೃಷೆಯನ್ನು ತೀರಿಸಿಕೊಳ್ಳುತ್ತಾರೆ ಎನ್ನಲಾಗಿದೆ. ಚಿಕ್ಕವಯಸ್ಸಿನವರು ಆಗಿರುವುದರಿಂದ ಅವರನ್ನು ಹೆದರಿಸಿ, ಬೆದರಿಸಿ ತಮಗೆ ಹೇಗೆ ಬೇಕೋ ಹಾಗೆ ಬಳಸಿಕೊಳ್ಳುತ್ತಾರೆ. ಅದಕ್ಕಿಂತ ಹೆಚ್ಚಾಗಿ ಋತುಮತಿಯಾದ ಬಾಲಕಿಯರ ಜೊತೆ ಲೈಂಗಿಕ ಕ್ರಿಯೆ ಮಾಡುವುದರಿಂದ ದೈಹಿಕ ಸುಖದ ಜತೆಗೆ ಲೈಂಗಿಕ ಆರೋಗ್ಯವೂ ಸುಧಾರಿಸುತ್ತದೆ ಎಂಬ ತಪ್ಪು ಕಲ್ಪನೆಯಿದ್ದು ಅದಕ್ಕಾಗಿ ಲಕ್ಷಾಂತರ ರೂಪಾಯಿ ನೀಡಿ ಅಪ್ರಾಪ್ತ ಬಾಲಕಿಯರನ್ನು ಕೆಲವರು ಖರೀದಿ ಮಾಡುತ್ತಿದ್ದಾರೆ ಎನ್ನಲಾಗಿದೆ. ಇದನ್ನು ಅರಿತ ಶೋಭಾ ಮತ್ತು ತುಳಸಿಕುಮಾರ್ ಬಾಲಕಿಯನ್ನು ಕರೆತಂದು ಆಕೆಯನ್ನು ಮಾರಾಟಕ್ಕೆ ಮುಂದಾಗಿದ್ದರು.
ಬಾಲಕಿಗೆ 20ಲಕ್ಷಕ್ಕಿಂತ ಒಂದು ರೂಪಾಯಿ ಕಡಿಮೆಯಾದರೂ ಆಕೆಯನ್ನು ಕಳಿಸಲ್ಲ ಎಂದು ಅವರು ಡಿಮ್ಯಾಂಡ್ ಮಾಡಿದ್ದರಲ್ಲದೆ, ಆಕೆಗೆ ಶಾಲಾ ಯೂನಿಫಾರ್ಮ್ ತೊಡಿಸಿದ ಫೋಟೋಗಳನ್ನು ತೋರಿಸಿ ಮಾರಾಟಕ್ಕೆ ಮುಂದಾಗಿದ್ದರು. ಇಷ್ಟೇ ಅಲ್ಲದೆ ನೀವು ಹೇಗೆ ಬೇಕಾದರೂ ಆಕೆಯನ್ನು ಬಳಸಿಕೊಳ್ಳಬಹುದು ಎಂದು ಹೇಳಿದ್ದರು. ಬಾಲಕಿಯನ್ನು ಮಾರಾಟ ಮಾಡುತ್ತಿರುವ ವಿಚಾರ ಮೈಸೂರಿನ ಒಡನಾಡಿ ಸಂಸ್ಥೆಗೆ ಗೊತ್ತಾಗುತ್ತಿದ್ದಂತೆಯೇ ಮಕ್ಕಳ ಕಲ್ಯಾಣ ಸಮಿತಿ ಮತ್ತು ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಎಸ್ ಜೆಪಿಯು, ಮಕ್ಕಳ ಸಹಾಯವಾಣಿ ಹಾಗೂ ಪೊಲೀಸರ ಜತೆ ಸೇರಿ ಕಾರ್ಯಾಚರಣೆ ನಡೆಸಲಾಗಿದೆ. ಈ ವೇಳೆ ದಂಧೆಕೋರರಾದ ಶೋಭಾ ಮತ್ತು ತುಳಸಿಕುಮಾರ್ ಸಿಕ್ಕಿಬಿದ್ದಿದ್ದು ಅವರನ್ನು ಬಂಧಿಸಲಾಗಿದೆ. ಈ ಸಂಬಂಧ ಮೈಸೂರಿನ ವಿಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಒಡನಾಡಿಯ ಸ್ಟಾನ್ಲಿ, ಪರಶು ಹೇಳುವುದೇನು?
ಒಡನಾಡಿ ಸಂಸ್ಥೆಯ ಸ್ಥಾಪಕ ಸ್ಟಾನ್ಲಿ ಅವರು ಹೇಳುವ ಪ್ರಕಾರ ಬಾಲಕಿ ಮಾರಾಟ ವಿಚಾರ ಸಂಬಂಧ ನಮಗೆ ಮಾಹಿತಿ ದೊರೆತು, ಹಣಕ್ಕೆ ಡಿಮ್ಯಾಂಡ್ ಮಾಡಿದ್ದ ಶೋಭಾ ಮತ್ತು ತುಳಸಿಕುಮಾರ್ ಅವರನ್ನು ಬಂಧಿಸಲಾಗಿದೆ. ಅಪ್ರಾಪ್ತ ಬಾಲಕಿಯರನ್ನು ವೇಶ್ಯಾವಾಟಿಕೆಗೆ ಇಳಿಸುವ ಪ್ರಯತ್ನ ನಡೆದಿತ್ತು. ಋತುಮತಿಯಾದ ಬಾಲಕಿಯರ ಜೊತೆ ಮೊದಲ ಲೈಂಗಿಕ ಸಂಪರ್ಕ ನಡೆಸಿದ್ರೆ ಮಾನಸಿಕ ಮತ್ತು ಲೈಂಗಿಕ ಕಾಯಿಲೆಗಳು ದೂರ ಆಗುತ್ತವೆ ಎಂಬ ಮೂಢ ನಂಬಿಕೆಯನ್ನು ಬಳಸಿಕೊಂಡು ಬಾಲಕಿಯನ್ನು ಬಳಸಿ ದುಡ್ಡು ಮಾಡಲು ಮುಂದಾಗಿದ್ದರು ಎಂದು ಹೇಳಿದ್ದಾರೆ.
ಇದನ್ನೂ ಓದಿ : ಜನ ಸ್ಪಾಗಳನ್ನು ಅನುಮಾನದಿಂದ ನೋಡುತ್ತಿರುವುದೇಕೆ? ಇಷ್ಟಕ್ಕೂ ಇಲ್ಲಿ ನಡೆಯುವುದೇನು?
ಇನ್ನು ಪರಶುರಾಮ್ ಮಾತನಾಡಿ ಇದು ಬೇರೆ ದೇಶಗಳಲ್ಲಿ ನಡೆಯುತ್ತದೆ, ನಮ್ಮಲ್ಲಿ ಕೇಳಿದ್ವಿ ಅಷ್ಟೇ. 20 ಲಕ್ಷಕ್ಕೆ ಬಾಲಕಿಯನ್ನು ಏನು ಬೇಕಾದ್ರೂ ಮಾಡಿಕೊಳ್ಳಿ ಎಂದು ಹೇಳುತ್ತಾರೆ. ಈಗ ನಾವೇ ಕಣ್ಣಾರೆ ಕಂಡು ಬಾಲಕಿಯನ್ನು ರಕ್ಷಿಸಿದ್ದೇವೆ. ಇದರ ಹಿಂದೆ ದೊಡ್ಡ ಜಾಲ ಇದೆ ಅನಿಸುತ್ತದೆ ಎಂದು ಹೇಳಿದ್ದಾರೆ.
-ಬಿ.ಎಂ.ಲವಕುಮಾರ್